ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಅಡಿಕೆ ಮಾರಲು ಮುಂದಾಗದ ರೈತರು

ಧಾರಣೆ ಏರಿಕೆ ನಿರೀಕ್ಷೆಯಲ್ಲಿ ಬೆಳೆಗಾರರು
Last Updated 20 ಜನವರಿ 2019, 20:00 IST
ಅಕ್ಷರ ಗಾತ್ರ

ಬಸವಾಪಟ್ಟಣ: ಈ ವರ್ಷವಾದರೂ ಅಡಿಕೆ ಧಾರಣೆ ಏರಿಕೆಯಾಗಬಹುದೇ ಎಂಬ ನಿರೀಕ್ಷೆಯಲ್ಲಿ ಬೆಳೆಗಾರರಿದ್ದು, ಫಸಲು ಮಾರಾಟ ಮಾಡದೇ ದಾಸ್ತಾನು ಇಟ್ಟುಕೊಳ್ಳುತ್ತಿದ್ದಾರೆ.

ಈ ವರ್ಷದ ಅಡಿಕೆ ಕೊಯಿಲು ಮತ್ತು ಸಂಸ್ಕರಣೆ ಬಹುತೇಕ ಮುಕ್ತಾಯವಾಗಿದೆ. ಆದರೆ, ಹೆಚ್ಚಿನ ರೈತರು ಅಡಿಕೆ ಮಾರಾಟ ಮಾಡಲು ಮುಂದಾಗುತ್ತಿಲ್ಲ.

ಆರಂಭದಲ್ಲಿ ಕ್ವಿಂಟಾಲ್‌ಗೆ ₹ 27 ಸಾವಿರ ಇದ್ದ ಅಡಿಕೆ (ರಾಶಿ) ದರ ಈಗ ₹ 34 ಸಾವಿರವರೆಗೆ ಬಂದು ನಿಂತಿದೆ. ಕಳೆದ ಆರು ತಿಂಗಳುಗಳಿಂದ ₹ 33 ಸಾವಿರದಿಂದ ₹ 34 ಸಾವಿರದಲ್ಲಿಯೇ ಅಡಿಕೆ ದರ ಗಿರಕಿ ಹೊಡೆಯುತ್ತಿದೆ.

ಹೋಬಳಿಯಲ್ಲಿ ಅಂದಾಜು 4,000 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ವರ್ಷಕ್ಕೆ ಒಂದು ಲಕ್ಷ ಕ್ವಿಂಟಾಲ್‌ ಅಡಿಕೆ ಉತ್ಪಾದನೆಯಾಗುತ್ತದೆ. ಈ ತೋಟದ ಬೆಳೆಯನ್ನೇ ನಂಬಿರುವ ರೈತರು ಇತರ ಬೆಳೆಗಳ ಬದಲಾಗಿ ಅಡಿಕೆಗೇ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಭತ್ತದ ಗದ್ದೆಗಳೆಲ್ಲಾ ಅಡಿಕೆ ತೋಟಗಳಾಗುತ್ತಿದೆ. ಫಲಭರಿತ ತೆಂಗಿನ ಮರಗಳನ್ನು ಕಡಿದು, ಅಡಿಕೆ ತೋಟ ಮಾಡಿಕೊಂಡಿರುವ ರೈತರೀಗ ನಿರೀಕ್ಷಿತ ಬೆಲೆ ದೊರೆಯದೇ ನಿರಾಶರಾಗಿದ್ದಾರೆ.

‘ಅಂತರ್ಜಲ ಕುಸಿದು, ನೀರು ಸಿಗದೇ ಇದ್ದಾಗ ಲಕ್ಷಾಂತರ ರೂಪಾಯಿ ಸಾಲ ಮಾಡಿ, ಹಲವು ಕಿಲೋ ಮೀಟರ್‌ಗಳಷ್ಟು ದೂರದಿಂದ ಕೊಳವೆಮಾರ್ಗ ಅಳವಡಿಸಿ, ತೋಟಗಳನ್ನು ಉಳಿಸಿಕೊಂಡಿದ್ದೇವೆ. ಈ ವರ್ಷವಾದರೂ ಅಡಿಕೆ ಬೆಲೆ ಏರಿಕೆಯಾಗಿ ಸಾಲ ತೀರಿಸಬಹುದು ಎಂಬ ನಮ್ಮ ನಿರೀಕ್ಷೆ ಹುಸಿಯಾಗುತ್ತಿದೆ’ ಎನ್ನುತ್ತಾರೆ ಇಲ್ಲಿನ ಪ್ರಮುಖ ಅಡಿಕೆ ಬೆಳೆಗಾರ ಎಂ.ಎಸ್‌. ಜಯಣ್ಣ.

‘ದರ ಏರಿಕೆಯಾಗಬಹುದು ಎಂಬ ನಿರೀಕ್ಷೆಯಿಂದ ಶೇಕಡ 50ರಷ್ಟು ರೈತರು ಇದುವರೆಗೂ ಅಡಿಕೆ ಮಾರಾಟ ಮಾಡಿಲ್ಲ. ಕೆಲ ರೈತರು ಎರಡು, ಮೂರು ವರ್ಷಗಳಿಂದ ಮಾರಾಟ ಮಾಡದೇ ಮನೆಗಳಲ್ಲಿಯೇ ಅಡಿಕೆ ಇಟ್ಟುಕೊಂಡಿದ್ದಾರೆ. ಸರ್ಕಾರ ನೆರವಿಗೆ ಬಂದು ಉತ್ತಮ ಬೆಂಬಲ ಘೋಷಿಸಿದರೆ ಮಾತ್ರ ಅಡಿಕೆ ಬೆಳೆದ ನಮಗೆ ನೆಮ್ಮದಿ’ ಎನ್ನುತ್ತಾರೆ ಸಾಗರಪೇಟೆಯ ಅಡಿಕೆ ಬೆಳೆಗಾರ ಬಿ.ಜಿ. ರುದ್ರೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT