ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ಕೆರೆ ಅಭಿವೃದ್ಧಿ ಕಾಮಗಾರಿ ಆಮೆಗತಿ

₹ 3.5 ಕೋಟಿ ಅನುದಾನದಲ್ಲಿ ನಡೆಯುತ್ತಿರುವ ಕೆಲಸ
Last Updated 3 ಫೆಬ್ರುವರಿ 2021, 3:01 IST
ಅಕ್ಷರ ಗಾತ್ರ

ಚನ್ನಗಿರಿ: ‘ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎಂಬ ಗಾದೆ ಮಾತಿನಂತೆ ಅಗತ್ಯ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭವಾಗಿ ಆರು ತಿಂಗಳಾದರೂ ಪಟ್ಟಣದ ಕೆರೆಯ ಜೀರ್ಣೋದ್ಧಾರ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಪಟ್ಟಣದ ಹೃದಯ ಭಾಗದಲ್ಲಿ ಇರುವ ಕೆರೆಯನ್ನು ಸುಂದರಗೊಳಿಸುವುದಕ್ಕಾಗಿ ಸಣ್ಣ ನೀರಾವರಿ ಇಲಾಖೆಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ₹ 3.5 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿ, ಆರು ತಿಂಗಳ ಹಿಂದೆ ಭೂಮಿಪೂಜೆ ನೆರವೇರಿಸಿ, ಕಾಮಗಾರಿಯನ್ನು ಕೂಡಾ ಆರಂಭಿಸಲಾಗಿತ್ತು.

₹ 3.5 ಕೋಟಿ ಅನುದಾನದಲ್ಲಿ ಕೆರೆಯ ಮಧ್ಯೆ ಕಾರಂಜಿ ನಿರ್ಮಾಣ, ವಾಯು ವಿಹಾರಕ್ಕಾಗಿ ಪಾದಚಾರಿ ರಸ್ತೆ, ಪಟ್ಟಣದ ಕೊಳಚೆ ನೀರು ಕೆರೆಗೆ ಸೇರದಂತೆ ಇರಲು ಪೈಪ್‌ಲೈನ್ ಅಳವಡಿಕೆ, ಕೆರೆಯ ಸುತ್ತ ತಡೆಗೋಡೆ ನಿರ್ಮಾಣ, ಕೆರೆಯ ಹೂಳು ಎತ್ತುವ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆಯಾಗಿತ್ತು.

ಪ್ರಸ್ತುತ ಕೆರೆಗೆ ಪಟ್ಟಣದ ಕೊಳಚೆ ನೀರು ಸೇರದಂತೆ ಇರಲು ಪೈಪ್‌ಲೈನ್ ಅಳವಡಿಕೆ ಕಾರ್ಯ ಮಾತ್ರ ಆರು ತಿಂಗಳಲ್ಲಿ ನಡೆದಿದೆ. ಆರು ತಿಂಗಳಾದರೂ ಕೆರೆಯಲ್ಲಿನ ನೀರನ್ನು ಖಾಲಿ ಮಾಡಲು ಸಾಧ್ಯವಾಗಿಲ್ಲ. ಈ ಕೆರೆಯ ಕಾಮಗಾರಿಯನ್ನು ದಾವಣಗೆರೆ ಮೂಲದ ಜೀವರಾಜ್ ಎಂಬ ಗುತ್ತಿಗೆದಾರರು ಟೆಂಡರ್ ಮೂಲಕ ಪಡೆದುಕೊಂಡಿದ್ದಾರೆ. ಒಂದು ವರ್ಷದಲ್ಲಿ ಕಾಮಗಾರಿಯನ್ನು ಮುಕ್ತಾಯಗೊಳಿಸಲು ಗಡುವನ್ನು ಇಲಾಖೆ ನೀಡಿದೆ.

‘ಆರು ತಿಂಗಳಾದರೂ ಕೂಡಾ ಕೆರೆಯ ನೀರನ್ನು ಖಾಲಿ ಮಾಡಲು ಸಾಧ್ಯವಾಗಿಲ್ಲ. ಇನ್ನಾರು ತಿಂಗಳ ಅವಧಿಯಲ್ಲಿ ಉಳಿದ ಕಾಮಗಾರಿಗಳನ್ನು ಮುಕ್ತಾಯಗೊಳಿಸಲು ಸಾಧ್ಯವೇ? ಪ್ರಸ್ತುತ ಪಟ್ಟಣದಲ್ಲಿ ವಾಯು ವಿಹಾರಕ್ಕೆ ಪ್ರತ್ಯೇಕ ಸ್ಥಳ ಇಲ್ಲ. ಕೆರೆಯ ಮಧ್ಯೆ ಕಾರಂಜಿ ನಿರ್ಮಾಣ ಕೂಡ ಆಗಬೇಕಾಗಿದೆ. ಕಾಮಗಾರಿಯ ವೇಗವನ್ನು ಹೆಚ್ಚಿಸಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡರೆ ಮಾತ್ರ ಈ ಕಾಮಗಾರಿ ಮುಕ್ತಾಯವಾಗುತ್ತದೆ’ ಎನ್ನುತ್ತಾರೆ ಪಟ್ಟಣದ ಅಣ್ಣಪ್ಪ, ಶ್ರೀಧರ್.

‘ನೀರು ಖಾಲಿ ಮಾಡುವ ಕಾರ್ಯ ಪ್ರಗತಿಯಲ್ಲಿ’

ಕೆರೆಗೆ ಕೊಳಚೆ ನೀರು ಸೇರದೇ ಇರಲು ಈಗಾಗಲೇ ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದೆ. ಕೆರೆಯಲ್ಲಿಯ ನೀರನ್ನು ಖಾಲಿ ಮಾಡಿ ಹೂಳನ್ನು ಎತ್ತಿ ನಂತರ ಕಾರಂಜಿ ಕಾಮಗಾರಿಯನ್ನು ಮಾಡಬೇಕಾಗಿದೆ. ಪ್ರಸ್ತುತ ಕೆರೆಯ ನೀರನ್ನು ಖಾಲಿ ಮಾಡಲು ನಾಲ್ಕು ಮೋಟರ್‌ಗಳನ್ನು ಇಡಲಾಗಿದೆ. ಮತ್ತೆ ಈಗ 4 ದೊಡ್ಡ ಮೋಟರ್‌ಗಳನ್ನು ಇಟ್ಟು ಅತಿ ಬೇಗ ಕೆರೆಯ ನೀರನ್ನು ಖಾಲಿ ಮಾಡಿ ಉಳಿದ ಕಾಮಗಾರಿಯನ್ನು ನಡೆಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಶಿವಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT