ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಅಪಘಾತಕ್ಕೆ ಕಾರಣವಾಗುತ್ತಿದೆ ರಸ್ತೆಯಲ್ಲಿ ಅಡಿಕೆ ಸಿಪ್ಪೆ ವಿಸರ್ಜನೆ

ಸಿಪ್ಪೆಯನ್ನು ಗೊಬ್ಬರವಾಗಿ ಬಳಸಲು ರೈತರಲ್ಲಿ ಜಾಗೃತಿಯ ಕೊರತೆ
Last Updated 3 ಡಿಸೆಂಬರ್ 2022, 7:39 IST
ಅಕ್ಷರ ಗಾತ್ರ

ದಾವಣಗೆರೆ: ಅಡಿಕೆ ಬೆಳೆಗಾರರು ಅಡಿಕೆ ಕೊಯ್ಲು ನಂತರ ಅಡಿಕೆ ಸಿಪ್ಪೆಯನ್ನು ಜಿಲ್ಲೆಯ ಪ್ರಮುಖ ಹೆದ್ದಾರಿ, ಗ್ರಾಮೀಣ ರಸ್ತೆಗಳ ಬದಿ ರಾಶಿ ಹಾಕುವುದು ವಾಡಿಕೆ. ಇಂಥ ಆಚರಣೆಯಿಂದಾಗ ಸಿಪ್ಪೆಯು ರಸ್ತೆ ತುಂಬ ಹರಡಿ, ಅಪಘಾತಗಳಿಗೆ ಕಾರಣವಾಗುತ್ತಿದೆ. ಅಡಿಕೆ ಸಿಪ್ಪೆಯ ಪರ್ಯಾಯ ಬಳಕೆ ಕುರಿತು ರೈತರಲ್ಲಿ ಅರಿವಿನ ಕೊರತೆ ಇರುವುದು ಇದಕ್ಕೆ ಕಾರಣ.

ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಸಿ ತೋಟಗಳಿಗೆ ಬಳಸಬಹುದು. ಹಲವು ಆವಿಷ್ಕಾರಗಳ ಮೂಲಕ ಅದನ್ನು ಸಮರ್ಪಕವಾಗಿ ಬಳಸಬಹುದು. ಆದರೆ, ಈ ಬಗ್ಗೆ ರೈತರಿಗೆ ಮಾಹಿತಿ ಇಲ್ಲ. ರೈತರಲ್ಲಿ ಅರಿವು ಮೂಡಿಸಲು ಸರ್ಕಾರ ಗಮನಹರಿಸುತ್ತಿಲ್ಲ.

ಅಡಿಕೆ ಸಿಪ್ಪೆಯನ್ನು ರಸ್ತೆ ಬದಿ ರಾಶಿ ಹಾಕಿ ಅಲ್ಲಿಯೇ ರೈತರು ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ದಟ್ಟ ಹೊಗೆ ಆವರಿಸಿ ರಸ್ತೆ ಕಾಣದೇ ಹಲವು ಬೈಕ್‌ ಸವಾರರು ಬಿದ್ದು ಗಾಯಗೊಂಡಿದ್ದಾರೆ.

ವಾಯುಮಾಲಿನ್ಯವೂ ಉಂಟಾಗುತ್ತಿದೆ. ಜಿಲ್ಲೆಯ ಚನ್ನಗಿರಿ, ಬಸವಾಪಟ್ಟಣ, ಸಂತೇಬೆನ್ನೂರು ಹಾಗೂ ದಾವಣಗೆರೆ ನಗರದ ಹಲವೆಡೆ ರಾಜ್ಯ ಹೆದ್ದಾರಿಗಳಲ್ಲಿ ಅಡಿಕೆ ಸಿಪ್ಪೆಗಳ ರಾಶಿ ಸಾಮಾನ್ಯವಾಗಿ ಕಂಡುಬರುತ್ತಿದೆ. ‘ಮುಂದೆ ಅಡಿಕೆ ಸಿಪ್ಪೆ ಇದೆ. ನಿಧಾನವಾಗಿ ಸಾಗಿ’ ಎಂಬ ಫಲಕವನ್ನೂ ಅಳವಡಿಸದ್ದರಿಂದ ವಾಹನ ಸವಾರರು ಅಪಾಯಕ್ಕೆ ಸಿಲುಕುತ್ತಿದ್ದಾರೆ.

ಮಾಹಿತಿ ಕೊರತೆ: ಅಡಿಕೆ ಸಿಪ್ಪೆ ಕೊಳೆಯುವುದು ನಿಧಾನವಾದ ಕಾರಣ ಮತ್ತು ಮಾಹಿತಿ ಕೊರತೆಯಿಂದ ರೈತರು ಅದರ ಸದ್ಬಳಕೆಯ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಇದು ಸಮಸ್ಯೆಗೆ ಕಾರಣ.

‘ಪರ್ಯಾಯ ಬಳಕೆ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿಲ್ಲ. ರೈತರು ಕಾಂಪೋಸ್ಟ್‌ ಗೊಬ್ಬರ ತಯಾರಿಸಬಹುದು. ಇದಕ್ಕೆ ಸರ್ಕಾರದ ಪ್ರೋತ್ಸಾಹ ಅಗತ್ಯ. ಶೇ 10ರಷ್ಟು ರೈತರು ಮಾತ್ರ ಈಗಾಗಲೇ ಅದನ್ನು ಗೊಬ್ಬರವಾಗಿ ಬಳಸುತ್ತಿದ್ದಾರೆ’ ಎಂದು ಈ ಬಗ್ಗೆತಿಳಿದಿರುವ ಬಸವಾಪಟ್ಟಣದ ರೈತ ಬಿ.ಜಿ. ರುದ್ರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರ ಪ್ರೋತ್ಸಾಹ ನೀಡಿದರೆ ರೈತರು ಪರ್ಯಾಯ ಬಳಕೆಗೆ ಬಗ್ಗೆ ಚಿಂತನೆ ನಡೆಸುತ್ತಾರೆ ಎಂದು ಅವರು ಹೇಳಿದರು.

ಕೆಲವೆಡೆ ಕಾಂಕ್ರೀಟ್‌ ರಸ್ತೆ ನಿರ್ಮಿಸಿದಾಗ ಕ್ಯೂರಿಂಗ್‌ಗೆ ಅಡಿಕೆ ಸಿಪ್ಪೆ ಬಳಸಲಾಗುತ್ತಿದೆ. ನಂತರ ಅದನ್ನು ತೆರವುಗೊಳಿಸುವ ಗೋಜಿಗೆ ಹೋಗದ್ದರಿಂದ ಅದರ ರಾಶಿ ರಸ್ತೆ ಬದಿಯಲ್ಲಿ ಉಳಿಯುತ್ತದೆ. ಇದರಿಂದಲೂ ತೊಂದರೆಗಳು ಎದುರಾಗುತ್ತವೆ.

‘ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಅಡಿಕೆ ಸಿಪ್ಪೆಯನ್ನು ಗೊಬ್ಬರವಾಗಿ ಬಳಸುವ ಬಗ್ಗೆ ರೈತರಿಗೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಆದರೆ, ರೈತರು ಸಮಯದ ಅಭಾವ, ಜಾಗದ ಕೊರತೆ ಸೇರಿ ಹಲವು ಸಮಸ್ಯೆ ತೆರೆದಿಡುತ್ತಾರೆ. ಡಿಕಂಪೋಸರ್‌ ಪೌಡರ್‌ ಸಿಗುತ್ತದೆ. ಅದನ್ನು ಸಿಪ್ಪೆ ಮೇಲೆ ಹಾಕಿ ಕಾಂಪೋಸ್ಟ್‌ ಗೊಬ್ಬರವನ್ನು ಮಾಡಬಹುದು. ಅಲ್ಲದೇ ಅಡಿಕೆ ತೋಟದಲ್ಲೇ ತೆಳುವಾಗಿ ಹರಡಬಹುದು. ಇದರಿಂದ ತೋಟಕ್ಕೂ ಅನುಕೂಲ’ ಎನ್ನುತ್ತಾರೆ ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್‌. ದೇವರಾಜು.

ಇಲಾಖೆಯಿಂದ ನೆರವು ನೀಡಲು ಕ್ರಮ

ಅಡಿಕೆ ಸಿಪ್ಪೆ ಕೊಳೆಯುವುದು ನಿಧಾನ ಎಂಬ ಕಾರಣಕ್ಕೆ ಅದರ ಗೊಡವೆ ಬೇಡ ಎಂದು ರೈತರು ಸುಮ್ಮನಾಗಿದ್ದಾರೆ. ಸಿಪ್ಪೆಯನ್ನು ಗೊಬ್ಬರವಾಗಿ ಬಳಸಲು ಹಾಗೂ ಬೇಗ ಕೊಳೆಯಿಸುವ ಬಗ್ಗೆ ಪ್ರಾಯೋಗಿಕ ಸಂಶೋಧನೆ ನಡೆಯುತ್ತಿದೆ. ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.ಸಿಪ್ಪೆಯನ್ನು ಪರ್ಯಾಯವಾಗಿ ಬಳಸುವ ಬಗ್ಗೆ ಸಂಶೋಧನೆ ನಡೆದರೆ ಅದಕ್ಕೆ ಇಲಾಖೆಯಿಂದ ನೆರವು ನೀಡಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಡಾ.ರಾಘವೇಂದ್ರ ಪ್ರಸಾದ್‌ ಜಿ.ಸಿ. ತಿಳಿಸಿದರು.

ಅಡಿಕೆ ಸಿಪ್ಪೆಯಿಂದ ಬಟ್ಟೆ, ಪ್ಯಾಡ್‌

ಸ್ವಲ್ಪ ಪ್ರಮಾಣದ ರೈತರಿಗೆ ಅಡಿಕೆ ಸಿಪ್ಪೆ ಸದ್ಬಳಕೆಯ ಬಗ್ಗೆ ಅರಿವು ಇದೆ. ಕೆಲ ರೈತರು ತೋಟಗಳಿಗೆ ಕೆರೆಯ ಮಣ್ಣನ್ನು ಬಳಸುತ್ತಾರೆ. ಅದರ ಬದಲು ಅಡಿಕೆ ಸಿಪ್ಪೆಯ ಮೇಲೆ ಮಣ್ಣು ಹಾಕಿದರೆ ಉತ್ತಮ ಗೊಬ್ಬರವಾಗುತ್ತದೆ ಎನ್ನುತ್ತಾರೆ ಬಾಪೂಜಿ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ವಿದ್ಯಾಲಯದ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ.

‘ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಅಡಿಕೆ ಸಿಪ್ಪೆಯಿಂದ ನೂಲನ್ನು ತಯಾರಿಸುವ ವಿಧಾನ ಕಂಡುಹಿಡಿದಿದ್ದಾರೆ. ಇದರಿಂದ ಉತ್ತಮ ಗುಣಮಟ್ಟದ ಬಟ್ಟೆ ತಯಾರಿಸಬಹುದು. ಬ್ಯಾಗ್‌ಗಳನ್ನೂ ತಯಾರಿಸಬಹುದು. ಇದರಿಂದ ಸ್ಯಾನಟರಿ ಪ್ಯಾಡ್‌ ತಯಾರಿಸುವ ಕುರಿತೂ ಸಂಶೋಧನೆ ನಡೆಸಿದ್ದೇವೆ. ಈ ಮಾದರಿಯನ್ನು ಬೆಂಗಳೂರಿನಲ್ಲಿ ಈಚೆಗೆ ನಡೆದ ಐಟಿ–ಬಿಟಿ ಸಮ್ಮೇಳನದಲ್ಲಿ ಪ್ರದರ್ಶಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಅವರು ವಿವರಿಸಿದರು.

ಕಾಲೇಜುಗಳು ಸಂಶೋಧನೆ ನಡೆಸಬಹುದು. ಅದರ ಉಪಯೋಗ ರೈತರಿಗೆ ಸಿಗುವಂತೆ ಮಾಡಲು ಸರ್ಕಾರಗಳು, ಉದ್ಯಮಿಗಳು ಮುಂದೆ ಬರಬೇಕು ಎಂದು ಅವರು ಒತ್ತಾಯಿಸಿದರು.

ಸಂಶೋಧನೆಯು ಪ್ರಾಯೋಗಿಕ ಹಂತದಲ್ಲೇ ಇರುವ ಕಾರಣ ಸದ್ಯ ಅಡಿಕೆ ಸಿಪ್ಪೆಯನ್ನು ಗೊಬ್ಬರವಾಗಿ ಬಳಸುವುದೇ ಸುಲಭ ಮತ್ತು ಉತ್ತಮ ವಿಧಾನ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT