ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಬರ ಮರೆಸಿದ ಮಳೆ: ಕೃಷಿ ಚಟುವಟಿಕೆ ಮುನ್ನುಡಿ

ಅನ್ನದಾತನಿಗೆ ಆಸರೆಯಾಗಬಲ್ಲದು ಅಂತರ ಬೆಲೆ
Published 23 ಮೇ 2024, 4:51 IST
Last Updated 23 ಮೇ 2024, 4:51 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ 5 ದಿನಗಳಿಂದ ಮಳೆಯಾಗುತ್ತಿದ್ದು, ಸೋಮವಾರ ರಾತ್ರಿ ಸುರಿದ ಭರ್ಜರಿ ಮಳೆ ರೈತರಿಗೆ ಬರದ ಕಹಿಯನ್ನು ಮರೆಸಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಪೂರ್ವ ಮುಂಗಾರು ಮಳೆಯಿಂದಾಗಿ ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗುತ್ತಿದ್ದು, ಭೂಮಿಗೆ ಜೀವಕಳೆ ಬಂದಿದೆ. ಕಳೆದ ವರ್ಷ ಮಳೆಯಾಗದೇ ಬಹುತೇಕ ಕೆರೆ ಕಟ್ಟೆಗಳು ಖಾಲಿಯಾಗಿದ್ದವು. ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದವು. ಆದರೆ ಈ ಬಾರಿ ಮುಂಗಾರಿಗೂ ಮುನ್ನವೇ ಮಳೆಯ ಅಬ್ಬರ ಜೋರಾಗಿದೆ.

ಬರದ ನಾಡು ಎನಿಸಿದ್ದ ಜಗಳೂರಿನಲ್ಲೇ ಅಧಿಕ ಮಳೆಯಾಗಿದ್ದು, ಉಳಿದಂತೆ ಹರಿಹರ, ಚನ್ನಗಿರಿ, ಹೊನ್ನಾಳಿ ತಾಲ್ಲೂಕುಗಳಿಲ್ಲಿಯೂ ಉತ್ತಮ ಮಳೆಯಾಗಿದೆ.

ಮೊದಲ ಮಳೆಯಲ್ಲಿಯೇ ಜಿಲ್ಲೆಯ ಹಲವು ಕೆರೆ ಕಟ್ಟೆಗಳಿಗೆ ನೀರು ಬಂದಿರುವುದು ರೈತರಿಗೆ ಖುಷಿ ತಂದಿದ್ದು, ಚುನಾವಣಾ ಗುಂಗಿನಲ್ಲಿದ್ದ ಜನರು ಕೃಷಿ ಕಾಯಕ ಶುರು ಮಾಡಿದ್ದಾರೆ. ಬರದಿಂದಾಗಿ ಪ್ರಮುಖ ತೋಟಗಾರಿಕಾ ಬೆಳೆಯಾದ ಅಡಿಕೆ ತೋಟಗಳು ಒಣಗಿ ಹೋಗಿದ್ದವು. ಅಡಿಕೆ ತೋಟ ಉಳಿಸಿಕೊಳ್ಳಲು ರೈತರು ಬೋರ್ವೆಲ್‌ಗಳನ್ನು ಕೊರೆಸಿದ್ದರು. ಆದರೆ ಅಲ್ಲಿಯೂ ನೀರು ಬಾರದೇ ರೈತರು ಕಂಗಾಲಾಗಿದ್ದರು. ಈಗ ಭರ್ಜರಿ ಮಳೆ ಸುರಿಯುತ್ತಿರುವುದು ಅಡಿಕೆ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿದೆ.

3.2 ಮಿ.ಮೀ ಸರಾಸರಿ ಮಳೆ:

ಬುಧವಾರ ಬೆಳಿಗ್ಗೆ ವೇಳೆಗೆ ಜಿಲ್ಲೆಯಲ್ಲಿ 3.2 ಮಿ.ಮೀ ಸರಾಸರಿ ಮಳೆಯಾಗಿದೆ. ಚನ್ನಗಿರಿಯಲ್ಲಿ 0.3 ಮಿ.ಮೀ, ದಾವಣಗೆರೆಯಲ್ಲಿ 2.1. ಹರಿಗರದಲ್ಲಿ 7.7, ಹೊನ್ನಾಳಿಯಲ್ಲಿ 6, ಜಗಳೂರಿನಲ್ಲಿ 4.4 ಹಾಗೂ ನ್ಯಾಮತಿಯಲ್ಲಿ 3.1 ಮಿ.ಮೀ ಮಳೆಯಾಗಿದೆ.

ಜಿಲ್ಲೆಯ ದಾವಣಗೆರೆ ಹಾಗೂ ಹರಿಹರ ತಾಲ್ಲೂಕಿನಲ್ಲಿ ತಲಾ ಒಂದು ಮನೆಗೆ ಹಾನಿಯಾಗಿದ್ದು, ₹ 60,000 ಹಾಗೂ ಹರಿಹರದಲ್ಲಿ 8 ಎಕರೆ ಭತ್ತ ನಷ್ಟವಾಗಿದ್ದು, ₹60 ಸಾವಿರ ನಷ್ಟವಾಗಿದ್ದು, ಸರ್ಕಾರದ ಮಾರ್ಗಸೂಚಿ ಅನ್ವಯ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.

ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆ ಇಲ್ಲ:

‘ಈ ಬಾರಿ ಜಿಲ್ಲೆಯಲ್ಲಿ 2.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯ ಗುರಿಯನ್ನು ಇಟ್ಟುಕೊಂಡಿದ್ದು, ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಕೊರತೆ ಇಲ್ಲ’ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಹೇಳಿದರು.

‘ಜಿಲ್ಲೆಗೆ 50 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಅಗತ್ಯವಿದ್ದು, ಈಗಾಗಲೇ 52 ಸಾವಿರ ದಾಸ್ತಾನು ಅವಶ್ಯಕತೆ ಇದೆ. 25 ಸಾವಿರ ಕ್ವಿಂಟಲ್ ಮೆಕ್ಕೆಜೋಳ, 15 ಸಾವಿರ ಕ್ವಿಂಟಲ್ ಭತ್ತ ಹಾಗೂ ಉಳಿದ ಧಾನ್ಯಗಳು 10 ಕ್ವಿಂಟಲ್ ಅಗತ್ಯವಿದೆ. ಅಲ್ಲದೇ ‘ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ 23,154 ಮೆಟ್ರಿಕ್‌ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು, 43,646 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. ಮೇ ತಿಂಗಳಿಗೆ 6,303 ಮೆಟ್ರಿಕ್‌ ಟನ್ ಯೂರಿಯಾಗೆ ಬೇಡಿಕೆ ಬಂದಿದ್ದು, 11,996 ಮೆಟ್ರಿಕ್ ಟನ್ ದಾಸ್ತಾನು ಇದೆ. ಡಿ.ಎ.ಪಿಗೆ 3,908 ಮೆಟ್ರಿಕ್‌ ಟನ್ ಬೇಡಿಕೆ ಇದ್ದು, 6,626 ಮೆಟ್ರಿಕ್ ಟನ್ ಸಂಗ್ರವಿದ್ದರೆ, 11,627 ಮೆಟ್ರಿಕ್ ಟನ್ ಬೇಡಿಕೆ ಇರುವ ಎನ್.ಪಿ.ಕೆ.ಕಾಂಪ್ಲೆಕ್ಸ್‌ ಗೊಬ್ಬರ 22,885 ಮೆಟ್ರಿಕ್ ದಾಸ್ತಾನು ಇದೆ’ ಎಂದು ಹೇಳಿದರು.

ಅಂತರ ಬೆಳೆ ಆಸರೆ:

‘ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಮೆಕ್ಕೆಜೋಳವನ್ನು 1.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ಇದ್ದು, ಇದರ ಜೊತೆ ಅಂತರ ಬೆಳೆಯಾಗಿ ದ್ವಿದಳ ಧಾನ್ಯಗಳನ್ನು ಬೆಳೆಯಬಹುದು’ ಎಂದು ಶ್ರೀನಿವಾಸ್ ಚಿಂತಾಲ್ ಸಲಹೆ ನೀಡಿದರು.

‘ಇತ್ತೀಚೆಗೆ ದ್ವಿದಳ ಧಾನ್ಯಗಳನ್ನು ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದ್ದು, ಇದರ ಪ್ರಾಮುಖ್ಯತೆ ಬಹಳಷ್ಟಿದೆ. ಮೆಕ್ಕೆಜೋಳದಲ್ಲಿ ಅಂತರ ಬೇಸಾಯ ಅತ್ಯಂತ ಪರಿಣಾಮಕಾರಿ ತಂತ್ರಜ್ಞಾನವಾಗಿದ್ದು, ಬೆಳೆಗಳ ನಡುವೆ ಸ್ಥಾನವನ್ನು ಸಾಮರ್ಥ್ಯಕ್ಕನುಗುಣವಾಗಿ ಬಳಸಲು ಮತ್ತು ಭೂಮಿಯ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ’ ಎಂದು ಹೇಳಿದರು.

ಮುಸುಕಿನ ಜೋಳದ ಜೊತೆ ಹೆಸರು, ತೊಗರಿ, ಅವರೆ, ಅಲಸಂದೆ ಮತ್ತು ಸೊಯಾಬೀನ್ ಬೆಳೆಗಳು ಮಣ್ಣಿನ ನೈಸರ್ಗಿಕ ಫಲವತ್ತತೆಯನ್ನು ಕಾಯ್ದುಕೊಳ್ಳುವಲ್ಲಿ ಸಹಾಯ ಮಾಡುತ್ತವೆ. ಮುಸುಕಿನ ಜೋಳದ ಸಾಲುಗಳ ನಡುವೆ 60–75 ಸೆಂ.ಮೀ ಅಂತರ ಮತ್ತು ಗಿಡದಿಂದ ಗಿಡಕ್ಕೆ 20–25 ಸೆಂ.ಮೀ. ಅಂತರ ಕಾಯ್ದುಕೊಂಡು ಬಿತ್ತನೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಮುಸುಕಿನ ಜೋಳ ಮತ್ತು ಅಂತರ ಬೆಳೆಗಳನ್ನು ಆಯ್ಕೆ ಮಾಡುವಾಗ ಎರಡು ಬೆಳೆಗಳಲ್ಲಿ ಸಾಮಾನ್ಯವಾಗಿ ಉಂಟಾಗುವ ರೋಗಗಳು ಮತ್ತು ಕೀಟಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಬೇರೆ ಬೇರೆ ರೋಗಗಳಿಗೆ ಪ್ರತಿರೋಧಕ ಬೆಳೆಯನ್ನು ಆಯ್ಕೆ ಮಾಡುವುದು ಉತ್ತಮ. ಅಂತರ ಬೆಳೆಗಳಲ್ಲಿ ನೀರಿನ ಒತ್ತಡವನ್ನು ತಪ್ಪಿಸಲು ಸೂಕ್ತ ನೀರಾವರಿ ವ್ಯವಸ್ಥೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

‘ಮಣ್ಣು ಹೊದಿಸಲು ಮತ್ತು ಪೋಷಕಾಂಶಗಳನ್ನು ಹೆಚ್ಚಿಸಲು ಸಾವಯವ ಪದ್ಧತಿಗಳಾದ ಹಸುಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರ ಬಳಸಬೇಕು. ಈ ಅಂಶಗಳನ್ನು ಸರಿಯಾದ ರೀತಿಯಲ್ಲಿ ಅನುಸರಿಸಿದರೆ ಮುಸುಕಿನ ಜೋಳದ ಅಂತರ ಬೇಸಾಯ ಯಶಸ್ವಿಯಾಗಬಹುದು’ ಎಂದು ಹೇಳಿದರು.

‘ನಮ್ಮ ದಿನನಿತ್ಯದ ಆಹಾರದಲ್ಲಿ ತೊಗರಿ, ಆವರೆ, ಅಲಸಂದೆ, ಹೆಸರು ಮತ್ತು ಸೊಯಾಬೀನ್ ಅವಿಭಾಜ್ಯ ಅಂಗವಾಗಿದ್ದು, ದ್ವಿದಳ ಧಾನ್ಯಗಳಲ್ಲಿ ಪ್ರೊಟೀನ್ ಹೆಚ್ಚಾಗಿರುವುದರಿಂದ ಏಕದಳ ಧಾನ್ಯಗಳ ಜೊತೆ ದಿನನಿತ್ಯದ ಆಹಾರದ ಜೊತೆ ಸಮತೋಲನ ಪೋಷಕಾಂಶಗಳನ್ನು ಪಡೆಯಬಹುದು. ಈ ಬೆಳೆಗಳಿಂದ ಬೇಳೆಗಳು ಅಲ್ಲದೇ ಹಸಿರು ತರಕಾರಿಯನ್ನು ಸಹ ಪಡೆಯಬಹುದು’ ಎಂದು ತಿಳಿಸಿದರು.

ಮಾಯಕೊಂಡ ಸಮೀಪದ ಕೊಡಗನೂರು ಬಳಿಯ ಜಮೀನಿನಲ್ಲಿ ರೈತ ಬಸವರೆಡ್ಡಿ ಅವರು ಜಮೀನು ಹದಗೊಳಿಸಿದರು.
ಮಾಯಕೊಂಡ ಸಮೀಪದ ಕೊಡಗನೂರು ಬಳಿಯ ಜಮೀನಿನಲ್ಲಿ ರೈತ ಬಸವರೆಡ್ಡಿ ಅವರು ಜಮೀನು ಹದಗೊಳಿಸಿದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಬಿತ್ತನೆ ಬೀಜ ರಸಗೊಬ್ಬರ ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಇದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಮುಗಿಬೀಳುವ ಪ್ರಸಂಗ ಬಾರದು.

-ಶ್ರೀನಿವಾಸ್ ಚಿಂತಾಲ್ ಜಂಟಿ ಕೃಷಿ ನಿರ್ದೇಶಕ

ಈ ವಾರದಲ್ಲಿ ಬಿದ್ದ ಮಳೆ ಜಮೀನು ಸಿದ್ಧತೆ ಮಾಡಿಕೊಳ್ಳಲು ಸಹಕಾರಿಯಾಯಿತು. ಜೂನ್ ಮೊದಲ ವಾರದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಬಹುದು.

-ಸಂದೀಪ್‌ ಪಾಟೀಲ್ ಬಾವಿಹಾಳು ಗ್ರಾಮದ ರೈತ

ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನಿಗೆ ಮುಂದಾದ ಮಾರಾಟಗಾರರು

ಮಾಯಕೊಂಡ: ಪೂರ್ವ ಮುಂಗಾರಿನಲ್ಲಿ ಆಗಮಿಸಿದ ಮಳೆರಾಯ ರೈತರ ಮೊಗದಲ್ಲಿ ಸಂತಸ ಮೂಡಿಸಿದ್ದು ರೈತರು ಭೂಮಿ ಸಿದ್ಧತೆ ಮಾಡಿಕೊಳ್ಳುವತ್ತ ಮುಖ ಮಾಡಿದ್ದಾರೆ. ಮಾಯಕೊಂಡ ಆನಗೋಡು ಅಣಜಿ ಲೋಕಿಕೆರೆ ಭಾಗಗಳಲ್ಲಿ ಕೃಷಿ ಪರಿಕರ ಮಾರಾಟಗಾರರು ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಕಾರ್ಯ ಜೋರಾಗಿ ಮಾಡುತ್ತಿದ್ದಾರೆ. ಬೇಸಿಗೆ ಹಂಗಾಮಿನಲ್ಲಿ ನೀರಿನ ಕೊರತೆ ಇದ್ದುದರಿಂದ ರಸಗೊಬ್ಬರ ಬಳಕೆ ಆಗಲಿಲ್ಲ. ಉಳಿಕೆ ದಾಸ್ತಾನು ಜೊತೆಗೆ ಮುಂಗಾರು ಹಂಗಾಮಿನ ರಸಗೊಬ್ಬರ ಬಿತ್ತನೆ ಬೀಜ ಬರುತ್ತಿವೆ. ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆ. ಕೃಷಿ ಇಲಾಖೆಗಳಿಗೆ ಬಿತ್ತನೆ ಬೀಜ ಸರಬರಾಜು ಕಾರ್ಯ ನಡೆಯುತ್ತಿದ್ದು ಶೀಘ್ರವೇ ರೈತರಿಗೆ ವಿತರಣಾ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಭೂಮಿ‌ ಸಿದ್ದಗೊಂಡ ನಂತರದಲ್ಲಿ ಮಳೆ ಬಿದ್ದರೆ ಬಿತ್ತನೆ ಕಾರ್ಯಕ್ಕೆ ಚುರುಕಾಗಲಿದೆ’ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು. ‘ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ಬಿತ್ತನೆ ಬೀಜ ದಾಸ್ತಾನು ಇದ್ದು ರೈತರು ಯಾವುದೇ ಆತಂಕಪಡದೇ ರೈತ ಸಂಪರ್ಕ ಕೇಂದ್ರ ಹಾಗೂ ನೊಂದಾಯಿತ ಕೃಷಿ ಪರಿಕರ ಮಾರಾಟಗಾರರ ಬಳಿಯೇ ಬಿತ್ತನೆ ಬೀಜ ರಸಗೊಬ್ಬರ ಖರೀದಿಸಬೇಕು’ ಎಂದು ಸಹಾಯಕ ಕೃಷಿ ಅಧಿಕಾರಿ ಶ್ರೀಧರಮೂರ್ತಿ ತಿಳಿಸಿದರು.

ಬಿತ್ತನೆ ಕಾರ್ಯಕ್ಕೆ ಸಕಲ ಸಿದ್ಧತೆ

ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ರೈತರು ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡಲು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ‘ತಾಲ್ಲೂಕಿನಲ್ಲಿ 39000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬೀಜಗಳನ್ನು ಮೇ ಕೊನೆಯ ವಾರದಿಂದ ತಾಲ್ಲೂಕಿನ 16 ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಸ್. ಅರುಣ್ ಕುಮಾರ್ ತಿಳಿಸಿದರು. ‘ಬಿತ್ತನೆಗೆ ಅಗತ್ಯವಾದ ರಸಗೊಬ್ಬರಗಳನ್ನು 155 ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ 4.5 ಸಾವಿರ ಟನ್ ದಾಸ್ತಾನ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಈ ಬಾರಿ ರಸಗೊಬ್ಬರ ಅಭಾವವಾಗುವುದಿಲ್ಲ. ಜನವರಿಯಿಂದ ಮೇ ತಿಂಗಳವರೆಗೆ 104 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿದ್ದು ಇದುವರೆಗೆ 145 ಮಿಮೀ ಮಳೆಯಾಗಿದ್ದು ಶೇ 39ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ’ ಎಂದು ಮಾಹಿತಿ ನೀಡಿದರು.

ಹತ್ತಿ ಬೆಳೆಯಲು ನಿರಾಸಕ್ತಿ

ಸಂತೇಬೆನ್ನೂರು: ಹೋಬಳಿಯಾದ್ಯಂತ ಹದಮಳೆ ಪರಿಣಾಮ ರೈತರು ಹತ್ತಿ ಬಿತ್ತನೆಗೆ ಚಾಲನೆ ನೀಡಿದರು. ‘ಹಸನಾದ ಜಮೀನಿನಲ್ಲಿ ಸಾಲು ಹೊಡೆದು ಹತ್ತಿ ಬೀಜ ಹಾಕಲಾಗುತ್ತಿದೆ. ದೇವರಹಳ್ಳಿ ಹಿರೇಉಡ ಹಿರೇಗಂಗೂರು ಲಕ್ಷ್ಮೀಸಾಗರ ಗ್ರಾಮಗಳ ರೈತರು ಹತ್ತಿ ಬೆಳೆಯುತ್ತಾರೆ. ಕೂಲಿ ಕಾರ್ಮಿಕರ ಕೊರತೆಯಿಂದ ಕೆಲ ರೈತರು ಹತ್ತಿ ಬೆಳೆಗೆ ಆಸಕ್ತಿ ತೋರುತ್ತಿಲ್ಲ. ಬಿತ್ತನೆ ಬೀಜ ರಸಗೊಬ್ಬರ ಸಿಗುತ್ತಿವೆ’

ರೈತ ಕೇಂದ್ರಗಳಲ್ಲಿ ಮುಗಿಬೀಳುವ ಪ್ರಸಂಗ ಬಾರದು

ಹೊನ್ನಾಳಿ: ಮಳೆಗೆ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು ಬಿತ್ತನೆಗೆ ಭೂಮಿ ಹದಮಾಡಿಕೊಳ್ಳುವ ಕಾರ್ಯಗಳು ಎಲ್ಲೆಡೆ ಭರದಿಂದ ಸಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ 28 ಸಾವಿರ ಹೆಕ್ಟೇರ್ ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಹೊಂದಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕಿ ಎ.ಎಸ್. ಪ್ರತಿಮಾ ತಿಳಿಸಿದ್ದಾರೆ. ‘ತಾಲ್ಲೂಕಿನಲ್ಲಿ ಮೆಕ್ಕೆಜೋಳ ತೊಗರಿ ರಾಗಿ ಹತ್ತಿ ಹಾಗೂ ಶೇಂಗಾ ಬೆಳೆಯನ್ನು ಬಹುಮುಖ್ಯವಾಗಿ ಬೆಳೆಯಲಾಗುತ್ತಿದೆ. ನಂತರ ಜಲಾಶಯಗಳಲ್ಲಿನ ನೀರಿನ ಲಭ್ಯತೆಯನ್ನು ಆಧರಿಸಿ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ತಾಲ್ಲೂಕಿನಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸದ್ಯಕ್ಕೆ ರೈತರಿಂದ ಯಾವುದೇ ಬೇಡಿಕೆ ಬಂದಿಲ್ಲ’ ಎಂದು ಕೃಷಿ ನಿರ್ದೇಶಕಿ ಪ್ರತಿಮಾ ಅವರು ತಿಳಿಸಿದ್ದಾರೆ. ‘ಜೂನ್ ಮೊದಲ ವಾರದಲ್ಲಿ ಬಿತ್ತನೆ ಕಾರ್ಯ ಆರಂಭವಾಗಲಿದೆ. ಹೀಗಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ರೈತರು ರೈತಸಂಪರ್ಕ ಕೇಂದ್ರಗಳಲ್ಲಿ ಬೇಡಿಕೆ ಇಟ್ಟು ಮುಗಿಬಿದ್ದ ಉದಾಹರಣೆಗಳು ಇಲ್ಲ. ಆದರೆ ಅಲ್ಲಲ್ಲಿ ಹತ್ತಿ ಬೆಳೆಯನ್ನು ಮಾತ್ರ ಬಿತ್ತನೆ ಮಾಡುತ್ತಿದ್ದಾರೆ’ ಎಂದು ಪ್ರತಿಮಾ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT