ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.4ರಂದು ಭಗವದ್ಗೀತಾ ಮಹಾ ಸಮರ್ಪಣಾ ಸಮಾರಂಭ

ಗೀತೋಪದೇಶ, ವಿಶ್ವರೂಪ ದರ್ಶನಕ್ಕೆ ಸಂಬಂಧಿಸಿದ ನೃತ್ಯರೂಪಕ l ಕಲಾಕೃತಿಗಳ ಪ್ರದರ್ಶನ
Last Updated 30 ನವೆಂಬರ್ 2022, 6:28 IST
ಅಕ್ಷರ ಗಾತ್ರ

ದಾವಣಗೆರೆ: ಶ್ರೀ ಭಗವದ್ಗೀತಾ ಅಭಿಯಾನ– ಕರ್ನಾಟಕ, ಸೋಂದಾಸ್ವರ್ಣವಲ್ಲಿ ಮಹಾಸಂಸ್ಥಾನ, ಆದಿಸುಬ್ರಹ್ಮಣ್ಯ ದೇವಸ್ಥಾನ ಚಾರಿಟಬಲ್ ಟ್ರಸ್ಟ್ ಹಾಗೂ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿಯಿಂದ ರಾಜ್ಯಮಟ್ಟದ ಮಹಾ ಸಮರ್ಪಣಾ ಸಮಾರಂಭ ಡಿ.4ರಂದು ಬೆಳಿಗ್ಗೆ 10.30ಕ್ಕೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ನಡೆಯಲಿದೆ.

‘ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಎರೇಹೊಸಳ್ಳಿ ವೇಮನ ಸಂಸ್ಥಾನ ಮಠದ ವೇಮನಾನಂದ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ತ್ಯಾಗೀಶ್ವರಾನಂದಜೀ ಮಹಾರಾಜ್ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದು, ರಾಜ್ಯಪಾಲ ಥಾವರಚಂದ್ ಗೆಹಲೋತ್ ಪಾಲ್ಗೊಳ್ಳುವರು’ ಎಂದು ಶಿರಸಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕಡ್ಲೇಬಾಳುವಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿಕ್ಷಣ ಸಚಿವ ಬಿ.ಸಿ. ನಾಗೇಶ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ. ರಾಮಚಂದ್ರ, ಮೇಯರ್ ಜಯಮ್ಮ ಗೋಪಿನಾಯ್ಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು’ ಎಂದು ಅವರು
ತಿಳಿಸಿದರು.

‘ರಾಜ್ಯದಲ್ಲಿ ಕೈಗೊಂಡಿರುವ ಭಗವದ್ಗೀತಾ ಅಭಿಯಾನ ಎಲ್ಲೆಡೆ ಯಶಸ್ವಿಯಾಗಿ ನಡೆಯುತ್ತಿದ್ದು, ಕಳೆದ ವರ್ಷಗಳಿಗಿಂತಲೂ ಹೆಚ್ಚಿನ ರೀತಿಯಲ್ಲಿ ಜನರಿಗೆ ಗೀತೆಯ ಸಂದೇಶಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈಗಾಗಲೇ ತಾಲ್ಲೂಕು ಮಟ್ಟದ ಸ್ಪರ್ಧೆಗಳು ಮುಕ್ತಾಯಗೊಂಡಿದ್ದು, ನ.30ರಂದು ಜಿಲ್ಲಾ ಹಾಗೂ ಡಿಸೆಂಬರ್ 3ರಂದು ರಾಜ್ಯ ಮಟ್ಟದ ಸ್ಪರ್ಧೆಗಳು ಎರಡು ಕಡೆಗಳಲ್ಲಿ ಸಮಗ್ರ ಗೀತಾ ಪಠಣ ಇರುತ್ತದೆ’ ಎಂದು ಮಾಹಿತಿ ನೀಡಿದರು.

‘ಕಾರ್ಯಕ್ರಮದಲ್ಲಿ ಗೀತೋಪದೇಶ ಹಾಗೂ ವಿಶ್ವರೂಪ ದರ್ಶನಕ್ಕೆ ಸಂಬಂಧಿಸಿದ ನೃತ್ಯರೂಪಕವಿದ್ದು, ಚಿತ್ರಕಲಾ ಪರಿಷತ್ ವತಿಯಿಂದ ಭಗವದ್ಗೀತೆಗೆ ಸಂಬಂಧಪಟ್ಟ 15 ಕಲಾಕೃತಿಗಳ ಪ್ರದರ್ಶನ ಆಯೋಜಿಸಲಾಗುವುದು’ ಎಂದು ಹೇಳಿದರು.

ಅಭಿಯಾನದ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಎಸ್.ಆರ್. ಹೆಗಡೆ, ಪ್ರಧಾನ ಕಾರ್ಯದರ್ಶಿ ಎಚ್.ಜಯಣ್ಣ, ಕಾರ್ಯಾಧ್ಯಕ್ಷ ಎಸ್.ಟಿ. ಕುಸುಮಶ್ರೇಷ್ಠಿ, ಭಾಸ್ಕರ್, ಗೋಪಾಲ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪಠ್ಯದಲ್ಲಿ ಭಗವದ್ಗೀತೆ: ಮನವಿ

‘ಸೂರ್ಯ ನಮಸ್ಕಾರದಿಂದ ಶರೀರಕ್ಕೆ, ಧ್ಯಾನದಿಂದ ಮನಸ್ಸಿಗೆ ಶಕ್ತಿ ಸಿಗುತ್ತದೆ. ಅನ್ಯ ಧರ್ಮೀಯರಿಗೂ ಒಳ್ಳೆಯದಾಗುವುದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ಧ್ಯಾನ ಮಾಡುವುದರಲ್ಲಿ ತಪ್ಪಿಲ್ಲ. ಇದೇ ರೀತಿ ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಸಬೇಕೆಂಬ ಬೇಡಿಕೆ ಇದ್ದು, ಈ ಕುರಿತು ಡಿ.4ರಂದು ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗುವುದು’ ಎಂದು ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT