ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಕೆಸರುಮಯ: ಬೈಕ್ ಸವಾರರಿಗೆ ಅಪಾಯ

ನಿದ್ರೆಗೆ ಜಾರಿದ ಸಾರಿಗೆ ಇಲಾಖೆ: ಸಾರಥಿ, ಗಂಗನರಸಿ ಗ್ರಾಮಸ್ಥರ ಆಕ್ರೋಶ
Published 8 ಸೆಪ್ಟೆಂಬರ್ 2023, 5:29 IST
Last Updated 8 ಸೆಪ್ಟೆಂಬರ್ 2023, 5:29 IST
ಅಕ್ಷರ ಗಾತ್ರ

ಹರಿಹರ: ಅವೈಜ್ಞಾನಿಕ ಕಾಮಗಾರಿ ಹಾಗೂ ಕಳಪೆ ನಿರ್ವಹಣೆಯಿಂದ ನಗರದ ಹೊರವಲಯದಲ್ಲಿ ಹರಪನಹಳ್ಳಿ ಕಡೆಗೆ ಹೋಗುವ ಹೊಸಪೇಟೆ– ಶಿವಮೊಗ್ಗ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಕೆಪಿಟಿಸಿಎಲ್ ಗ್ರಿಡ್‌ನಿಂದ ಮುಂದೆ ಮಂದಾರ ಹಳ್ಳದ ಸೇತುವೆ ದಾಟಿದ ನಂತರ ಹೆದ್ದಾರಿಯ ಆ ಭಾಗದ ರಸ್ತೆ ತುಂಬಾ ಕೆಸರುಮಯವಾಗಿದೆ.

ಮೂರ್ನಾಲ್ಕು ದಿನಗಳಿಂದ ಬರುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಡಾಂಬರ್‌ ರಸ್ತೆ ಮೇಲಿನ ಹುಡಿ ಮಣ್ಣು ತೆಳ್ಳನೆ ಕೆಸರಿನ ರೂಪ ಪಡೆದಿದ್ದು,  ನೂರಾರು ಅಡಿಗಳ ಉದ್ದಕ್ಕೆ ಹರಡಿದೆ. ನಾಲ್ಕು ಚಕ್ರದ ವಾಹನಗಳು ಹೇಗೋ ಸಂಚರಿಸುತ್ತಿವೆ. ಆದರೆ, ದ್ವಿಚಕ್ರವಾಹನ ಸವಾರರು ಮಾತ್ರ ಕೆಸರಿನ ಅರಿವಿಲ್ಲದೆ ಎದ್ದು, ಬಿದ್ದೂ ಸಾಗುತ್ತಿದ್ದಾರೆ.

ಹೆದ್ದಾರಿ ಉತ್ತಮವಾಗಿರುವ ಕಡೆಯಿಂದ ವೇಗವಾಗಿ ಬರುವ ಬೈಕ್ ಸವಾರರು ಹತ್ತಿರಕ್ಕೆ ಬಂದಾಗ ಇಲ್ಲಿ ಹರಿಡಿರುವ ಕೆಸರು ಕಾಣುತ್ತದೆ. ವೇಗ ತಗ್ಗಿಸುವಷ್ಟರಲ್ಲಿ ಬೈಕ್ ಸಮೇತ ಕೆಳಗೆ ಬೀಳುತ್ತಿದ್ದಾರೆ. ಕೆಲವರ ಕೈ, ಕಾಲುಗಳಿಗೆ ಏಟು ಬಿದ್ದರೆ ಇನ್ನೂ ಕೆಲವರ ತಲೆ, ಸೊಂಟಕ್ಕೆ ಏಟು ಬೀಳುತ್ತಿದೆ. ಹಿಂಭಾಗದಲ್ಲಿ ಮಹಿಳೆಯರನ್ನು ಕೂರಿಸಿಕೊಂಡವರ ಪಾಡು ಹೇಳತೀರದು.

ಸಾರಥಿ, ಗಂಗನರಸಿ ಗ್ರಾಮಗಳ ಕೆಲ ಗ್ರಾಮಸ್ಥರು ಆ ಪ್ರದೇಶದಲ್ಲಿ ಕೆಲವು ಸಮಯ ನಿಂತು ಬೈಕ್‌ನಲ್ಲಿ ಬರುವವರಿಗೆ ಸನ್ನೆ ಮಾಡಿ ಪಕ್ಕಕ್ಕೆ ಅಥವಾ ನಿಧಾನವಾಗಿ ಚಲಿಸುವಂತೆ ಎಚ್ಚರಿಕೆ ಕೊಡುತ್ತಿದ್ದಾರೆ. ಹೆದ್ದಾರಿ ಆಗಿರುವುದರಿಂದ ಭಾರಿ ವಾಹನಗಳ ಸಂಚಾರ ಅಧಿಕವಾಗಿರುತ್ತದೆ. ಬೈಕ್‌ನಿಂದ ಜಾರಿ ಬಿದ್ದವರು ಹಿಂದೆ ಅಥವಾ ಮುಂದೆ ಬರುವ ಭಾರಿ ವಾಹನಗಳಿಗೆ ಬಲಿಯಾಗುವ ಅಪಾಯ ಹೆಚ್ಚಾಗಿದೆ.

ಮಣ್ಣು ಸಾಗಣೆ ಲಾರಿಗಳು ಕಾರಣ: ಸಾರಥಿ, ಚಿಕ್ಕಬಿದರಿ, ಕುರುಬರಹಳ್ಳಿ ಹಾಗೂ ಸುತ್ತಲಿನ ನದಿ ದಡ, ಜಮೀನುಗಳಲ್ಲಿ ಕೆಲವರು ಗಣಿಗಾರಿಕೆ ಮಾಡಿ ಲಾರಿಗಳಲ್ಲಿ ಕೆಂಪು ಮತ್ತು ಕಪ್ಪು ಮಣ್ಣು ಸಾಗಣೆ ಮಾಡುತ್ತಿದ್ದಾರೆ. ಇಂತಹ ಲಾರಿಗಳಿಂದ ರಸ್ತೆ ಮೇಲೆ ಉದುರುವ ಮಣ್ಣು ಮಳೆ ನೀರಿನೊಂದಿಗೆ ಸೇರಿ ಕೆಸರಿನ ರೂಪ ಪಡೆದಿರಬಹುದು ಎಂಬುದು ಗ್ರಾಮಸ್ಥರು ದೂರು.

ಮಣ್ಣನ್ನು ಲಾರಿಗೆ ಲೋಡ್‌ ಮಾಡುವಾಗಲೇ ರಸ್ತೆಯ ದಡಕಿಗೆ ಮಣ್ಣು ಕೆಳಗೆ ಉದುರದಂತೆ ಲೋಡ್ ಮಾಡಬೇಕು ಅಥವಾ ಮಣ್ಣು ಉದುರದಂತೆ ತಾಡಪಾಲುಗಳ ಬಳಕೆ ಮಾಡಿದರೆ ವಾಹನ ಸವಾರರಿಗೆ ಅಪಾಯ ತಪ್ಪುತ್ತದೆ ಎಂದು ಸಾರಥಿ ಹಾಗೂ ಗಂಗನರಸಿ ಗ್ರಾಮಸ್ಥರು ಹೇಳುತ್ತಾರೆ.

‘ಮಣ್ಣು ಸಾಗಣೆ ಮಾಡುವ ಲಾರಿ, ಟ್ಯ್ರಾಕ್ಟರ್‌ಗಳ ಮೇಲೆ ಕಡ್ಡಾಯವಾಗಿ ತಾಡಪಾಲುಗಳನ್ನು ಅಳವಡಿಸಬೇಕು ಹಾಗೂ ನಿಗದಿಗಿಂತ ಹೆಚ್ಚಿನ ಪ್ರಮಾಣದ ಮಣ್ಣನ್ನು ಲೋಡ್ ಮಾಡಬಾರದು. ಇದನ್ನು ಗಮನಿಸಬೇಕಾದ ಆರ್‌ಟಿಒ ಕಚೇರಿ ಅಧಿಕಾರಿ, ಸಿಬ್ಬಂದಿ ಹರಿಹರವನ್ನು ಮರೆತುಬಿಟ್ಟಿದ್ದಾರೆ’ ಎಂದು ಹರಿಹರದ ನಿವಾಸಿ ಹನುಮಂತಪ್ಪ ಆರೋಪಿಸುತ್ತಾರೆ.

ಮಂದಾರ ಹಳ್ಳದ ಸೇತುವೆ ಸಮೀಪ ಕೆಸರುಮಯವಾಗಿರುವ ರಸ್ತೆಯಲ್ಲಿ ಜಾರಿ ಬಿದ್ದವರನ್ನು ಎತ್ತಿ ಸಂತೈಸುತ್ತಿರುವ ಸಾರಥಿ ಗ್ರಾಮಸ್ಥರು
ಮಂದಾರ ಹಳ್ಳದ ಸೇತುವೆ ಸಮೀಪ ಕೆಸರುಮಯವಾಗಿರುವ ರಸ್ತೆಯಲ್ಲಿ ಜಾರಿ ಬಿದ್ದವರನ್ನು ಎತ್ತಿ ಸಂತೈಸುತ್ತಿರುವ ಸಾರಥಿ ಗ್ರಾಮಸ್ಥರು

ಹರಿಹರದ ಹೊಸಪೇಟೆ– ಶಿವಮೊಗ್ಗ ಹೆದ್ದಾರಿಯಲ್ಲಿ ವಾಹನಗಳ ತಪಾಸಣೆಗೆ ಒಂದು ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುವುದು.

-ಶ್ರೀಧರ್ ಬಲ್ಲಾಳ್ ಪ್ರಾದೇಶಿಕ ಸಾರಿಗೆ ಅಧಿಕಾರಿ ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT