ಸಮರೋಪಾದಿಯಲ್ಲಿ ಸಸಿ ಬೆಳೆಸಲು ಸೂಚನೆ

7
ಜಿಲ್ಲೆಯಲ್ಲಿ ‘ಹಸಿರು ಕರ್ನಾಟಕ’ ಅಭಿಯಾನಕ್ಕೆ ಇಂದು ಚಾಲನೆ

ಸಮರೋಪಾದಿಯಲ್ಲಿ ಸಸಿ ಬೆಳೆಸಲು ಸೂಚನೆ

Published:
Updated:
Deccan Herald

ದಾವಣಗೆರೆ: ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ ‘ಹಸಿರು ಕರ್ನಾಟಕ’ ಅಭಿಯಾನದಡಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮರೋಪಾದಿಯಲ್ಲಿ ಸಸಿ ನೆಟ್ಟು ಬೆಳೆಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ‘ಹಸಿರು ಕರ್ನಾಟಕ’ ಅಭಿಯಾನ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ನಗರದಲ್ಲಿ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌ (ವಾಸು) ಅವರು ಸ್ವಾತಂತ್ರ್ಯೋತ್ಸವ ದಿನವಾದ ಬುಧವಾರ (ಆ. 15) ಸಸಿ ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಆ. 15ರಿಂದ 18ರವರೆಗೆ ಈ ಅಭಿಯಾನ ನಡೆಸುವಂತೆ ಸರ್ಕಾರದಿಂದ ಆದೇಶ ಬಂದಿದೆ. ಸರ್ಕಾರದ ಪ್ರತಿ ಇಲಾಖೆಯಲ್ಲೂ ಸ್ವಾತಂತ್ರ್ಯೋತ್ಸವ ದಿನದಂದು ‘ಹಸಿರು ಕರ್ನಾಟಕ’ ಬ್ಯಾನರ್‌ನಡಿ ಕನಿಷ್ಠ 15 ಸಸಿಗಳನ್ನು ನೆಡಬೇಕು. ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಸಸಿ ನೆಡುವ ಮೂಲಕ ಮಕ್ಕಳಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ವಿಶೇಷವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ನಗರವನ್ನು ಸುಂದರಗೊಳಿಸಬೇಕು. ಜಿಲ್ಲೆಯ 233 ಗ್ರಾಮ ಪಂಚಾಯಿತಿಗಳಲ್ಲೂ ಬುಧವಾರ ಸಸಿ ನೆಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವದ ಪ್ರಭಾತ ಫೇರಿ ಮಾಡುವಾಗ ‘ಹಸಿರು ಕರ್ನಾಟಕ’ದ ಬ್ಯಾನರ್‌ ಹಿಡಿದು ಸಾಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ ಸುಂಕದ, ‘ಎಸ್‌.ಎಸ್‌. ಬಡಾವಣೆಯಲ್ಲಿ 900 ಸಸಿಗಳನ್ನು ನೆಡುವ ಮೂಲಕ ಮಾದರಿ ಬಡಾವಣೆಯನ್ನಾಗಿ ರೂಪಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಸ್ಥಳೀಯರ ಸಹಕಾರ ಪಡೆದು ಸಸಿ ಬೆಳೆಸಲಾಗುವುದು’ ಎಂದರು.

ವಿವಿಧ ಜಾತಿಯ ಬಿಜಗಳನ್ನು ಶಾಲಾ– ಕಾಲೇಜುಗಳಿಗೆ ನೀಡಿ ಬೀಜದುಂಡೆ ತಯಾರಿಸಿ ಬಿತ್ತನೆ ಮಾಡಲು ಕ್ರಮ ಕೈಗೊಳ್ಳಬೇಕು. ‘ಹಸಿರು ಕರ್ನಾಟಕ’ ಅಭಿಯಾನದ ಸ್ಟಿಕರ್‌ಗಳನ್ನು ಮಹಾನಗರ ಪಾಲಿಕೆಯ ವಾಹನಗಳಿಗೆ ಅಂಟಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ನಗರದಲ್ಲಿ ಹಣ್ಣುವ ನೀಡುವ ಗಿಡ ಹಾಕಿದರೆ ನಾಗರಿಕರಿಗೂ ಅನುಕೂಲವಾಗಲಿದೆ’ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಉಪ ವಲಯ ಅರಣ್ಯಾಧಿಕಾರಿ ಚಂದ್ರಶೇಖರ್‌ ನಾಯ್ಕ, ಉಪ ವಲಯ ಅರಣ್ಯಾಧಿಕಾರಿ (ಸಾಮಾಜಿಕ ವಿಭಾಗ) ಎನ್‌.ಬಿ. ಮಂಜುನಾಥ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಸವನಗೌಡ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಶಿವಪ್ರಸಾದ್‌, ಡಿಡಿಪಿಐ ಪರಮೇಶ್ವರ ಅವರೂ ಇದ್ದರು.

ಹಸಿರು ಜಾಗೃತಿಗಾಗಿ ಅಭಿಯಾನ

ಹಸಿರು ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಸಿರು ಕರ್ನಾಟಕ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 10 ಸಾವಿರ ಸಸಿ ಲಭ್ಯವಿದೆ. ಈ ಅಭಿಯಾನದಡಿ ಜನರಿಗೆ ಉಚಿತವಾಗಿ ಸಸಿ ವಿತರಿಸಲಾಗುವುದು ಎಂದು ಉಪ ವಲಯ ಅರಣ್ಯಾಧಿಕಾರಿ (ಸಾಮಾಜಿಕ ವಿಭಾಗ) ಎನ್‌.ಬಿ. ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಫಾರೆಸ್ಟ್‌ ಸರ್ವೆ ಆಫ್‌ ಇಂಡಿಯಾ ವರದಿ ಪ್ರಕಾರ ಜಿಲ್ಲೆಯಲ್ಲಿ 1,170 ಹೆಕ್ಟೇರ್‌ ಹಸಿರ ಹೊದಿಕೆ ಹೆಚ್ಚಾಗಿದೆ. ಇದು ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸಸಿ ನೆಡುತ್ತಿರುವುದರ ಫಲವಾಗಿದೆ. ನೆಲ್ಲಿ, ಹಿಪ್ಪೆ, ಹಲಸು, ಹೆಬ್ಬೇವು, ಬೇವು, ಹುಣಸೆ, ಶ್ರೀಗಂಧ, ಅರಳಿ, ಆಲ, ಹೊಂಗೆ ತಳಿಯ ಸುಮಾರು 500 ಕೆ.ಜಿ. ಬೀಜ ನಮ್ಮ ಬಳಿ ಲಭ್ಯವಿದೆ. ಇವುಗಳನ್ನು ಶಾಲೆ– ಕಾಲೇಜುಗಳಿಗೆ ವಿತರಿಸಿ ಬೀಜದುಂಡೆ ತಯಾರಿಸಿ ಬಿತ್ತನೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

6.73 ಲಕ್ಷ ಜಿಲ್ಲೆಯಲ್ಲಿ ಈ ಬಾರಿ ತಯಾರಿಸಿದ ಸಸಿಗಳು

6.50 ಲಕ್ಷ ಜಿಲ್ಲೆಯಲ್ಲಿ ಈ ಬಾರಿ ವಿತರಿಸಿದ ಸಸಿ

1,170 ಹೆಕ್ಟೇರ್‌ ಜಿಲ್ಲೆಯಲ್ಲಿ ಹೆಚ್ಚಿರುವ ಹಸಿರು ಹೊದಿಕೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !