ಶನಿವಾರ, ಡಿಸೆಂಬರ್ 7, 2019
16 °C
ಪ್ರಕೃತಿ ಚಿಕಿತ್ಸಾ ತಜ್ಞ ಡಾ. ಗಂಗಾಧರ ವರ್ಮಾ

ಮನುಷ್ಯರಿಗೆ ಆಹಾರವೇ ಔಷಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹಿಂದೆ ಮನುಷ್ಯನಿಗೆ ಆಹಾರವೇ ಔಷಧವಾಗಿತ್ತು. ಆದರೆ ಇಂದು ಒತ್ತಡದ ಜೀವನದಲ್ಲಿರುವ ಮನುಷ್ಯ ಔಷಧವನ್ನೇ ಆಹಾರವನ್ನಾಗಿ ಮಾಡಿಕೊಂಡಿದ್ದಾನೆ. ಇದಕ್ಕೆ ನಮ್ಮಲ್ಲಿರುವ ದೌರ್ಬಲ್ಯಗಳೇ ಕಾರಣ’ ಎಂದು ಪ್ರಕೃತಿ ಚಿಕಿತ್ಸಾ ತಜ್ಞ ಡಾ. ಗಂಗಾಧರ ವರ್ಮಾ ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ದೇವರಾಜ ಅರಸು ಬಡಾವಣೆಯಲ್ಲಿ ಹಾಲಕೆರೆ ಅನ್ನದಾನೀಶ್ವರ ಮಠದಲ್ಲಿ ಭಾನುವಾರ ನಡೆದ 231ನೇ ಶಿವಾನುಭವ ಸಂಪದ ಹಾಗೂ ಕಾರ್ತೀಕ ದೀಪೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ವಿಜ್ಞಾನ ಬೆಳೆದಂತೆ ಕಾಯಿಲೆ ಮತ್ತು ಸಂಶೋಧನೆಗಳ ಸಂಖ್ಯೆಯೂ ಜಾಸ್ತಿಯಾಗಿದೆ, ಸತ್ವಯುತ ಆಹಾರದ ಕೊರತೆಯಾಗಿದೆ. ನಿತ್ಯವೂ ನಾವು ಸೇವಿಸುವ ಆಹಾರದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ದರಿಂದ ಕಾಯಿಲೆಗಳು ಹೆಚ್ಚಾಗಿವೆ. ಹೆಚ್ಚು ನೀರು ಕುಡಿಯಬೇಕು ಹಾಗೂ ಪ್ರಕೃತಿದತ್ತವಾಗಿ ಬೆಳೆದ ಹಣ್ಣು ಹಂಪಲಗಳನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.

‘ಪೂರ್ವಜರು ಮತ್ತು ಋಷಿಮುನಿಗಳು ಗಡ್ಡೆ ಗೆಣಸು ತಿಂದು ಆರೋಗ್ಯವಾಗಿದ್ದರು. ಆಗ ಆಸ್ಪತ್ರೆಗಳ ಮತ್ತು ವೈದ್ಯರ ಸಂಖ್ಯೆಯೂ ಕಡಿಮೆ ಇತ್ತು, ಹತ್ತೂರಿಗೆ ಒಬ್ಬ ವೈದ್ಯ ಇರುತ್ತಿದ್ದ. ಆದರೆ ಇಂದು ಓಣಿಗೆ ಹತ್ತು ಜನ ವೈದ್ಯರು ನರ್ಸಿಂಗ್ ಹೋಂಗಳು ಇವೆ. ಇದಕ್ಕೆ ನಮ್ಮ ಆಹಾರ ಪದ್ಧತಿ ಕಾರಣ ಎಂದು ಹೇಳಿದರು.

ತುಳಸಿರಾಮರಾಜ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ವಿಂದ್ಯಾ ಡಾ.ಗಂಗಾಧರ ವರ್ಮಾ ಮಾತನಾಡಿ, ‘ದೀಪ ಹಚ್ಚುವುದು ನಮ್ಮ ಸಂಸ್ಕೃತಿ, ಸನಾತನ ಧರ್ಮದ ಈ ಸಂಸ್ಕಾರ ಸಂಸ್ಕೃತಿಯನ್ನು ಉಳಿಸಿಕೊಂಡು ಬರಬೇಕು ಎಂದು ಸಲಹೆ ನೀಡಿದರು.

ಸಾನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ದೀಪದಿಂದ ದೀಪ ಹಚ್ಚುವ ಕಾರ್ತೀಕ ದೀಪೋತ್ಸವದಲ್ಲಿ ಭಾಗವಹಿಸಿದ್ದರಿಂದ ಭಾವನಾತ್ಮಕ ಸಂಕಲ್ಪಗಳಿಂದ ಮನಸ್ಸಿನ ಕಲ್ಮಷಗಳನ್ನು ತೊಡೆಯಬಹುದು. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ  ಎಲ್ಲರೂ ಕಂಕಣಬದ್ಧರಾಗಬೇಕು’ ಎಂದು ನುಡಿದರು.

ಡಾ.ವಿಂದ್ಯಾ ಗಂಗಾದರ ವರ್ಮಾ, ಡಾ.ಗಂಗಾಧರ ವರ್ಮಾ, ನರೇಂದ್ರಪ್ರಕಾಶ್, ಪತ್ರಕರ್ತ ಬಿ.ವಿನಯ್ ಅವರನ್ನು ಸನ್ಮಾನಿಸಲಾಯಿತು.

ಪರುಶುರಾಮ್ ಶಾನವಾಡ್ ಪ್ರಾರ್ಥಿಸಿದರು, ನಿವೃತ್ತ ಪ್ರಾಂಶುಪಾಲ ಉಮೇಶ್ ಹಿರೇಮಠ ಸ್ವಾಗತಿಸಿದರು, ಪತ್ರಕರ್ತ ವೀರಪ್ಪ ಎಂ. ಭಾವಿ ವಂದಿಸಿದರು. ಮಠದ ಕಾರ್ಯದರ್ಶಿ ಎನ್. ಅಡಿವೆಪ್ಪ, ಕಲ್ಲೇಶ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)