ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಕ್ಷಮೆ ಕೇಳುವ ಯಾತ್ರೆ ಮಾಡಲಿ

ಬಿಜೆಪಿ ಜನಾಶೀರ್ವಾದ ಯಾತ್ರೆ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಆಕ್ರೋಶ
Last Updated 2 ಸೆಪ್ಟೆಂಬರ್ 2021, 3:55 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಕಾಲದಲ್ಲಿ ಬಿಜೆಪಿ ಜನಾಶೀರ್ವಾದ ಯಾತ್ರೆ ನಡೆಸಿತು. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ ಏರಿಸಿದ್ದಕ್ಕೆ ಜನರು ಆಶೀರ್ವಾದ ಮಾಡಬೇಕಾ? ಅಧಿಕಾರಕ್ಕೆ ಬಂದರೆ ಜನರ ಜೀವನವನ್ನು ಸ್ವರ್ಗ ಮಾಡುತ್ತೇವೆ ಎಂದು ಹೇಳಿ ನರಕ ಮಾಡಿದ್ದಕ್ಕೆ ಜನರು ಆಶೀರ್ವಾದ ಮಾಡಬೇಕಾ? ಇವರು ಈ ಎಲ್ಲ ಕಾರಣಗಳಿಗೆ ಜನರ ಕ್ಷಮೆ ಕೇಳುವ ಯಾತ್ರೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಆಗ್ರಹಿಸಿದರು.

ಬುಧವಾರ ಯುವ ಕಾಂಗ್ರೆಸ್‌ ಜಿಲ್ಲಾ ಕಾರ್ಯಕಾರಣಿಯಲ್ಲಿ ಭಾಗವಹಿಸಲು ಬಂದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯಕ್ಕೆ ಬರಬೇಕಾದ ಅನುದಾನ ಬಂದಿಲ್ಲ. ಪ್ರಕೃತಿ ವಿಕೋಪ ನಿಧಿಯಲ್ಲಿ ₹ 30 ಸಾವಿರ ಕೋಟಿ ಬರಬೇಕು. ಜಿಎಸ್‌ಟಿಯ ಪಾಲು ₹ 13 ಸಾವಿರ ಕೋಟಿ ಬರಬೇಕು. ಕೇಂದ್ರದ ನೂತನ ನಾಲ್ವರು ಸಚಿವರು ಅದನ್ನು ತಂದಿದ್ದರೆ ಆಗ ಸ್ವಾಗತಿಸಬಹುದಿತ್ತು ಎಂದು ಹೇಳಿದರು.

2ನೇ ಅಲೆ ಎಚ್ಚರಿಕೆ ನೀಡಿದ ನಂತರವೂ ಬಿಜೆಪಿ ಸರ್ಕಾರ ಉಪಚುನಾವಣೆ, ನಾಯಕತ್ವ ಬದಲಾವಣೆ ವಿಚಾರವಾಗಿ ಮೈಮರೆಯಿತು. ಪರಿಣಾಮ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕೊರೊನಾದಿಂದ 3.37 ಲಕ್ಷ ಜನರ ಸತ್ತಿದ್ದಾರೆ ಎಂದು ಅವರ ವೆಬ್‌ಸೈಟ್‌ನಲ್ಲೇ ಇತ್ತು. ಬಳಿಕ ಅದನ್ನು 30 ಸಾವಿರ ಜನ ಸತ್ತಿದ್ದಾರೆ ಎಂದು ಮಾಡಿದ್ದಾರೆ. ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ಎಲ್ಲ 3.37 ಲಕ್ಷ ಮಂದಿಯ ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದು ನರೇಂದ್ರ ಮೋದಿ ಹೇಳಿ ಅಧಿಕಾರಕ್ಕೆ ಬಂದರು. ಏಳು ವರ್ಷಗಳಲ್ಲಿ 14 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ 14 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಕಪ್ಪು ಹಣವೂ ಬರಲಿಲ್ಲ. ಸುಳ್ಳು ಹೇಳೋದ್ರಲ್ಲಿ ಆಸ್ಕರ್ ಅವಾರ್ಡ್ ಕೊಡೋದಾದ್ರೆ ಪ್ರಧಾನಿ ನರೇಂದ್ರ ಮೋದಿಗೇ ಕೊಡಬೇಕು ಎಂದು ವ್ಯಂಗ್ಯವಾಡಿದರು.

ಸರ್ಕಾರಗಳು ನಿರ್ದಯಿಗಳಾಗಿದ್ದರಿಂದ ಕಾಂಗ್ರೆಸ್‌ನವರೇ ಸ್ವಂತ ಖರ್ಚಿನಲ್ಲಿ ಕೋವಿಡ್‌ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಿದರು. ಪಕ್ಷದಿಂದ ಇಲ್ಲಿವರೆಗೆ 58 ಲಕ್ಷ ಮಾಸ್ಕ್‌, 3 ಲಕ್ಷ ಪಿಪಿಇ ಕಿಟ್‌, ಸುಮಾರು 10 ಲಕ್ಷ ಸ್ಯಾನಿಟೈಸರ್‌ ಬಾಟಲ್‌, 93.5 ಲಕ್ಷ ಫುಡ್‌ ಕಿಟ್‌, 26.7 ಲಕ್ಷ ಗ್ರೋಸರಿ ಕಿಟ್‌, 12.5 ಲಕ್ಷ ಮೆಡಿಕಲ್‌ ಕಿಟ್‌, 24 ಸಾವಿರ ಆಮ್ಲಜನಕ ಸಿಲಿಂಡರ್‌, 3,746, ಆಮ್ಲಜನಕ ಕಾನ್‌ಸಂಟ್ರೇಟರ್‌, 1,225 ಆಂಬುಲೆನ್ಸ್‌ ನೀಡಲಾಗಿದೆ ಎಂದು ಅಂಕಿ ಅಂಶ ನೀಡಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಮುಖಂಡರಾದ ಎಂ.ಟಿ. ಸುಭಾಶ್ಚಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಮುಖಂಡರಾದ ಕೆ.ಎಸ್‌. ಬಸವಂತಪ್, ನಾಗೇಂದ್ರಪ್ಪ ಅವರೂ ಇದ್ದರು.

ಬಿಎಸ್‌ವೈ ರಾಜೀನಾಮೆ ಕೊಟ್ಟಿದ್ಯಾಕೆ?

ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಯಾಕೆ ರಾಜೀನಾಮೆ ನೀಡಿದರು ಎಂಬುದು ಇನ್ನೂ ಜನರಿಗೆ ಗೊತ್ತಾಗಿಲ್ಲ ಎಂದು ಸಲೀಂ ಅಹಮದ್‌ ಹೇಳಿದರು.

ಕೋವಿಡ್‌ ಕಾಲದಲ್ಲಿ ₹ 2 ಸಾವಿರ ಕೋಟಿ ಹಗರಣವನ್ನು ರಾಜ್ಯ ಸರ್ಕಾರ ಮಾಡಿತ್ತು. ಲೆಕ್ಕಕೊಡಿ ಎಂದು ಕಾಂಗ್ರೆಸ್‌ ಅಭಿಯಾನ ನಡೆಸಿತ್ತು. ಇದರ ಆಧಾರದಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸಿದ್ರಾ? ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಲ್ಲಿಂದ ಬಿಜೆಪಿ ಹೈಕಮಾಂಡ್‌ ಸಹಕಾರ ನೀಡಲಿಲ್ಲ ಎಂದು ಯಡಿಯೂರಪ್ಪ ಅವರೇ ಕಣ್ಣೀರಿಟ್ಟಿದ್ದರು. ಈ ಕಣ್ಣೀರಿನ ಕಥೆ ಏನು? ಮೋದಿ, ಶಾ ಅವರಿಗೆ ಯಡಿಯೂರಪ್ಪ ಬೇಡವಾದ್ರಾ? ಹಿರಿಯರನ್ನು ಕಸದಬುಟ್ಟಿಗೆ ಹಾಕುವುದು ಬಿಜೆಪಿ ಸಂಸ್ಕೃತಿ. ಆಡ್ವಾಣಿ, ಉಮಾಭಾರತಿ, ಮುರಳಿ ಮನೋಹರ ಜೋಷಿ ಮುಂತಾದವರು ಅದಕ್ಕೆ ಉದಾಹರಣೆ. ಯಡಿಯೂರಪ್ಪಗೂ ಅದೇ ಗತಿಯಾಯಿತಾ? ಯಾವುದೂ ಗೊತ್ತಾಗುತ್ತಿಲ್ಲ ಎಂದು ಹೇಳಿದರು.

‘ಕಾಂಗ್ರೆಸ್‌ ಅಧಿಕಾರಕ್ಕೆ’

ಬಿಜೆಪಿ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ದಾವಣಗೆರೆ ಲೋಕಸಭಾ ವ್ಯಾಪ್ತಿಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದು ಸಲೀಂ ಅಹಮದ್‌ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷ ಸಂಘಟನೆ ಮತ್ತು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆಯ ಬಗ್ಗೆ ಕಾರ್ಯಕಾರಣಿಯಲ್ಲಿ ಚರ್ಚೆಯಾಗಲಿದೆ. ಒಂದು ತಿಂಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿ, ಎರಡು ತಿಂಗಳ ಒಳಗೆ ಬೂತ್‌ ಸಮಿತಿ ಮಾಡಿ ತರಬೇತಿ ನೀಡಲಾಗುವುದು. ಮಾಸ್‌ ಬೇಸ್‌ ಪಕ್ಷದ ಜತೆಗೆ ಕೇಡರ್‌ ಬೇಸ್‌ ಪಾರ್ಟಿಯಾಗಿ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT