ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡ–ಮರಗಳಿಗೆ ರೂಪ ನೀಡುವ ಗುಡ್ಡಪ್ಪ

Last Updated 14 ಜನವರಿ 2019, 7:00 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಗಾಜಿನಮನೆಗೆ ಹೋಗುತ್ತಿದ್ದಂತೆ ವಿವಿಧ ಆಕಾರಗಳನ್ನು ಪಡೆದ ವಿದೇಶಿ ಗಿಡ–ಮರಗಳು ಕಣ್ಮನ ಸೆಳೆಯುತ್ತಿವೆ. ಇಲ್ಲಿಗೆ ಭೇಟಿ ನೀಡಿದ ಯುವಕ–ಯುವತಿಯರು ಇವುಗಳ ಎದುರು ನಿಂತು ‘ಸೆಲ್ಫಿ’ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಗಿಡಗಳಿಗೆ ಸುಂದರ ರೂಪ ಯಾರು ಕೊಡುತ್ತಿದ್ದಾರಪ್ಪ ಎಂದು ಅತ್ತಿತ್ತ ಕಣ್ಣು ಹಾಯಿಸಿದರೆ ಯಾವುದೋ ಮೂಲೆಯಲ್ಲಿ ಉದ್ದನೆಯ ಕತ್ತರಿ ಹಿಡಿದು ಕಚ–ಕಚನೆ ಗಿಡಗಳನ್ನು ಕತ್ತರಿಸುತ್ತಿರುವ ಗುಡ್ಡಪ್ಪ ನೀಲಪ್ಪ ಗೊರವರ ಕಾಣಿಸಿಕೊಳ್ಳುತ್ತಾರೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಬುಳ್ಳಾಪುರ ಗ್ರಾಮದ ಗುಡ್ಡಪ್ಪ ಅವರಿಗೆ ಹುಟ್ಟಿನಿಂದಲೇ ಸೀಳುತುಟಿ ಸಮಸ್ಯೆ ಕಾಡುತ್ತಿದೆ. ಹತ್ತು ವರ್ಷಗಳ ಕಾಲ ಗಾರ್ಡನಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅವರು ಗಿಡಗಳಿಗೆ ವಿವಿಧ ಆಕಾರ ನೀಡುವುದಲ್ಲಿ ಪ್ರಾವಿಣ್ಯತೆ ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ತಾವು ಸಾಗಿ ಬಂದ ಹಾದಿ ಹಾಗೂ ಅನುಭವಗಳನ್ನು ತೊದಲುತ್ತಲೇ ‘ಪ್ರಜಾವಾಣಿ’ ಜೊತೆಗೆ ಅವರು ಹಂಚಿಕೊಂಡರು.

* ನೀವು ಗಾರ್ಡನಿಂಗ್‌ ಕ್ಷೇತ್ರಕ್ಕೆ ಹೇಗೆ ಬಂದಿರಿ?

ಬಡತನದಿಂದಾಗಿ ಎಸ್‌.ಎಸ್‌.ಎಲ್‌.ಸಿ ನಂತರ ಓದು ಮುಂದುವರಿಸಲು ಸಾಧ್ಯವಾಗಲಿಲ್ಲ. ಊರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ 2006ರಲ್ಲಿ ತೋಟಗಾರಿಕೆ ಇಲಾಖೆಯು ಬೆಂಗಳೂರಿನಲ್ಲಿ ಅಂಗವಿಕಲರಿಗಾಗಿ ಹಮ್ಮಿಕೊಂಡಿದ್ದ 9 ತಿಂಗಳ ಗಾರ್ಡನಿಂಗ್‌ ತರಬೇತಿಗೆ ಆಯ್ಕೆಯಾದೆ. ತರಬೇತಿಯ ಬಳಿಕ ಬೆಂಗಳೂರಿನ ಯು.ಟಿ.ಸಿ ಏರೋಸ್ಪೇಸ್‌ ಸಿಸ್ಟಮ್ಸ್‌ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸವೂ ಸಿಕ್ಕಿತು. ಆಗ ತಿಂಗಳಿಗೆ ₹ 1,000 ಸಂಬಳ ಕೊಡುತ್ತಿದ್ದರು. ಉದ್ಯಾನವನ್ನು ಉತ್ತಮವಾಗಿ ನಿರ್ವಹಣೆ ಮಾಡಿದ್ದನ್ನು ಕಂಡು ಕಂಪನಿಯವರು ಐದು ವರ್ಷಗಳ ಬಳಿಕ ₹ 5,000 ಸಂಬಳ ಕೊಡತೊಡಗಿದರು.

* ಇಂಥ ಕುಶಲಕರ್ಮಿಗಳಿಗೆ ಬೆಂಗಳೂರಿನಲ್ಲಿ ಬೇಡಿಕೆ ಇದ್ದರೂ ಊರಿಗೆ ಏಕೆ ವಾಪಸ್‌ ಬಂದೀರಿ?

ಬೆಂಗಳೂರಿನ ಹವಾಗುಣಕ್ಕೆ ಒಗ್ಗಿಕೊಳ್ಳದೇ ಹೆಂಡತಿ–ಮಕ್ಕಳಲ್ಲಿ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಹೀಗಾಗಿ ಊರಿಗೆ ಮರಳಲು ನಿರ್ಧರಿಸಿದೆ. ಕಂಪನಿಯವರು ₹ 8,000ದಿಂದ ₹ 10,000ವರೆಗೂ ಸಂಬಳ ಕೊಡುವುದಾಗಿ ಭರವಸೆ ನೀಡಿದರು. ಆದರೆ, ಹೆಂಡತಿ–ಮಕ್ಕಳ ಬುದುಕೇ ಮುಖ್ಯ ಎಂದು ಬೆಂಗಳೂರನ್ನು ತೊರೆದೆ.

ಮಾಲಿ ಕೆಲಸ ಕೊಡುವಂತೆ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ ಕಚೇರಿಗೆ ಅಲೆದರೂ ಪ್ರಯೋಜನ ಆಗಲಿಲ್ಲ. ಹೀಗಾಗಿ ಮೂರು ವರ್ಷಗಳ ಕಾಲ ಊರಿನಲ್ಲಿ ಕೃಷಿ ಕೂಲಿ ಕೆಲಸ ಮಾಡಿದೆ. ಗಾಜಿನಮನೆಗೆ ವಿದೇಶಿ ಗಿಡಗಳನ್ನು ತಂದು ಹಾಕುತ್ತಿದ್ದಾರೆ ಎಂಬುದು ಗೊತ್ತಾಯಿತು. ನನ್ನ ಅನುಭವದ ಬಗ್ಗೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ವೇದಮೂರ್ತಿ ಅವರ ಬಳಿ ಹೇಳಿಕೊಂಡಾಗ ಕೆಲಸ ಕೊಟ್ಟರು.

* ನಿಮ್ಮ ನಿತ್ಯದ ದಿನಚರಿ ಹೇಗಿರುತ್ತದೆ?

40 ಕಿ.ಮೀ ದೂರದ ಬುಳ್ಳಾಪುರದಿಂದ ಬೆಳಿಗ್ಗೆ 8.30ಕ್ಕೆ ಹೊರಟು 9.30ಕ್ಕೆ ಗಾಜಿನಮನೆಗೆ ಬಂದು ಕೆಲಸ ಆರಂಭಿಸುತ್ತೇನೆ. ವಿದೇಶದಿಂದ ತಂದು ಹಾಕಿರುವ ಆಲಿವರ್‌ ಗಿಡ, ಪೈಕಸ್‌, ಡುನಾಲ್ಟಾ, ಬೋಗನ್‌ವಿಲ್‌, ಪೆಂಟಸ್‌ ಗಿಡಗಳಿಗೆ ಸುಂದರ ಆಕಾರ ನೀಡಲು ಎಲೆಗಳನ್ನು ಕತ್ತರಿಸುತ್ತೇನೆ. ಬಾಲ್‌, ಮೆಟ್ಟಿಲು, ಬಾಕ್ಸ್‌ ಸೇರಿ ಹಲವು ಶೇಪ್‌ಗಳನ್ನು ಮಾಡುತ್ತೇನೆ. ದಿನಕ್ಕೆ ಸುಮಾರು 20 ಗಿಡಗಳ ಎಲೆಗಳನ್ನು ಕತ್ತರಿಸುತ್ತೇನೆ. ಬಿಡುವಿನ ವೇಳೆಯಲ್ಲಿ ಹೂಗಿನ ಗಿಡಗಳ ಬೀಜಗಳನ್ನೂ ತಯಾರಿಸುತ್ತೇನೆ. ಸಂಜೆ 5.30ಕ್ಕೆ ಊರಿಗೆ ಹೊರಡುತ್ತೇನೆ.

* ಎಷ್ಟು ದಿನಗಳಿಗೆ ಗಿಡಗಳ ಎಲೆ ಕತ್ತರಿಸಬೇಕು?

ಪೈಕಸ್‌ ಗಿಡದ ಎಲೆಗಳನ್ನು 20 ದಿನಗಳಿಗೆ ಒಮ್ಮೆ ಕತ್ತರಿಸಬೇಕು. ಉಳಿದ ಗಿಡಗಳ ಎಲೆಗಳನ್ನು ತಿಂಗಳಿಗೆ ಒಮ್ಮೆ ಕತ್ತರಿಸಿದರೂ ಸಾಕು. ಇಲ್ಲಿ ಹಾಕಿರುವ ಮೆಕ್ಸಿಕನ್‌ ಹುಲ್ಲಿನ ಹಾಸನ್ನು ಮೂರು ತಿಂಗಳಿಗೆ ಒಮ್ಮೆ ಕತ್ತರಿಸಬೇಕು.

* ಗಿಡಗಳು ನವಿಲು, ಹೂಜಿಯಂತೆ ಕಾಣಲು ಏನು ಮಾಡುತ್ತೀರಿ?

ನಮಗೆ ಯಾವ ಮಾದರಿಯ ಆಕಾರ ಬೇಕೊ ಆ ಮಾದರಿಯಲ್ಲಿ ತಂತಿಗಳನ್ನು ಪೋಣಿಸಿ ಅದರ ನಡುವೆ ಗಿಡಗಳನ್ನು ಬೆಳೆಸುತ್ತೇವೆ. ಆರು ತಿಂಗಳು ಬೆಳೆದ ಬಳಿಕ ತಂತಿಯ ಆಕಾರಕ್ಕೆ ಹೊಂದಿಕೊಳ್ಳುವಂತೆ ಎಲೆಗಳನ್ನು ಕತ್ತಿರಿಸುತ್ತೇವೆ. ಎಲೆಗಳು ದಟ್ಟವಾಗಿ ಬೆಳೆಯುತ್ತಿದ್ದಂತೆ ಪ್ರಾಣಿ, ಪಕ್ಷಿಗಳ ರೂಪ ಪಡೆದುಕೊಳ್ಳುತ್ತದೆ.

* ಅಲಂಕಾರಿಕ ಗಿಡಗಳನ್ನು ಬೆಳೆಸಲು ಜನ ಏಕೆ ಆಸಕ್ತಿ ತೋರುತ್ತಿಲ್ಲ?

ಇಲ್ಲಿ ಹಾಕಿರುವ ಆಲಿವರ್‌, ಪೈಕಸ್‌ ಗಿಡಗಳು 10 ವರ್ಷಗಳಿಗಿಂತಲೂ ಹೆಚ್ಚಿನದ್ದಾಗಿವೆ. ಇಷ್ಟು ವರ್ಷಗಳ ಕಾಲ ಗಿಡಗಳನ್ನು ಬೆಳೆಸುವ ತಾಳ್ಮೆ ಹಾಗೂ ಹಣವನ್ನು ಖರ್ಚು ಮಾಡುವ ಮನಸ್ಸು ನಮ್ಮ ಜನರಲ್ಲಿ ಇಲ್ಲ. ಗಿಡಗಳ ನಿರ್ವಹಣೆಗೆ ಕೆಲಸಗಾರರೂ ಸಿಗುವುದಿಲ್ಲ. ಇದರಿಂದ ಆದಾಯ ಸಿಗುವುದಿಲ್ಲ ಎಂದು ಲೆಕ್ಕ ಹಾಕುತ್ತಾರೆ. ಆದರೆ, ಆಂಧ್ರಪ್ರದೇಶದಲ್ಲಿ ಕೆಲ ಕಂಪನಿಗಳು ಇಂಥ ವಿದೇಶಿ ಗಿಡಗಳನ್ನು ತಂದು ಬೆಳೆಸುವ ಮೂಲಕ ಹೆಚ್ಚಿನ ಬೆಲೆ ಮಾರಾಟ ಮಾಡುವ ಉದ್ಯಮವನ್ನೇ ಆರಂಭಿಸಿವೆ.

ಸಂಬಳ ಹೆಚ್ಚಿಸಿದರೆ ಅನುಕೂಲ

ಬೆಂಗಳೂರಿಗೆ ಹೋದರೆ ನನ್ನ ಕೆಲಸಕ್ಕೆ ₹ 15,000ಕ್ಕೂ ಹೆಚ್ಚು ಸಂಬಳ ಸಿಗುತ್ತದೆ. ಈಗ ಸದ್ಯ ತಿಂಗಳಿಗೆ ₹ 8 ಸಾವಿರ ಸಂಬಳ ಕೊಡುತ್ತಿದ್ದಾರೆ. ಇಂದಿನ ದುಬಾರಿ ಕಾಲದಲ್ಲಿ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಉದ್ಯಾನ ನಿರ್ವಹಣೆ ಮಾಡಲು ಬರುವಂತೆ ಎಂಜಿನಿಯರಿಂಗ್‌ ಕಾಲೇಜಿನವರೂ ಕೇಳಿಕೊಳ್ಳುತ್ತಿದ್ದಾರೆ. ಸ್ವಲ್ಪ ಸಂಬಳ ಹೆಚ್ಚಿಸಿದರೆ ಗಾಜಿನಮನೆಯಲ್ಲೇ ಕೆಲಸ ಮುಂದುವರಿಸುತ್ತೇನೆ. ಪ್ರವಾಸಿಗರು ಇಲ್ಲಿಗೆ ಬಂದು ಮೆಚ್ಚುಗೆಯ ಮಾತು ಹೇಳಿದಾಗ ಖುಷಿಯಾಗುತ್ತದೆ ಎನ್ನುತ್ತಾರೆ ಗುಡ್ಡಪ್ಪ ಗೊರವರ. ಸಂಪರ್ಕಕ್ಕೆಮೊಬೈಲ್‌: 95355 01319.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT