ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗುಂದಿದ ಆರ್‌ಟಿಇ: ಹೆಚ್ಚುತ್ತಿದೆ ವಿಳಾಸ ಬದಲಾವಣೆ ಪ್ರವೃತ್ತಿ

ಉಳ್ಳವರ ಪಾಲಾಗುತ್ತಿರುವ ಸೀಟು, ಸರ್ಕಾರಿ ಶಾಲೆ ತೆರೆಯಲು ಒತ್ತಾಯ
Last Updated 2 ಮೇ 2022, 3:53 IST
ಅಕ್ಷರ ಗಾತ್ರ

ದಾವಣಗೆರೆ: ಎಲ್ಲರಿಗೂ ಶಿಕ್ಷಣ ಎಂಬ ಧ್ಯೇಯದಿಂದ, ಬಡಕುಟುಂಬದ ವಿದ್ಯಾರ್ಥಿಗಳಿಗೂ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ದೊರೆಯಲಿ ಎನ್ನುವ ಉದ್ದೇಶದಿಂದ ರೂಪಿಸಿದ್ದ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಸದ್ಯ ಬೇಡಿಕೆ ಕಳೆದುಕೊಂಡಿದೆ.

ಆರ್‌ಟಿಇ ನಿಯಮಗಳಿಗೆ ತಿದ್ದುಪಡಿ ಮಾಡಿದ ಕಾರಣ ಸೀಟುಗಳು ಬೇಡಿಕೆ ಕಳೆಗುಂದಿದೆ. ಈ ವರ್ಷವೂ ಆರ್‌ಟಿಇ ಸೀಟುಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಅರ್ಜಿಗಳು ಸಲ್ಲಿಕೆಯಾಗಿಲ್ಲ.

ಜಿಲ್ಲೆಯ ಅನುದಾನಿತ ಹಾಗೂ ಖಾಸಗಿ ಸೇರಿ 1286 ಸೀಟುಗಳು ಮಾತ್ರ ಆರ್‌ಟಿಇಗೆ ಒಳಪಟ್ಟಿವೆ. 2021–22ರ ಸಾಲಿನಲ್ಲಿ ಮೊದಲ ಸುತ್ತಿನಲ್ಲಿ ಜಿಲ್ಲೆಯಲ್ಲಿ 365 ಸೀಟುಗಳಲ್ಲಿ 212 ಸೀಟುಗಳು ಮಾತ್ರ ಭರ್ತಿಯಾಗಿವೆ. ನಿಯಮ ಬದಲಾವಣೆ ಬಳಿಕ ಜಿಲ್ಲೆಯಲ್ಲಿ 5 ವಾರ್ಡ್‌ಗಳಲ್ಲಿ ಮಾತ್ರ ಸದ್ಯ ಆರ್‌ಟಿಇ ಅಡಿ ಪ್ರವೇಶಾತಿ ನೀಡಲಾಗುತ್ತಿದೆ. ವಾರ್ಡ್‌ 23, 33, 38, 40, 42ರಲ್ಲಿ ಸರ್ಕಾರಿ ಶಾಲೆಗಳು ಇಲ್ಲದ ಕಾರಣ ಇಲ್ಲಿ ಆರ್‌ಟಿಇ ಅಡಿ ಪ್ರವೇಶ ಪಡೆಯಬಹುದು.

2019ರಲ್ಲಿ ಕೇಂದ್ರ ಸರ್ಕಾರವು ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ಮಾಡಿತು. 1 ಕಿ.ಮೀ. ವ್ಯಾಪ್ತಿಯಲ್ಲಿ ಅಥವಾ ಆಯಾ ವಾರ್ಡ್‌/ ಗ್ರಾಮದಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳಿಲ್ಲದಿದ್ದರೆ ಮಾತ್ರ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ಪ್ರವೇಶ ಪಡೆಯಲು ಅವಕಾಶ ನೀಡಲಾಯಿತು.

ನಿಯಮ ಬದಲಾವಣೆಯಿಂದ ಪ್ರತಿಷ್ಠಿತ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ಕನಸಿಗೆ ‍ಪೋಷಕರು ಎಳ್ಳುನೀರು ಬಿಡುವಂತಾಯಿತು. ಸರ್ಕಾರಿ ಶಾಲೆಗಳಲ್ಲಿದ ಕಡೆ ಪ್ರವೇಶ ಪಡೆಯಲು ಪೈಪೋಟಿಯೂ ಎದುರಾಯಿತು. ಇದರಿಂದಾಗಿ ಕೆಲವರು ತಮ್ಮ ವಿಳಾಸ, ಆದಾಯ ಪ್ರಮಾಣಪತ್ರದಲ್ಲೂ ಬದಲಾವಣೆ ಮಾಡಿ ಸೀಟು ಪಡೆಯುವ ಪ್ರವೃತ್ತಿಯೂ ಹೆಚ್ಚಾಗಿದೆ.

ಇದರಿಂದ ಬಡ, ಮಧ್ಯಮ ವರ್ಗದ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ಉಳ್ಳವರ ಪಾಲಾಗುತ್ತಿದೆ ಎಂಬ ಆರೋಪವೂ ಇದೆ.

ಏನಿದು ಯೋಜನೆ?:

ಖಾಸಗಿ ಶಾಲೆಗಳಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲಿ ಎನ್ನುವ ಉದ್ದೇಶದಿಂದ 2010ರಲ್ಲಿ ಕೇಂದ್ರ ಸರ್ಕಾರವು ಶಿಕ್ಷಣ ಹಕ್ಕು ಕಾಯ್ದೆಯನ್ನು (ಆರ್‌ಟಿಇ) ಜಾರಿಗೊಳಿಸಿತ್ತು. ಆರಂಭದಲ್ಲಿ ಪ್ರವೇಶ ಕೋರಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ಆರ್‌ಟಿಇಯಿಂದಾಗಿ ಮಕ್ಕಳು ಪ್ರವೇಶ ಪಡೆಯುತ್ತಿಲ್ಲವೆಂದು ಸರ್ಕಾರಿ ಶಾಲೆಗಳ ಶಿಕ್ಷಕರು ವಿರೋಧ ವ್ಯಕ್ತಪಡಿಸಿದರು. ಸರ್ಕಾರ ನಿಯಮ ಬದಲಾಯಿಸಿತು.

ಹೊಸ ನಿಯಮದಿಂದಾಗಿ ಬಹುತೇಕ ಆರ್‌ಟಿಇ ಸೀಟುಗಳು ಕಡಿತಗೊಂಡವು. ಪ್ರತಿಷ್ಠಿತ ಖಾಸಗಿ ಶಾಲೆಗಳು ಆರ್‌ಟಿಇ ವ್ಯಾಪ್ತಿಯಿಂದ ಹೊರಗುಳಿದವು. ಹೀಗಾಗಿ ಪಾಲಕರ ಆಸಕ್ತಿಯೂ ಕಡಿಮೆಯಾಯಿತು.

ಆರ್ಥಿಕ ಹೊರೆ:

ಆರ್‌ಟಿಇ ತಪ್ಪಿಹೋಗಿರುವುದರಿಂದ ಹಲವು ಪೋಷಕರು ಅನಿವಾರ್ಯವಾಗಿ ಖಾಸಗಿ ಶಾಲೆಗಳಿಗೆ ದುಬಾರಿ ಶುಲ್ಕ ತೆತ್ತು ಮಕ್ಕಳನ್ನು ಸೇರಿಸುತ್ತಿದ್ದಾರೆ.

‘ನನ್ನ ಮೊದಲ ಮಗಳಿಗೆ ಆರ್‌ಟಿಇ ಸೀಟು ಸಿಕ್ಕಿದ್ದರಿಂದ ನಗರದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಪ್ರವೇಶ ಸಿಕ್ಕಿತ್ತು. ಆದರೆ, ಈಗ ನಿಯಮಗಳು ಬದಲಾಗಿದ್ದರಿಂದ ಎರಡನೇ ಮಗನಿಗೆ ಸೀಟು ಸಿಗುತ್ತಿಲ್ಲ. ನಮ್ಮ ವಾರ್ಡ್‌ನಲ್ಲಿ ಸರ್ಕಾರಿ ಶಾಲೆಯಿದೆ. ಹೀಗಾಗಿ ದುಬಾರಿ ಶುಲ್ಕ ತೆತ್ತು ಶಾಲೆಗೆ ಸೇರಿಸುತ್ತಿದ್ದೇನೆ’ ಎಂದರು ವಿನೋಬನಗರದ ಪ್ರವೀಣ್‌ ಕುಲಕರ್ಣಿ.

