ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಹರ: ಖಾಲಿ ನಿವೇಶನಗಳಲ್ಲಿ ಗಿಡ–ಗಂಟಿಗಳ ಕಾರುಬಾರು

ಆರೋಗ್ಯ, ಸುರಕ್ಷತೆಗೆ ಸವಾಲೊಡ್ಡಿದ ನಿವೇಶನಗಳ ಗಿಡ– ಗಂಟಿ
Published : 13 ಸೆಪ್ಟೆಂಬರ್ 2024, 5:39 IST
Last Updated : 13 ಸೆಪ್ಟೆಂಬರ್ 2024, 5:39 IST
ಫಾಲೋ ಮಾಡಿ
Comments

ಹರಿಹರ: ನಗರದ ವಿವಿಧ ಬಡಾವಣೆಗಳಲ್ಲಿನ ಖಾಲಿ ನಿವೇಶನಗಳಲ್ಲಿ ಬೆಳೆದ ಗಿಡ, ಗಂಟಿ, ನಿಂತ ಮಳೆ ನೀರು ಅಕ್ಕಪಕ್ಕದ ನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ನಗರದ ನ್ಯಾಯಾಲಯ ಸಂಕೀರ್ಣದ ಸಮೀಪ 13 ವರ್ಷಗಳ ಹಿಂದೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿ (ಕೆಎಚ್‌ಬಿ) ಕಾಲೊನಿಯಲ್ಲಿ 1,000ಕ್ಕೂ ಹೆಚ್ಚು ನಿವೇಶನಗಳನ್ನು ರೂಪಿಸಿ ಮಾರಾಟ ಮಾಡಲಾಯಿತು. ಈ ಬಡಾವಣೆಯಲ್ಲಿ ಒಂದು ಬಾರಿ ಸುತ್ತಾಡಿದರೆ, ‘ಕುರುಚಲು ಕಾಡು ಪ್ರದೇಶಕ್ಕೆ ಬಂದೆವೇನೋ?’ ಎಂಬ ಅನುಮಾನ ಮೂಡುತ್ತದೆ.

ಅಮರಾವತಿ ಹೌಸಿಂಗ್ ಕಾಲೊನಿಯಲ್ಲಿಯೂ ಖಾಲಿ ಜಾಗಗಳಲ್ಲಿ ಗಿಡ– ಗಂಟಿ ಹುಲುಸಾಗಿ ಬೆಳೆದುನಿಂತಿದೆ. ಜೈಭೀಮನಗರದ ಸುತ್ತಮುತ್ತ, ವಿಜಯನಗರ ಬಡಾವಣೆ, ರಾಜಾರಾಂ ಕಾಲೊನಿ, ಅಯ್ಯಪ್ಪ ಕಾಲೊನಿ, ವಿದ್ಯಾನಗರ ಹಾಗೂ ಶಿವಮೊಗ್ಗ ಹೆದ್ದಾರಿ ಪಕ್ಕದಲ್ಲಿರುವ ಕೆಲವು ಬಡಾವಣೆಗಳಲ್ಲಿಯೂ ಗಿಡ–ಗಂಟಿ ಹಾವಳಿ ಇದೆ.

ಖಾಲಿ ನಿವೇಶನಗಳನ್ನು ಮಾಲೀಕರು ನಿರ್ಲಕ್ಷ್ಯ ವಹಿಸುವುದರಿಂದ ಮಳೆಗಾಲದಲ್ಲಿ ಅಲ್ಲೆಲ್ಲ ಹುಲುಸಾಗಿ ಗಿಡ–ಗಂಟಿ ಬೆಳೆಯುತ್ತದೆ. ತಗ್ಗು ಪ್ರದೇಶವಿದ್ದರೆ ಮಳೆ ನೀರು ಅಥವಾ ಅಕ್ಕಪಕ್ಕದ ಮನೆಗಳ ತ್ಯಾಜ್ಯದ ನೀರು ನಿಲ್ಲುತ್ತದೆ. ಇದರಿಂದ ಸೊಳ್ಳೆಗಳ ಸಂತಾನ ಅಭಿವೃದ್ಧಿಗೆ ಇಂಬು ದೊರೆಯುತ್ತದೆ. ಜೊತೆಗೆ ವಿಷ ಜಂತು, ಹುಳ– ಹುಪ್ಪಟೆಗಳ ವಾಸ ಸ್ಥಾನವಾಗಿ ಪರಿಣಮಿಸುತ್ತದೆ. ಇದು ಆಯಾ ಬಡಾವಣೆಗಳಲ್ಲಿ ವಾಸಿಸುತ್ತಿರುವವರ ಆರೋಗ್ಯ ಮತ್ತು ಸುರಕ್ಷತೆಗೆ ಸವಾಲನ್ನು ಸೃಷ್ಟಿಸುತ್ತಿದೆ.

‘ಮನೆ ಅಥವಾ ಕಟ್ಟಡ ಕಟ್ಟುವುದು ತಡವಾದರೆ ಆಯಾ ನಿವೇಶನಗಳ ಮಾಲೀಕರು ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಗಿಡ–ಗಂಟಿ ಸ್ವಚ್ಛ ಮಾಡಬೇಕು. ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು’ ಎನ್ನುತ್ತಾರೆ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ.

‘ನಮ್ಮ ಮನೆ ಪಕ್ಕದಲ್ಲಿ ಮೂರ‍್ನಾಲ್ಕು ನಿವೇಶನಗಳು ಖಾಲಿ ಇವೆ. ಅಲ್ಲಿ ಬೆಳೆದಿರುವ ದಟ್ಟವಾದ ಗಿಡ–ಗಂಟಿಯಿಂದಾಗಿ ಮನೆ ಸುತ್ತಮುತ್ತ ವಿಷ ಜಂತುಗಳು ಸಂಚರಿಸುತ್ತವೆ. ಹಗಲಲ್ಲೂ ಸಂಚರಿಸಲು ಭಯವಾಗುತ್ತದೆ. ಸೂರ್ಯ ಮುಳುಗಿದ ಬಳಿಕ ಮನೆ ಹೊರಗೆ ಮಕ್ಕಳನ್ನು ಕಳಿಸಲು ಭಯವಾಗುತ್ತದೆ’ ಎನ್ನುತ್ತಾರೆ ಕೆಎಚ್‌ಬಿ ಕಾಲೊನಿ ನಿವಾಸಿ ಮಂಜುಳಮ್ಮ.

ಹರಿಹರ ಹೊರವಲಯದ ಕೆಎಚ್‌ಬಿ ಕಾಲೊನಿಯಲ್ಲಿ ಖಾಲಿ ನಿವೇಶನದಲ್ಲಿ ಬೆಳೆದಿರುವ ಗಿಡ ಗಂಟಿಗಳು
ಹರಿಹರ ಹೊರವಲಯದ ಕೆಎಚ್‌ಬಿ ಕಾಲೊನಿಯಲ್ಲಿ ಖಾಲಿ ನಿವೇಶನದಲ್ಲಿ ಬೆಳೆದಿರುವ ಗಿಡ ಗಂಟಿಗಳು
ನಿವೇಶನಗಳಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ತೆರವುಗೊಳಿಸದಿದ್ದರೆ ನಗರಸಭೆಯಿಂದಲೇ ಸ್ವಚ್ಛತಾ ಕಾರ್ಯ ಮಾಡಿ ಮಾಲೀಕರಿಂದ ಶುಲ್ಕ ಹಾಗೂ ದಂಡವನ್ನು ಕಂದಾಯದ ಜೊತೆಗೆ ಸಂಗ್ರಹಿಸಲಾಗುವುದು
-ಸುಬ್ರಹ್ಮಣ್ಯ ಶ್ರೇಷ್ಠಿ ನಗರಸಭೆ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT