ಶುಕ್ರವಾರ, ಜೂಲೈ 3, 2020
21 °C
ಆರಂಭದಲ್ಲೇ ಕೊರೊನಾ ಸೋಂಕಿನ ಕೊಂಡಿ ತುಂಡರಿಸಿದ ಆರೋಗ್ಯ ಇಲಾಖೆ

ಕೋವಿಡ್‌ ಮುಕ್ತ ಜಿಲ್ಲೆಯತ್ತ ದಾವಣಗೆರೆ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವಿದೇಶದಿಂದ ಬಂದವರಲ್ಲಿದ್ದ ಕೊರೊನಾ ಸೋಂಕನ್ನು ಗುರುತಿಸಿ ಆರಂಭದಲ್ಲೇ ಸೋಂಕಿನ ಕೊಂಡಿಯನ್ನು ತುಂಡರಿಸುವ ಮೂಲಕ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತವು ದಾವಣಗೆರೆಯನ್ನು ‘ಕೋವಿಡ್‌–19’ ಮುಕ್ತ ಜಿಲ್ಲೆಯನ್ನಾಗಿಸುವತ್ತ ಹೆಜ್ಜೆ ಇಡುತ್ತಿದೆ.

ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ವಿದೇಶದಿಂದ ಬಂದವರ ಪೈಕಿ ಮೂವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈಗಾಗಲೇ ಚಿತ್ರದುರ್ಗದ ಭೀಮಸಮುದ್ರದ 37 ವರ್ಷದ ಮಹಿಳೆ (ರೋಗಿ ಸಂಖ್ಯೆ–42) ಹಾಗೂ ಆಕೆಯ ಸಹೋದರ (ಕಸಿನ್‌) 20 ವರ್ಷದ ಯುವಕ (ರೋಗಿ ಸಂಖ್ಯೆ–75) ಕೋವಿಡ್‌ ರೋಗದಿಂದ ಗುಣಮುಖರಾಗಿದ್ದು, ಸೋಮವಾರವಷ್ಟೇ ಎಸ್‌.ಎಸ್‌. ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಇನ್ನೊಬ್ಬ ಸೋಂಕಿತ ವ್ಯಕ್ತಿಯಾಗಿದ್ದ ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ 24 ವರ್ಷದ ವೈದ್ಯ (ರೋಗಿ ಸಂಖ್ಯೆ–63) ಕೂಡ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದ ಗಂಟಲಿನ ದ್ರಾವಣದ ಮೊದಲ ಮಾದರಿಯ ವರದಿಯು ಉಳಿದ ಇಬ್ಬರ ಜೊತೆಗೆ ವೈದ್ಯನಿಗೂ ‘ಕೊರೊನಾ ನೆಗೆಟಿವ್‌’ ಎಂದು ಬಂದಿತ್ತು. ಎರಡನೇ ವರದಿಯೂ ‘ನೆಗೆಟಿವ್‌’ ಎಂದು ಬಂದಿದ್ದರಿಂದ ಗಯಾನಾದಿಂದ ಬಂದಿದ್ದ ಚಿತ್ರದುರ್ಗದ ಮಹಿಳೆ ಹಾಗೂ ಷಿಕಾಗೊದಿಂದ ಬಂದಿದ್ದ ಆಕೆಯ ಸಹೋದರನನ್ನು (ಕಸಿನ್) ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, 14 ದಿನಗಳ ಗೃಹ ನಿಗಾದಲ್ಲಿದ್ದಾರೆ.

ಫ್ರಾನ್ಸ್‌ನಿಂದ ನಗರಕ್ಕೆ ಬಂದಿದ್ದ ಈ ವೈದ್ಯನ ಎರಡನೇ ಮಾದರಿಯ ವರದಿಯೂ ‘ನೆಗೆಟಿವ್‌’ ಬಂದಿದೆ ಎಂಬ ಸಂದೇಶ ಪ್ರಯೋಗಾಲಯದಿಂದ ಜಿಲ್ಲಾಡಳಿತಕ್ಕೆ ಮಂಗಳವಾರ ರವಾನೆಯಾಗಿದೆ. ಆತನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ತಂಡದ ಸಲಹೆ ಪಡೆದು ಆಸ್ಪತ್ರೆಯಿಂದ ಯಾವಾಗ ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಲಾಗುವುದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸ್ಪಷ್ಟಪಡಿಸಿದರು.

ಮೊದಲ ಹಂತಕ್ಕೇ ಅಂತ್ಯ?: ವಿದೇಶದಿಂದ ಬಂದಿದ್ದವರ ಪೈಕಿ ಈ ಮೂವರಲ್ಲಿ ಮಾತ್ರ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾರ್ಗದರ್ಶನದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಘವೇಂದ್ರ ಸ್ವಾಮಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ನೇತೃತ್ವದ ತಂಡವು ಹಗಲಿರುಳು ಶ್ರಮಿಸಿದ್ದರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿಲ್ಲ.

ಈ ಮೂವರು ಸೋಂಕಿತರೊಂದಿಗೆ ನೇರ ಸಂಪರ್ಕ ಹೊಂದಿದ್ದ 17 ಜನರ ಗಂಟಲಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎಲ್ಲರ ವರದಿಯೂ ನೆಗೆಟಿವ್‌ ಎಂದು ಬಂದಿದೆ. ಜಿಲ್ಲೆಯಲ್ಲಿ ಹೊಸದಾಗಿ ಕೊರೊನಾ ಸೋಂಕಿನ ಪ್ರಕರಣ ವರದಿಯಾಗದೇ ಇರುವುದರಿಂದ ಹಾಗೂ ಲಾಕ್‌ಡೌನ್‌ ಅನ್ನು ಜನ ಪಾಲಿಸಿದರೆ ಮೊದಲನೇ ಹಂತಕ್ಕೇ ಅಂತ್ಯಗೊಳ್ಳುವ ಎಲ್ಲಾ ಸಾಧ್ಯತೆಯಿದೆ ಎನ್ನುತ್ತವೆ ಆರೋಗ್ಯ ಇಲಾಖೆಯ ಮೂಲಗಳು.

ಆರೋಗ್ಯ ಸಿಬ್ಬಂದಿ ಕೊಡುಗೆ
ದಾವಣಗೆರೆ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಕೈಗೊಂಡ ಮುನ್ನೆಚ್ಚರಿಕಾ ಕ್ರಮದಿಂದಾಗಿ ವಿದೇಶದಿಂದ ಬಂದ ಸೋಂಕಿತ ವ್ಯಕ್ತಿಗಳಿಂದ ಮತ್ತೊಬ್ಬರಿಗೆ ಸೋಂಕು ಹರಡಿಲ್ಲ.

‘ವಿದೇಶದಿಂದ ಬಂದು ಹೋಂ ಕ್ವಾರಂಟೈನ್‌ನಲ್ಲಿದ್ದ ಪ್ರತಿಯೊಬ್ಬರಿಗೂ ಕೊರೊನಾ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗಿತ್ತು. ಆರೋಗ್ಯ ಇಲಾಖೆಯ ಸಿಬ್ಬಂದಿ ದಿನಾಲೂ ಅವರ ಮನೆಗೆ ತೆರಳಿ ರೋಗ ಲಕ್ಷಣ ಕಾಣಿಸಿಕೊಳ್ಳುತ್ತಿದೆಯೇ ಎಂದು ಪರೀಕ್ಷಿಸುತ್ತಿದ್ದರು. ಸೋಂಕಿತ ವ್ಯಕ್ತಿಗಳು ಮನೆಯವರೊಂದಿಗೆ ಬೆರೆಯದೆ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ರೋಗ ಲಕ್ಷಣ ಕಾಣಿಸಿಕೊಂಡ ದಿನವೇ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗ ಲಕ್ಷಣ ಕಾಣಿಸಿಕೊಂಡ ದಿನವೇ ಆಸ್ಪತ್ರೆಗೆ ದಾಖಲಿಸಿದ್ದರಿಂದ ಹಾಗೂ ಅವರ ಮನೆಗಳಿಗೆ ಸೋಂಕು ನಿವಾರಣಾ ಔಷಧ ಸಿಂಪಡಿಸಿ ವೈರಸ್‌ ನಿಷ್ಕ್ರಿಯಗೊಳಿಸಿದ್ದರಿಂದ ಇವರಿಂದ ಮತ್ತೊಬ್ಬರಿಗೆ ಸೋಂಕು ಹರಡಿಲ್ಲ’ ಎಂದು ಮೂಲಗಳು ತಿಳಿಸಿವೆ.

ಜ್ವರ ಬಂದರೆ ತಪಾಸಣೆ ಮಾಡಿಸಿಕೊಳ್ಳಿ
‘ವಿದೇಶದಿಂದ ಬಂದ ಎಲ್ಲರ ಆರೋಗ್ಯದ ಮೇಲೂ ನಿಗಾ ವಹಿಸಲಾಗಿತ್ತು. ಹೊಸದಾಗಿ ಯಾರಲ್ಲೂ ಕೊರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡಿಲ್ಲ. ಬೇರೆ ರಾಜ್ಯಗಳಿಂದ ವಲಸೆ ಬಂದವರ ಆರೋಗ್ಯವನ್ನೂ ತಪಾಸಣೆ ಮಾಡಲಾಗಿದೆ. ಇವರು ಕಡ್ಡಾಯವಾಗಿ ಮನೆಯಲ್ಲೇ ಉಳಿಯಬೇಕು. ಜ್ವರ, ಕೆಮ್ಮು ಕಾಣಿಸಿಕೊಂಡರೆ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಅಥವಾ ಫಿವರ್‌ ಕ್ಲಿನಿಕ್‌ಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ಮನವಿ ಮಾಡಿದ್ದಾರೆ.

*
ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಮುದಾಯದಲ್ಲಿ ಹರಡದಿರುವುದರ ಹಿಂದೆ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳ, ಸಿಬ್ಬಂದಿಯ ಪರಿಶ್ರಮ ಇದೆ. ಸೋಂಕು ನಿಯಂತ್ರಣಕ್ಕೆ ತಂದಿರುವುದಕ್ಕೆ ತೃಪ್ತಿ ಇದೆ.
- ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.