ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದಿಂದ ಪಡೆದ ಲಾಭ ಸಮಾಜಕ್ಕೆ ನೀಡಿ

ಸಾಮಾಜಿಕ ಹೊಣೆಗಾರಿಕೆ ಯೋಜನೆ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
Last Updated 9 ಜನವರಿ 2020, 15:25 IST
ಅಕ್ಷರ ಗಾತ್ರ

ದಾವಣಗೆರೆ: ‘ಈ ಸಮಾಜದಿಂದ ನಾವೆಲ್ಲರೂ ಲಾಭ ಪಡೆದುಕೊಂಡಿದ್ದೇವೆ. ಆ ಲಾಭದಲ್ಲಿ ಸ್ವಲ್ಪಾಂಶವನ್ನು ಸಮಾಜಕ್ಕೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಅವರ ಸೂಚನೆಯಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸಾಮಾಜಿಕ ಜವಾಬ್ದಾರಿಯುತ ಹೊಣೆಗಾರಿಕೆ (ಸಿಎಸ್‌ಆರ್) ಯೋಜನೆಯ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ಗಂಗನಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಗ್ರೀನ್ ಆಗ್ರೋ ಪ್ಯಾಕ್ ಸಂಸ್ಥೆಯವರು ಶೌಚಾಲಯ ನಿರ್ಮಿಸಲು ಒಪ್ಪಿದ್ದಾರೆ. ಇದು ಈ ಯೋಜನೆಯ ಪ್ರಸಕ್ತ ಸಾಲಿನ ಆರಂಭಿಕ ಕೊಡುಗೆ ಎಂದು ಶ್ಲಾಘಿಸಿದರು.

ದಾವಣಗೆರೆ ಒಂದು ಕಮರ್ಷಿಯಲ್ ಹಬ್. ಇಲ್ಲಿ ಕೊಡುಗೈ ದಾನಿಗಳಿಗೆ ಕೊರತೆ ಇಲ್ಲ. ಸರ್ಕಾರದ ವಿವಿಧ ಯೋಜನೆಗಳಾಚೆಯೂ ಈ ಸಮಾಜದಲ್ಲಿ ಮಾಡಲೇಬೇಕಾದ ಕೆಲವು ಕೆಲಸಗಳಿವೆ. ಅದಕ್ಕೆ ಎಲ್ಲರ ಸಹಾಯ, ಸಹಕಾರ ಅಗತ್ಯ. ಆದ್ದರಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಅಗತ್ಯವಾಗಿ ಬೇಕಾದ ಶೌಚಾಲಯಗಳನ್ನು ಘಟಕ ವೆಚ್ಚ ₹ 8 ಲಕ್ಷದಂತೆ 60 ಶೌಚಾಲಯಗಳನ್ನು ಕಟ್ಟಲು ಸಂಸದರ ನೇತೃತ್ವದಲ್ಲಿ ಪಟ್ಟಿ ಮಾಡಲಾಗಿದೆ.ಜಿಲ್ಲೆಯ ವಿವಿಧ ಕೈಗಾರಿಕೆಗಳು ಮತ್ತು ಸಂಸ್ಥೆಗಳು ಧನ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

‘ನಾನು, ಎಸ್‌ಪಿ, ಸಿಇಒ ಸೇರಿದ ತಂಡ ಜಿಲ್ಲೆಯ ಎಲ್ಲ ಕೈಗಾರಿಕೆಗಳನ್ನು ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಕೈಗಾರಿಕೆಗಳು, ಸಂಸ್ಥೆಗಳು ನಿಯಮಾನುಸಾರ ಇರಬೇಕು. ಲೋಪ ಕಂಡುಬಂದಲ್ಲಿ ಕ್ರಮ, ದಂಡ ವಿಧಿಸಬಹುದಾದ ದೋಷಗಳಿಗೆ ದಂಡ, ನೋಟಿಸ್ ಇತರೆ ನೀಡಲಾಗುವುದು’ ಎಂದು ಎಚ್ಚರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ‘ಕೈಗಾರಿಕಾ ಅಭಿವೃದ್ಧಿ ಮಂಡಳಿ, ಫ್ಯಾಕ್ಟರಿ ಮತ್ತು ಬಾಯ್ಲರ್ಸ್‌, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ, ಅಗ್ನಿಶಾಮಕ ಸೇರಿ ಐದು ಸಂಸ್ಥೆಗಳು ಜಂಟಿಯಾಗಿ ಕೈಗಾರಿಕಾ ಸಂಸ್ಥೆಗಳ ಪರಿಶೀಲನೆ ಕೈಗೊಳ್ಳಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಸಣ್ಣ ಸಣ್ಣ ಸಂಸ್ಥೆಗಳೂ ಸುಧಾರಣೆಗಾಗಿ ಸಹಾಯ ಮಾಡಬೇಕು. ಪ್ರಥಮ ಹಂತದಲ್ಲಿ 60 ಶೌಚಾಲಯ ನಿರ್ಮಾಣ ಮಾಡಲು ₹ 4.80 ಕೋಟಿ ಅವಶ್ಯಕತೆ ಇದೆ. ಇದನ್ನು ಸಿಎಸ್‌ಆರ್ ಅಡಿ ಹೊಂದಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಎಸ್‌ಪಿ ಕಚೇರಿ, ತಹಶೀಲ್ದಾರ್ ಕಚೇರಿಗಳ ಉನ್ನತೀಕರಣಕ್ಕೆ ಅನುದಾನ ಇರುವುದಿಲ್ಲ. ಇದಕ್ಕೆ ಈ ಯೋಜನೆಯಡಿ ಅನುದಾನ ಹೊಂದಿಸಬಹುದು ಎಂದರು.

‘ನಮ್ಮ ಸಂಸ್ಥೆಯಿಂದ 27 ಶಾಲೆಗಳಿಗೆ ಶೌಚಾಲಯ ನಿರ್ಮಿಸಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಕಲಿಕಾ ಸಾಮಗ್ರಿ ನೀಡಲಾಗಿದೆ’ ಎಂದು ಕಾರ್ಗಿಲ್ ಸಂಸ್ಥೆಯ ಮ್ಯಾನೇಜರ್ ಕವನ್ ಕಾವೇರಪ್ಪ ಮಾಹಿತಿ ನೀಡಿದರು.

‘ರೈತರಿಂದ ತರಕಾರಿ ಬೆಳೆಸಿ ಖರೀದಿಸಿ, ಸಂಸ್ಕರಿಸುವ ಕೆಲಸ ಮಾಡುತ್ತಿದ್ದೇವೆ. ಹೊಸದಾಗಿ ₹ 40 ಲಕ್ಷ ವೆಚ್ಚದಲ್ಲಿ ವಿಶೇಷ ತರಬೇತಿ ಶಾಲೆ ತೆರೆಯಲಾಗಿದೆ. 30 ದಿನಗಳ ಕೃಷಿ ತರಬೇತಿ, ಟ್ರ್ಯಾಕ್ಟರ್, ವೆಲ್ಡಿಂಗ್ ಮುಂತಾದ ತಾಂತ್ರಿಕ ತರಬೇತಿ ನೀಡಲಾಗುವುದು. ಈ ಜಾಗಕ್ಕೆ ರಸ್ತೆ ಇಲ್ಲ’ ಎಂದು ಗ್ರೀನ್ ಆಗ್ರೋ ಪ್ಯಾಕ್ ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಎಂ ದೇವಯ್ಯ ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಮಂಜುನಾಥ್, ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಅಧಿಕಾರಿ ಶಿವಕುಮಾರ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಅಧ್ಯಕ್ಷ ಶಂಭುಲಿಂಗಪ್ಪ, ಕಾಸಿಯಾ ಸದಸ್ಯ ಶೇಷಾಚಲ, ಹರಿಹರೇಶ್ವರ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಹನುಮಂತರಾವ್, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಸಂತೋಷ್, ಜಿಲ್ಲಾ ಅಧಿಕಾರಿಗಳು ಖಾದಿ ಮಂಡಳಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಸುಶೃತ ಶಾಸ್ತ್ರಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT