ಚನ್ನಗಿರಿ: ನಿಲ್ಲದ ಕಾಡಾನೆಗಳ ಕಾಟ

7
ತೊಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿರುವ ಗಜಗಳ ಗುಂಪು

ಚನ್ನಗಿರಿ: ನಿಲ್ಲದ ಕಾಡಾನೆಗಳ ಕಾಟ

Published:
Updated:
ಚನ್ನಗಿರಿ ತಾಲ್ಲೂಕು ಹೊಸಳ್ಳಿ ಗ್ರಾಮದ ರೈತರೊಬ್ಬರ ತೋಟಕ್ಕೆ ಶುಕ್ರವಾರ ರಾತ್ರಿ ಕಾಡಾನೆ ನುಗ್ಗಿ ಅಡಿಕೆ ಮರಗಳನ್ನು ಮುರಿದು ಹಾಕಿರುವುದು

ಚನ್ನಗಿರಿ: ತಾಲ್ಲೂಕಿನ ಕುಕ್ಕವಾಡೇಶ್ವರಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿನ ಹೊಸಳ್ಳಿ, ಗಾಣದಕಟ್ಟೆ, ಹನುಮಂತನಗರ ಹಾಗೂ ಸುತ್ತಮುತ್ತಲ ಗ್ರಾಮಗಳ ತೋಟಗಳಿಗೆ ಶುಕ್ರವಾರ ರಾತ್ರಿ ಮತ್ತೆ ಕಾಡಾನೆಗಳು ನುಗ್ಗಿ ಬೆಳೆ ಹಾನಿ ಮಾಡಿವೆ.

ಹೊಸಳ್ಳಿ ಗ್ರಾಮದ ಕುಬೇರಪ್ಪ ಎಂಬುವವರ ಅಡಿಕೆ ತೋಟಕ್ಕೆ ನುಗ್ಗಿ 15 ಅಡಿಕೆ ಹಾಗೂ 20 ಬಾಳೆ ಗಿಡಗಳನ್ನು ನಾಶ ಮಾಡಿವೆ. ಒಂದು ತಿಂಗಳನಲ್ಲಿ 8 ಬಾರಿ ಕಾಡಾನೆಗಳು ಈ ಗ್ರಾಮಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿವೆ.

ಹೊಸಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಎರಡು ಕಾಡಾನೆಗಳು ಬಂದು ಹೋಗಿರುವುದು ಆನೆಗಳ ಹೆಜ್ಜೆ ಗುರುತಿನಿಂದ ಗೊತ್ತಾಗಿದೆ. ಈ ಭಾಗದಲ್ಲಿ ಕಾಡಾನೆಗಳು ಕಾಣಿಸಿಕೊಂಡ ದಿನದಿಂದ ಅರಣ್ಯ ಇಲಾಖೆ 20 ಸಿಬ್ಬಂದಿಯನ್ನು ನಿಯೋಜಿಸಿದೆ. ಹಗಲೂ ರಾತ್ರಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಕಾಡಾನೆಗಳು ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುವುದು ಮುಂದುವರಿದಿದೆ.

ಗ್ರಾಮಸ್ಥರಲ್ಲಿ ಆತಂಕ:  ಜೋಳದಹಾಳ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿನ ಕುಕ್ಕವಾಡೇಶ್ವರಿ ಅರಣ್ಯದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ರಾತ್ರಿಯಾದ ಕೂಡಲೇ ಅರಣ್ಯ ಪ್ರದೇಶದ ಗಡಿ ಗ್ರಾಮಗಳ ತೋಟಗಳಿಗೆ ನುಗ್ಗಿ ಅಡಿಕೆ ಹಾಗೂ ಬಾಳೆ ಗಿಡಗಳನ್ನು ನಾಶ ಮಾಡುತ್ತಿವೆ. ಇದರಿಂದ ಈ ಭಾಗದ ಗ್ರಾಮಗಳ ಜನರು ಕಾಡಾನೆಗಳ ಭಯದಿಂದ ಮನೆಯಲ್ಲಿಯೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಚೆಗೆ ಕಾಡಿನಂಚಿನಲ್ಲಿ ದನ ಮೇಯಿಸುತ್ತಿದ್ದ ಇಬ್ಬರು ಹುಡುಗರು ಆನೆಗಳನ್ನು ಕಂಡು ಹೆದರಿ ಓಡಿ ಬಂದಿದ್ದಾರೆ.

‘ಕಾಡಾನೆಗಳ ಭಯದಿಂದ ಇಲ್ಲಿಯ ಜನರು ಭಯದಿಂದ ಬದುಕು ನೂಕುವಂತಾಗಿದೆ. ಆದ್ದರಿಂದ ಕಾಡಾನೆಗಳನ್ನು ಹಿಡಿಯುವ ಮೂಲಕ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು’ ಎಂದು ಸಂತ್ರಸ್ತ ರೈತ ಕುಬೇರಪ್ಪ ಆಗ್ರಹಿಸಿದರು.

ಚನ್ನಗಿರಿ ವಲಯ ಅರಣ್ಯಾಧಿಕಾರಿ ಒ. ದಿನೇಶ್, ‘ಒಂದು ತಿಂಗಳಿನಿಂದ ಈ ಭಾಗದ ಗ್ರಾಮಗಳಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ರಾತ್ರಿ ವೇಳೆ ಮಾತ್ರ ಕಾಡಾನೆಗಳು ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಕುಕ್ಕವಾಡೇಶ್ವರಿ ಅರಣ್ಯ ಪ್ರದೇಶದಲ್ಲಿ ಸಮೃದ್ಧವಾದ ಕಾಡು ಇದೆ. ಆನೆಗಳಿಗೆ ಅಗತ್ಯವಾದ ಆಹಾರ ಇಲ್ಲಿ ಸಿಗುತ್ತಿರುವುದರಿಂದ ಹಾಗೂ ಅವುಗಳಿಗೆ ಸುರಕ್ಷಿತ ಪ್ರದೇಶ ಆಗಿರುವುದರಿಂದ ಕಾಡಾನೆಗಳು ಇಲ್ಲಯೇ ವಾಸ ಮಾಡಿಕೊಂಡಿವೆ’ ಎಂದು ತಿಳಿಸಿದರು.

‘ಕಾಡಾನೆಗಳು ಬೆಳೆ ಹಾನಿ ಮಾಡುತ್ತಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕಾಡಾನೆಗಳನ್ನು ಸೆರೆ ಹಿಡಿಯಲು ಅನುಮತಿ ಸಿಕ್ಕಿಲ್ಲ. ಆನೆಗಳ ನಿಯಂತ್ರಣಕ್ಕಾಗಿ ಈಗಾಗಲೇ 20 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಗಲುರಾತ್ರಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಕಾಡಾನೆಗಳ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !