ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಬೆನ್ನೂರು | ಹೆಚ್ಚುತ್ತಿರುವ ಬಿಸಿಲ ತಾಪ: ತಳ ಮುಟ್ಟುತ್ತಿರುವ ಕೆರೆ ನೀರು

Published 26 ಏಪ್ರಿಲ್ 2024, 6:45 IST
Last Updated 26 ಏಪ್ರಿಲ್ 2024, 6:45 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಬೇಸಿಗೆಯ ತಾಪ ತೀವ್ರ ಸ್ವರೂಪ ಪಡೆದಿದ್ದು, ಹೋಬಳಿ ವ್ಯಾಪ್ತಿಯಲ್ಲಿರುಯ ಬಹುತೇಕ ಕೆರೆಗಳು   ಬರಿದಾಗುತ್ತಿವೆ. ಕೆಲ ಕೆರೆಗಳು ಸಂಪೂರ್ಣ ಬರಿದಾಗಿ ತಳ ಕಂಡಿದ್ದು, ಕೆರೆಯ ಅಂಗಳ ಬಿರುಕು ಬಿಟ್ಟಿದೆ.

ಇದರ ಪರಿಣಾಮವಾಗಿ ದನ-ಕರುಗಳು, ಪ್ರಾಣಿ-ಪಕ್ಷಿಗಳ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕಳೆದ ಸಲ ಮಳೆ ಕೊರತೆಯಿಂದ ಕೆರೆಗಳಿಗೆ ನೀರು ಹರಿದಿಲ್ಲ. 2022ರ ಮಳೆಗಾಲದಲ್ಲಿ ಕೋಡಿ ಬಿದ್ದಿದ್ದ ಬಹುತೇಕ ಕೆರೆಗಳು ಇಲ್ಲಿಯವರೆಗೂ ನೀರಿನ ಒರತೆ ನೀಡಿದ್ದವು. ಬಿಸಿಲಿನ ತಾಪ, ಹೆಚ್ಚಿದ ಆವಿಯ ಪ್ರಮಾಣದಿಂದ ಕೆರೆಗಳು ಬರಿದಾಗುತ್ತಿವೆ.

ಸಂತೇಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 25 ಕೆರೆಗಳಿವೆ. ಅದರಲ್ಲಿ 20 ಕೆರೆಗಳು ಬರಿದಾಗಿವೆ. ನೀರಾವರಿ ವ್ಯಾಪ್ತಿಯ ಹಿರೇಕೋಗಲೂರು ಕೆರೆಯಲ್ಲಿ ನಾಲೆಯ ನೀರು ಸೇರುವುದರಿಂದ ನೀರಿನ ಸಂಗ್ರಹ ಇದೆ. ಬೆಳ್ಳಕ್ಕಿಗಳ ಸಾಲು ತಳ ಸೇರಿದ ನೀರಿನ ಪಸೆಯನ್ನು ಹೆಕ್ಕುವ ಮೂಲಕ ದಾಹ ತಣಿಸಿಕೊಳ್ಳುತ್ತಿವೆ. ನೀರಿನಲ್ಲಿಳಿದು ಆಹಾರ ಹುಡುಕಲು ಸಾಧ್ಯವಾಗದೆ ಕಂಗಾಲಾಗಿವೆ ಎಂದು ಗೊಲ್ಲರಹಳ್ಳಿ ಮಂಜುನಾಥ್ ತಿಳಿಸಿದರು.

‘ಚಿಕ್ಕಬೆನ್ನೂರು ಕೆರೆ ಬರಿದಾಗುತ್ತಿದೆ. ಗ್ರಾಮದಲ್ಲಿ ಕುರಿ ಸಾಕಾಣಿಕೆ ಅವಲಂಬಿಸಿದ್ದೇವೆ. ಮುಂಜಾನೆ ಮೇವು ತಿನ್ನುವ ಕುರಿಗಳು ಸಂಜೆ ನೀರು ಕುಡಿಯಲು ಕೆರೆಗೆ ಧಾವಿಸುತ್ತವೆ. ಆದರೆ, ಕೆರೆಯಲ್ಲಿ ನೀರು ತಳ ಸೇರಿದ್ದು, ಸದ್ದಲ್ಲಿಯೇ ಖಾಲಿಯಾಗಲಿದೆ. ಮುಂದೇನು ಎಂಬ ಆತಂಕ ಎದುರಾಗಿದೆ’ ಎಂದು ಚಿಕ್ಕಬೆನ್ನೂರು ಕುರಿಗಾಹಿ ಲೋಕೇಶ್ ಅಳಲು ತೋಡಿಕೊಂಡರು.

ಸಂತೆಬೆನ್ನೂರು, ಕುಳೇನೂರು, ದೊಡ್ಡಬ್ಬಿಗೆರೆ, ದೇವರಹಳ್ಳಿ, ಬೆಳ್ಳಿಗನೂಡು, ಸಿದ್ದನಮಠ, ಚಿಕ್ಕಗಂಗೂರು, ದೊಡ್ಡೇರಿಕಟ್ಟೆ ಗ್ರಾಮಗಳಲ್ಲಿರುವುದು ಸೇರಿ ದೊಡ್ಡ ಕೆರೆಗಳು ಬರಿದಾಗುತ್ತಿವೆ. ಗ್ರಾಮದಲ್ಲಿ ಸಿಗುವ ನಲ್ಲಿ ನೀರೇ ಜಾನುವಾರುಗಳಿಗೆ ಆಸರೆಯಾಗಿವೆ. ನಲ್ಲಿ ನೀರು ಕೂಡ ಸಕಾಲಕ್ಕೆ ಅಲಭ್ಯ. ಮಳೆ ಬಂದರಷ್ಟೇ ಪರಿಸ್ಥಿತಿ ಸುಧಾರಿಸಲಿದೆ. ಇಲ್ಲವಾದರೆ ಜನ-ಜಾನುವಾರಿಗೂ ನೀರಿನ ಅಭಾವದ ಬಿಸಿ ತಟ್ಟಲಿದೆ’ ಎಂದು ಗ್ರಾಮಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT