ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಸ್ವೆಹಳ್ಳಿ: ಚುರುಕುಗೊಂಡ ಕೃಷಿ ಚಟುವಟಿಕೆ

ಅಕ್ಕಡಿ ಬೆಳೆಗೆ ಆದ್ಯತೆ ನೀಡಿ: ರೈತರಿಗೆ ಕೃಷಿ ಇಲಾಖೆಯಿಂದ ಸಲಹೆ
ಗಿರೀಶ್ ಎಂ. ನಾಡಿಗ್
Published 30 ಜೂನ್ 2024, 7:47 IST
Last Updated 30 ಜೂನ್ 2024, 7:47 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ವಾರದಿಂದ ತುಂತುರು ಹಾಗೂ ಹದ ಮಳೆ ಬಿಳುತ್ತಿರುವುದರಿಂದ ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಶೇ 80ರಷ್ಟು ಕೃಷಿ ಬೆಳೆಗಳನ್ನು ಬೆಳೆಯಲಾಗಿದೆ. ಈ ಭಾಗದಲ್ಲಿ ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುತ್ತಿದ್ದು, ಇತ್ತಿಚೆಗೆ ಅಡಿಕೆ ಬೆಳೆ ಹೆಚ್ಚು ಭಾಗವನ್ನು ಆವರಿಸುತ್ತಿದೆ.

‘ನಾವು ಹೆಚ್ಚಾಗಿ ಹತ್ತಿ, ಸೆಣಬು, ಅವರೆ, ಅಲಸಂದಿ, ತೊಗರಿ ಬೆಳೆಗಳನ್ನು ಬೆಳೆಯುತ್ತಿದ್ದೆವು. ಹತ್ತಿ ಬೆಳೆ ಹೆಚ್ಚು ಕೆಲಸ ಬೇಡುವುದರಿಂದ ಈಗ ಹೆಚ್ಚಾಗಿ ಮೆಕ್ಕೆಜೋಳವನ್ನು (ಪಾಪ್ ಕಾರ್ನ್) ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದೇವೆ. ಸರ್ಕಾರದಿಂದ ಸೌಲಭ್ಯಗಳು ಸಿಕ್ಕ ಕಾರಣ ಅಡಿಕೆ ಬೆಳೆಗೆ ಆದ್ಯತೆ ನೀಡುತ್ತಿದ್ದೇವೆ’ ಎನ್ನುತ್ತಾರೆ ರೈತ ಭೈರನಹಳ್ಳಿ ಪಂಚಾಕ್ಷರಯ್ಯ.

‘ಮಳೆ ಬೀಳುವ ಸಮಯದಲ್ಲಿ ಅಂದರೆ ಜೂನ್ ಮೊದಲ ವಾರದಲ್ಲಿಯೇ ಬಿತ್ತನೆ ಮಾಡಿದ್ದೆವು. ಈಗ ಗಿಡಗಳು ಚೆನ್ನಾಗಿ ಬಂದಿವೆ. ಮೊದಲ ಸಲದ ಗೊಬ್ಬರ ನೀಡಿದ್ದೇವೆ. ವಾರದಿಂದ ಮಳೆ ಉತ್ತಮವಾಗಿ ಬೀಳುತ್ತಿರುವುದರಿಂದ ಎಡಕುಂಟೆ ಹೊಡೆಯುತ್ತಿದ್ದೇವೆ. ಬೆಳೆ ಚೆನ್ನಾಗಿ ಬಂದಿದೆ. ಇನ್ನು ಮೂರು– ನಾಲ್ಕು ಬಾರಿ ಸರಿಯಾದ ಸಮಯಕ್ಕೆ ಮಳೆ ಬಂದರೆ ಉತ್ತಮ ಫಸಲು ಬರುವ ನಿರೀಕ್ಷೆ ಇದೆ’ ಎನ್ನುತ್ತಾರೆ ಕುಳಗಟ್ಟೆ ಮಡಿವಾಳ ಹನುಮಂತಮ್ಮ ನರಸಿಂಹಪ್ಪ.

‘ಬೆನಕನಹಳ್ಳಿ ಮತ್ತು ತ್ಯಾಗದಕಟ್ಟೆಯ ಕೆಲವು ಭಾಗದಲ್ಲಿ ಬಿತ್ತನೆಗೆ ಬೇಕಾದ ಮಳೆ ಇಲ್ಲದ ಕಾರಣ ಈ ಭಾಗದಲ್ಲಿ ಬಿತ್ತನೆ ಕಾರ್ಯ ಮಂದಗತಿಯಲ್ಲಿ ಸಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ಶೇ 20ರಷ್ಟು ಹೊರತುಪಡಿಸಿ ಉಳಿದೆಲ್ಲ ಕಡೆ ಬಿತ್ತನೆ ನಡೆದಿದೆ. 3,000 ಹೆಕ್ಟೇರ್ ಪ್ರದೇಶದಲ್ಲಿ 15ರಿಂದ 20 ಟನ್ ಮೆಕ್ಕೆಜೋಳ, 8 ಟನ್ ತೊಗರಿ, ಉಳಿದಂತೆ ರಾಗಿ, ಅಲಸಂದಿ, ಹತ್ತಿ, ಬೆಳೆಗಳನ್ನು ಬಿತ್ತಿದ್ದಾರೆ’ ಎಂದು ಸಾಸ್ವೆಹಳ್ಳಿ ಕೃಷಿ ಅಧಿಕಾರಿ ಸಿ.ಯು.ಶಶಿಧರ್ ಮಾಹಿತಿ ನೀಡಿದರು.

‘ಕೃಷಿ ಜಮೀನನ್ನು ಹೆಚ್ಚಾಗಿ ಅಡಿಕೆ ಆವರಿಸಿಕೊಳ್ಳುತ್ತಿರುವುದರಿಂದ ರೈತರು ಅಕ್ಕಡಿ ಬೆಳೆಯಾಗಿ ಪರ್ಯಾಯ ಬೆಳೆಗಳನ್ನು ಬೆಳೆಯುವುದು ಉತ್ತಮ. ಇದರಿಂದ ರೈತರ ಆದಾಯ ದ್ವಿಗುಣವಾಗುತ್ತದೆ. ಅಕ್ಕಡಿ ಬೆಳೆಯಾಗಿ ದ್ವಿದಳ ಧಾನ್ಯಗಳನ್ನು ಹೆಚ್ಚು ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ರಿಯಾಯಿತಿ ದರದಲ್ಲಿ ರೈತರಿಗೆ ಬಿತ್ತನೆ ಬೀಜಗಳಾದ ಮೆಕ್ಕೆಜೋಳ, ರಾಗಿ, ತೊಗರಿ, ಅಲಸಂದಿ ಹಾಗೂ ಲಘು ಪೋಷಕಾಂಶಗಳು ಕೃಷಿ ಇಲಾಖೆಯಲ್ಲಿ ಲಭ್ಯ ಇವೆ. ರೈತರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಕೃಷಿ ಅಧಿಕಾರಿ ತಿಳಿಸಿದರು.

ಸಾಸ್ವೆಹಳ್ಳಿ ಸಮೀಪದ ಹುಣಸೆಹಳ್ಳಿಯಲ್ಲಿ ಮಳೆ ಬಿದ್ದಿದ್ದರಿಂದ ಹತ್ತಿಗೆ ಗೊಬ್ಬರ ಹಾಕುತ್ತಿರುವ ಮಹಿಳೆ
ಸಾಸ್ವೆಹಳ್ಳಿ ಸಮೀಪದ ಹುಣಸೆಹಳ್ಳಿಯಲ್ಲಿ ಮಳೆ ಬಿದ್ದಿದ್ದರಿಂದ ಹತ್ತಿಗೆ ಗೊಬ್ಬರ ಹಾಕುತ್ತಿರುವ ಮಹಿಳೆ
ಸಾಸ್ವೆಹಳ್ಳಿ ಸಮೀಪದ ಕುಳಗಟ್ಟೆಯಲ್ಲಿ ಮೆಕ್ಕೆಜೋಳದಲ್ಲಿ ಕಳೆ ಹೆಚ್ಚಾಗದಂತೆ ಎಡಗುಂಟೆ ಹೋಡೆಯುತ್ತಿರುವ ರೈತರು.
ಸಾಸ್ವೆಹಳ್ಳಿ ಸಮೀಪದ ಕುಳಗಟ್ಟೆಯಲ್ಲಿ ಮೆಕ್ಕೆಜೋಳದಲ್ಲಿ ಕಳೆ ಹೆಚ್ಚಾಗದಂತೆ ಎಡಗುಂಟೆ ಹೋಡೆಯುತ್ತಿರುವ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT