ಮಂಗಳವಾರ, ಜೂನ್ 22, 2021
29 °C

ಆಮ್ಲಜನಕ ಕೊರೆತೆಗೆ ಡಿ.ಸಿ. ಕಾರಣ: ಕಾಂಗ್ರೆಸ್ ಮುಖಂಡ ಎಂ.ಟಿ. ಸುಭಾಸ್‌ ಚಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಾಗುವ ಪರಿಸ್ಥಿತಿ ನಿರ್ಮಾಣವಾಗಿ, ಆತಂಕ ಸೃಷ್ಟಿಯಾಗಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ನಡೆಯೇ ಕಾರಣ’ ಎಂದು ಕಾಂಗ್ರೆಸ್ ಮುಖಂಡ ಎಂ.ಟಿ. ಸುಭಾಸ್‌ ಚಂದ್ರ ಆರೋಪಿಸಿದರು.

‘ಜಿಲ್ಲಾ ಆಸ್ಪತ್ರೆಗೆ ಆಮ್ಲಜನಕ ಟ್ಯಾಂಕರ್ ಬರುವುದು ತಡವಾಗಿದ್ದರಿಂದ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ಡಿ.ಸಿ.ಯವರು ಬೇರೆ ಕಡೆಗಳಿಂದ ಆಮ್ಲಜನಕದ ಸಿಲಿಂಡರ್‌ಗಳನ್ನು ತುರ್ತಾಗಿ ತರಿಸಿ ಅನಾಹುತ ತಪ್ಪಿಸಿರುವುದು ಒಳ್ಳೆಯ ವಿಚಾರ. ಆದರೆ, ಆಮ್ಲಜನಕದ ಕೊರತೆ ಸೃಷ್ಟಿಯಾಗಲು ಜಿಲ್ಲಾಧಿಕಾರಿಗಳ ತಪ್ಪು ನಿರ್ಧಾರವೇ ಕಾರಣವಾಗಿರುವುದು ಅಷ್ಟೇ ಸತ್ಯ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹರಿಹರ ತಾಲ್ಲೂಕಿನಲ್ಲಿರುವ ಸದರನ್ ಗ್ಯಾಸ್ ಸಂಸ್ಥೆಯು ಚಿಗಟೇರಿ, ಚಿತ್ರದುರ್ಗ ಆಸ್ಪತ್ರೆಗಳು, ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಸೇರಿ ರಾಣೇಬೆನ್ನೂರು, ಹರಪನಹಳ್ಳಿ ಮತ್ತು ಹೂವಿನಹಡಗಲಿಗೆ 8,500 ಲೀಟರ್ ಆಮ್ಲಜನಕವನ್ನು ಸರಬರಾಜು ಮಾಡುತ್ತಿದೆ. ಆದರೆ ಮೇ 1ರಂದು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಈ.ವಿ. ರಮಣರೆಡ್ಡಿ ಹಾಗೂ ಪ್ರತಾಪ್ ರೆಡ್ಡಿ ಅವರು ಮಹಾಂತೇಶ ಬೀಳಗಿ ಅವರಿಗೆ ಕರೆ ಮಾಡಿ, 8,500 ಲೀಟರ್‌ ಆಮ್ಲಜನಕವನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಕಳುಹಿಸುವಂತೆ ಗ್ಯಾಸ್ ಸಂಸ್ಥೆಗೆ ನಿರ್ದೇಶನ ನೀಡುವಂತೆ ಸೂಚಿಸಿದ್ದಾರೆ’ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ ಹೆಚ್ಚುವರಿ ಆಮ್ಲಜನಕ ಇಲ್ಲ. ಇಲ್ಲಿಂದ ಬೇರೆ ಕಡೆ ಕಳುಹಿಸಿದರೆ, ಇಲ್ಲಿಗೆ ಬೇರೆ ಕಡೆಯಿಂದ ಆಮ್ಲಜನಕ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಅವರಿಗೆ ಮನವರಿಕೆ ಮಾಡಬೇಕಿತ್ತು. ಆದರೆ, ಡಿಸಿಯವರು ಈ ಕೆಲಸ ಮಾಡದೇ ಸಿಎಂ ಮುಖ್ಯಕಾರ್ಯದರ್ಶಿಯವರ ಮಾತಿನಂತೆ ಆಮ್ಲಜನಕ ಕಳುಹಿಸಲು ಸದರನ್ ಗ್ಯಾಸ್ ಸಂಸ್ಥೆಗೆ ಸೂಚಿಸಿದರು. ಜಿಲ್ಲಾಧಿಕಾರಿಯವರ ಈ ಪ್ರಮಾದವೇ ಕೊರತೆಗೆ ಕಾರಣವಾಯಿತು’ ಎಂದರು.

‘ಜಿಲ್ಲೆಯಲ್ಲಿ ಆಮ್ಲಜನಕ ಕೊರತೆಯಾಗುವುದನ್ನು ಅರಿತ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮೇ 3ರಂದು ಪತ್ರ ಬರೆದು ತಿಳಿಸಿದ್ದಾರೆ. ಸಚಿವರು ಮೇ 4ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಜಿಲ್ಲೆಯಲ್ಲಿ ಆಮ್ಲಜನಕ ಬೇಡಿಕೆ ಹೆಚ್ಚಾಗಿದ್ದು, 8,500 ಲೀಟರ್ ಹೆಚ್ಚುವರಿ ಆಮ್ಲಜನಕ ಪೂರೈಸಲು ಕೋರಿದ್ದಾರೆ’ ಎಂದು ಸುಭಾಸ್‌ ಚಂದ್ರ ವಿವರಿಸಿದರು.

ಮುಖಂಡರಾದ ಕಡತಿ ತಿಪ್ಪೇಶ್, ವಕೀಲರಾದ ಬಿ.ಜಿ. ಚಂದ್ರಶೇಖರ್, ನಿಟುವಳ್ಳಿ ನಾಗರಾಜ್, ಯಳವಟ್ಟಿ ಕೃಷ್ಣ ನಾಯಕ ಸುದ್ದಿಗೋಷ್ಠಿಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.