ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಯದಾನ: ವಕೀಲರ ಕೊಡುಗೆ ಅಪಾರ’

ವಕೀಲರ ಕಲ್ಯಾಣ, ಮರಣೋತ್ತರ ಪರಿಹಾರ ನಿಧಿ ಟ್ರಸ್ಟ್‌ ಉದ್ಘಾಟನೆ
Last Updated 29 ಜೂನ್ 2018, 17:10 IST
ಅಕ್ಷರ ಗಾತ್ರ

ದಾವಣಗೆರೆ: ವಕೀಲರ ಸಮುದಾಯವು ಸಮಾಜಕ್ಕೆ ಹಾಗೂ ದೇಶಕ್ಕೆ ನ್ಯಾಯ ಒದಗಿಸುತ್ತಿದೆ. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರದಲ್ಲೂ ವಕೀಲ ಸಮುದಾಯ ಈ ನಿಟ್ಟಿನಲ್ಲಿ ಗಣನೀಯ ಕೊಡುಗೆ ನೀಡುತ್ತಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಲ್‌. ನಾರಾಯಣಸ್ವಾಮಿ ಶ್ಲಾಘಿಸಿದರು.

ದಾವಣಗೆರೆ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಕೀಲರ ಕಲ್ಯಾಣ / ಮರಣೋತ್ತರ ಪರಿಹಾರ ನಿಧಿ ಟ್ರಸ್ಟ್‌ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿ ಅಂಥ ವಕೀಲರು ಮಂಚೂಣಿಯಲ್ಲಿದ್ದರು. ದೇಶದ ಸಂವಿಧಾನವನ್ನು ಬರೆದವರೂ ಕಾನೂನು ಪಂಡಿತರಾಗಿದ್ದಾರೆ. ತಮ್ಮ ಹಕ್ಕು ಮೊಟಕುಗೊಂಡಾಗ ಜನ ಮೊದಲು ನ್ಯಾಯಾಲಯದತ್ತ ಮುಖ ಮಾಡುತ್ತಾರೆ. ವಕೀಲರ ಸಮೂಹ ನ್ಯಾಯಾಲಯದಲ್ಲಿ ಕೊಡಿಸುತ್ತದೆ’ ಎಂದು ಹೇಳಿದರು.

‘ವಕೀಲರ ಕಲ್ಯಾಣ / ಮರಣೋತ್ತರ ಪರಿಹಾರ ನಿಧಿ ಟ್ರಸ್ಟ್‌ ಆರಂಭಿಸಿರುವುದು ಚರಿತ್ರಾರ್ಹ ಸಂಗತಿ. ಇದು ರಾಜ್ಯದಲ್ಲೇ ಮೊದಲ ಹೆಜ್ಜೆಯಾಗಿದ್ದು, ರಾಜ್ಯದ ಎಲ್ಲ ವಕೀಲರ ಸಂಘಗಳು ಇಂಥ ಟ್ರಸ್ಟ್‌ ನಿರ್ಮಿಸಿಕೊಳ್ಳಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ವಕೀಲರು ಸರ್ಕಾರಿ ಸೌಲಭ್ಯವನ್ನು ಪಡೆಯುತ್ತಿಲ್ಲ. ತಮ್ಮನ್ನು ನಂಬಿದವರಿಗೂ ನ್ಯಾಯ ಕೊಡಿಸುವ ಕೆಲಸವನ್ನು ಮಾಡಲು ಕಲ್ಯಾಣ ನಿಧಿ ಸ್ಥಾಪಿಸುವುದು ಅಗತ್ಯ’ ಎಂದರು.

‘ಹಮಾಲಿಗಳ ಸಂಘ, ಆಟೊ ಚಾಲಕರ ಸಂಘ, ದಿನಗೂಲಿ ನೌಕರರ ಹಾಗೂ ಗುತ್ತಿಗೆ ನೌಕರರ ಸಂಘಗಳಿಗೂ ಕಲ್ಯಾಣ ನಿಧಿ ಸ್ಥಾಪಿಸುವುದು ಅಗತ್ಯವಿದೆ. ಉಳಿದ ಕ್ಷೇತ್ರದ ಸಂಘಗಳಿಗೂ ಇಂಥ ಕಲ್ಯಾಣ ನಿಧಿಯನ್ನು ಸ್ಥಾಪಿಸಲು ವಕೀಲರ ಸಂಘದವರು ಪ್ರೇರಣೆ ನೀಡಬೇಕು’ ಎಂದು ಸಲಹೆ ನೀಡಿದರು.

‘ಆರೋಗ್ಯ ಚೆನ್ನಾಗಿದ್ದರೆ ಸೇವೆ ನೀಡಲು ಸಾಧ್ಯ. ಆರೋಗ್ಯವೇ ಸರಿಯಾಗಿ ಇಲ್ಲದಿದ್ದರೆ ಬೇರೆಯವರಿಗೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ’ ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ‘ಟ್ರಸ್ಟ್‌ಗೆ ಶಾಸಕರ ನಿಧಿಯಿಂದ ಅನುದಾನ ನೀಡಲು ಅವಕಾಶವಿದ್ದರೆ ₹ 10 ಲಕ್ಷವನ್ನು ಕೊಡುತ್ತೇನೆ. ಅದು ಸಾಧ್ಯವಾಗದಿದ್ದರೆ ವೈಯಕ್ತಿಕವಾಗಿ ₹ 1 ಲಕ್ಷ ದೇಣಿಗೆ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ಹೈಕೋರ್ಟ್‌ ನ್ಯಾಯಮೂರ್ತಿ ಕೆ. ಸೋಮಶೇಖರ್‌ ಅವರು ಫಲಾನುಭವಿಗಳಿಗೆ ಚೆಕ್‌ ವಿತರಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹಾಗೂ ಟ್ರಸ್ಟ್‌ನ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಎಚ್‌. ಹೊಸಗೌಡರ್‌ ಪ್ರಮಾಣಪತ್ರವನ್ನು ವಿತರಿಸಿದರು. ಹರಿಹರ ಶಾಸಕ ಎಸ್‌. ರಾಮಪ್ಪ ಹಾಜರಿದ್ದರು. ಟ್ರಸ್ಟಿ ಮಲ್ಲಿಕಾರ್ಜುನ ಕಣವಿ ಸ್ವಾಗತಿಸಿದರು. ಕಾರ್ಯದರ್ಶಿ ಐ. ವಸಂತ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT