ಶುಕ್ರವಾರ, ಜನವರಿ 27, 2023
26 °C
ರಾಜ್ಯ ಜ್ಞಾನ ಆಯೋಗದ ಸದಸ್ಯ ಡಾ. ಕೆ.ಪಿ. ಬಸವರಾಜ ಆತಂಕ

‘ವಾಣಿಜ್ಯ ಬೆಳಗಳನ್ನೇ ಬೆಳೆದರೆ ಪೌಷ್ಟಿಕಾಂಶದ ಕೊರತೆ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೃಷಿ ಕ್ಷೇತ್ರದಲ್ಲಿ ಆಹಾರ ಆಧಾರಿತ ಬೆಳೆಗಳಿಗಿಂತ ವಾಣಿಜ್ಯ ಆಧಾರಿತ ಬೆಳೆಗಳಿಗೆ ಆದ್ಯತೆ ನೀಡುವುದರಿಂದ, ಭವಿಷ್ಯದಲ್ಲಿ ಪೌಷ್ಟಿಕಾಂಶಗಳ ಕೊರತೆಯುಂಟಾಗಲಿದೆ ಎಂದು ರಾಜ್ಯ ಜ್ಞಾನ ಆಯೋಗದ ಸದಸ್ಯ ಡಾ. ಕೆ.ಪಿ. ಬಸವರಾಜ ಆತಂಕ ವ್ಯಕ್ತಪಡಿಸಿದರು.

ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ 18ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದ ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರ ಶೇ 20ರಷ್ಟು ವ್ಯಾಪ್ತಿ ಹೊಂದಿದ್ದು, ಜಿಡಿಪಿಗೆ ಶೇ 19ರಿಂದ 20ರಷ್ಟು ಕಾಣಿಕೆ ನೀಡುತ್ತಿದೆ. ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಹಾಗೂ ಮಾರುಕಟ್ಟೆ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗುವುದು ಅಗತ್ಯವಿದೆ. ಸದ್ಯ ಅನುಸರಿಸುತ್ತಿರುವ ಬೆಳೆ ಸಮೀಕ್ಷೆ ಪದ್ಧತಿಯಲ್ಲಿ ಸಾಕಷ್ಟು ಸುಧಾರಣೆಯ ಅಗತ್ಯವಿದ್ದು, ತಂತ್ರಜ್ಞಾನ ಹಾಗೂ ಖಚಿತ ವರದಿ ಆಧಾರಿತ ಸಮೀಕ್ಷೆ ಆಗಬೇಕು. ಇಲ್ಲದಿದ್ದಲ್ಲಿ ಕೃಷಿ ನೀತಿ ರಚಿಸುವುದು ಕಷ್ಟಕರವಾಗಲಿದೆ’ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಕೆ.ಸಿ. ಶಶಧರ ‘ಪ್ರಗತಿಪರ ರೈತರು, ಕೃಷಿ ಕ್ಷೇತ್ರದಲ್ಲಿ ಹೆಚ್ಚು ಪ್ರಶಸ್ತಿ ಪಡೆದಂತಹ ರೈತರಿಗೆ ಫಾರ್ಮರ್ ಪ್ರೊಫೆಸರ್ ಎಂದು ಗುರುತಿಸಿ, ಕೃಷಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಅವಕಾಶ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿ ಗೋಡಂಬಿ ಕೃಷಿಗೆ ವಿಫುಲ ಅವಕಾಶವಿದ್ದು, ಇದಕ್ಕೆ ಸಾಕಷ್ಟು ಬೇಡಿಕೆಯೂ ಇದೆ’ ಎಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾತನಾಡಿ, ಜಿಲ್ಲೆಯಲ್ಲಿ 1.37 ಲಕ್ಷ ಹೆಕ್ಟೇರ್‌ನಷ್ಟು ಮೆಕ್ಕೆಜೋಳ ಬೆಳೆದಿದ್ದು, ಬೆಂಬಲ ಬೆಲೆಯಲ್ಲಿ ಇದನ್ನು ಖರೀದಿ ಮಾಡಲಾಗುತ್ತಿಲ್ಲ. ಮೆಕ್ಕೆಜೋಳ ಬೆಳೆಯ ಜೊತೆಗೆ ತೊಗರಿಯನ್ನು ಅಂತರ ಬೆಳೆಯಾಗಿಸುವುದನ್ನು ಕಡ್ಡಾಯಗೊಳಿಸಲು, ಬೀಜ ವಿತರಣೆ ಸಂದರ್ಭದಲ್ಲಿಯೇ ಎರಡೂ ಬೆಳೆಗಳ ಬೀಜ ವಿತರಿಸಲು ಚಿಂತನೆ ನಡೆಸಲಾಗಿದೆ’ ಎಂದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಸುಶ್ರುತ್ ಡಿ.ಶಾಸ್ತ್ರಿ ಮಾತನಾಡಿ, ‘ರಾಷ್ಟ್ರೀಕೃತ ಬ್ಯಾಂಕ್‍ಗಳು ಕೃಷಿ ಕ್ಷೇತ್ರದಲ್ಲಿ ರೈತರಿಗೆ ಸಾಲ ನೀಡಿಕೆಯಲ್ಲಿ ಹಿಂದೇಟು ಹಾಕುತ್ತಾರೆ. ಗ್ರಾಮಗಳಲ್ಲಿ ನಡೆಯುವ ರೈತ ಜಾಗೃತಿ ಕಾರ್ಯಕ್ರಮಗಳ ಸಂದರ್ಭದಲ್ಲಿ ಆಯಾ ವ್ಯಾಪ್ತಿ ಬ್ಯಾಂಕ್ ಶಾಖೆ ಅಧಿಕಾರಿಗಳನ್ನು ತೊಡಗಿಸಿಕೊಂಡಲ್ಲಿ, ಈ ಸಮಸ್ಯೆಯನ್ನು ಪರಿಹರಿಸಬಹುದು’ ಎಂದರು.

ದಾವಣಗರೆ ಕೃಷಿ ವಿಜ್ಞಾನ ಕೇಂದ್ರದ ಸಾಧನೆಗಳ ಕುರಿತು ಡಾ. ಟಿ.ಎನ್. ದೇವರಾಜ್ ಮಾಹಿತಿ ನೀಡಿದರು. ಸಿರಿಗೆರೆ ತರಳಬಾಳು ರೂರಲ್ ಡೆವಲಪ್‍ಮೆಂಟ್ ಫೌಂಡೇಶನ್ ಅಧ್ಯಕ್ಷರಾದ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಅವರು ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೃಷಿ ವಿವಿ. ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಯು. ಪಾಟೀಲ್, ಕೆವಿಕೆ ತೋಟಗಾರಿಕೆ ವಿಷಯ ತಜ್ಞ ಬಸವನಗೌಡ, ತೋಟಗಾರಿಕೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೋಮನ್ನರ್, ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಹಾಲವರ್ತಿ ಮಹೇಶಪ್ಪ, ಯಶೋಧ ಮಲ್ಲೇಶ್, ಆಂಜನೇಯ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳ ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು