ರಾಜಕಾರಣಿ ಜೊತೆ ಪ್ರೀತಿ, ತಿರಸ್ಕಾರ ಸಂಬಂಧ ಇರಲಿ

7
ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಸುಧಾ’ದ ಸಹಾಯಕ ಸಂಪಾದಕ ಬಿ.ಎಂ. ಹನೀಫ್‌

ರಾಜಕಾರಣಿ ಜೊತೆ ಪ್ರೀತಿ, ತಿರಸ್ಕಾರ ಸಂಬಂಧ ಇರಲಿ

Published:
Updated:
Deccan Herald

ದಾವಣಗೆರೆ: ಪತ್ರಕರ್ತರ ಮತ್ತು ರಾಜಕಾರಣಿಗಳ ನಡುವೆ ಲವ್‌ (ಪ್ರೀತಿ) ಹಾಗೂ ಹೇಟ್‌ (ತಿರಸ್ಕಾರ) ಸಂಬಂಧ ಇರಬೇಕು ಎಂದು ‘ಸುಧಾ’ ವಾರಪತ್ರಿಕೆಯ ಸಹಾಯಕ ಸಂಪಾದಕ ಬಿ.ಎಂ. ಹನೀಫ್‌ ಕಿವಿಮಾತು ಹೇಳಿದರು.

ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಧ್ಯಮ ದಿನಾಚರಣೆ ಮತ್ತು ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರು ಮತ್ತು ಅಧಿಕಾರಸ್ಥರ ನಡುವಿನ ಸಂಬಂಧದ ಕುರಿತು ಹಿರಿಯ ಪತ್ರಕರ್ತ ಖುಷವಂತ್‌ ಸಿಂಗ್‌ ಅವರ ಮಾತನ್ನು ಉಲ್ಲೇಖಿಸಿದ ಹನೀಫ್‌, ‘ನದಿ ತೀರದ ದಂಡೆಯ ಮೇಲೆ ಮೊಸಳೆ ಬಾಯಿ ತೆರೆದುಕೊಂಡು ಕಣ್ಣು ಮುಚ್ಚಿ ಮಲಗಿಕೊಳ್ಳುತ್ತದೆ. ಅದರ ಹಲ್ಲಿಗೆ ಸಿಲುಕಿರುವ ಮಾಂಸದ ತುಂಡುಗಳನ್ನು ಕುಕ್ಕಿ ತಿನ್ನಲು ಹಕ್ಕಿಗಳು ಬರುತ್ತವೆ. ಯಾವುದೇ ಕ್ಷಣದಲ್ಲೂ ಆ ಮೊಸಳೆ ಬಾಯಿ ಮುಚ್ಚಿದರೆ ಹಕ್ಕಿ ಅದರ ಹೊಟ್ಟೆಯೊಳಗೆ ಹೋಗುತ್ತದೆ. ಇಂದು ಪತ್ರಕರ್ತರ ಸ್ಥಿತಿಯೂ ಆ ಹಕ್ಕಿಯಂತೆಯೇ ಆಗಿದೆ’ ಎಂದು ವಿವರಿಸಿದರು.

‘ಕೆಲವೇ ಸಜ್ಜನ ರಾಜಕಾರಣಿಗಳನ್ನು ಹೊರತುಪಡಿಸಿದರೆ ಬಹುತೇಕ ರಾಜಕಾರಣಿಗಳಲ್ಲಿ ಧಾರ್ಷ್ಟ್ಯ ಇದೆ. ಈ ಧಾರ್ಷ್ಟ್ಯ ಅವರಿಗೆ ಜನರು ನೀಡಿದ ಅಧಿಕಾರದಿಂದ ಬಂದಿದೆ. ರಾಜಕಾರಣಿಗಳ ಮುಲಾಜಿಗೆ ಬೀಳದೇ ಇದನ್ನು ಆಗಾಗ ಅವರಿಗೆ ಅರ್ಥಮಾಡಿಸಿಕೊಡಬೇಕು. ಒಳ್ಳೆಯ ಕೆಲಸ ಮಾಡಿದರೆ ಹೊಗಳೋಣ. ಹಾಗೆಂದು ಕನ್ನಡ ಭಾಷೆಯ ಮಾನ ಹೋಗುವಂತೆ ಹೊಗಳಬೇಕಾಗಿಲ್ಲ’ ಎಂದು ಸಲಹೆ ನೀಡಿದರು.

‘ಪತ್ರಕರ್ತರ ಕೆಲಸ ಧನ್ಯವಾದಕ್ಕೆ ಹೊರತಾದ (ಥ್ಯಾಂಕ್‌ಲೆಸ್‌) ವೃತ್ತಿಯಾಗಿದೆ. ರಾಜಕಾರಣಿಗಳಿಂದ ಸಮಾನವಾದ ಅಂತರ ಕಾಯ್ದುಕೊಂಡು ಸಮಾಜಕ್ಕೆ ಮಾಹಿತಿಯನ್ನು ಕೊಡಬೇಕಾಗಿದೆ. ನಮ್ಮ ಕಡೆ ಯಾರೂ ಬೆರಳು ಮಾಡಿ ತೋರಿಸದಂತೆ ಕೆಲಸ ಮಾಡಬೇಕು. ಇಂದಿನ ಪ್ರಭುತ್ವದ ಶಕ್ತಿಯನ್ನು ಎದುರಿಸಲು ಪತ್ರಕರ್ತರ ಸಂಖ್ಯೆ ಹೆಚ್ಚಾಗಬೇಕಾಗಿದೆ. ಜೊತೆಗೆ ಸ್ಥಳೀಯ ಪತ್ರಿಕೆಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ. ಆದರೆ, ದುರ್ದೈವದ ಸಂಗತಿ ಎಂದರೆ ಪತ್ರಿಕೆ ಇಂದು ಉದ್ಯಮವಾಗಿದೆ. ಪತ್ರಿಕೆ ನಡೆಸಲು ದೊಡ್ಡ ಬಂಡವಾಳ ಬೇಕಾಗಿದೆ’ ಎಂದು ಹೇಳಿದರು.

‘ಪ್ರಜಾವಾಣಿ’ ಸುದ್ದಿ ಸಂಪಾದಕ ರವೀಂದ್ರ ಭಟ್‌ ಐನಕೈ, ‘ಇಂದು ಪತ್ರಿಕೆಗಳೂ ಸುದ್ದಿ ವಾಹಿನಿಗಳಂತೆ 24 ಗಂಟೆ ಕಾರ್ಯನಿರ್ವಹಿಸುವ ಸ್ಥಿತಿ ಬಂದಿದೆ. ಪತ್ರಿಕೆಯ ಡಿಜಿಟಲ್‌ ಆವೃತ್ತಿಗೆ ಮೊದಲು ಸುದ್ದಿ ನೀಡಿ, ಅದನ್ನೇ ಆ ಬಳಿಕ ಮುದ್ರಣ ಆವೃತ್ತಿಗೆ ಬಳಸಿಕೊಳ್ಳಬೇಕಾಗುತ್ತಿದೆ. ಮುದ್ರಣ ಮಾಧ್ಯಮದ ಪತ್ರಕರ್ತರೂ ಒತ್ತಡದಲ್ಲೇ ಕೆಲಸ ನಿರ್ವಹಿಸಬೇಕಾಗಿದೆ’ ಎಂದರು.

‘ಈಗ ಟಿವಿ ವಾಹಿನಿಗಳಲ್ಲಿ ಪ್ರೈಮ್‌ ನ್ಯೂಸ್‌ಗೆ ಜಾಹೀರಾತು ಪ್ರಾಯೋಜಕತ್ವ ವಹಿಸಿಕೊಳ್ಳುತ್ತಿರುವ ರೀತಿಯಲ್ಲೇ ಐದು ವರ್ಷಗಳ ಬಳಿಕ ಪತ್ರಿಕೆಯ ಪ್ರಧಾನ ಸುದ್ದಿಗೂ ಪ್ರಾಯೋಜಕತ್ವ ವಹಿಸಿಕೊಳ್ಳುವ ಸ್ಥಿತಿ ಬಂದರೆ ಆಶ್ಚರ್ಯಪಡಬೇಕಾಗಿಲ್ಲ. ಯಾವ ಸುದ್ದಿಯನ್ನು ಬರೆಯಬೇಕು ಎಂದು ಪ್ರಸರಣ ವಿಭಾಗದವರು ನಿರ್ಧರಿಸುತ್ತಿದ್ದ ಕಾಲವಿತ್ತು. ಈಗ ಜಾಹೀರಾತು ವಿಭಾಗ ನಿರ್ದರಿಸುತ್ತಿದೆ. ಮುಂದೆ ಈ ಸ್ವಾತಂತ್ರ್ಯ ಬಂಡವಾಳಶಾಹಿಗಳ ಕೈಸೇರುವ ಸಾಧ್ಯತೆ ಇದೆ. ಇದರ ನಡುವೆಯೂ ಸಮಾಜದ ಓರೆ ಕೋರೆಗಳನ್ನು ತಿದ್ದಲು ಸಾಧ್ಯವಿದೆ. ಅದನ್ನು ಬಳಸಿಕೊಳ್ಳುವ ಬುದ್ಧಿವಂತಿಕೆ ಇರಬೇಕಷ್ಟೆ’ ಎಂದು ಹೇಳಿದರು.

‘ಇಂಗ್ಲಿಷ್‌ನಿಂದ ಕನ್ನಡಕ್ಕೆ ಒಳ್ಳೆಯದಾಗಿ ಭಾಷಾಂತರ ಮಾಡುವ ಉಪ ಸಂಪಾದಕರ ಕೊರತೆ ಇದೆ. ಮುಂಬರುವ ದಿನಗಳಲ್ಲಿ ಒಳ್ಳೆಯದಾಗಿ ಕನ್ನಡ ಬರೆಯಲು ಬರುವವರಿಗೆ ಭವಿಷ್ಯವಿದೆ. ವರದಿಗಾರರ ಕೂಟದ ಮೇಲೆ ಒಳ್ಳೆಯ ಪತ್ರಕರ್ತರನ್ನು ತಯಾರಿಸುವ ಜವಾಬ್ದಾರಿಯೂ ಇದೆ’ ಎಂದು ಹೇಳಿದರು.

‘ದಾವಣಗೆರೆಯಲ್ಲಿ ಸರ್ಕಾರ ಅಭಿವೃದ್ಧಿಗೊಳಿಸಿದ್ದಕ್ಕಿಂತ ಇಲ್ಲಿನ ಜನರೇ ಹೆಚ್ಚು ಅಭಿವೃದ್ಧಿ ಮಾಡಿಕೊಂಡಿದ್ದಾರೆ. ನೂರು ವರ್ಷಗಳ ಹಿಂದೆಯೇ ನಗರಕ್ಕೆ ಬರುವವರಿಗೆ ಉಳಿದುಕೊಳ್ಳಲು ದಾನಿಗಳು ಛತ್ರ ನಿರ್ಮಿಸಿದ್ದರು. ಜೊತೆಗೆ ವಾಪಸ್‌ ಹೋಗುವಾಗ ಮೂರು ಕಾಸನ್ನೂ ಅವರಿಗೆ ಕೊಡಲಾಗುತ್ತಿತ್ತು ಎಂಬುದನ್ನು ಕೇಳಿದ್ದೇವೆ. ಇಂದು ಸ್ಮಾರ್ಟ್‌ ಸಿಟಿ, ಅಮೃತ ಸಿಟಿ ಯೋಜನೆ ಹೆಸರಿನಲ್ಲಿ ಇರುವ ಸಿಮೆಂಟ್‌ ರಸ್ತೆಯನ್ನೇ ಅಗೆದು ಮತ್ತೆ ರಸ್ತೆ ನಿರ್ಮಿಸಲಾಗುತ್ತದೆ. ಹೊಸದಾಗಿ ಪೈಪ್‌ ಹಾಕಲಾಗುತ್ತದೆ. ಇದು ಅಭಿವೃದ್ಧಿಯೇ?’ ಎಂದು ಪ್ರಶ್ನಿಸಿದರು.

‍ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್‌. ಮಲ್ಲೇಶ್‌, ‘ಇಂದು ಸುದ್ದಿಯು ಮಾರಾಟಕ್ಕೆ ಇದೆ. ಜೊತೆಗೆ ಜನರ ತುಂಬಾ ಹತ್ತಿರಕ್ಕೆ ಬಂದಿದೆ. ಎರಡು ನಿಮಿಷಗಳಲ್ಲೇ ಅಂಗೈನಲ್ಲಿರುವ ಮೊಬೈಲ್‌ನಲ್ಲಿ ಸುದ್ದಿ ಅಪ್‌ಡೇಟ್‌ ಆಗುತ್ತಿದೆ. ಇಂದು ಮಾಧ್ಯಮದ ದಿಕ್ಕು ಬದಲಾಗುತ್ತಿದೆ. ದೊಡ್ಡ ತಿರುವು ತೆರೆದುಕೊಳ್ಳಲು ಬಹಳ ದಿನ ಇಲ್ಲ’ ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ ಪ್ರದಾನ: ಪತ್ರಕರ್ತರಾದ ಎನ್‌.ಆರ್‌. ನಟರಾಜ್‌, ರಾಜಶೇಖರ್‌ ಎಚ್‌.ಎಂ, ಮಂಜುನಾಥ ಕಾಡಜ್ಜಿ, ಪರಶುರಾಂ ಎಚ್‌.ಟಿ, ಐ. ಗುರುಶಾಂತಪ್ಪ ಅವರಿಗೆ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜ ಬಡದಾಳ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರವಾಣಿಯ ಕಾವ್ಯಾ ಸ್ವಾಗತಿಸಿದರು. ಸೌಮ್ಯಾ, ಲತಾ, ಪೂರ್ಣಿಮಾ ಪ್ರಾರ್ಥಿಸಿದರು. ಕೂಟದ ಸಂಸ್ಥಾಪಕ ಅಧ್ಯಕ್ಷ ಏಕಾಂತಪ್ಪ, ಟಿ.ವಿ–9 ವರದಿಗಾರ ಬಸವರಾಜ ದೊಡ್ಡಮನಿ ಹಾಜರಿದ್ದರು.

ಜನತಾ ವಾಣಿಯ ವರದಿಗಾರರಾದ ದೇವಿಕಾ ನಿರೂಪಿಸಿದರು. ಪತ್ರಕರ್ತ ಆರಾಧ್ಯ ವಂದಿಸಿದರು.

ಅಂದು ಇಂದಿರಾ, ಇಂದು ಮೋದಿ..
ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಆಕಾಶವಾಣಿ ಹಚ್ಚಿದಾಗಲೆಲ್ಲ ‘ಪ್ರಧಾನಿ ಇಂದಿರಾ ಗಾಂಧಿ...’ ಎಂಬ ಹೆಸರೇ ಹೆಚ್ಚಾಗಿ ಕೇಳಿ ಬರುತ್ತಿತ್ತು. ಇಂದು ಆಕಾಶವಾಣಿಯಲ್ಲಿ ‘ಪ್ರಧಾನಿ ನರೇಂದ್ರ ಮೋದಿ...’ ಅವರ ಹೆಸರೇ ಹೆಚ್ಚಾಗಿ ಕೇಳಿಬರುತ್ತಿದೆ. ಪತ್ರಿಕೆಗಳಲ್ಲೂ ಮೋದಿ ಅವರ ಜಾಹೀರಾತುಗಳೇ ರಾರಾಜಿಸುತ್ತಿವೆ. ತನ್ನ ವಿರುದ್ಧ ಧ್ವನಿ ಎತ್ತುವುದನ್ನು ಪ್ರಭುತ್ವ ಸಹಿಸಿಕೊಳ್ಳುವುದಿಲ್ಲ ಎಂದ ಬಿ.ಎಂ. ಹನೀಫ್‌ ಅವರು, ಎಬಿಪಿ ಸುದ್ದಿವಾಹಿನಿಯ ಪತ್ರಕರ್ತರ ಕೆಲಸಕ್ಕೆ ಕುತ್ತು ತಂದ ಘಟನೆಯನ್ನು ಉದಾಹರಿಸಿದರು.

‘₹ 350 ಬೆಲೆಯ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಈಗ ₹ 900 ಸಮೀಪ ಬಂದಿದೆ. ಹೀಗಿದ್ದರೂ ಇಷ್ಟು ಅಡುಗೆ ಅನಿಲ ಸಿಲಿಂಡರ್‌ ವಿತರಿಸಲಾಗಿದೆ ಎಂಬುದನ್ನು ಮಾತ್ರ ತೋರಿಸಿ, ಬೆಲೆ ಏರಿಕೆಯಾಗಿದ್ದನ್ನು ಮರೆಮಾಚಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ಅಭಿವೃದ್ಧಿ ಎಂದರೆ ಕಮಿಷನ್‌ ಎಂದರ್ಥ. ಯಾವ ಕೆಲಸದಲ್ಲಿ ಕಮಿಷನ್‌ ಸಿಗುತ್ತದೆ ಎಂಬುದನ್ನು ನೋಡಿ ಕೆಲಸ ತೆಗೆದುಕೊಳ್ಳಲಾಗುತ್ತಿದೆ. ಕಾಮಗಾರಿಯ ಶೇ 30ರಷ್ಟು ಹಣ ಕಮಿಷನ್‌ ನೀಡಲು ಬಳಕೆಯಾಗುತ್ತಿದೆ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !