ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಂಗಾರ್ಡ್‌ಗಳು ಪೊಲೀಸರ ಬೆನ್ನೆಲುಬು

ಗೃಹರಕ್ಷಕದಳ ದಿನಾಚರಣೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್. ಚೇತನ್‌
Last Updated 19 ಡಿಸೆಂಬರ್ 2018, 12:32 IST
ಅಕ್ಷರ ಗಾತ್ರ

ದಾವಣಗೆರೆ: ಶಾಂತಿ ಸ್ಥಾಪನೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿರುವ ಗೃಹರಕ್ಷಕದಳದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್. ಚೇತನ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿನ ಡಿಎಆರ್‌ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಆಂತರಿಕ ಭದ್ರತೆಯಲ್ಲಿ ಗೃಹರಕ್ಷಕದಳದ ಸಿಬ್ಬಂದಿ ಸೇವಾ ಮನೋಭಾವದಿಂದ ಮಾಡುತ್ತಿರುವ ಕೆಲಸದಿಂದಾಗಿ ಪೊಲೀಸ್‌ ಇಲಾಖೆಗೆ ಸಾಕಷ್ಟು ನೆರವಾಗಿದೆ. ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಲು, ಹಬ್ಬ–ಹರಿದಿನಗಳಲ್ಲಿ ಶಾಂತಿ ಕಾಪಾಡುವಲ್ಲಿ ಗೃಹರಕ್ಷಕದ ದಳದ ಪಾತ್ರ ಹಿರಿದಾಗಿದೆ ಎಂದರು.

1946ರಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಮುಂಬೈನಲ್ಲಿ ಮೊದಲ ಬಾರಿಗೆ ಗೃಹರಕ್ಷಕ ದಳದ ಸೇವೆ ಬಳಸಿಕೊಳ್ಳಲಾಯಿತು. 1962ರಲ್ಲಿ ನಡೆದ ಚೀನಾ ಮೇಲಿನ ಯುದ್ಧದಲ್ಲೂ ಗೃಹರಕ್ಷಕ ಸಿಬ್ಬಂದಿ ಉತ್ತಮ ಕೆಲಸ ಮಾಡಿದರು. ಇದನ್ನು ಮನಗಂಡು ಆ ನಂತರ ಗೃಹರಕ್ಷಕ ದಳವನ್ನು ರಾಷ್ಟ್ರದಾದ್ಯಂತ ಸ್ಥಾಪಿಸಲಾಯಿತು. ಇದೀಗ ಗೃಹರಕ್ಷಕ ಸಿಬ್ಬಂದಿಯ ಸೇವೆಯನ್ನು ವೃತ್ತಿಪರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಗೃಹರಕ್ಷಕ ದಳದ ದಿನದರ್ಶಿಕೆ ಬಿಡುಗಡೆ ಮಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ, ‘ಕಾನೂನು ಸುವ್ಯವಸ್ಥೆ ಕಾಪಾಡಲು ಜೀವದ ಹಂಗು ತೊರೆದು ಹೋಂಗಾರ್ಡ್‌ಗಳು ದುಡಿಯುತ್ತಾರೆ. ಅವರ ಸೇವಾ ಮನೋಭಾವ ಶ್ರೇಷ್ಠವಾದದ್ದು. ಪೊಲೀಸ್‌ ಇಲಾಖೆ, ಗೃಹರಕ್ಷಕ ದಳದಲ್ಲಿರುವ ಶಿಸ್ತು ಎಲ್ಲಾ ಇಲಾಖೆಗಳಿಗೂ ಮಾದರಿ. ಇಂಥ ಶಿಸ್ತು ಎಲ್ಲೆಡೆ ಪಾಲನೆಯಾದರೆ ದೇಶ ಅಭಿವೃದ್ಧಿ ಹೊಂದುತ್ತದೆ’ ಎಂದರು.

ನಿವೃತ್ತರಾದ ಹೋಂಗಾರ್ಡ್‌ಗಳನ್ನು ಗೌರವಿಸಲಾಯಿತು. ಉತ್ತಮ ಸೇವೆ ಸಲ್ಲಿಸಿದ, ವಿವಿಧ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಹೋಂಗಾರ್ಡ್‌ಗಳನ್ನು ಸನ್ಮಾನಿಸಲಾಯಿತು.

ಹೋಂಗಾರ್ಡ್‌ ಜಗಳೂರು ಘಟಕಾಧಿಕಾರಿ ಬಿ.ಎಸ್‌. ಹಾಲೇಶಪ್ಪ ವಾರ್ಷಿಕ ವರದಿ ವಾಚನಮಾಡಿದರು.

* *

‘ಪ್ರಾದೇಶಿಕ ಕೇಂದ್ರ ಉದ್ಘಾಟನೆಯಾಗಲಿ’

‘ಹರಿಹರ ತಾಲ್ಲೂಕು ದೇವರಬೆಳಕೆರೆಯ 10 ಎಕರೆ ಜಾಗದಲ್ಲಿ ಗೃಹರಕ್ಷಕದಳದ ಪ್ರಾದೇಶಿಕ ಕೇಂದ್ರ ನಿರ್ಮಾಣಗೊಂಡಿದೆ. ಮೂರು ಕಟ್ಟಡಗಳು, ಮೈದಾನ ಸಿದ್ಧಗೊಂಡಿದೆ. ಆದರೆ, 21 ಹುದ್ದೆಗಳನ್ನು ಮಂಜೂರು ಮಾಡದ ಕಾರಣ ಪ್ರಾದೇಶಿಕ ಕೇಂದ್ರದ ಉದ್ಘಾಟನೆ ಇನ್ನೂ ಆಗಿಲ್ಲ’ ಎಂದು ಗೃಹರಕ್ಷಕದಳದ ಸಮಾದೇಷ್ಟ ಡಾ. ಬಿ.ಎಚ್‌. ವೀರಪ್ಪ ಬೇಸರ ವ್ಯಕ್ತಪಡಿಸಿದರು.

ಗೃಹರಕ್ಷಕದಳದ ಪ್ರಾದೇಶಿಕ ಕೇಂದ್ರದ ಕಟ್ಟಡ ಹಾಗೂ ಸ್ಥಳವನ್ನು ವಶಕ್ಕೆ ಪಡೆಯಲು ಮೀನುಗಾರಿಕೆ ಇಲಾಖೆ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಡದೇ ಪ್ರಾದೇಶಿಕ ಕೇಂದ್ರದ ಉದ್ಘಾಟನೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಬೇಕು. ಕಟ್ಟಡವನ್ನು ಗೃಹರಕ್ಷಕದಳಕ್ಕೆ ಹಸ್ತಾಂತರಿಸಲು ಎಸ್‌ಪಿ ಅವರು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

* * *

ಅಂಕಿ ಅಂಶಗಳು

‌800 ಹುದ್ದೆ - ಜಿಲ್ಲೆಯ ಗೃಹರಕ್ಷಕದಳಕ್ಕೆ ಮಂಜೂರು

676 ಮಂದಿ - ನೇಮಕಗೊಂಡಿರುವ ಹೋಂಗಾರ್ಡ್‌ಗಳು

174 ಜನ ಸೇವೆಯಲ್ಲಿ ನಿಷ್ಕ್ರಿಯರಾಗಿರುವವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT