ಮನುವಾದಿಗಳಿಂದ ಚಳವಳಿ ಹತ್ತಿಕ್ಕುವ ಯತ್ನ

7
‘ಲಿಂಗಾಯತ ದರ್ಶನ’ ಪ್ರವಚನ ಉದ್ಘಾಟಿಸಿದ ಬಸವಜಯಮೃತ್ಯುಂಜಯ ಸ್ವಾಮೀಜಿ

ಮನುವಾದಿಗಳಿಂದ ಚಳವಳಿ ಹತ್ತಿಕ್ಕುವ ಯತ್ನ

Published:
Updated:
Deccan Herald

ದಾವಣಗೆರೆ: ‘ಬಸವ ಧರ್ಮ ಮುಂಚೂಣಿಗೆ ಬಂದರೆ ಶೋಷಿತ ಸಮಾಜ ಜಾಗೃತಗೊಂಡು ತಮ್ಮ ಗುಲಾಮಗಿರಿಯಿಂದ ಮುಕ್ತರಾಗುತ್ತಾರೆ ಎಂಬ ಕಾರಣಕ್ಕೆ ಮನುವಾದಿ ಮನಸ್ಥಿತಿಯ ಎಲ್ಲ ಶಕ್ತಿಗಳೂ ಒಂದಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಚಳವಳಿಯನ್ನು ಹತ್ತಿಕ್ಕುತ್ತಿವೆ’ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಕಾಯಕ ದಾಸೋಹ ಮಂಟಪದ ಆಶ್ರಯದಲ್ಲಿ ಎಂ.ಸಿ.ಸಿ ‘ಬಿ’ ಬ್ಲಾಕ್‌ನ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ 10ನೇ ವರ್ಷದ ‘ಲಿಂಗಾಯತ ದರ್ಶನ’ ಪ್ರವಚನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವೈದಿಕರು ಬಸವ ಧರ್ಮವನ್ನು ಹತ್ತಿಕ್ಕಿ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡರು. ಇಂದು ಜಾಗತಿಕ ಮಟ್ಟದಲ್ಲಿ ಕ್ರಿಶ್ಚನ್‌ ಹಾಗೂ ಇಸ್ಲಾಂ ನಡುವೆ ಧರ್ಮ ಯುದ್ಧ ನಡೆಯುತ್ತಿದೆ. 12ನೇ ಶತಮಾನದಿಂದಲೇ ಬಸವ ಧರ್ಮ ಎಲ್ಲ ಕಡೆ ಪ್ರಸಾರ ಗೊಂಡಿದ್ದರೆ ಇಂದು ಧರ್ಮ ಯುದ್ಧ ನಡೆಯುವ ಪರಿಸ್ಥಿತಿ ಬರುತ್ತಿರಲಿಲ್ಲ. ಬಸವಣ್ಣ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದರು. ಶೇ 90ರಷ್ಟು ಲಿಂಗಾಯತರಿಗೆ ಇದು ಗೊತ್ತಿದೆ. ಆದರೆ, ಇನ್ನುಳಿದವರು ಗೊತ್ತಿದ್ದರೂ ಇದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ದಾವಣಗೆರೆಯಲ್ಲಿರುವ ಕೆಲ ‘ದಡ್ಡ’ರಿಗೆ ಈ ಬಗ್ಗೆ ಅರಿವು ಮೂಡಿಸಲು ಲಿಂಗಾಯತ ದರ್ಶನ ಪ್ರವಚನ ಹಮ್ಮಿಕೊಂಡಿದ್ದೇವೆ’ ಎಂದು ಹೇಳುವ ಮೂಲಕ ‘ವೀರಶೈವ ಲಿಂಗಾಯತ’ ಎಂದು ಪ್ರತಿಪಾದಿಸುವ ನಾಯಕರ ವಿರುದ್ಧ ಹರಿಹಾಯ್ದರು.

‘ನಾನೊಬ್ಬ ಲಿಂಗಾಯತ ಎಂದು ಗುರುತಿಸಿಕೊಂಡು ಇದಕ್ಕೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಸಿಗುವಂತೆ ಮಾಡಲು ನಮ್ಮ ಜೊತೆ ಕೈಜೋಡಿಸಬೇಕು. ಲಿಂಗಾಯತ ಬೀಜಕ್ಕೆ ನೀರೆರೆದು ಹೆಮ್ಮರವಾಗಿ ಬೆಳೆಸುವ ಜವಾಬ್ದಾರಿ ಲಿಂಗಾಯತರ ಮೇಲಿದೆ’ ಎಂದು ಹೇಳಿದರು.

