ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಅಂಗವೈಕಲ್ಯ ಮರೆತರು.. ಸಂಭ್ರಮದಲ್ಲಿ ತೇಲಿದರು..

Published 24 ನವೆಂಬರ್ 2023, 6:45 IST
Last Updated 24 ನವೆಂಬರ್ 2023, 6:45 IST
ಅಕ್ಷರ ಗಾತ್ರ

ದಾವಣಗೆರೆ: ಜಿಗಿದರು, ಓಡಿದರು, ನೋವುಗಳನ್ನು ಮರೆತು ಸಂಭ್ರಮದಲ್ಲಿ ತೇಲಿದರು. ‘ಎಲ್ಲರಂತೆ ಇರದಿದ್ದರೂ ನಾವೂ ಎಲ್ಲರಂತೆ ಉತ್ಸಾಹದಿಂದ ಬದುಕನ್ನು ಅನುಭವಿಸಬಲ್ಲೆವು..ನಾವು ಯಾರಿಗೂ ಕಡಿಮೆಯಿಲ್ಲ’ ಎಂದು ಉತ್ಸಾಹದಿಂದ ಪಾಲ್ಗೊಂಡ ಅಂಗವಿಕಲರು.

ಇದು ನಗರದ ಮೋತಿ ವೀರಪ್ಪ ಕಾಲೇಜಿನ ಮೈದಾನದಲ್ಲಿ ಗುರುವಾರ ಕಂಡುಬಂದ ದೃಶ್ಯಗಳು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ನಡೆದ ಅಂಗವಿಕಲರ ಕ್ರೀಡಾಕೂಟದಲ್ಲಿ ಅಂಗವಿಕಲರು ಉತ್ಸಾಹದಿಂದ ಪಾಲ್ಗೊಂಡರು.

ಎಲ್ಲದರಲ್ಲೂ ಜಯಶಾಲಿಯಾಗಬೇಕೆಂಬ ಅದಮ್ಯ ಬಯಕೆ ವ್ಯಕ್ತಪಡಿಸಿದರು. ದೈಹಿಕ ಅಂಗವೈಕಲ್ಯ ಅಧರಿಸಿ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ನಿಧಾನಗತಿಯ ಬೈಕ್‌ ರೇಸ್‌, ಶಾಟ್‌ಪಟ್‌, ಜಾವಲಿನ್‌ ಥ್ರೋ, ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಅಂಗವಿಕಲ ಮಹಿಳೆಯರು, ಪುರುಷರು ಉತ್ತಮ ಪ್ರದರ್ಶನ ನೀಡಿದರು.

ಸಂಪೂರ್ಣ ದೃಷ್ಟಿದೋಷವುಳ್ಳವರಿಗೆ ಮಡಕೆ ಒಡೆಯುವುದು, ಸಂಗೀತ ಕುರ್ಚಿ, ಶಾಟ್‌ಪಟ್‌, ಚೆಸ್‌, ಕೇರಂ ಸ್ಪರ್ಧೆಗಳು ನಡೆದವು.

ಭಾಗಶಃ ದೃಷ್ಟಿದೋಷವುಳ್ಳವರಿಗೆ 50 ಮೀ ಓಟ, ಶಾಟ್‌ಪಟ್‌, ಸಂಗೀತ ಕುರ್ಚಿ, ಚೆಸ್‌ ಸ್ಪರ್ಧೆಗಳು ನಡೆದವು.

ವಾಕ್‌ ಮತ್ತು ಶ್ರವಣದೋಷವುಳ್ಳವರಿಗೆ 100 ಮೀ ಓಟ, ಜಾವಲಿನ್‌ ಥ್ರೋ, ಶಾಟ‌್ಪಟ್‌, ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಚೆಸ್‌, ಗಾಲಿಕುರ್ಚಿ ಸ್ಪರ್ಧೆಗಳು ನಡೆದವು.

ಜಿಲ್ಲೆಯ ವಿವಿಧೆಡೆ ಅಂಗವಿಕಲ ಸ್ಪರ್ಧಿಗಳು ಭಾಗವಹಿಸಿದ್ದರು. ಅವರ ಸ್ನೇಹಿತರು, ಕುಟುಂಬದವರು, ಹಿತೈಷಿಗಳು ಅವರನ್ನು ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹಿಸಿದರು.

ಕ್ರೀಡಾಕೂಟ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಎಂ. ಕರೆಣ್ಣವರ, ‘ಕ್ರೀಡೆ ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಮನೆ, ಶಾಲಾ-ಕಾಲೇಜುಗಳಲ್ಲಿ ಹಾಗೂ ಕೆಲಸದ ಸ್ಥಳಗಳಲ್ಲಿ ಅಂಗವಿಕಲರನ್ನು ‌ಎಲ್ಲರಂತೆ ಸಮಾನವಾಗಿ ಕಾಣಬೇಕು’ ಎಂದು ಸಲಹೆ ನೀಡಿದರು.

ಕ್ರೀಡಾ ಸ್ಪೂರ್ತಿ ಪ್ರತಿಯೊಬ್ಬರಲ್ಲೂ ಇರಬೇಕು. ಇಲ್ಲವಾದರೆ ದೇಹ ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ದೈನಂದಿನ ಚಟುವಟಿಕೆಯಲ್ಲಿ ಕ್ರೀಡೆಯನ್ನು ಜೀವನದ ಒಂದು ಭಾಗವಾಗಿ ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯವಾಗಿರುತ್ತದೆ. ಅಂಗವಿಕಲರು ಎಂಬ ಕಾರಣಕ್ಕೆ ಅವರನ್ನು ಮನೆಯಿಂದ ಹೊರ ಹಾಕದೆ ಎಲ್ಲರಂತೆ ಸಮಾನವಾಗಿ ಕಾಣಬೇಕು ಎಂದು ಕಿವಿಮಾತು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೊಕೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಂಜುಳಾ ಎಂ.ಪಿ., ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಂಚಾಕ್ಷರಪ್ಪ ಎಸ್., ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಕೆ. ಪ್ರಕಾಶ್, ಸಿಬ್ಬಂದಿ ಎಸ್‌.ಕೆ. ಗಣೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT