ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುತ್ತಿರುವ ಬಿಜೆಪಿ: ಆರೋಪ
Last Updated 9 ಜುಲೈ 2019, 20:04 IST
ಅಕ್ಷರ ಗಾತ್ರ

ದಾವಣಗೆರೆ: ‘ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಕೇಂದ್ರದ ಬಿಜೆಪಿ ಸರ್ಕಾರ ಅಸ್ಥಿರಗೊಳಿಸುತ್ತಿದೆ’ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಬಿ.ಮಂಜಪ್ಪ ನೇತೃತ್ವದಲ್ಲಿ ಸಮಾವೇಶಗೊಂಡ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಇಂಟಕ್, ಸೇವಾದಳ, ಹಿಂದುಳಿದ ಘಟಕಗಳ ಸದಸ್ಯರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ತೊಲಗಲಿ, ತೊಲಗಲಿ, ಬಿಜೆಪಿ ತೊಲಗಲಿ’, ‘ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ’, ‘ಕಾಂಗ್ರೆಸ್‌ ಹೋರಾಟಕ್ಕೆ ಜಯವಾಗಲಿ’ ಎಂದು ಘೋಷಣೆ ಕೂಗಿದರು.

ಎಚ್‌.ಬಿ.ಮಂಜಪ್ಪ ಮಾತನಾಡಿ, ‘ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಸೇರಿ ಹಲವು ಜನಪರ ಕಾರ್ಯಕ್ರಮಗಳನ್ನು ಮಾಡಿ ಜನಪ್ರಿಯವಾಗಿದೆ. ಅಧಿಕಾರದ ದುರಾಸೆಯಿಂದ ಬಿಜೆಪಿಯವರು ವಾಮಮಾರ್ಗದಿಂದ ಹಣದ ಆಮಿಷವೊಡ್ಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ. ಸರ್ಕಾರವನ್ನು ಅಭದ್ರಗೊಳಿಸಲು ಬಿಜೆಪಿಯವರು ಕೈಹಾಕಿದ್ದಾರೆ’ ಎಂದು ಆರೋಪಿಸಿದರು.

‘ಅಗತ್ಯ ಬೆಂಬಲವಿದ್ದರೆ ಬಿಜೆಪಿ ಅಂದೇ ಸರ್ಕಾರ ರಚನೆ ಮಾಡಬಹುದಿತ್ತು. ಆದರೆ ಈಗ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವುದು ಸರಿಯಲ್ಲ. ಕೇಂದ್ರದಲ್ಲಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಶಾಸಕರ ಮೇಲೆ ಒತ್ತಡ ತಂದು ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಕೆಲಸವನ್ನು ಕೈಬಿಡಬೇಕು. ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

‘ಬಿಜೆಪಿಯವರಿಗೆ ಈ ಹಿಂದೆ ಜನರು ಅಧಿಕಾರ ಕೊಟ್ಟಿದ್ದರೂ ಯಡಿಯೂರಪ್ಪ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಜೈಲಿಗೆ ಹೋಗಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಜೈಲಿಗೆ ಹೋದ ಮುಖ್ಯಮಂತ್ರಿ ಎಂದರೆ ಯಡಿಯೂರಪ್ಪ. ಮುಖ್ಯಮಂತ್ರಿಯ ರಾಜೀನಾಮೆ ಕೇಳಲು ಇವರಿಗೇನು ಅರ್ಹತೆ ಇದೆ’ ಎಂದು ಪ್ರಶ್ನಿಸಿದರು.

‘ಬಿಜೆಪಿಯ ಅಧಿಕಾರದ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳಾದರು. ಇವರ ಸಂಪುಟದಲ್ಲಿನ ಸಚಿವರು ಹಲವು ಹಗರಣಗಳನ್ನು ಮಾಡಿ ಜೈಲಿಗೆ ಹೋದರು. ಸದನದಲ್ಲಿ ಅಶ್ಲೀಲ ಸಿನಿಮಾ ವೀಕ್ಷಿಸುವ ಮೂಲಕ ರಾಜ್ಯದ ಜನ ತಲೆತಗ್ಗಿಸುವಂಥ ಕೆಲಸ ಮಾಡಿದರು. ಇದರಿಂದ ಬೇಸತ್ತ ಜನ ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ಬೆಂಬಲಿಸಿದರು. ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದು, ಏನಾದರೂ ಮಾಡಿ ಸಿಎಂ ಆಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಅವರ ಕನಸು ನನಸಾಗುವುದಿಲ್ಲ’ ಎಂದು ಹೇಳಿದರು.

‘ಕಾಂಗ್ರೆಸ್‌ ಪಕ್ಷ ಅಧಿಕಾರ ನೀಡಿದ್ದು, ಪಕ್ಷದಿಂದ ಜನರು ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಮಂತ್ರಿ ಸ್ಥಾನ ನೀಡುವ ಆಮಿಷವೊಡ್ಡಿ ಬಿಜೆಪಿ ನಿಮ್ಮನ್ನು ಬಲಿಪಶು ಮಾಡಲು ಹೊರಟಿದ್ದು, ಕಾಂಗ್ರೆಸ್ ಶಾಸಕರು ಹಣದ ಆಸೆಗೆ ಬಲಿಯಾಗಬಾರದು’ ಎಂದು ಸಲಹೆ ನೀಡಿದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಡಿ.ಬಸವರಾಜ್ ಮಾತನಾಡಿ, ‘ಬಿಜೆಪಿಯ ಕಾಂಗ್ರೆಸ್ ಶಾಸಕರನ್ನು ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದು, ಇವರು ಉಳಿದಿರುವ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಶಾಸಕರನ್ನು ಕೋಳಿಗಳಂತೆ ಖರೀದಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಜನರೇ ಇವರಿಗೆ ಶಿಕ್ಷೆ ನೀಡುತ್ತಾರೆ. ಪಕ್ಷಾಂತರ ಮಾಡಿದ ಶಾಸಕರಿಗೆ 10 ವರ್ಷ ಚುನಾವಣೆಗೆ ನಿಲ್ಲದಂತೆ ಸಂವಿಧಾನದಲ್ಲಿ ತಿದ್ದುಪಡಿ ತರಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯದರ್ಶಿ ದಿನೇಶ್‌ ಕೆ.ಶೆಟ್ಟಿ, ಮುಖಂಡ ಕೆ.ಜಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಓಬಳಪ್ಪ, ಮುಖಂಡರಾದ ಜಮನ್‌ಪಾಷಾ, ಲಿಂಗರಾಜು, ಮಂಜುಳಮ್ಮ, ದಾಕ್ಷಾಯಣಮ್ಮ, ಕೆ.ಜಿ.ಲಿಂಗಪ್ಪ, ಸಾಗರ್, ಹರೀಶ್, ಕೆಂಗಲಹಳ್ಳಿ ಹರೀಶ್, ಮುಜಾಯಿದ್ ಪಾಷಾ, ಮೈನುದ್ದೀನ್‌, ವೀರಣ್ಣ, ಚಮನ್‌ಷಾಬ್, ರುದ್ರೇಶ್, ಮಾಲತೇಶ್‌ ಪೈಲ್ವಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT