ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ದೊಡ್ಡದಿದ್ದರೆ ಸಾಧನೆಯೂ ಹಿರಿದಾಗುವುದು: ಡಾ. ಭೀಮರಾಯ ಮೇತ್ರಿ

Last Updated 13 ಏಪ್ರಿಲ್ 2019, 14:02 IST
ಅಕ್ಷರ ಗಾತ್ರ

ದಾವಣಗೆರೆ: ಸಣ್ಣ ಗುರಿ ಇಟ್ಟುಕೊಂಡಾಗ ಸಾಧನೆಯೂ ಅದೇ ಮಟ್ಟದಲ್ಲಿ ಇರುತ್ತದೆ. ಹಾಗಾಗಿ ದೊಡ್ಡಮಟ್ಟದ ಗುರಿ ಇಟ್ಟುಕೊಳ್ಳಬೇಕು. ಆಗ ಸಾಧನೆಯೂ ಹಿರಿದಾಗಿರುತ್ತದೆ ಎಂದು ತಿರುಚಿರಾಪಳ್ಳಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ನಿರ್ದೇಶಕ ಡಾ. ಭೀಮರಾಯ ಮೇತ್ರಿ ಹೇಳಿದರು.

ಬಾಪೂಜಿ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ವಿದ್ಯಾಲಯ, ಬಾಪೂಜಿ ಅಕಾಡೆಮಿ ಆಫ್‌ ಮ್ಯಾನೇಜ್‌ಮೆಂಟ್‌ ಮತ್ತು ರಿಸರ್ಚ್‌ನ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬದುಕನ್ನು ಬಂದ ಹಾಗೇ ಸ್ವೀಕರಿಸುವ ಬದಲು ನಮಗೆ ಬೇಕಾದ ಹಾಗೆ ಕಟ್ಟಬೇಕು. ಚಪ್ಪಲಿ ಹೊಲೆಯುತ್ತಿದ್ದ ಅಬ್ರಹಾಂ ಲಿಂಕನ್‌ ಅಮೆರಿಕದ ಅಧ್ಯಕ್ಷರಾಗಲು ಸಾಧ್ಯವಾದುದು ಇಂಥ ಚಿಂತನೆಯಿಂದಲೇ. ಅಂಥ ಮಹನೀಯರು ಅನೇಕ ಮಂದಿ ಇದ್ದಾರೆ. ಅವರಿಂದ ಸ್ಫೂರ್ತಿ ಪಡೆದು ನಿಮ್ಮ ಬದುಕನ್ನು ಸಾಧಕರ ಬದುಕನ್ನಾಗಿಸಿ’ ಎಂದು ಸಲಹೆ ನೀಡಿದರು.

ಕಲಿಕೆಗೆ ಕೊನೆಯಿಲ್ಲ. ಜೀವನದ ಉದ್ದಕ್ಕೂ ಕಲಿಯುವುದಿರುತ್ತದೆ. ಪದವಿ ಪಡೆದ ಕೂಡಲೇ ಕಲಿಕೆ ಮುಗಿಯಿತು ಎಂದು ತಿಳಿದುಕೊಳ್ಳಬೇಡಿ. ದೊಡ್ಡ ಬದಲಾವಣೆಗಾಗಿ ಕೆಲಸ ಮಾಡಿ. ಹೊಸ ತಂತ್ರಜ್ಞಾನಗಳು ಮತ್ತು ಸಂಶೋಧನೆಗಳನ್ನು ಅಳವಡಿಸಿಕೊಳ್ಳಿ. ಜತೆಗೆ ಹೊಸತನ್ನು ಕಂಡುಹುಡುಕಿ. ನಿಮಗಿಂತ ಉತ್ತಮರಾಗಿ ಬೇರೆಯವರು ಇದ್ದರೆ ಅದನ್ನು ವಿನಯಶೀಲರಾಗಿ ಒಪ್ಪಿಕೊಳ್ಳಿ. ಅವರಿಗೆ ಸರಿಸಮಾನವಾಗಿ ಬೆಳೆಯಲು ಪ್ರಯತ್ನಿಸಿ ಎಂದು ತಿಳಿಸಿದರು.

ಇಂದು ಪದವಿ ಪಡೆದವರು ಇಂಟರ್‌ನೆಟ್‌, ಲ್ಯಾಪ್‌ಟಾಪ್‌, ಮೊಬೈಲ್‌, ಸಾಮಾಜಿಕ ಜಾಲತಾಣಗಳ ಕಾಲದಲ್ಲಿ ಹುಟ್ಟಿದವರು. ಇಂಥ ಅವಕಾಶ ಹಿಂದಿನವರಿಗೆ ಸಿಕ್ಕಿರಲಿಲ್ಲ. ಇವುಗಳನ್ನು ನಮ್ಮ ಜ್ಞಾನವನ್ನು ವಿಸ್ತರಿಸಲು ಬಳಸಿಕೊಳ್ಳಬೇಕು. ಭಾರತ ತಂತ್ರಜ್ಞಾನದಲ್ಲಿ ಬಹಳ ವೇಗವಾಗಿ ನಡೆಯುತ್ತಿದೆ. ಕೆಲವೇ ವರ್ಷಗಳಲ್ಲಿ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೋಬೋಟ್‌ ಯುಗ ನಮ್ಮ ಕಣ್ಣ ಮುಂದಿದೆ. ಮನುಷ್ಯರು ಮಾಡುವ ಕೆಲಸಗಳನ್ನು ಅವೇ ಮಾಡಲಿವೆ. ಅವುಗಳಿಗಿಂತ ಸ್ಮಾರ್ಟ್‌ ಆದರಷ್ಟೇ ಗೌರವಾನ್ವಿತ ಹುದ್ದೆಗಳು ಸಿಗುವ ಕಾಲ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಇಂದುಮತಿ, ‘ದಾನಿಗಳು ನೀಡಿದ ಜಮೀನಿನಲ್ಲಿ ನಿರ್ಮಾಣಗೊಂಡಿರುವ ಏಕೈಕ ವಿಶ್ವವಿದ್ಯಾಲಯ ಇರುವುದು ದಾವಣಗೆರೆಯಲ್ಲಿ ಎಂಬುದು ನಮ್ಮ ಹೆಮ್ಮೆ. ಉಳಿದೆಲ್ಲೆಡೆ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದೆ’ ಎಂದರು.

ಯಾವ ಪದವಿಗಳು, ಬುದ್ಧಿಮತ್ತೆ ಇದ್ದರೂ ಉತ್ತಮ ವ್ಯಕ್ತಿತ್ವ ಇಲ್ಲದಿದ್ದರೆ ಪ್ರಯೋಜನವಿಲ್ಲ. ವ್ಯಕ್ತಿತ್ವ ಸರಿ ಇಲ್ಲದೇ ಬೇರೆಲ್ಲ ಅರ್ಹತೆಗಳಿದ್ದರೆ ಅವರು ಎಲ್ಲೇ ಇದ್ದರೂ ಅಪಾಯಕಾರಿ ಎಂದು ತಿಳಿಸಿದರು.

ಸಮಾಜದಲ್ಲಿ ದುಡ್ಡಿಗೆ, ಅಧಿಕಾರಕ್ಕೆ ಸಿಗುತ್ತಿರುವ ಗೌರವ ಬೇರೆ ಯಾವುದಕ್ಕೂ ಸಿಗದೇ ಇರುವುದನ್ನು ಕಂಡು ಈಗಿನ ಮಕ್ಕಳು ಗೊಂದಲಕ್ಕೆ ಒಳಗಾಗಿದ್ದಾರೆ. ನಾವೂ ಹಾಗೆ ಮಾಡಬೇಕೇ ಎಂಬ ಪ್ರಶ್ನೆ ಅವರಲ್ಲಿ ಮೂಡಿದೆ ಎಂದರು.

ಬಾಪೂಜಿ ಬಿ. ಸ್ಕೂಲ್ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಎಚ್‌.ವಿ, ಪ್ರಾಂಶುಪಾಲ ಡಾ. ನವೀನ್‌ ನಾಗರಾಜ್‌ ಉಪಸ್ಥಿತರಿದ್ದರು. ಡಾ. ಎಸ್‌.ಎಸ್‌. ಸುಜಿತ್‌ ಕುಮಾರ್‌ ಸ್ವಾಗತಿಸಿದರು. ಶ್ರೇಯಾ ಮತ್ತು ಸಹನಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT