ಕೃಷಿ ಚಟುವಟಿಕೆಗೆ ನರೇಗಾ ವಿಸ್ತರಿಸಿ

7
ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ

ಕೃಷಿ ಚಟುವಟಿಕೆಗೆ ನರೇಗಾ ವಿಸ್ತರಿಸಿ

Published:
Updated:
Prajavani

ದಾವಣಗೆರೆ: ನರೇಗಾದಡಿ ಕೃಷಿ ಚಟುವಟಿಕೆಯನ್ನು ತಂದು ಕೃಷಿ ಕಾರ್ಮಿಕರಿಗೆ ಕೆಲಸ ನೀಡಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ತೋಟಗಾರಿಕೆ ಬೆಳೆಗಳಲ್ಲಿ ಬದು, ಗುಂಡಿ ನಿರ್ಮಾಣಕ್ಕೆ ನರೇಗಾದಡಿ ಅನುಕೂಲವಿದೆ. ಕೃಷಿ ಬೆಳೆಗೂ ವಿಸ್ತರಿಸಿದಲ್ಲಿ ರೈತಕಾರ್ಮಿಕರಿಗೆ ನಿರ್ದಿಷ್ಟ ದಿನದ ಕೆಲಸ ಸಿಗಲಿದೆ. ಗುಳೆ ತಪ್ಪಲಿದೆ ಎಂದು ಸದಸ್ಯ ಬಿ.ಜಿ. ಸಂಗಜ್ಜಗೌಡ ಪ್ರಸ್ತಾಪಿಸಿದರು.

ರೈತರು ಅಡಿಕೆ ಹೊರತಾಗಿ ಪರ್ಯಾಯ ಬೆಳೆಗಳನ್ನು ಬೆಳೆಸಲು ನಿರ್ಧರಿಸದಿದ್ದರೆಕಷ್ಟವಾಗಲಿದೆ. ನುಗ್ಗೆ ಬೆಳೆಗೆ ಬೇಡಿಕೆ ಇದೆ. ಗುಚ್ಛ ಗ್ರಾಮ ಯೋಜನೆಯಡಿ ಕಡಿಮೆ ನೀರು, ಗೊಬ್ಬರ ಬಳಸಿ ಪೇರಳೆ, ನೇರಳೆ ಇನ್ನಿತರೆ ಪರ್ಯಾಯ ಬೆಳೆ ಬೆಳೆಯಬಹುದು. ಶೇ 50ರಷ್ಟು ಸಬ್ಸಿಡಿ ನೆರವಿದೆ ಎಂದು ತೋಟಗಾರಿಕೆ ಇಲಾಖೆ ಎಡಿ ಯತಿರಾಜ್ ತಿಳಿಸಿದರು.

ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ಜಿಲ್ಲೆಗೆ 200 ಟ್ಯಾಂಕರ್‍ಗೆ ಬೇಡಿಕೆ ಸಲ್ಲಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

‘ಭದ್ರಾ ನಾಲೆಯಿಂದ ನೀರೆತ್ತದಂತೆ ಡಿಸಿಯವರೇ ಆದೇಶ ಹೊರಡಿಸಿದ್ದಾರಲ್ಲ. ನಮ್ಮ ಭಾಗದಲ್ಲಿ ದನಕರುಗಳಿಗೂ ಕುಡಿವ ನೀರಿಲ್ಲ’ ಎಂದು ಸದಸ್ಯ ಉಮೇಶ್‍ನಾಯ್ಕ ಆಕ್ಷೇಪಿಸಿದರು.

ಕೆರೆಗಳಿಗೆ ನೀರು ತುಂಬಿಸುವುದು ಪೈಪ್‍ಲೈನ್ ಮೂಲಕ ನೀರು ಹರಿಸಲು ಎಲ್ಲರೂ ಸೇರಿ ಆಗ್ರಹಿಸಬೇಕು ಎಂದು ಸಂಗಜ್ಜಗೌಡ ದನಿಗೂಡಿಸಿದರು. ಹಣ್ಣಿನ ಗಿಡಗಳ ಬದಲಾಗಿ ಸಾಂಬಾರ್ ಗಿಡಗಳನ್ನು ಕೊಡುವಂತೆ ಸದಸ್ಯರು ಆಗ್ರಹಿಸಿದರು.

ತಾಲೂಕಿನ ಕಾಟಿಹಳ್ಳಿ, ಹುಣಸೇಕಟ್ಟೆ, ಹಾಲುವರ್ತಿ, ಕಂದನಕೋವಿ, ಕೆಂಚಮ್ಮನಹಳ್ಳಿ, ಕದರಪ್ಪನಹಟ್ಟಿ, ಜಮ್ಮಾಪುರ, ಈಚಘಟ್ಟದಲ್ಲಿ ಟ್ಯಾಂಕರ್‍ನಲ್ಲಿ ನೀರು ಪೂರೈಸಲಾಗುತ್ತಿದೆ. ಹೆಬ್ಬಾಳ್ ಬಡಾವಣೆ, ಕಾಟಿಹಳ್ಳಿ ಲಂಬಾಣಿಹಟ್ಟಿ, ಮ್ಯಾಸರಹಳ್ಳಿಯಲ್ಲಿ ಖಾಸಗಿ ಬೋರ್‍ವೆಲ್ ಆಶ್ರಯಿಸಲಾಗಿದೆ ಎಂದು ಗ್ರಾಮೀಣ ನೀರು ಕುಡಿವ ನೀರು ಸರಬರಾಜು ವಿಭಾಗದ ಎಇಇ ಆರ್.ಜಿ.ರವೀಂದ್ರ ತಿಳಿಸಿದರು.

ರಾಜೀವ್‍ಗಾಂಧಿ ಸಬ್‍ಮಿಷನ್ ಯೋಜನೆಯಡಿ ಹುಚ್ಚವ್ವನಹಳ್ಳಿ, ಹೆದ್ನೆ, ಎಚ್.ಬಸಾಪುರ ಸೇರಿ 19 ಹಳ್ಳಿಗಳಿಗೆ ನೀರು ತಲುಪುತ್ತಿಲ್ಲ. ಮಾಯಕೊಂಡದಲ್ಲೇ ನೀರು ನಿಯಂತ್ರಿಸಲಾಗುತ್ತಿದೆ. ಜನರಿಗೆ ನೀರು ತಲುಪುತ್ತಿಲ್ಲ ಎಂದಾದರೆ ₹ 1.75 ಕೋಟಿ ನಿರ್ವಹಣೆ ವೆಚ್ಚವನ್ನು ಎಲ್ಲಿಗೆ ಬಳಸುತ್ತಿದ್ದೀರಿ ಎಂದು ಸದಸ್ಯ ಉಮೇಶ್‍ನಾಯ್ಕ ಪ್ರಶ್ನಿಸಿದರು.

ಅನೇಕ ಬಾರಿ ನೀರಗಂಟಿ ಮೇಲೆ ಹಲ್ಲೆ ನಡೆದಿದೆ ಎಂದು ಎಇಇ ಹೇಳಿದರು. ಈ ವಿಚಾರದಲ್ಲಿ ಡಿಸಿಯವರಿಗೆ ಪತ್ರ ಬರೆಯಲು ಮತ್ತು ಮಾಯಕೊಂಡಕ್ಕೆ ಪ್ರತ್ಯೇಕ ಪೈಪ್‍ಲೈನ್ ಮಾರ್ಗ ಅಳವಡಿಸಲು ಸದಸ್ಯರು ಸಲಹೆ ನೀಡಿದರು. ತಿಮ್ಮಪ್ಪನ ಕ್ಯಾಂಪ್‍ನ ನೀರಿನ ಬವಣೆ ತಪ್ಪಿಸುವಂತೆ ಗೌರಮ್ಮ ಕೋರಿದರು.

ದೀನ್ ದಯಾಳ್ ಯೋಜನೆಯಡಿ ಮಳಲ್ಕೆರೆ, ಗುಡಾಳ್ ಸೇರಿದಂತೆ ಕೆಲವೆಡೆ ಜನರಿಗೆ 2 ವರ್ಷವಾದರೂ ವಿದ್ಯುತ್ ಸಂಪರ್ಕವೇ ದೊರೆತಿಲ್ಲ ಎಂದು ಸದಸ್ಯರು ಆಕ್ಷೇಪಿಸಿದರು. ರೈತರಿಗೆ ಹಗಲು ವೇಳೆಯಲ್ಲೇ ಸಮರ್ಪಕ ವಿದ್ಯುತ್ ಒದಗಿಸಲು ಆಗ್ರಹಿಸಲಾಯಿತು.

ಉಪಾಧ್ಯಕ್ಷ ಎಚ್.ಆರ್.ಮರುಳಸಿದ್ದಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎನ್. ನಾಗರಾಜ, ಸಹಾಯಕ ನಿರ್ದೇಶಕ ಎನ್.ಜೆ. ಆನಂದ್, ಸಹಾಯಕ ಲೆಕ್ಕಾಧಿಕಾರಿ ಏಳುಕೋಟೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !