ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಜಯಮಾಲೆ’ ಕೊರಳಿಗೇರಲು ಕ್ಷಣಗಣನೆ... ‘ಕಮಲ’ದ ವಿಜಯಯಾತ್ರೆ ಮುಂದುವರಿಯುವುದೇ?

ಎರಡು ದಶಕಗಳ ಬಳಿಕ ‘ಕೈ’ಗೆ ಅಧಿಕಾರ ಸಿಕ್ಕೀತೆ?
Last Updated 22 ಮೇ 2019, 19:48 IST
ಅಕ್ಷರ ಗಾತ್ರ

ದಾವಣಗೆರೆ: ಕ್ಷೇತ್ರದಾದ್ಯಂತ ಅಬ್ಬರಿಸಿದ್ದ ಲೋಕಸಭಾ ಚುನಾವಣಾ ಪ್ರಚಾರದ ಬಿರುಗಾಳಿ, ಒಂದು ತಿಂಗಳ ಬಳಿಕ ತಂಗಾಳಿಯಾಗಿ ಬದಲಾಗುವ ಕಾಲ ಬಂದಿದೆ. ಗುರುವಾರ ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಯಲಿದ್ದು, ‘ವಿಜಯಮಾಲೆ’ ಯಾರ ಕೊರಳಿಗೆ ಬೀಳಲಿದೆ ಎಂಬ ಕುತೂಹಲಕ್ಕೆ ಸಂಜೆಯ ವೇಳೆಗೆ ತೆರೆ ಬೀಳಲಿದೆ.

ಹ್ಯಾಟ್ರಿಕ್‌ ಸಾಧನೆ ಮಾಡಿರುವ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ನಾಲ್ಕನೇ ಬಾರಿಗೆ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆಯಲಿದ್ದಾರೆಯೇ ಅಥವಾ ಇದೇ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿರುವ ಮೈತ್ರಿ ಪಕ್ಷಗಳ ಅಭ್ಯರ್ಥಿ, ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಅವರಿಗೆ ಅದೃಷ್ಟ ಒಲಿಯುವುದೇ ಎಂಬುದು ಫಲಿತಾಂಶದ ಕೇಂದ್ರ ಬಿಂದುವಾಗಿದೆ.

ಚುನಾವಣಾ ಕಣದಲ್ಲಿ 25 ಅಭ್ಯರ್ಥಿಗಳು ಇದ್ದರೂ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆಯೇ ನೇರ ಸ್ಪರ್ಧೆ ಏರ್ಪಟ್ಟಿರುವುದು ಸ್ಪಷ್ಟ. ಪ್ರಧಾನಿ ನರೇಂದ್ರ ಮೋದಿ ಅಲೆಯನ್ನು ನೆಚ್ಚಿಕೊಂಡು ಗೆಲ್ಲುವ ವಿಶ್ವಾಸದೊಂದಿಗೆ ಬಿರುಸಿನ ಪ್ರಚಾರ ನಡೆಸಿದ್ದ ಸಿದ್ದೇಶ್ವರ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್‌ ಟಿಕೆಟ್‌ ಗೊಂದಲದ ನಡುವೆಯೂ ಕೊನೆ ಕ್ಷಣದಲ್ಲಿ ಕಣಕ್ಕಿಳಿದ ಮಂಜಪ್ಪ ಮೈತ್ರಿ ಪಕ್ಷಗಳ ಬಲ ಹಾಗೂ ಅಹಿಂದ ಮತಗಳ ಬೆಂಬಲದೊಂದಿಗೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್‌ ಅವರೂ ಸತತ ಮೂರು ಬಾರಿ ಗೆಲುವು ಸಾಧಿಸಿದ್ದರು. ಸಿದ್ದೇಶ್ವರ ಕೂಡ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದ್ದರೂ ಕಳೆದ ಎರಡು ಬಾರಿ ಮತಗಳ ಅಂತರ ಹೆಚ್ಚೇನೂ ಇರಲಿಲ್ಲ. ಈ ಬಾರಿ ಅವರು ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳುತ್ತಾರೋ ಅಥವಾ ಮೈತ್ರಿ ಪಕ್ಷಗಳ ‘ಚಕ್ರವ್ಯೂಹ’ದಲ್ಲಿ ಸಿಲುಕಿ ಸೋಲುತ್ತಾರೋ ಎಂಬ ಕುತೂಹಲ ಮೂಡಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ನಡೆದಿದ್ದು 12ನೇ ಚುನಾವಣೆ. ಇದುವರೆಗೆ ಆರು ಬಾರಿ ಕಾಂಗ್ರೆಸ್‌ ಹಾಗೂ ಐದು ಬಾರಿ ಬಿಜೆಪಿಗೆ ಅಧಿಕಾರ ಒಲಿದಿದೆ. ಮತದಾರ ಪ್ರಭು ಈ ಬಾರಿ ಸಂಸತ್‌ ಭವನದ ಗದ್ದುಗೆಯ ಮೇಲೆ ಯಾರನ್ನು ಪ್ರತಿಷ್ಠಾಪನೆ ಮಾಡಿದ್ದಾನೆ ಎಂಬ ಸತ್ಯ ಸಂಜೆ 4ರೊಳಗೆ ಬಹಿರಂಗಗೊಳ್ಳಲಿದೆ.

ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿತ್ತು. ಚುನಾವಣೆ ಘೋಷಣೆಯಾಗುವ ಪೂರ್ವದಲ್ಲೇ ಸಿದ್ದೇಶ್ವರ ಜಿಲ್ಲೆಯ ನೂರಾರು ಹಳ್ಳಿಗಳನ್ನು ಸುತ್ತಿ ಅದಾಗಲೇ ಒಂದು ಸುತ್ತು ಪ್ರಚಾರ ಮುಗಿಸಿದ್ದರು. ಅಧಿಸೂಚನೆ ಹೊರಡಿಸುತ್ತಿದ್ದಂತೆ ಬಿಜೆಪಿ ಪ್ರಚಾರವನ್ನು ಇನ್ನಷ್ಟು ಚುರುಕುಗೊಳಿಸಿತ್ತು.

ಇನ್ನೊಂದೆಡೆ ಮಾಜಿ ಶಾಸಕ ಎಸ್‌.ಎಸ್‌. ಮಲ್ಲಿಕಾರ್ಜುನ ಅವರೇ ಸ್ಪರ್ಧಿಸಬೇಕು ಎಂಬ ಕೂಗಿನ ನಡುವೆಯೇ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಿಸಲಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕೈತಪ್ಪಿರುವುದರಿಂದ ಮುನಿಸಿಕೊಂಡಿದ್ದ ಶಾಮನೂರು ಟಿಕೆಟ್‌ ನಿರಾಕರಿಸಿದರು. ಮಲ್ಲಿಕಾರ್ಜುನ ಅವರು ಸ್ಪರ್ಧಿಸಲು ಉತ್ಸಾಹ ತೋರಿಸದೇ ಇರುವುದರಿಂದ ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್‌ಗೆ ಕೆಪಿಸಿಸಿ ಮಣೆ ಹಾಕಲು ಚಿಂತನೆ ನಡೆಸಿತ್ತು. ಆದರೆ, ಪಕ್ಷದ ಮೇಲೆ ತಮ್ಮ ಹಿಡಿತ ತಪ್ಪಲಿದೆ ಎಂಬ ಕಾರಣಕ್ಕೆ ತಮ್ಮ ಆಪ್ತ ಮಂಜಪ್ಪ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ಮಲ್ಲಿಕಾರ್ಜುನ ಕೊನೆಗೂ ಯಶಸ್ವಿಯಾದರು. ಜೊತೆಗೆ ಚುನಾವಣಾ ಉಸ್ತುವಾರಿಯೂ ಅವರ ಹೆಗಲಿಗೆ ಬಿತ್ತು.

ಸಿದ್ದೇಶ್ವರ ವಿರುದ್ಧ ಸತತ ಮೂರು ಬಾರಿ ಸೋತಿದ್ದ ಮಲ್ಲಿಕಾರ್ಜುನ ಅವರು, ಇದೀಗ ತಮ್ಮ ಆಪ್ತ ‘ಶಿಷ್ಯ’ ಮಂಜಪ್ಪನನ್ನು ಗೆಲ್ಲಿಸಿ ಸೇಡು ತೀರಿಸಿಕೊಳ್ಳುತ್ತಾರೋ ಅಥವಾ ಉಸ್ತುವಾರಿಯೂ ಅವರ ಹೆಗಲಿಗೆ ಇರುವುದರಿಂದ ಇನ್ನೊಮ್ಮೆ ಪರೋಕ್ಷವಾಗಿ ಸೋಲನ್ನು ಅನುಭವಿಸುತ್ತಾರೋ ಎಂಬುದಕ್ಕೆ ಕ್ಷೇತ್ರದ 1949 ಇವಿಎಂಗಳಲ್ಲಿ ದಾಖಲಾಗಿರುವ ಮತಗಳೇ ಉತ್ತರ ನೀಡಬೇಕಾಗಿದೆ.

ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವೆ: ಸಿದ್ದೇಶ್ವರ

‘ಪ್ರಧಾನಿ ಮೋದಿ ಸಾಧನೆ, ನನ್ನ ತಂದೆ ಹಾಗೂ ನನ್ನ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳಿಂದಾಗಿ ನನ್ನನ್ನು ಬೆಂಬಲಿಸಿದ್ದಾರೆ. ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ’ ಎಂದು ಜಿ.ಎಂ. ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ಹರಿಹರ ಹಾಗೂ ಹೊನ್ನಾಳಿ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದ ಸಿದ್ದೇಶ್ವರ ಅವರಲ್ಲಿ ಫಲಿತಾಂಶದ ಬಗ್ಗೆ ಯಾವುದೇ ದುಗುಡ ಇರಲಿಲ್ಲ.

‘ಎಂಟು ಕ್ಷೇತ್ರಗಳಲ್ಲೂ ನನಗೆ ಮುನ್ನಡೆ ಸಿಗಲಿದೆ. ಅದರಲ್ಲೂ ವಿಶೇಷವಾಗಿ ದಾವಣಗೆರೆ ಉತ್ತರದಲ್ಲಿ ಅತಿ ಹೆಚ್ಚು ಅಂತರ ಸಿಗಲಿದೆ. ಚನ್ನಗಿರಿ, ಹರಪನಹಳ್ಳಿ, ಜಗಳೂರು, ಹರಿಹರದಲ್ಲೂ ಮುನ್ನಡೆ ಕಾಯ್ದುಕೊಳ್ಳುತ್ತೇನೆ. ದಾವಣಗೆರೆ ದಕ್ಷಿಣದಲ್ಲಿ ಸಮಬಲ ಏರ್ಪಡಬಹುದು’ ಎಂದು ತಮ್ಮ ಲೆಕ್ಕಾಚಾರ ಒಪ್ಪಿಸಿದರು.

ಜನ ಬದಲಾವಣೆ ಬಯಸಿದ್ದಾರೆ: ಮಂಜಪ್ಪ

‘ಒಂದೇ ಕುಟುಂಬದವರು 25 ವರ್ಷಗಳ ಅಧಿಕಾರದಲ್ಲಿರುವುದರಿಂದ ಜನ ಬದಲಾವಣೆ ಬಯಸಿದ್ದಾರೆ. ಮೂರು ಬಾರಿ ಆಯ್ಕೆಯಾಗಿದ್ದರೂ ಸಂಸದ ಸಿದ್ದೇಶ್ವರ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ. ಹೀಗಾಗಿ ಈ ಬಾರಿ ಮತದಾರರು ಕಾಂಗ್ರೆಸ್‌ನತ್ತ ಒಲವು ತೋರಿಸಿರುವುದರಿಂದ ಗೆಲ್ಲುವ ವಿಶ್ವಾಸ ಇದೆ’ ಎಂದು ಎಚ್‌.ಬಿ. ಮಂಜಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮತ ಎಣಿಕೆಯ ಮುನ್ನಾ ದಿನ ಹರಿಹರ ತಾಲ್ಲೂಕಿನಲ್ಲಿ ಮಳೆಯಿಂದ ಬೆಳೆಹಾನಿ ಆಗಿರುವುದನ್ನು ಪರಿಶೀಲನೆ ನಡೆಸಿದ ಅವರಲ್ಲಿ ಫಲಿತಾಂಶದ ಬಗ್ಗೆ ಯಾವುದೇ ಅಳಕು ಕಂಡುಬರಲಿಲ್ಲ.

‘ಬಿಜೆಪಿ ಗೆಲ್ಲುತ್ತದೆ ಎಂಬ ಸಮೀಕ್ಷೆಗಳು ಹುಸಿಯಾಗಲಿವೆ. ಬೆರಳೆಣಿಕೆಯಷ್ಟೇ ಜನರನ್ನು ಮಾತನಾಡಿಸಿ ಸಮೀಕ್ಷೆ ನಡೆಸಲಾಗಿದೆ. ಹೊನ್ನಾಳಿ, ಹರಿಹರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಹರಪನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ನನಗೆ ಮುನ್ನಡೆ ಸಿಗುವ ನಿರೀಕ್ಷೆ ಇದೆ. ಕನಿಷ್ಠ 5,000 ಮತಗಳ ಅಂತರದಿಂದಾದರೂ ಗೆಲ್ಲುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT