ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆಬೆನ್ನೂರು | ಭದ್ರಾ ನಾಲೆ ನೀರಿನ ಹರಿವು ಕುಸಿತ: ರೈತರ ಆತಂಕ

Last Updated 1 ಆಗಸ್ಟ್ 2020, 20:25 IST
ಅಕ್ಷರ ಗಾತ್ರ

ಮಲೇಬೆನ್ನೂರು:ಪ್ರಸಕ್ತ ಮಳೆಗಾಲದ ಹಂಗಾಮಿಗೆ ಭದ್ರಾ ಜಲಾಶಯದಿಂದ ಬಿಡುಗಡೆ ಮಾಡಿರುವ ನಾಲೆ ನೀರು ಹರಿವು ಕಡಿಮೆಯಾಗಿದ್ದು, ಕೊನೆಭಾಗದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ವಾರ ಭದ್ರಾ ನಾಲೆಗೆ ನೀರು ಬಿಟ್ಟಿದ್ದು, ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ ಎಂಬ ಮಾಹಿತಿ ಪ್ರತಿನಿತ್ಯ ಬರುತ್ತಿದೆ. ಆದರೆ ಕೊನೆಭಾಗ ತಲುಪಿಲ್ಲ ಎಂದು ರೈತ ಮುಖಂಡ ಹೊಳೆಸಿರಿಗೆರೆ ಫಾಲಾಕ್ಷಪ್ಪ ಮಾಹಿತಿ ನೀಡಿದರು.

ನಾಲೆ ನೀರು ಬಿಡುಗಡೆ ಮಾಡಿದ ಕಾರಣ ಸಸಿ ಮಡಿ ತಯಾರಿ ಭರದಿಂದ ಸಾಗಿದೆ. ಮುಂಚಿತವಾಗಿ ಸಸಿ ಮಡಿ ತಯಾರಿಸಿದ ರೈತರು ನಾಟಿ ಕಾರ್ಯಕ್ಕೆ ಹೊಲ ಸಿದ್ಧಪಡಿಸುತ್ತಿದ್ದಾರೆ. ಇಂತಹ ವೇಳೆ ನೀರು ನಿಲುಗಡೆ ಮಾಡಿದರೆ ರೈತರು ಹೇಗೆ ಬೆಳೆ ಬೆಳೆಯಬೇಕು ಎಂದು ಅವರು ಪ್ರಶ್ನಿಸಿದರು.

‘ಇತ್ತ ನೀರಾವರಿ ಇಲಾಖೆ ಎಂಜಿನಿಯರ್ ಅವರಿಗೆ ಕೊರೊನಾ ತಗುಲಿದೆ. ವಿಭಾಗೀಯ ಹಾಗೂ ಉಪವಿಭಾಗೀಯ ಕಚೇರಿ ಕೂಡ ಸೀಲ್‌ಡೌನ್ ಮಾಡಲಾಗಿದೆ. ಸಿಬ್ಬಂದಿ ಕೊರತೆ ಕಾಡುತ್ತಿದೆ. ಭತ್ತದ ಬೆಲೆ ಕುಸಿದಿದೆ, ನಾಟಿ ಮಾಡುವ ಕುರಿತು ಯಾರನ್ನು ಕೇಳಬೇಕು ಎಂದು ತಿಳಿಯುತ್ತಿಲ್ಲ’ ಎಂದು ರೈತ ಸಂಘದ ಕಡಾರನಾಯ್ಕನಹಳ್ಳಿ ಪ್ರಭುಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಭದ್ರಾ ಅಚ್ಚುಕಟ್ಟು ನೀರಾವರಿ ಸಲಹಾ ಸಮಿತಿ ಕೂಡ ಇಲ್ಲ. ಎಂಜಿನಿಯರ್‌ಗಳು ಸರಿಯಾಗಿ ಭದ್ರಾ ಯೋಜನೆ ಮಳೆ, ನೀರಿನ ಹರಿವಿನ ಪ್ರಮಾಣ ತೂಗಿ ನೋಡದೆ ಏಕಾಏಕಿ ದಾವಣಗೆರೆ ನಗರದ ಕುಡಿಯುವ ನೀರಿನ ಉದ್ದೇಶಕ್ಕೆ ನಾಲೆಗೆ ನೀರು ಹರಿಸಿದ್ದಾರೆ. ಮಳೆ ಬೇರೆ ಕೈಕೊಟ್ಟಿದೆ’ ಎಂದು ಕುಂಬಳೂರಿನ ಪ್ರಗತಿ ಪರ ರೈತ ಹನುಮಂತಪ್ಪ ಆತಂಕ ವ್ಯಕ್ತಪಡಿಸಿದರು.

‘ನಾಲೆ ನೀರಿನ ಪರಿಸ್ಥಿತಿ ಕುರಿತು ರೈತರಿಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಒಂದೆರಡು ದಿನದಲ್ಲಿ ಸಂಸದರೊಂದಿಗೆ ಮುಖ್ಯ ಹಾಗೂ ಅಧೀಕ್ಷಕ ಎಂಜಿನಿಯರ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸುತ್ತೇವೆ. ರೈತರು ಸಹಕರಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT