ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಖಾಸಗಿತನಕ್ಕೆ ವೈರಸ್‌ ದಾಳಿ

Last Updated 8 ಜೂನ್ 2018, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಫೇಸ್‌ಬುಕ್‌ನ ಸಾಫ್ಟ್‌ವೇರ್‌ನಲ್ಲಿ ತಲೆದೋರಿದ ಸಮಸ್ಯೆಯಿಂದಾಗಿ (ವೈರಸ್‌) ಕೆಲವು ಬಳಕೆದಾರರು ಪ್ರಕಟಿಸಿದ ಎಲ್ಲ ಮಾಹಿತಿ ಬಹಿರಂಗಗೊಂಡಿದೆ. ಯಾರಿಗೆ ಕಾಣಬೇಕು ಎಂದು ಖಾತೆದಾರರು ಭಾವಿಸಿದ್ದರೋ ಅವರಿಗೆ ಮಾತ್ರವಲ್ಲದೆ ಎಲ್ಲ ಬಳಕೆದಾರರಿಗೂ ಸಿಗುವಂತಾಗಿದೆ.

ಜಗತ್ತಿನ ಅತ್ಯಂತ ದೊಡ್ಡ ಸಾಮಾಜಿಕ ಜಾಲ ತಾಣದಲ್ಲಿ ಖಾಸಗಿತನದ ರಕ್ಷಣೆಗೆ ಸಂಬಂಧಿಸಿದ ತೀರಾ ಇತ್ತೀಚಿನ ಘಟನೆ ಇದು. ಸಮಸ್ಯೆಯನ್ನು ಈಗಾಗಲೇ ಪರಿಹರಿಸಲಾಗಿದೆ ಎಂದು ಫೇಸ್‌ಬುಕ್‌ ಹೇಳಿಕೊಂಡಿದೆ.

ಫೇಸ್‌ಬುಕ್‌ನಲ್ಲಿ ಹಿಂದೆ ಪ್ರಕಟಿಸಿರುವ ಪೋಸ್ಟ್‌ಗಳಿಗೆ ಈ ವೈರಸ್‌ನಿಂದ ತೊಂದರೆ ಆಗಿಲ್ಲ ಎಂದು ಫೇಸ್‌ಬುಕ್‌ನ ಖಾಸಗಿತನ ನೀತಿಯ ಮುಖ್ಯ ಅಧಿಕಾರಿ ಎರಿನ್‌ ಏಗನ್‌ ಹೇಳಿದ್ದಾರೆ.

ವೈರಸ್‌ನಿಂದ ತೊಂದರೆ ಆಗಿರುವ ಬಳಕೆದಾರರಿಗೆ ಫೇಸ್‌ಬುಕ್‌ ಸೂಚನೆ ಕಳುಹಿಸಿದೆ. ಈಗಾಗಲೇ ಪ್ರಕಟಿಸಿರುವ ಪೋಸ್ಟ್‌ಗಳನ್ನು ಪರಿಶೀಲಿಸುವಂತೆ ತಿಳಿಸಿದೆ.

ಒಂದರ ಮೇಲೊಂದು ತೊಂದರೆ: ಚೀನಾದ ಹುವೈ ಮತ್ತು ಇತರ ಸಂವಹನ ಸಾಧನ ತಯಾರಕರ ಜತೆಗೆ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ಹಂಚಿಕೊಂಡ ಸುದ್ದಿ ಇತ್ತೀಚೆಗೆ ಭಾರಿ ಸುದ್ದಿ ಮಾಡಿತ್ತು. ಅದಕ್ಕೆ ಮೊದಲು, ಬ್ರಿಟನ್‌ನ ದತ್ತಾಂಶ ವಿಶ್ಲೇಷಣಾ ಸಂಸ್ಥೆ ಕೇಂಬ್ರಿಜ್‌ ಅನಲಿಟಿಕಾಕ್ಕೆ ದತ್ತಾಂಶ ನೀಡಿದ್ದು ದೊಡ್ಡ ವಿವಾದವಾಗಿತ್ತು. ಅದರಿಂದ ಚೇತರಿಸಿಕೊಳ್ಳುವ ಮೊದಲೇ ವೈರಸ್‌ ದಾಳಿಯಿಂದ ಫೇಸ್‌ಬುಕ್‌ ತತ್ತರಿಸಿದೆ.

‘ಇದು ಅಮೆರಿಕದ ಫೆಡರಲ್‌ ಟ್ರೇಡ್‌ ಕಮಿಷನ್‌ (ಎಫ್‌ಟಿಸಿ– ಗ್ರಾಹಕ ಹಕ್ಕುಗಳ ರಕ್ಷಣಾ ಆಯೋಗ) ನಿಯಮಗಳ ಉಲ್ಲಂಘನೆಯಂತೆ ತೋರುತ್ತಿದೆ. ಕೊನೆಯ ಪೋಸ್ಟ್‌ ಹಾಕಿದಾಗ ಯಾವ ಸೆಟಿಂಗ್ ಇತ್ತೋ ಮುಂದಿನ ಪೋಸ್ಟ್‌ಗಳಿಗೂ ಅದೇ ಅನ್ವಯ ಆಗಬೇಕು. ಆದರೆ, ಸೆಟಿಂಗ್‌ ಬದಲಾಗುವುದು ಮತ್ತು ಹಲವು ದಿನಗಳ ಕಾಲ ಮುಂದುವರಿಯುವುದು ಹೇಗೆ ಸಾಧ್ಯ’ ಎಂದು ಎಂದು ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ಕಂಪ್ಯೂಟರ್‌ ಸೈನ್ಸ್‌ ಪ್ರಾಧ್ಯಾಪಕ ಜೊನಾಥನ್‌ ಮೇಯರ್‌ ಪ್ರಶ್ನಿಸಿದ್ದಾರೆ.

ಮೇ 18ರಿಂದ 27ರವರೆಗೆ ಫೇಸ್‌ಬುಕ್‌ ಖಾತೆಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಮೇ 22ರಂದೇ ಲೋಪವನ್ನು ಸರಿಪಡಿಸಲಾಗಿತ್ತು. ಆದರೆ ಎಲ್ಲ ಖಾತೆದಾರರ ಖಾಸಗಿ ಸೆಟಿಂಗ್‌ಗಳನ್ನು ಮೂಲ ಸ್ವರೂಪಕ್ಕೆ ತರಲು ಹೆಚ್ಚು ಸಮಯ ಬೇಕಾಯಿತು ಎಂದು ಫೇಸ್‌ಬುಕ್‌ ತಿಳಿಸಿದೆ.

ಬಳಕೆದಾರರ ಪ್ರೊಫೈಲ್‌ಗಳಲ್ಲಿ ಹೊಸ ಅಂಶಗಳನ್ನು ಸೇರಿಸುವ ಸೌಲಭ್ಯವನ್ನು ಅಳವಡಿಸುವ ಸಂದರ್ಭದಲ್ಲಿ ವೈರಸ್‌ ಸೇರಿಕೊಂಡಿದೆ.

ಸಮಸ್ಯೆ ಏನು?

ಫೇಸ್‌ಬುಕ್‌ ವ್ಯವಸ್ಥೆಯಲ್ಲಿ ಸೇರಿಕೊಂಡಿರುವ ವೈರಸ್‌, ಹೊಸ ಪೋಸ್ಟ್‌ ಎಲ್ಲರಿಗೂ ಕಾಣಿಸುವಂತೆ ಮಾಡುತ್ತದೆ. ಖಾತೆದಾರರು ತಮ್ಮ ಪೋಸ್ಟ್‌ಗಳು ‘ಗೆಳೆಯರಿಗೆ ಮಾತ್ರ’ ಎಂಬ ಸೆಟಿಂಗ್ ಮಾಡಿಕೊಂಡಿದ್ದರೂ ಅವರು ಪ್ರಕಟಿಸುವ ವಿಚಾರಗಳು ಎಲ್ಲರಿಗೂ ಕಾಣಿಸುತ್ತವೆ. ಇದು ವೈರಸ್‌ನಿಂದಾಗಿ ಸ್ವಯಂಚಾಲಿತವಾಗಿ ಆಗಿರುವ ಬದಲಾವಣೆ.

ಖಾತೆದಾರರು ತಮ್ಮ ಸೆಟಿಂಗ್‌ ಅನ್ನು ‘ಗೆಳೆಯರಿಗೆ ಮಾತ್ರ’ ಅಥವಾ ‘ಖಾಸಗಿ’ ಎಂಬುದಾಗಿ ಸ್ವತಃ ಬದಲಾಯಿಸುವುದಕ್ಕೆ ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT