ಭಾನುವಾರ, ನವೆಂಬರ್ 28, 2021
21 °C
ದೇವರಬೆಳಕೆರೆ ಪಿಕಪ್ ಡ್ಯಾಂನಲ್ಲಿ ತೆರವು ಕಾರ್ಯಕ್ಕೆ ಚಾಲನೆ ನೀಡಿದ ಶಾಸಕ ಎಸ್‌. ರಾಮಪ್ಪ

ಶಾಸಕ ಎಸ್‌. ರಾಮಪ್ಪ ಸ್ವಂತ ಖರ್ಚಿನಲ್ಲಿ ಜೊಂಡು ಹುಲ್ಲು ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲೇಬೆನ್ನೂರು: ‘ಪ್ರಸಕ್ತ ಮಳೆಯಿಂದ ದೇವರಬೆಳಕೆರೆ ಜಲಾಶಯದ ಹಿನ್ನೀರು ನುಗ್ಗಿ ಸಾವಿರಾರು ಎಕರೆ ಭತ್ತದ ಬೆಳೆ, ರಸ್ತೆ ಜಲಾವೃತವಾಗಿವೆ, ಅಣೆಕಟ್ಟೆ ಗೋಡೆ ಬಿರುಕು ಬಂದಿದೆ, ಸರ್ಕಾರದ ಹಣಕ್ಕೆ ಕಾಯದೆ ಸ್ವಂತ ಹಣದಿಂದ ಕೆಲಸ ಮಾಡಿಸುತ್ತಿದ್ದೇನೆ’ ಎಂದು ಶಾಸಕ ಎಸ್. ರಾಮಪ್ಪ ತಿಳಿಸಿದರು.

ದೇವರಬೆಳಕೆರೆ ಪಿಕಅಪ್‌ ಡ್ಯಾಂನಲ್ಲಿ ಜಲಸಸ್ಯಗಳನ್ನು ಹಿಟಾಚಿ ಮೂಲಕ ತೆರವುಗೊಳಿಸುವ ಕಾರ್ಯವನ್ನು ವೀಕ್ಷಿಸಿ ಅವರು ಮಾತನಾಡಿದರು.

‘ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿರುವ ಕಾರಣ ಗೋಡೆಗೆ ಅಪಾಯ ತಪ್ಪಿಸಲು ತುರ್ತಾಗಿ ₹ 5 ಲಕ್ಷ ಖರ್ಚು ಮಾಡಿದ್ದೇನೆ’ ಎಂದು ತಿಳಿಸಿದರು.

'ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದು ಬಿಜೆಪಿ ಮುಖಂಡರು ಸರ್ಕಾರದ ಮೇಲೆ ಒತ್ತಡ ಹೇರಿ ತುರ್ತಾಗಿ ನೀರು ಹರಿದು ಹೋಗುವಂತೆ ಮಾಡಲು ಸ್ಚಲ್ಪ ಹಣ ಏಕೆ ಬಿಡುಗಡೆ ಮಾಡಿಸಲಿಲ್ಲ, ಸುಮ್ಮನೆ ನೀರು ನಿಂತಿರುವುದನ್ನು ನೋಡಲು ಬಂದಿದ್ರಾ' ಎಂದು ಪ್ರಶ್ನಿಸಿದರು.

ನಿತ್ಯ ಡೀಸೆಲ್‌ಗಾಗಿ ₹ 12 ಸಾವಿರ ಖರ್ಚಾಗುತ್ತಿದೆ. ಯಂತ್ರದ ಬಾಡಿಗೆ, ಡ್ರೈವರ್ ಸಂಬಳ ನೀಡಬೇಕಿದೆ. ಅಣೆಕಟ್ಟೆಗೆ ಹಾನಿ ಸಂಭವಿಸುವುದನ್ನು ತಡೆಯಬೇಕಿದೆ ಎಂದರು.

ರೈತರೊಂದಿಗೆ ಚೆಲ್ಲಾಟ ಆಡಬೇಡಿ, ಸುಳ್ಳು ಆಶ್ವಾಸನೆ ನೀಡಬೇಡಿ. ಬೇಕಾಬಿಟ್ಟಿ ಹೇಳಿಕೆ ನೀಡುವ ಮುನ್ನ ಯೋಚಿಸಿ, ಸಮಸ್ಯೆ ಅವಲೋಕಿಸಿ ಎಂದು ಶಾಸಕರು ಕಿವಿ ಮಾತು ಹೇಳಿದರು.

ಇದೇ ವೇಳೆ ದಿನಗೂಲಿ ಹೊರಗುತ್ತಿಗೆ ನೌಕರರು ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿದ ಘಟನೆ ನಡೆಯಿತು. ಒಂದು ಹಂತದಲ್ಲಿ ಅಣೆಕಟ್ಟೆಗೆ ಹಾರಿ ಪ್ರತಿಭಟಿಸುವ ಎಚ್ಚರಿಕೆ ನೀಡಿದರು. ಶಾಸಕರು ತುರ್ತಾಗಿ ಸಮಸ್ಯೆ ಪರಿಹರಿಸಲು ಎಂಜಿನಿಯರಿಗೆ ತಾಕೀತು ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬಿದ್ ಅಲಿ, ಎಪಿಎಂಸಿ ಅಧ್ಯಕ್ಷ ಪಟೇಲ್ ಮಂಜುನಾಥ್, ಕೊಟ್ರೇಶ್ ನಾಯ್ಕ್, ಜಿಗಳಿ ಅನಂದಪ್ಪ, ಅಧೀಕ್ಷಕ ಎಂಜಿನಿಯರ್ ಚಂದ್ರಹಾಸ, ಎಇಇ ಸಂತೋಷ್, ರೈತರಾದ ನಿಂಗಪ್ಪ, ಮಹೇಶ್ವರಪ್ಪ, ಕರಿಬಸಪ್ಪ, ಶೇಖರಪ್ಪ, ಸಂಕ್ಲೀಪುರ, ಗುಳದಹಳ್ಳಿ, ಬಲ್ಲೂರು, ದೇವರಬೆಳೆಕೆರೆ, ಬೂದಾಳು ಗ್ರಾಮದ ರೈತರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.