ಸರ್ಕಾರಿ ಶಾಲೆಗಳ ದಾಖಲಾತಿ ಏರಿಕೆ:

‘ಆರ್‌ಟಿಇ ನಿಯಮಗಳು ಬದಲಾದ ನಂತರ ಆರ್‌ಟಿಇ ಸೀಟುಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಅರ್ಜಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಇನ್ನೊಂದೆಡೆ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶದಲ್ಲಿ ಏರಿಕೆಯಾಗಿದೆ’ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ದಾಖಲಾತಿ ತಿದ್ದುಪಡಿ ತಂದ ಕುತ್ತು:

ಆರ್‌ಟಿಇ ಅಡಿ ಪ್ರವೇಶ ಪಡೆಯಲು ಆಧಾರ್‌ ಕಾರ್ಡ್‌ ಮತ್ತು ಆದಾಯ ಪ್ರಮಾಣಪತ್ರ ಕಡ್ಡಾಯ. ಹೀಗಾಗಿ ಕೆಲ ಪೋಷಕರು ತಮ್ಮ ವಿಳಾಸವನ್ನೇ ಬದಲಾವಣೆ ಮಾಡಿಕೊಂಡು ಮಕ್ಕಳನ್ನು ಆರ್‌ಟಿಇ ಅಡಿ ಶಾಲೆಗೆ ಸೇರಿಸುತ್ತಿದ್ದಾರೆ. ಇದರಿಂದ ಅರ್ಹರಿಗೆ ಸೀಟು ಸಿಗುತ್ತಿಲ್ಲ.

ಸಂತೋಷ್‌ಕುಮಾರ್ ದಾವಣಗೆರೆ ತಹಶೀಲ್ದಾರ್‌ ಆಗಿದ್ದ ಅವಧಿಯಲ್ಲಿ ದಾಖಲಾತಿ ತಿದ್ದುಪಡಿ ಮಾಡಿ ಆರ್‌ಟಿಇ ಅಡಿ ಪ್ರವೇಶ ಪಡೆದ ಸಂಬಂಧ ಪ್ರಕರಣವೂ ದಾಖಲಾಗಿತ್ತು.

‘ಎರಡು ಬಾರಿ ಅರ್ಜಿ ಸಲ್ಲಿಸಿದರೂ ನನ್ನ ಮಗನಿಗೆ ಆರ್‌ಟಿಇ ಅಡಿ ಸೀಟು ಸಿಕ್ಕಿಲ್ಲ. ಕೋಟಿ ಕೋಟಿ ಇದ್ದವರೂ ವಿಳಾಸ ಬದಲಾವಣೆ ಮಾಡಿಕೊಂಡು ಆರ್‌ಟಿಇ ಅಡಿ ಸೌಲಭ್ಯ ಪಡೆದು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮಂತಹವರಿಗೆ ಮಾತ್ರ ಸಿಗುತ್ತಿಲ್ಲ’ ಎಂದು ಬೇಸರಿಸಿದರು ವಾರ್ಡ್‌ 33ರ ಮಂಜುನಾಥ.

ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಆಧಾರ್‌ ಕಾರ್ಡ್‌, ಆದಾಯ ಪ್ರಮಾಣಪತ್ರ ನೀಡಬೇಕು. ಆಗ ಇಂತಹ ಅಕ್ರಮ ತಡೆಯಬಹುದು ಎಂದು ಒತ್ತಾಯಿಸುತ್ತಾರೆ ಅವರು.

ಪ್ರಮಾಣಪತ್ರಆಧರಿಸಿ ಸೀಟು

‘ಆಧಾರ್‌ ಕಾರ್ಡ್‌ ಮತ್ತು ಆದಾಯ ಪ್ರಮಾಣಪತ್ರದ ಆಧಾರದಲ್ಲಿ ಆರ್‌ಟಿಇ ಅಡಿ ಪ್ರವೇಶಾತಿ ನೀಡಲಾಗುತ್ತಿದೆ. ದಾಖಲೆಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ನೀಡುತ್ತಾರೆ. ಹಾಗಾಗಿ ನಾವು ಸೀಟು ನೀಡಬೇಕಾಗುತ್ತದೆ. ಉಳ್ಳವರು ವಿಳಾಸ ಬದಲಾವಣೆ ಮಾಡಿಕೊಂಡು ಸೌಲಭ್ಯ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ನಾವೇನು ಮಾಡಲು ಆಗದು’ ಎಂದುಅಸಹಾಯಕತೆ ವ್ಯಕ್ತಪಡಿಸುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ಅರ್ಹರಿಗೆ ಸಿಗದ ಸೌಲಭ್ಯ

ಆರ್‌ಟಿಇ ನಿಯಮ ಬದಲಾವಣೆ ಮಾಡಿರುವ ಕಾರಣರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳು ಇಲ್ಲದ ಕಡೆ ಹಲವರು ವಿಳಾಸ ಬದಲಾವಣೆ ಮಾಡಿಕೊಂಡು ಆರ್‌ಟಿಇ ಅಡಿ ಪ್ರವೇಶ ಪಡೆಯುತ್ತಿದ್ದಾರೆ. ಇದರಿಂದ ಅರ್ಹರಿಗೆ ಸೌಲಭ್ಯ ಸಿಗುತ್ತಿಲ್ಲ.

ಕೆಲವರು ನಕಲಿ ದಾಖಲಾತಿ ನೀಡಿ ಸೌಲಭ್ಯ ಪಡೆಯುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ಅಲ್ಲದೇ ಕೆಲವರುಸೀಟು ಸಿಗುತ್ತದೆ ಎಂದು ಮಧ್ಯವರ್ತಿಗಳಿಗೆ ಹಣ ನೀಡಿ ಕಳೆದುಕೊಂಡಿದ್ದಾರೆ.ದಾಖಲಾತಿ ತಿದ್ದುಪಡಿ ಮಾಡಿ ಆರ್‌ಟಿಇ ಅಡಿ ಪ್ರವೇಶ ಪಡೆದ ಸಂಬಂಧ ದೂರು ದಾಖಲಾದ ಉದಾಹರಣೆಯೂ ಇದೆ ಎಂದು ಮಾಹಿತಿ ನೀಡಿದರು ಸಾಮಾಜಿಕಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್‌.

ಪಾಲಿಕೆಯಿಂದ ಹಳೆ ದಾವಣಗೆರೆ ಭಾಗದಲ್ಲಿ ಗ್ರಂಥಾಲಯ, ಸರ್ಕಾರಿ ಶಾಲೆ ತೆರೆಯುವುದು ಸೇರಿ ಶಿಕ್ಷಣಕ್ಕೆ ಹೆಚ್ಚು ಒತ್ತು ನಿಡಿಲ್ಲ ಎಂದು ಆರೋಪಿಸುತ್ತಾರೆ ಅವರು.

ಈ ಭಾಗದಲ್ಲಿ ಹೆಚ್ಚು ಸರ್ಕಾರಿ ಶಾಲೆಗಳನ್ನು ತೆರೆಯಬೇಕು. ಇದರಿಂದ ಆರ್‌ಟಿಇ ದುರುಪಯೋಗಕ್ಕೂ ಕಡಿವಾಣ ಹಾಕಬಹುದು.ಪಾಲಿಕೆ ಅಥವಾ ಜಿಲ್ಲಾಡಳಿತದಿಂ ಹಲೆ ದಾವಣಗೆಗೆ ಭಾಗದಲ್ಲಿ ಸರ್ಕಾರಿ ಶಾಲೆಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಅವರು.

ಬದಲಾವಣೆ ತಂದ ಸಂಕಷ್ಟ

ಎನ್‌.ಕೆ. ಆಂಜನೇಯ

ಹೊನ್ನಾಳಿ: ಸರ್ಕಾರ ಆರ್‌ಟಿಇ ತಂದಾಗ ಕೆಲವು ಶಿಕ್ಷಣ ಸಂಸ್ಥೆಗಳಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಇದರಿಂದ ಇಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಒಂದಿಷ್ಟು ಅನುಕೂಲವಾಗಿದ್ದಂತೂ ಸತ್ಯ.

ಆರ್‌ಟಿಇಯಿಂದ ವರ್ಷದಲ್ಲಿ 20ಕ್ಕೂ ಹೆಚ್ಚು ಮಕ್ಕಳು ಪ್ರವೇಶ ಪಡೆದುಕೊಂಡಿದ್ದರು.ಹಿಂದೆ ಒಂದು ಕುಟುಂಬದ ಎರಡು, ಮೂರು ಮಕ್ಕಳು ಆರ್‌ಟಿಇ ಅಡಿ ಪ್ರವೇಶ ಪಡೆದ ಉದಾಹರಣೆಗಳು ಇದ್ದವು.

ಎಸ್ಸಿ, ಎಸ್ಟಿ, ಹಾಗೂ ಅಲ್ಪಸಂಖ್ಯಾತ ಕುಟುಂಬದ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗೆ ಮುಗಿಬಿದ್ದು ಪ್ರವೇಶ ಪಡೆಯಲು ಆರಂಭಿಸಿದ್ದರು. ಆದರೆ ನಿಯಮಗಳನ್ನು ಸರ್ಕಾರ ಬದಲಿಸಿದ್ದರಿಂದ ಹಿಂದುಳಿದ, ಮಧ್ಯಮ ವರ್ಗದ, ಅಲ್ಪಸಂಖ್ಯಾತ ವರ್ಗದ ಪೋಷಕರು ಗೊಂದಲಕ್ಕೆ ಒಳಗಾಗಿದ್ದಾರೆ. ಮನೆಯಲ್ಲಿ ಮೂರ್ನಾಲ್ಕು ಮಕ್ಕಳು ಇದ್ದರೆ ಅವರಲ್ಲಿ ಒಂದು ಮಗುವಾದರೂ ಖಾಸಗಿ ಶಾಲೆಯಲ್ಲಿ ಓದಲಿ ಎನ್ನುವ ಪೋಷಕರ ಆಸೆಗೆ ಸರ್ಕಾರದ ನಿಯಮ ತಣ್ಣೀರು ಎರಚಿದೆ.

‘ಆರ್‌ಟಿಇಅಡಿ ಹೆಣ್ಣುಮಕ್ಕಳಿಗಾದರೂ ವಿಶೇಷ ಸೌಲಭ್ಯ ಕಲ್ಪಿಸಿ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು’ ಎನ್ನುತ್ತಾರೆ ಪೋಷಕಿ ಎಸ್.ಆರ್. ಹೇಮಾ.

‘ಭಾಗ್ಯಲಕ್ಷ್ಮಿ ಬಾಂಡ್ ಸೌಲಭ್ಯಕ್ಕೆ ಕನಿಷ್ಠ ಎಸ್ಸೆಸ್ಸೆಲ್ಸಿವರೆಗಾದರೂ ಓದಬೇಕು ಎಂಬ ನಿಯಮವಿದೆ. ಆರ್‌ಟಿಇಯಿಂದ ಎಷ್ಟೋ ಪೋಷಕರು ಹೆಣ್ಣು ಮಕ್ಕಳನ್ನು ಎಸ್ಸೆಸ್ಸೆಲ್ಸಿವರೆಗೂ ಓದಿಸಲು ಮನಸ್ಸು ಮಾಡಿದ್ದರು. ಈಗ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ’ ಎನ್ನುತ್ತಾರೆ ಅವರು.

ಆರ್‌ಟಿಇಯಿಂದ ಮಕ್ಕಳು ಬಾಲಕಾರ್ಮಿಕರಾಗುವುದಕ್ಕೆ ಕಡಿವಾಣ ಬಿದ್ದಿತ್ತು ಎನ್ನುವ ಅವರು, ‘ನಿಯಮ ಬದಲಿಸಬೇಕು’ ಎಂದು ಒತ್ತಾಯಿಸುತ್ತಾರೆ.

‘ನಮ್ಮಲ್ಲಿ ಯಾವುದೇ ವಿಳಾಸದ ಮಾಹಿತಿ ನೀಡಿದರೂ ಅಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆ ಇದ್ದೇ ಇದೆ. ಹೀಗಾಗಿ ಅಲ್ಲಿ ಆರ್‌ಟಿಇ ಸೀಟು ಸಿಗುತ್ತಿಲ್ಲ. ಬೇಡಿಕೆ ಕಡಿಮೆಯಾಗಿದೆ. ನಗರ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಿಲ್ಲದಿದ್ದರಿಂದ ಅವರಿಗೆ ಈ ಸಮಸ್ಯೆ ಇಲ್ಲ’ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಇ. ರಾಜೀವ್.

ಬಡವರಿಗೆ ಶಿಕ್ಷಣ ಗಗನ ಕುಸುಮ

ಎಚ್.ವಿ. ನಟರಾಜ್

ಚನ್ನಗಿರಿ: ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿಯೂ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇವೆ.

ಜಿಲ್ಲೆಯ ದೊಡ್ಡ ತಾಲ್ಲೂಕು ಚನ್ನಗಿರಿಯಲ್ಲಿ ಆರ್‌ಟಿಇ ನಿಯಮ ಬದಲಾವಣೆಯಿಂದಬಡ ವರ್ಗದ ಪೋಷಕರ ಮಕ್ಕಳಿಗೆ ಖಾಸಗಿ ಶಾಲೆಗಳ ಪ್ರವೇಶ ಎರಡು ವರ್ಷಗಳಿಂದ ಗಗನ ಕುಸುಮವಾಗಿದೆ.

ತಾಲ್ಲೂಕಿನಲ್ಲಿ 129 ಸರ್ಕಾರಿ ಕಿರಿಯ, 142 ಹಿರಿಯ ಪ್ರಾಥಮಿಕ ಹಾಗೂ 28 ಪ್ರೌಢಶಾಲೆಗಳು ಇವೆ. ಅನುದಾನಿತ ಶಾಲೆಗಳು 58 ಇವೆ.

ಎರಡು ವರ್ಷಗಳ ಹಿಂದೆ 41 ಶಾಲೆಗಳಲ್ಲಿ 992 ಮಕ್ಕಳು ಆರ್‌ಟಿಇ ಅಡಿ ದಾಖಲಾಗಿದ್ದರು. ಈಗ ಬೇಡಿಕೆ ಇಲ್ಲ. ತಾಲ್ಲೂಕಿನಲ್ಲಿ ಪ್ರತಿಯೊಂದು ಗ್ರಾಮದಲ್ಲೂ ಸರ್ಕಾರಿ ಶಾಲೆ ಇದೆ ಎನ್ನುತ್ತಾರೆ ಬಿಇಒ ಕೆ. ಮಂಜುನಾಥ್‍.

‘ಹಿಂದೆ ಮಕ್ಕಳು ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಿದ್ದರು. ಕಾಯ್ದೆ ತಿದ್ದುಪಡಿಯಿಂದ ಬಡ ವರ್ಗದ ಮಕ್ಕಳಿಗೆ ಈಗ ಆ ಅವಕಾಶ ಇಲ್ಲ. ನಿಯಮ ಬದಲಾವಣೆಯನ್ನು ರದ್ದುಗೊಳಿಸಿ, ಹಿಂದೆ ಇದ್ದ ನಿಯಮ ಜಾರಿಗೆ ತರಬೇಕು. ಇದರಿಂದ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಅನುಕೂಲವಾಗಲಿದೆ’ ಎಂದು ಒತ್ತಾಯಿಸುತ್ತಾರೆ ತಿಪ್ಪಗೊಂಡನಹಳ್ಳಿ ಗ್ರಾಮದ ದಸಂಸ ಮುಖಂಡ ಎಚ್.ಎನ್. ಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT