ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಗಣಪತಿ ವಿಸರ್ಜನೆ: ಅದ್ದೂರಿ ಶೋಭಾಯಾತ್ರೆ

ರಸ್ತೆಯುದ್ದಕ್ಕೂ ಡಿ.ಜೆ. ಸದ್ದಿಗೆ ಕುಣಿದು ಸಂಭ್ರಮಿಸಿದ ಯುವಕ, ಯುವತಿಯರು
Last Updated 25 ಸೆಪ್ಟೆಂಬರ್ 2022, 4:24 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣಪತಿ ಮೂರ್ತಿಯ ವಿಸರ್ಜನೆಯ ಶೋಭಾಯಾತ್ರೆ ಮೆರವಣಿಗೆ ಸಾವಿರಾರು ಜನರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ಶಾಸಕ ಎಸ್.ಎ. ರವೀಂದ್ರನಾಥ್ ಚಾಲನೆ ನೀಡಿದರು. ಹಿಂದೂ ಮಹಾ ಗಣಪತಿ ಸಂಘಟನೆಯ ಮುಖ್ಯಸ್ಥ ಜೊಳ್ಳಿ ಗುರು, ಪಾಲಿಕೆ ಮಾಜಿ ಸದಸ್ಯರಾದ ಎಸ್‌.ಟಿ. ವೀರೇಶ್‌, ಬಿ.ಜಿ. ಅಜಯ ಕುಮಾರ್‌, ಮಾಜಿ ಶಾಸಕ ಬಸವರಾಜ ನಾಯ್, ಶ್ರೀನಿವಾಸ್‌ ದಾಸ್‌ಕರಿಯಪ್ಪ ಸಹಿತ ಅನೇಕರು ಭಾಗವಹಿಸಿದ್ದರು.

ಹೈಸ್ಕೂಲ್ ಮೈದಾನದಿಂದ ಆರಂಭವಾದ ಮೆರವಣಿಗೆ ಎವಿಕೆ ಕಾಲೇಜು ರಸ್ತೆಯ ಮೂಲಕ ಚೇತನಾ ಹೋಟೆಲ್ ರಸ್ತೆ ತಲುಪಿತು. ಆನಂತರ ಅಂಬೇಡ್ಕರ್ ವೃತ್ತ ತಲುಪಿ ಹದಡಿ ರಸ್ತೆಯ ಮೂಲಕ ಜಯದೇವ ವೃತ್ತದಲ್ಲಿ ಸಮಾವೇಶಗೊಂಡಿತು. ಅಲ್ಲಿ ಬೇರೆ ಬೇರೆ ಊರುಗಳಿಂದ ಬಂದವರೆಲ್ಲ ಜಯದೇವ ವೃತ್ತದಲ್ಲಿ ಕುಣಿದು ಸಂಭ್ರಮಿಸಿದರು.

ಯುವತಿಯರಿಗಾಗಿ ಪ್ರತ್ಯೇಕ ಡಿ.ಜೆ. ವ್ಯವಸ್ಥೆ ಮಾಡಿದ್ದು, ಯುವತಿಯರು ನೃತ್ಯದ ಮೂಲಕ ಶೋಭಾಯಾತ್ರೆಗೆ ಇನ್ನಷ್ಟು ಕಳೆತಂದರು. ಕೇರಳ ಚೆಂಡೆ ಹೊರತುಪಡಿಸಿದರೆ ಬೇರೆ ತಂಡಗಳು ಇಲ್ಲದೇ ಎಲ್ಲ ಕಡೆಗಳಲ್ಲಿ ಡಿ.ಜೆ. ಸದ್ದೇ ಕೇಳಿ ಬರುತ್ತಿತ್ತು. ಪ್ರತಿ ಡಿ.ಜೆ.ಯ ಮುಂದೆ ಸಾವಿರಾರು ಮಂದಿ ಇದ್ದರು. ಐದಾರು ಡಿ.ಜೆ.ಗಳಿದ್ದವು.

‘ಗೊಂಬೆ ಹೇಳುತೈತೆ’, ‘ಬನಾಯೆಂಗೆ ಮಂದಿರ್’ ಸಹಿತ ಹತ್ತಾರು ಹಾಡುಗಳು ಅನುರಣಿಸಿದವು.

ಜಯದೇವ ವೃತ್ತದಿಂದ ಮುಂದೆ ಲಾಯರ್ ರಸ್ತೆಯ ಮೂಲಕ ಪಿ.ಬಿ. ರಸ್ತೆಗೆ ಸಾಗಿತು. ಮುಂದೆ ಗಾಂಧಿ ವೃತ್ತಕ್ಕಾಗಿ ಪಿ.ಬಿ.ರಸ್ತೆಯಲ್ಲಿ ಮೆರವಣಿಗೆಯು ಹೋಯಿತು. ಮೆರವಣಿಗೆಯುದ್ದಕ್ಕೂ ಕುಣಿತ ಮುಂದುವರಿಯಿತು. ರಾತ್ರಿ ಬಾತಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

ಮರೆವಣಿಗೆ ವೇಳೆ ಮಾರ್ಗ ಮಧ್ಯೆ ವಿವಿಧ ಸಂಘಟನೆಗಳು ಆಹಾರ ಪೊಟ್ಟಣಗಳು, ನೀರು, ಮಜ್ಜಿಗೆ ಹಾಗೂ ಪಾನಕಗಳನ್ನು ವಿತರಿಸುವ ಮೂಲಕ ಹಸಿವು, ಬಾಯಾರಿಕೆ ನೀಗಿಸಿದವು.

ಮೆರವಣಿಗೆ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮೆರವಣಿಗೆಯಲ್ಲಿ ಸಾಗುವ ಮಾರ್ಗಗಳಲ್ಲಿ ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚಿ ಸಹಕಾರ ನೀಡಿದರು. ಈ ರಸ್ತೆಯಲ್ಲಿ ಬೇರೆ ಯಾವುದೇ ವಾಹನಗಳು ಸಾಗದಂತೆ ಮಾರ್ಗ ಬದಲಾವಣೆ ಮಾಡಲಾಗಿತ್ತು. ಇದರ ಅರಿವು ಇರದ ಬೇರೆ ಊರಿನ ಪ್ರಯಾಣಿಕರು ಸ್ವಲ್ಪ ತೊಂದರೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT