ಶನಿವಾರ, ಸೆಪ್ಟೆಂಬರ್ 25, 2021
24 °C

‘ಮಾಲೀಕರ ದುರಾಸೆಯೇ ಕಾರ್ಮಿಕರ ಸಂಕಷ್ಟಕ್ಕೆ ಕಾರಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಾಲೀಕರು ಲಾಭಕ್ಕಾಗಿ ಮಾನವೀಯತೆ ಕಳೆದುಕೊಂಡು ಮೃಗಗಳಾಗಿದ್ದಾರೆ. ಹೆಚ್ಚಿನ ಕೂಲಿ ಕೊಟ್ಟರೆ ತಮಗೆ ಹೆಚ್ಚಿನ ಲಾಭ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಧಿಕ ಸಂಪತ್ತು ಹೊಂದಲಾಗುವುದಿಲ್ಲ ಎಂಬ ಮನಸ್ಥಿತಿಯೇ ಕಾರ್ಮಿಕರ ಸಂಕಷ್ಟಕ್ಕೆ ಕಾರಣ ಅವರದ್ದಾಗಿದೆ ಎಂದು ಎಸ್‍ಯುಸಿಐ (ಕಮ್ಯುನಿಸ್ಟ್‌) ರಾಜ್ಯ ಸಮಿತಿ ಸದಸ್ಯ ಟಿ.ಎಸ್‌. ಸುನೀತ್ ಕುಮಾರ್ ತಿಳಿಸಿದರು.

ಇಲ್ಲಿನ ರೋಟರಿ ಬಾಲಭವನದಲ್ಲಿ ಎಐಯುಟಿಯುಸಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಎಲ್ಲಾ ಸಾಮಾಜಿಕ ಸಂಪತ್ತು ಉತ್ಪಾದನೆಗೆ ಕಾರ್ಮಿಕರ ಶ್ರಮ ಶಕ್ತಿ ಅಗತ್ಯ. ಕಾರ್ಮಿಕರಿಲ್ಲದೇ ಯಾವುದೇ ಯಂತ್ರ ಚಾಲನೆಯಾಗದು. ಪೆಟ್ರೋಲ್, ಕಲ್ಲಿದ್ದಲು ಸೇರಿ ಪ್ರತಿಯೊಂದು ಸಾಮಾಜಿಕ ಸಂಪತ್ತಿನಲ್ಲಿ ಕಾರ್ಮಿಕರ ಶ್ರಮವಿದೆ. ಕಾರ್ಮಿಕರ ಅವಶ್ಯಕತೆ ಮುಖ್ಯವೆಂಬುದು ಮಾಲೀಕರ ವರ್ಗಕ್ಕೆ ತಿಳಿದಿದೆ. ಆದರೆ, ಕಾರ್ಮಿಕರಿಗೆ ತಮ್ಮ ಶ್ರಮಶಕ್ತಿಯ ಬಗ್ಗೆ ಅರಿವಿಲ್ಲ. ಆದ್ದರಿಂದ ಬಂಡವಾಳ ಶಾಹಿಗಳಿಂದ ಕಾರ್ಮಿಕರು ಶೋಷಣೆಗೊಳಗಾಗುತ್ತಿದ್ದಾರೆ. ಅಲ್ಲದೇ ನಿಗದಿತ ಅವಧಿಗಿಂತಲೂ ಹೆಚ್ಚು ತಾಸು ದುಡಿಸಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಂಡವಾಳಶಾಹಿ ವ್ಯವಸ್ಥೆ ಪ್ರಾರಂಭವಾದಾಗಿನಿಂದಲೂ ದುಡಿಯುವ ವರ್ಗವನ್ನು ಕರುಣೆ ಇಲ್ಲದೇ ದುಡಿಸಿಕೊಳ್ಳಲಾಗುತ್ತಿದೆ. ಅಲ್ಲದೇ ಅವರ ಶ್ರಮದ ದುಡಿಮೆಗೆ ತಕ್ಕಂತೆ ಸಂಬಳವನ್ನು ನೀಡುತ್ತಿಲ್ಲ. ಅವರ ಕುಟುಂಬ ವರ್ಗದ ಕಷ್ಟವನ್ನು ಆಲಿಸುತ್ತಿಲ್ಲ. ಮಾಲೀಕರು ಕೇವಲ ಆದಾಯವನ್ನೇ ನಿರೀಕ್ಷಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಸಂಘಟನಾಕಾರ ತಿಪ್ಪೇಸ್ವಾಮಿ ಅಣಬೇರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕುಕ್ಕವಾಡ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಸ್ವಾಮಿ ನಿಂಗಪ್ಪ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಅನಿತಾ, ವಿಶ್ವವಿದ್ಯಾನಿಲಯದ ಹೊರಗುತ್ತಿಗೆ ನೌಕರರ ಸಂಘದ ಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.