ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಡಳಿತ, ಅಧಿಕಾರಿಗಳು ಸಹಕರಿಸಿ: ಶಾಸಕ

ವಾಲ್ಮೀಕಿ ಜಾತ್ರೆ: ಪೂರ್ವ ಸಿದ್ದತೆ ಪರಿಶೀಲಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ
Last Updated 7 ಫೆಬ್ರುವರಿ 2023, 4:26 IST
ಅಕ್ಷರ ಗಾತ್ರ

ದಾವಣಗೆರೆ: ‘ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಫೆ.8 ಹಾಗೂ 9ರಂದು ನಡೆಯುವ ವಾಲ್ಮೀಕಿ ಜಾತ್ರೆಯ ವ್ಯವಸ್ಥಿತವಾಗಿ ಆಯೋಜನೆಗೆ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಕ್ರಿಯವಾಗಿ ಸಹಕಾರ ನೀಡಬೇಕು’ ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ಎಸ್.ವಿ. ರಾಮಚಂದ್ರ ಸೂಚಿಸಿದರು.

ವಾಲ್ಮೀಕಿ ಶ್ರೀಮಠದ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತಾನಾಡಿದ ಅವರು ‘ಈ ವರ್ಷ ನಡೆಯುವ ಜಾತ್ರೆ ವಿಶೇಷವಾಗಿದ್ದು, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಜಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಹೆಚ್ಚಿನ ಜನ ಸೇರಿಲಿದ್ದು, ಯಾವುದೇ ತೊಂದರೆ ಆಗದಂತೆ ಅಚ್ಚುಕಟ್ಟಾಗಿ ಸಿದ್ಧತೆ ಕೈಗೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ‘ರಾಷ್ಟ್ರೀಯ ಹೆದ್ದಾರಿಯಿಂದ ರಾಜನಹಳ್ಳಿಗೆ ಪ್ರವೇಶ ಮಾಡುವ ಮಾರ್ಗದಲ್ಲಿ ರಸ್ತೆ ದುರಸ್ತಿ, ಕುಡಿಯುವ ನೀರಿಗೆ ಟ್ಯಾಂಕರ್‌ ಬಳಕೆ, ಆಂಬುಲೆನ್ಸ್ ಹಾಗೂ ವೈದ್ಯಕೀಯ ತಂಡಗಳು ಹಾಗೂ ಅಗ್ನಿಶಾಮಕ ವಾಹನ ನಿಯೋಜನೆ ಸೇರಿದಂತೆ ಅಗತ್ಯ ವ್ಯವಸ್ಥೆಯನ್ನು ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯರು ಭಾಗವಹಿಸಲಿದ್ದು, ಗೊಂದಲವಾಗದಂತೆ ಕ್ರಮ ಕೈಗೊಳ್ಳಬೇಕು. ಎರಡು ದಿನಗಳು ನಿರಂತರ ವಿದ್ಯುತ್ ಪೂರೈಸಬೇಕು. ಹರಿಹರ ನಗರಸಭೆ ಹಾಗೂ ರಾಜನಹಳ್ಳಿ ಗ್ರಾಮ ಪಂಚಾಯಿತಿ ಜಂಟಿಯಾಗಿ ಕಾರ್ಯನಿರ್ವಹಿಸಿ ಕಸ ವಿಲೇವಾರಿಗೆ ಕ್ರಮವಹಿಸಬೇಕು’ ಎಂದು ಹೇಳಿದರು.

‘ಸರ್ಕಾರದ ವಿವಿಧ ಯೋಜನೆಗಳ ಜಾಗೃತಿಗೆ ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಬೇಕು. ಉದ್ಯೋಗಮೇಳನ್ನು ಆಯೋಜಿಸಬೇಕು’ ಎಂದು ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

‘ಹೆಲಿಪ್ಯಾಡ್, ಬ್ಯಾರಿಕೇಡಿಂಗ್ ವ್ಯವಸ್ಥೆ, ಗಣ್ಯರು ಅತಿಗಣ್ಯರ ಪ್ರವೇಶಕ್ಕೆ ಪ್ರತ್ಯೇಕ ವ್ಯವಸ್ಥೆ ಹಾಗೂ ಕಾರ್ಯಕ್ರಮಕ್ಕೆ ಪ್ರವೇಶದ್ವಾರ ಹಾಗೂ ನಿರ್ಗಮನ ದ್ವಾರ ಪಾರ್ಕಿಂಗ್ ವ್ಯವಸ್ಥೆಯನ್ನು ಕುರಿತು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸೂಚನೆ ನೀಡಿದರು.

ವಾಲ್ಮೀಕಿ ಮಠದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ‘ಕೋವಿಡ್ ಕಾರಣದಿಂದ ಸರಳವಾಗಿ ಜಾತ್ರೆ ಆಚರಿಸಲಾಗಿತ್ತು. ಈ ವರ್ಷ ವಿಶೇಷವಾಗಿ ಜಾತ್ರೆ ಆಯೋಜಿಸಿದ್ದು, ಅಚ್ಚುಕಟ್ಟಾಗಿ ನಿರ್ವಹಿಸಲು ಜಿಲ್ಲಾಡಳಿತದ ಸಹಕಾರ ಅವಶ್ಯಕ’ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎ.ಚನ್ನಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ. ಬಸರಗಿ, ಗ್ರಾಮಾಂತರ ಉಪವಿಭಾಗದ ಎಎಸ್‌ಪಿ ಕನಿಕಾ ಸಿಕ್ರಿವಾಲ್ ಇದ್ದರು. ರಮೇಶ್ ಹೊದಿಗೆರೆ ಕಾರ್ಯಕ್ರಮ ನಿರ್ವಹಿಸಿದರು.

ಮುಖ್ಯಮಂತ್ರಿ ಸೇರಿ ಹಲವರು ಭಾಗಿ

‘ಫೆ.8ರಂದು ಬೆಳಿಗ್ಗೆ 8ಕ್ಕೆ ಮಹರ್ಷಿ ವಾಲ್ಮೀಕಿ ಧ್ವಜಾರೋಹಣ, ಮಹಿಳಾಗೋಷ್ಠಿ, ಉದ್ಯೋಗ ಮೇಳ, ರೈತ ಗೋಷ್ಠಿ ಬುಡಕಟ್ಟು ಸಂಸ್ಕೃತಿ ವೈಭವದ ಕಾರ್ಯಕ್ರಮಗಳು ನಡೆಯಲಿದ್ದು, ಫೆ.9ರಂದು ವಾಲ್ಮೀಕಿ ರಥ ಲೋಕರ್ಪಣೆ, ಧರ್ಮಸಭೆ ಹಾಗೂ ಜನಜಾಗೃತಿ ಜಾತ್ರಾ ಮಹೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿವೆ’ ಎಂದು ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

‘ಫೆ.9ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವರಾದ ಶ್ರೀರಾಮುಲು, ಆರ್.ಅಶೋಕ, ಬೈರತಿ ಬಸವರಾಜ, ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT