ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆರೆ ಗಿಣಿ ರಾಮ

Last Updated 31 ಮೇ 2013, 6:05 IST
ಅಕ್ಷರ ಗಾತ್ರ

ಈ ಗಿಣಿರಾಮನ ಪರಿಚಯ ಇರದವರು ಯಾರು? ಸುಮಾರಾಗಿ ಮೈನಾ ಗಾತ್ರದ ಹಕ್ಕಿ ಇದು. ಆಂಗ್ಲ ಭಾಷೆಯಲ್ಲಿ ಇದು `ರೋಸ್ ರಿಂಗ್ಡ್ ಪ್ಯಾರಕೀಟ್'. ಹೆಸರೇ ಸೂಚಿಸುವಂತೆ ಗಂಡು ಗಿಳಿಯ ಕತ್ತಿನ ಹಿಂಭಾಗದಲ್ಲಿ ಗುಲಾಬಿ ಬಣ್ಣದ ಪಟ್ಟಿ (ಉಂಗುರ) ಇದೆ. ಕತ್ತಿನ ಮುಂಭಾಗದಲ್ಲಿ ಕಪ್ಪು ಪಟ್ಟಿ ಇದೆ. ಆದರೆ ಹೆಣ್ಣಿನ ಕತ್ತಿನ ಹಿಂಭಾಗದಲ್ಲಿ ಗುಲಾಬಿ ಬಣ್ಣದ ಪಟ್ಟಿ `ಆಭರಣ' ಇಲ್ಲ. ಅದರ ಬದಲು ಕಪ್ಪು ಬಣ್ಣದ ಉಂಗುರ ಇದೆ. ಉಳಿದಂತೆ ಹಸಿರು ಬಣ್ಣದ ದೇಹಕ್ಕೆ ಉದ್ದ ಹಸಿರು ಬಾಲ ಇದೆ. ಮೊನಚಾದ ಡೊಂಕು ಕೊಕ್ಕು ಇರುವುದು ವಿಶೇಷ. ಕಾಲುಗಳು ಬೂದು. ಇದು `ಶಕುನದ ಹಕ್ಕಿ'ಯ ಹೊರ ನೋಟ.

ಗಿಳಿ ಮನುಷ್ಯರಿಗೆ ಅನಾದಿ ಕಾಲದಿಂದ ತುಂಬ ಹತ್ತಿರವಾದ ಹಕ್ಕಿ. ಅದರ ಗಂಟಲಲ್ಲಿ ವಿಶೇಷವಾದ ಧ್ವನಿ ಪೆಟ್ಟಿಗೆ ಇದೆ. ಹಾಗಾಗಿ ಮಾನವರ ಕೆಲವೊಂದು ದನಿಯನ್ನು, ಮಾತಿನ ಶೈಲಿಯನ್ನು ಅನುಕರಿಸುವ ತಾಕತ್ತು ಅದಕ್ಕಿದೆ. ಹೀಗಾಗಿ ಕೆಲವರು ಸುಲಭವಾಗಿ ಪಳಗಿಸಿ ಅದಕ್ಕೆ `ಬುದ್ಧಿ' ಕಲಿಸುತ್ತಾರೆ! ಹಾಗಾಗಿಯೇ ಸರ್ಕಸ್‌ನಲ್ಲಿ ಗಿಳಿ ಸೈಕಲ್ ಹೊಡೆಯುವುದು ಸೇರಿದಂತೆ ಕೆಲವು ಕಸರತ್ತು ಮಾಡುವುದನ್ನು ನೀವು ಗಮನಿಸಿರಬಹುದು.

`ಹೇಯ್ ಗಿಣಿರಾಮ.... ಅಣ್ಣಾವ್ರ ಭವಿಷ್ಯ ಹೇಳೋ' ಅಂತ ಬೀದಿ ಬದಿಯ ಭವಿಷ್ಯಕಾರ ಹೇಳಿದಾದ ಗೂಡಿನಿಂದ ಹೊರಬಂದ ಗಿಳಿ ಭವಿಷ್ಯ ಬರೆದ ಕಾರ್ಡ್‌ಗಳನ್ನು ಎಳೆದು ಕೊಡುವುದನ್ನು ನೀವು ನೋಡಿರಬಹುದು. ಗಿಳಿಗೆ ಅದೆಷ್ಟು ಬುದ್ಧಿ ಇದೆಯೊ? ಗೊತ್ತಿಲ್ಲ. ಆದರೆ ಆಹಾರದ ಆಸೆಯಿಂದ ಹೇಳಿದ ಕೆಲಸವನ್ನು ಯಾಂತ್ರಿಕವಾಗಿ ಮಾಡುವುದಂತೂ ಸತ್ಯ.

ಗಿಳಿ ಮೂಲತಃ ಹಣ್ಣು ತಿನ್ನುವ ಹಕ್ಕಿ. ಅದರ ಕೊಕ್ಕು ಕೂಡ ಹಣ್ಣು ತಿನ್ನಲು ಅನುಕೂಲವಾಗುವಂತೆ ಇದೆ. ಹಣ್ಣಿನ ತೋಟಕ್ಕೆ ಗುಂಪುಗುಂಪಾಗಿ ಬರುವ ಗಿಳಿಗಳು ಹಣ್ಣನ್ನು ಅರ್ಧಂಬರ್ಧ ತಿಂದು ಹಾಳು ಮಾಡುತ್ತವೆ. ಹೀಗಾಗಿ ಹಣ್ಣಿನ ತೋಟದವರು ಗಿಳಿಗಳು ತೋಟಕ್ಕೆ ಬರುವುದನ್ನು ಇಷ್ಟ ಪಡುವುದಿಲ್ಲ.

ಗಿಳಿಗಳು ಕೂಡ ಪರಿಸರ ಸೂಚಿ ಹಕ್ಕಿ. ಪೊಟರೆಯಲ್ಲಿ ಗೂಡು ಕಟ್ಟುವ ಗಿಳಿಗಳು ಆ ಪರಿಸರದಲ್ಲಿ ಆರೋಗ್ಯವಂತ ಹಾಗೂ ಎತ್ತರದ ಮರಗಳು ಇವೆ ಎಂಬುದನ್ನು ಸೂಚಿಸುತ್ತವೆ. ಬೀಜಗಳ ಪ್ರಸಾರ ಹಾಗೂ ಪರಾಗಸ್ಪರ್ಶ ಪ್ರಕ್ರಿಯೆಯಲ್ಲೂ ಗಿಳಿಗಳ ಪಾತ್ರ ದೊಡ್ಡದು. ಮುಖ್ಯವಾಗಿ ಆಲದ ಜಾತಿಯ ಮರಗಳ ಬೀಜ ಪ್ರಸಾರದಲ್ಲಿ ಗಿಳಿಗಳದ್ದು ಪ್ರಧಾನ ಪಾತ್ರ ಎನ್ನುತ್ತಾರೆ ಪಕ್ಷಿತಜ್ಞರು.

ಗಿಳಿಗಳು ಪರಿಸರಕ್ಕೆ ಸುಲಭವಾಗಿ ಒಗ್ಗಿಕೊಳ್ಳುತ್ತವೆ. ಗೂಡಿನ ಬಳಿ ಹಾವು ಸುಳಿದಾಡಿದರೆ ಗಲಾಟೆ ಮಾಡಿ ಹೊರಗಟ್ಟಿಸುವಷ್ಟು ಧೈರ್ಯಶಾಲಿಯೂ ಹೌದು. ಗಿಳಿಗಳ ಆಯುಷ್ಯವೂ ದೀರ್ಘ. ಗೂಡಿನಲ್ಲಿ ಸಾಕಿದ ಗಿಳಿಗಳು 35ರಿಂದ 40 ವರ್ಷ ಬದುಕಿದ ದಾಖಲೆಗಳು ಇವೆಯಂತೆ!

ಗಿಳಿಗಳು ಸಾಮಾನ್ಯವಾಗಿ ನೆಲದ ಮಟ್ಟದಿಂದ ಮೂರರಿಂದ 10 ಅಡಿ ಎತ್ತರದಲ್ಲಿ ಮರದ ಪೊಟರೆಗಳಲ್ಲಿ ಗೂಡು ಕಟ್ಟುತ್ತವೆ. ಹಸಿ ಬೋಗಿಮರದ ಪೊಟರೆ, ಒಣಗಿದ ತೆಂಗು, ಅಡಿಕೆ ಮರದ ಪೊಟರೆಗಳಲ್ಲಿ ಗೂಡು ಕಟ್ಟುತ್ತವೆ. ಮೂರರಿಂದ ನಾಲ್ಕು ಕೆಲವೊಮ್ಮೆ ಐದು ಮೊಟ್ಟೆ ಇಡುತ್ತವೆ. ಮೊಟ್ಟೆಗೆ ಸುಮಾರು 22ರಿಂದ 24 ದಿನಗಳ ಕಾಲ ಕಾವು ಕೊಡುತ್ತವೆ.

ಕೃಷಿ ಭೂಮಿ, ಜನ ವಸತಿ ಪ್ರದೇಶ, ತೋಟ... ಹೀಗೆ ರಾಜ್ಯದೆಲ್ಲೆಡೆ ಕಾಣ ಬರುವ ಗಿಳಿಗಳು ಸಾಮಾನ್ಯವಾಗಿ ಗುಂಪು ಗುಂಪಾಗಿ ಸದ್ದು ಮಾಡುತ್ತ ಶರವೇಗದಲ್ಲಿ ಹಾರಾಟ ನಡೆಸುತ್ತವೆ.

ಕರಾವಳಿಯಲ್ಲೂ ಈ ಜಾತಿಯ ಗಿಳಿಗಳು ಸಾಕಷ್ಟು ಸಂಖ್ಯೆಯಲ್ಲಿ ಇವೆ. ದಟ್ಟ ಕಾಡಿನಲ್ಲಿ ಅವುಗಳ ಸಂಖ್ಯೆ ಕಡಿಮೆಯೆಂದೇ ಹೇಳಬೇಕು. ಮರ ವಿರಳವಾದ ಬಯಲು ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಗದ್ದೆ ಪಕ್ಕದ ಪೇರಳ ಮರದಲ್ಲಿ, ಅಲಸಂಡೆ ಚಪ್ಪರದಲ್ಲಿ, ಮಾವಿನ ಮಾರದಲ್ಲಿ, ಆಲದ ಮರದಲ್ಲಿ ಹಣ್ಣು ಮೆಲ್ಲುವ ಈ ಗಿಳಿಗಳನ್ನು ನೀವೂ ನೋಡಿರಬಹುದು. ರತ್ನಗಂಧಿ ಹೂವಿನ ಗಿಡದ ಕೋಡುಗಳನ್ನು ಒಡೆದು ಬೀಜ ಇನ್ನುತ್ತವೆ. ಅಷ್ಟೊಂದು ವೇಗವಾಗಿ ಹಾರಾಟ ನಡೆಸುವಾಗ ಹಣ್ಣಿನ ಮರಗಳನ್ನು ಹೇಗೆ ಗುರುತಿಸುತ್ತವೆ? ಬಹುಶಃ ಅದರ ನೆನಪಿನ ಶಕ್ತಿಯಿಂದ ಆಯಾಯ ಮರಗಳಿಗೆ ಬರುತ್ತವೆ ಎನ್ನುತ್ತಾರೆ ಛಾಯಾಗ್ರಾಹಕ ಶಿವಶಂಕರ್.

1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ಗಿಳಿಗಳನ್ನು ಶೆಡ್ಯೂಲ್ ನಾಲ್ಕರಲ್ಲಿ ಸೇರಿಸಲಾಗಿದೆ. ಈ ಕಾನೂನು ಪ್ರಕಾರ ಗಿಳಿಗಳನ್ನು ಬಂಧನದಲ್ಲಿ ಇಟ್ಟು ಸಾಕಿದರೆ ಶಿಕ್ಷೆಯನ್ನು ವಿಧಿಸಬಹುದು.

ರೋಸ್ ರಿಂಗ್ಡ್ ಪ್ಯಾರಕೀಟ್ ಇದರ ವೈಜ್ಞಾನಿಕ ಹೆಸರು `ಸಿಟ್ಟಾಕುಲಾ ಕ್ರಮೇರಿ'. ಅದು `ಸಿಟ್ಟಾಸಿಫಾರ್ಮಿಸ್' ಗಣದ `ಸಿಟ್ಟಾಸಿಡಿ' ಕುಟುಂಬಕ್ಕೆ ಸೇರಿದೆ. `ಮಲಬಾರ್ ಪಾರಕೀಟ್' ಅಥವಾ ಬ್ಲೂ ವಿಂಗ್ಡ್ ಪಾರಕೀಟ್, `ಪ್ಲಮ್ ಹೆಡೆಡ್ ಪಾರಕೀಟ್' ಇದರ ಸೋದರ ಸಂಬಂಧಿಗಳು (ಕಸಿನ್ಸ್).

ಚಿತ್ರ: ಸಿ.ಎಸ್.ಕುಲಶೇಖರ, ಶಿವಶಂಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT