ಬುಧವಾರ, ನವೆಂಬರ್ 20, 2019
27 °C

ಬಜಾಜ್ ಫೈನಾನ್ಸ್‌ನಿಂದ ವಂಚನೆ: ನ್ಯಾಯಕ್ಕಾಗಿ ಮನವಿ

Published:
Updated:

ದಾವಣಗೆರೆ: ಬಜಾಜ್ ಫೈನಾನ್ಸ್ ಸರ್ವೀಸ್‌ನಿಂದ ಗ್ರಾಹಕರ ವಿಳಾಸ ಹಾಗೂ ಬ್ಯಾಂಕ್ ದಾಖಲೆಗಳನ್ನು ಬಳಸಿಕೊಂಡು ಅವರ ಹೆಸರಲ್ಲಿ ಹೆಚ್ಚುವರಿ ಅಥವಾ ನಕಲಿ ಸಾಲ ಸೃಷ್ಟಿಸಿ ವಂಚಿಸಲಾಗುತ್ತಿದೆ ಎಂದು ಹರಿಹರದ ವಕೀಲ ಬಿ.ಎಂ. ಸಿದ್ದಲಿಂಗಸ್ವಾಮಿ ಆರೋಪಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹರಿಹರದಲ್ಲಿ 100ಕ್ಕೂ ಹೆಚ್ಚು ಜನರಿಗೆ ಈ ರೀತಿ ಮೋಸವಾಗಿದ್ದು, ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕಿತ್ತು. ಆದರೆ ದೂರು ನೀಡಿ ವರ್ಷ ಕಳೆದರೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ’ ಎಂದು ಅವರು ಆಪಾದಿಸಿದರು.

‘ಈ ವಂಚನೆ ಕುರಿತು ಬಜಾಜ್ ಫೈನಾನ್ಸ್ ಎಂ.ಡಿ. ಸಂಜೀವ್ ಬಜಾಜ್ ಹಾಗೂ ಐಸಿಐಸಿಐ ಬ್ಯಾಂಕ್‌ನ ಮಾಜಿ ಎಂ.ಡಿ. ಚಂದಾ ಕೊಚ್ಚಾರ್ ಸೇರಿ ಹಲವರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು, ತನಿಖೆ ನಡೆಸುವಂತೆ ಹರಿಹರ ಪೊಲೀಸ್ ಠಾಣೆಗೆ ಆದೇಶ ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅವರು ಆರೋಪಿಸಿದರು.

ಸೂಕ್ತ ನ್ಯಾಯ ದೊರೆಕಿಸಿಕೊಡಬೇಕು ಎಂದು ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಗೃಹ ಮಂತ್ರಿಗೂ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ವಂಚನೆಗೊಳಗಾದ ಗೃಹಿಣಿ ಮಾತನಾಡಿ, ‘ಬಜಾಜ್ ಫೈನಾನ್ಸ್‌ನಲ್ಲಿ ಬಡ್ಡಿರಹಿತ ಸಾಲ ನೀಡುತ್ತೇವೆ ಎಂದು ಮನವೊಲಿಸಿದ್ದರಿಂದ ಯುಪಿಎಸ್‌ ಕೊಂಡುಕೊಂಡ ನಂತರ ನನಗೆ ಸಂಬಂಧವೇ ಇರದ ಮತ್ತೊಂದು ಸಾಲ ನನ್ನ ಖಾತೆಯಿಂದ ಬಜಾಜ್ ಫೈನಾನ್ಸ್‌ಗೆ ಕಡಿತವಾಗುತ್ತಿತ್ತು’ ಎಂದು ಅಳಲು ತೋಡಿಕೊಂಡರು ಎಂದು ಹೇಳಿದರು.

ಶಾಲಾ ಶಿಕ್ಷಕಿ ಎಂ. ವಿಜಯಾ ಮಾತನಾಡಿ, ‘ಬಜಾಜ್ ಫೈನಾನ್ಸ್ ಅಧಿಕಾರಿ ಕುಮಾರಸ್ವಾಮಿ ಎಂಬವರು ನಮ್ಮ ಶಾಲೆಗೆ ಬಂದು ಗೃಹೋಪಯೋಗಿ ಸರಕುಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ತಿಳಿಸಿದ್ದರಿಂದ ₹32 ಸಾವಿರ ಪಾವತಿಸಿ ಲ್ಯಾಪ್‌ಟಾಪ್ ಖರೀದಿಸಿದೆ. ನನಗೆ ತಿಳಿಯದಂತೆ ಎಲ್‌ಇಡಿ ಟಿವಿ ಖರೀದಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ ನನ್ನ ಖಾತೆಯಿಂದ ಹಣ ಕಡಿತ ಮಾಡಿದರು’ ಎಂದು ದೂರಿದರು.

ವಕೀಲರಾದ ಬಿ.ಎಚ್‌. ಭಾಗೀರಥಿ, ಟಿ. ಇನಾಯತ್‌ ಉಲ್ಲಾ, ಸಂತ್ರಸ್ತರಾದ ನವೀನ್, ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)