‘ಲಿಂಗಾಯತ ಜಾತಿ ವಾಚಕ ಶಬ್ದವಲ್ಲ; ಇದು ನೀತಿ ವಾಚಕವಾಗಿದೆ. ನಿರಾಕಾರ ಶಕ್ತಿಯಾದ ಪರಶಿವನನ್ನು ನಮ್ಮೊಳಗೆ ಆಯತ ಮಾಡಿಕೊಳ್ಳುವುದೇ ಲಿಂಗಾಯತವಾಗಿದೆ’ ಎಂದು ಸ್ವಾಮೀಜಿ ಪ್ರತಿಪಾದಿಸಿದರು.

ಬಸವಗುರು ತಪೋವನದ ಪ್ರವಚನಕಾರ ಶಿವಾನಂದ ಗುರೂಜಿ, ‘ಎದೆಯ ಮೇಲೆ ಲಿಂಗ ಕಟ್ಟಿಕೊಂಡು ಬೇರೆ ದೇವರ ಉಪಾಸನೆಯನ್ನು ಹೇಗೆ ಮಾಡಲು ಸಾಧ್ಯ? ಲಿಂಗವಂತ ಧರ್ಮವನ್ನು ಇವರು ಒಪ್ಪಿಕೊಳ್ಳುತ್ತಾರೆ. ಆದರೆ, ಅಪ್ಪಿಕೊಳ್ಳುತ್ತಿಲ್ಲ. ಹಲವು ದೇವರ ಉಪಾಸನೆಯಿಂದಾಗಿ ದೇಶದ ಸಂಸ್ಕೃತಿ ಕ್ಷೀಣಿಸುತ್ತಿದೆ. ಬಸವ ಧರ್ಮದ ಉಪಾಸನೆಯಿಂದ ದೇಶದಲ್ಲಿ ಏಕತೆ ಬರಲು ಸಾಧ್ಯ’ ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶಿವಕುಮಾರ್‌, ‘ಲಿಂಗಾಯತ ಧರ್ಮ 900 ವರ್ಷಗಳ ಹಿಂದೆಯೇ ಸ್ಥಾಪನೆಯಾಗಿದೆ. ಆದರೆ, ಇದರೊಳಗಿರುವ 99 ಕಾಯಕ ಒಳಪಂಗಡಗಳಿಗೆ ಸರ್ಕಾರದ ಸೌಲಭ್ಯ ಸಿಗಬೇಕು ಎಂಬ ಕಾರಣಕ್ಕೆ ಹೋರಾಟ ನಡೆಸುತ್ತಿದ್ದೇವೆ. ಸರ್ಕಾರದಿಂದ ಮಾನ್ಯತೆ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಹೇಳಿದರು.

ಬಸವ ಬಳಗದ ಅಧ್ಯಕ್ಷ ವೀರಭದ್ರಪ್ಪ ದೇವಿಗೆರೆ, ‘ಇದು ಸತ್ತವರ ಕಥೆಯಲ್ಲ; ಶರಣದ ಜೀವನ ದರ್ಶನ. ನಮ್ಮನ್ನು ನಾವೇ ದರ್ಶನ ಮಾಡಿಕೊಂಡಂತೆ’ ಎಂದು ಹೇಳಿದರು.

ಮಹಾನಗರ ಪಾಲಿಕೆಯ ಪೌರನೌಕರರ ಸಂಘದ ಅಧ್ಯಕ್ಷ ಗೋವಿಂದರಾಜ್‌, ‘ಬಸವಣ್ಣ ಅಂಬೇಡ್ಕರ್‌ ರೂಪದಲ್ಲಿ ಬಂದು ಸಮಾನತೆ ಸಾಧಿಸಲು ಸಂವಿಧಾನವನ್ನು ಕೊಟ್ಟಿದ್ದಾರೆ. ಸಂವಿಧಾನದ ಪ್ರತಿಯೊಂದು ಅಂಶವೂ ಬಸವಣ್ಣನ ಸಂದೇಶದ ಸಾರ ಒಳಗೊಂಡಿದೆ’ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಬಿ. ವೀರಣ್ಣ ಹಾಜರಿದ್ದರು. ಬಸವ ಕಲಾ ಲೋಕದ ಸದಸ್ಯರು ವಚನ ಸಂಗೀತ ಪ್ರಸ್ತುತ ಪಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !