‘ಸಮರ್ಥವಾಗಿ ನಿಭಾಯಿಸುವೆ, ಬೆಂಬಲ ಅಪೇಕ್ಷಿಸುವೆ’

7
ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಆರ್‌. ಶ್ರೀನಿವಾಸ (ವಾಸು)

‘ಸಮರ್ಥವಾಗಿ ನಿಭಾಯಿಸುವೆ, ಬೆಂಬಲ ಅಪೇಕ್ಷಿಸುವೆ’

Published:
Updated:
Deccan Herald

ದಾವಣಗೆರೆ: ರಾಜ್ಯ ಸಣ್ಣ ಕೈಗಾರಿಕೆಗಳ ಸಚಿವ ಎಸ್‌. ಆರ್‌. ಶ್ರೀನಿವಾಸ (ವಾಸು) ಅವರನ್ನು ಸರ್ಕಾರ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಶ್ರೀನಿವಾಸ ತಮ್ಮ ರಾಜಕೀಯ ಹಾಗೂ ವೈಯಕ್ತಿಕ ಜೀವನ ಎರಡಲ್ಲೂ ಅಪರೂಪದ ಸಾಧನೆಗಳನ್ನು ಮಾಡಿ ಗಮನ ಸೆಳೆದವರು. ಶ್ರೀನಿವಾಸ ಸ್ಪರ್ಧಿಸಿದ ಎಲ್ಲಾ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದಾರೆ. ಜಿಲ್ಲಾ ಪಂಚಾಯಿತಿಯಿಂದ ರಾಜಕೀಯ ಜೀವನಕ್ಕೆ ಪದಾರ್ಪಣೆ ಮಾಡಿದ ಅವರು ಸತತ ನಾಲ್ಕು ಬಾರಿ ಗುಬ್ಬಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದಲ್ಲಿ ಅವರು ‘ವಾಸು’ ಎಂದೇ ಹೆಸರುವಾಸಿ. ಶೌರ್ಯ ಪ್ರಶಸ್ತಿ ಪಡೆದ ದೇಶದ ಮೊದಲ ಶಾಸಕ ಎಂಬ ಹೆಗ್ಗಳಿಕೆಯ ಗರಿಯೂ ಇವರಿಗಿದೆ.

ಮೊದಲ ಬಾರಿಗೆ ಸಚಿವರಾಗಿರುವ ಶ್ರೀನಿವಾಸ ಹುಮ್ಮಸ್ಸು–ಹುರುಪಿನಿಂದ ರಾಜ್ಯದಲ್ಲಿ ಬಿರುಸಿನ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೂ ‘ಪ್ರಜಾವಾಣಿ’ ಜತೆ ಮಾತುಕತೆ ನಡೆಸಿದರು.

* ದಾವಣಗೆರೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದೀರಿ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಿಮ್ಮ ಕನಸುಗಳೇನು?

–ಜಿಲ್ಲೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಅಧಿಕಾರಿಗಳು ಹಾಗೂ ಮುಖಂಡರಿಂದ ಈಗಾಗಲೇ ಪಡೆದಿದ್ದೇನೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ನನ್ನದೇ ಆದ ಚಿಂತನೆಗಳಿವೆ. ಅವುಗಳನ್ನು ಅನುಷ್ಠಾನಗೊಳಿಸಲು ಎಲ್ಲರ ಸಹಕಾರವನ್ನು ನಿರೀಕ್ಷಿಸುತ್ತೇನೆ. ಈ ಬಾರಿ ಉತ್ತಮ ಮಳೆಯಾಗಿದೆ. ಜಿಲ್ಲೆಯ ಜೀವನಾಡಿ ಭದ್ರಾ ಜಲಾಶಯ ತುಂಬಿದ್ದು, ರೈತರು ತುಸು ನೆಮ್ಮದಿ ಕಾಣುವಂತಾಗಿದೆ.

* ಜಿಲ್ಲೆಗೆ ನಿಮ್ಮ ಭೇಟಿ ಯಾವಾಗ?

–ಇದೇ 9ರಂದು ಸಣ್ಣ ಕೈಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ತಮಿಳುನಾಡಿಗೆ ಭೇಟಿ ನಿಗದಿಯಾಗಿದೆ. ಅದು ರದ್ದಾದರೆ ಅಂದೇ ದಾವಣಗೆರೆಗೆ ಭೇಟಿ ನೀಡುವೆ. ಇಲ್ಲದಿದ್ದರೆ ಆಗಸ್ಟ್‌ 15ಕ್ಕೆ ಸ್ವಾತಂತ್ರ್ಯ ದಿನಾಚರಣೆಗೆ ಆಗಮಿಸುವೆ.

* ಜಿಲ್ಲೆಯಲ್ಲಿ ನಿಮ್ಮ ಪಕ್ಷದ ಶಾಸಕರು ಯಾರೂ ಇಲ್ಲ. ಪಕ್ಷ ಸಂಘಟನೆಗೆ ನಿಮ್ಮ ಉಸ್ತುವಾರಿ ಹೇಗೆ ನೆರವಾಗುತ್ತದೆ?

–ಹೌದು, ಜಿಲ್ಲೆಯಲ್ಲಿ ನಮ್ಮ ಪಕ್ಷ ಬಲಿಷ್ಠವಾಗಿಲ್ಲ. ಇದ್ದ ಒಬ್ಬ ಶಾಸಕರೂ ಈ ಬಾರಿ ಗೆಲ್ಲಲಿಲ್ಲ. ನಮ್ಮ ಪಕ್ಷದ ಎಲ್ಲಾ ಮುಖಂಡರ ಸಭೆ ಕರೆದು, ಅವರೊಂದಿಗೆ ಚರ್ಚಿಸಿ ಪಕ್ಷ ಸಂಘಟನೆಯನ್ನು ಬಲಪಡಿಸುವ ಕುರಿತು ಸಮಾಲೋಚನೆ ನಡೆಸುವೆ.

* ಸತತ ಗೆಲುವು ಹೇಗೆ? ನಿಮ್ಮ ಹೆಸರಿನಲ್ಲಿ ವಾಸು ಜತೆಯಾಗಿದ್ದು ಹೇಗೆ?

–ನನ್ನ ಸ್ನೇಹಿತರು, ತಂದೆ–ತಾಯಿ ಎಲ್ಲರೂ ಬಾಲ್ಯದಿಂದಲೇ ಪ್ರೀತಿಯಿಂದ ವಾಸು ಎನ್ನುತ್ತಿದ್ದರು. ಹಾಗಾಗಿ, ಅದು ಈಗಲೂ ನನ್ನ ಹೆಸರಿನೊಂದಿಗೆ ಉಳಿದುಕೊಂಡಿದೆ. 

‘ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲೂ ಗೆಲುವು’

ಶ್ರೀನಿವಾಸ್ 2000ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಸ್ಪರ್ಧೆ ಮಾಡಿದರು. ಅಲ್ಲಿಯೂ ಗೆಲುವು ಸಾಧಿಸಿದರು. ಅಲ್ಲಿಂದ ಆರಂಭವಾದ ಗೆಲುವಿನ ಓಟ 2018ರ ಚುನಾವಣೆವರೆಗೂ ಬಂದಿದೆ.

ಶೌರ್ಯ ಪ್ರಶಸ್ತಿ ಪುರಸ್ಕೃತರು

ಬಾಲ್ಯದಲ್ಲೇ ಸಾಹಸ ಮೆರೆದು ಶೌರ್ಯ ಪ್ರಶಸ್ತಿ ಪಡೆದಿದ್ದು ಶ್ರೀನಿವಾಸ ಅವರ ದೊಡ್ಡ ಹೆಮ್ಮೆ. 1977ರಲ್ಲಿ ಎಂಟನೇ ತರಗತಿ ಓದುತ್ತಿದ್ದ ಅವರು, ಮಗುವೊಂದು ಬಾವಿಗೆ ಬಿದ್ದಾಗ ಅದನ್ನು ರಕ್ಷಿಸಿ ಸಾಹಸ ಮೆರೆದಿದ್ದರು. ಆಗಿನ ರಾಜ್ಯಪಾಲ ಗೋವಿಂದ ನಾರಾಯಿನ್ ಅವರಿಂದ ಶೌರ್ಯ ಪ್ರಶಸ್ತಿ ಪಡೆದಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !