ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಚೇತರಿಕೆ ಕಾಣದ ಅಂತರ್ಜಲ ಮಟ್ಟ

ಮುಂಗಾರು ಆರಂಭವಾಗಿ ತಿಂಗಳು ಕಳೆದರೂ ಜಲಮೂಲಗಳಲ್ಲಿ ನೀರು
ಜಿ.ಬಿ.ನಾಗರಾಜ್‌
Published 3 ಜುಲೈ 2024, 6:47 IST
Last Updated 3 ಜುಲೈ 2024, 6:47 IST
ಅಕ್ಷರ ಗಾತ್ರ

ದಾವಣಗೆರೆ: ಮುಂಗಾರು ಆರಂಭವಾಗಿ ತಿಂಗಳು ಕಳೆದರೂ ಅಂತರ್ಜಲ ಮಟ್ಟದಲ್ಲಿ ನಿರೀಕ್ಷಿತ ಪ್ರಮಾಣ ಏರಿಕೆ ಕಾಣುತ್ತಿಲ್ಲ. ವಾಡಿಕೆಯಷ್ಟು ಮಳೆ ಸುರಿಯದ ಪರಿಣಾಮ ಜೂನ್‌ ತಿಂಗಳ ಅಂತರ್ಜಲ ಮಟ್ಟ ಕಳೆದ ನಾಲ್ಕು ವರ್ಷಗಳಲ್ಲಿಯೇ ಕನಿಷ್ಠ ಪ್ರಮಾಣದಲ್ಲಿದ್ದು, ರೈತರು ಆತಂಕಗೊಂಡಿದ್ದಾರೆ.

ಮುಂಗಾರು ಮತ್ತು ಪೂರ್ವ ಮುಂಗಾರು ಮಳೆಯಿಂದಾಗಿ ಮೇ ಅಥವಾ ಜೂನ್‌ ತಿಂಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚುವುದು ವಾಡಿಕೆ. ಪ್ರಸಕ್ತ ವರ್ಷ ಜಲಮೂಲಗಳಿಗೆ ನೀರು ಹರಿದುಬರದೇ ಇರುವುದರಿಂದ ಜುಲೈ ತಿಂಗಳಿಗೆ ಪದಾರ್ಪಣೆ ಮಾಡಿದರೂ ಅಂತರ್ಜಲ ಮಟ್ಟದಲ್ಲಿ ಚೇತರಿಕೆ ಕಂಡುಬಂದಿಲ್ಲ. ಅಂತರ್ಜಲ ಮಟ್ಟ ಪರೀಕ್ಷೆಗೆ ಜಿಲ್ಲೆಯಲ್ಲಿ ನಿಗದಿಪಡಿಸಿದ 56 ಕೇಂದ್ರಗಳ ವರದಿ ಕಳವಳಕಾರಿಯಾಗಿದೆ.

ಪೂರ್ವ ಮುಂಗಾರಿನಲ್ಲಿ ಸುರಿಯುತ್ತಿದ್ದ ಮಳೆಗೆ ಕೆರೆ, ಕಟ್ಟೆ, ಕುಂಟೆ, ಚೆಕ್‌ಡ್ಯಾಂ ಸೇರಿ ಜಲಮೂಲಗಳಿಗೆ ನೀರು ಹರಿದು ಬರುತ್ತಿತ್ತು. ತಿಂಗಳು ಕಾಲ ನೀರು ನಿಲುಗಡೆಯಾಗಿ ಅಂತರ್ಜಲಮಟ್ಟ ಹೆಚ್ಚಳವಾಗುತ್ತಿತ್ತು. ಪ್ರಸಕ್ತ ವರ್ಷ ಜಲಮೂಲಗಳಿಗೆ ನೀರು ಹರಿದುಬರುವಂತಹ ಮಳೆ ಜಿಲ್ಲೆಯಲ್ಲಿ ಸುರಿದಿಲ್ಲ. ಜಲಮೂಲಗಳು ಖಾಲಿ ಇರುವುದರಿಂದ ಹಾಗೂ ಸೋನೆಯಂತಹ ಮಳೆ ಸುರಿಯದೇ ಇರುವುದರಿಂದ ಕೊಳವೆಬಾವಿಗಳಲ್ಲಿ ನೀರು ಮೇಲಕ್ಕೆ ಬರುತ್ತಿಲ್ಲ.

‘ತುಂತುರು ಮತ್ತು ಸಾಧಾರಣ ಮಳೆ ಬರುತ್ತಿರುವುದರಿಂದ ಭೂಮಿ ಹಸಿಯಾಗುತ್ತಿದೆ. ಗಾಳಿ ಮತ್ತು ಬಿಸಿಲಿಗೆ ಮತ್ತೆ ಒಣಗುತ್ತಿದೆ. ಬಿತ್ತನೆ ಮಾಡಿದ ಬೆಳೆಗೆ ಹದವಾಗುತ್ತಿದೆ. ಆದರೆ, ಅಂತರ್ಜಲ ಮರುಪೂರಣವಾಗುತ್ತಿಲ್ಲ. ಕೊಳವೆಬಾವಿ ಮೋಟಾರು ಸ್ಥಗಿತಗೊಳಿಸಿದ ಪರಿಣಾಮವಾಗಿ ಮೇ ತಿಂಗಳಿಗಿಂತ ಜೂನ್‌ನಲ್ಲಿ ಅಂತರ್ಜಲಮಟ್ಟ ಸುಧಾರಿಸಿದಂತೆ ಕಾಣುತ್ತಿದೆ. ಆದರೆ, ಹಿಂದಿನ ನಾಲ್ಕು ವರ್ಷಕ್ಕೆ ಹೋಲಿಸಿದರೆ ಜೂನ್‌ ತಿಂಗಳಲ್ಲಿ ಕಡಿಮೆ ನೀರಿನ ಮಟ್ಟವಿದೆ’ ಎನ್ನುತ್ತಾರೆ ಅಂತರ್ಜಲ ಇಲಾಖೆಯ ಹಿರಿಯ ಭೂವಿಜ್ಞಾನಿ ಆರ್‌.ಬಸವರಾಜ್‌

ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಚನ್ನಗಿರಿ ಮತ್ತು ಜಗಳೂರು ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಪಾತಾಳದಲ್ಲಿದೆ. ಚನ್ನಗಿರಿ ತಾಲ್ಲೂಕಿನಲ್ಲಿ ಕೊಳವೆಬಾವಿ ಸಂಖ್ಯೆ ಹೆಚ್ಚಿದ್ದು, ಅಂತರ್ಜಲದ ಮೇಲಿನ ಅವಲಂಬನೆ ವಿಪರೀತವಾಗಿದೆ. ಮಳೆಯ ಕೊರತೆಯ ಕಾರಣಕ್ಕೆ ಜಗಳೂರು ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕಡಿಮೆ ಇದೆ. ನೀರಾವರಿ ಸೌಲಭ್ಯ ಹೊಂದಿದ ಹೊನ್ನಾಳಿ, ನ್ಯಾಮತಿ, ಹರಿಹರ ಹಾಗೂ ದಾವಣಗೆರೆ ತಾಲ್ಲೂಕುಗಳಲ್ಲಿ ಅಂತರ್ಜಲಮಟ್ಟದಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ.

‘ನದಿ ಮೂಲಗಳಿಂದ ಕೆರೆ ತುಂಬಿಸುವ ಯೋಜನೆ ರೂಪಿಸಿರುವುದು ಭರವಸೆ ಮೂಡಿಸಿದೆ. ನದಿ ನೀರನ್ನು ಕರೆಗಳಿಗೆ ಹರಿಸಿದರೆ ಅಂತರ್ಜಲಮಟ್ಟಕ್ಕೆ ಅನುಕೂಲವಾಗಲಿದೆ. ವರುಣ ಕೃಪೆ ತೋರಿದರೆ ಅಂತರ್ಜಲಮಟ್ಟ ವೃದ್ಧಿಸುವ ಆಶಾಭಾವನೆ ಇದೆ’ ಎಂಬುದು ಬಸವರಾಜ್‌ ಅವರ ಅಭಿಪ್ರಾಯ.

ಜುಲೈ ತಿಂಗಳಲ್ಲಿ ಉತ್ತಮ ಮಳೆ ಬೀಳುವ ಮುನ್ಸೂಚನೆ ಇದೆ. ವಾಡಿಕೆ ಮಳೆ ಸುರಿದರೆ ಅಂತರ್ಜಲ ಮಟ್ಟ ಹೆಚ್ಚುವ ಸಾಧ್ಯತೆ ಇದೆ. ರೈತರು ಆತಂಕಪಡುವ ಅಗತ್ಯವಿಲ್ಲ.

-ಆರ್‌.ಬಸವರಾಜ್‌ ಹಿರಿಯ ಭೂವಿಜ್ಞಾನಿ ಅಂತರ್ಜಲ ಇಲಾಖೆ

ಜೂನ್‌ ತಿಂಗಳ ಅಂತರ್ಜಲ ಮಟ್ಟ (ಮೀಟರ್‌ಗಳಲ್ಲಿ) ತಾಲ್ಲೂಕು;2021;2022;2023;2024 ದಾವಣಗೆರೆ;8.09;5.75;11.90;15.03 ಹರಿಹರ;4.71;2.90;6.69;7.89 ಚನ್ನಗಿರಿ;6.86;4.69;8.63;16.94 ಹೊನ್ನಾಳಿ;2.74;2.66;4.42;4.29 ನ್ಯಾಮತಿ;12.08;5.73;12.67;17.09 ಜಗಳೂರು;19.77;12.85;15.64;24.65

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT