ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಆರೋಗ್ಯ ಸೇವೆ ನೀಡಲು ಸಜ್ಜಾಗಿ

‘ಕೋವಿಡ್‌–19’ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಈಶ್ವರಪ್ಪ ಸೂಚನೆ
Last Updated 30 ಮಾರ್ಚ್ 2020, 15:30 IST
ಅಕ್ಷರ ಗಾತ್ರ

ದಾವಣಗೆರೆ: ‘ಚಿಗಟೇರಿ ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಿರುವುದರಿಂದ ಉಳಿದ ಆರೋಗ್ಯ ಸಮಸ್ಯೆ, ತುರ್ತು ಚಿಕಿತ್ಸೆಗಳಿಗಾಗಿ ಬಾಪೂಜಿ ಮತ್ತು ಎಸ್.ಎಸ್ ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಸೂಚಿಸಿದರು.

ಕೊರೊನಾ ಕೋವಿಡ್‌–19 ನಿಯಂತ್ರಣ ಕುರಿತು ಕೈಗೊಳ್ಳಲಾಗಿರುವ ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜನ ಅನಗತ್ಯವಾಗಿ ಹೊರಗೆ ಓಡಾಡದೇ ಕೊರೊನಾ ಸೋಂಕು ಹರಡದಂತೆ ಸಹಕರಿಸಬೇಕು. ಅದೇ ರೀತಿ ಜಿಲ್ಲಾಡಳಿತವೂ ಜನರಿಗೆ ಎಲ್ಲ ಅಗತ್ಯ ವಸ್ತುಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಲಾಡ್ಜ್‌ಗಳಲ್ಲಿಡಲು ಸಲಹೆ: ಹೋಂ ಕ್ವಾರಂಟೈನ್‌ನಲ್ಲಿರುವ 102 ಜನ ನಗರದಲ್ಲಿ ಓಡಾಡುತ್ತಿದ್ದಾರೆ ಎಂಬ ದೂರುಗಳು ಜನರಿಂದ ಕೇಳಿ ಬರುತ್ತಿದೆ. ಇವರಿಂದ ಉಳಿದವರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ನಗರದ ಹಲವು ಲಾಡ್ಜ್‌ಗಳನ್ನು ಗುರುತಿಸಿ ಅಟ್ಯಾಚ್ಡ್‌ ಬಾತ್‌ರೂಂ ಇರುವ ಕೊಠಡಿಯಲ್ಲಿ ಇವರನ್ನು ಪ್ರತ್ಯೇಕವಾಗಿ ಇರಿಸಬೇಕು ಎಂದು ಮೇಯರ್‌ ಬಿ.ಜಿ. ಅಜಯಕುಮಾರ್‌ ಸಲಹೆ ನೀಡಿದರು. ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ತಾಲ್ಲೂಕು ಸೇರಿ ಜಿಲ್ಲೆಯಾದ್ಯಂತ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆ ವೈದ್ಯರು ದರಪಟ್ಟಿಯನ್ನು ಸಿದ್ಧವಿರಿಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳ ಸಹಕಾರ ಚೆನ್ನಾಗಿದೆ. ಇಂಥ ಸಂದರ್ಭದಲ್ಲಿ ಖಾಸಗಿ ವೈದ್ಯರ ಜವಾಬ್ದಾರಿಯೂ ಹೆಚ್ಚಿದೆ ಎಂದರು.

ಬಿಸಿಯೂಟ ಗೊಂದಲ: ಶಾಲಾ ಮಕ್ಕಳಿಗೆ ಬಿಸಿಯೂಟವನ್ನು ಅವರವರ ಮನೆಗಳಿಗೆ ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕರು ತಲುಪಿಸಬೇಕು ಎಂಬ ಸರ್ಕಾರದ ಆದೇಶದಿಂದ ಶಿಕ್ಷಕರು ಗಾಬರಿಯಾಗಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ, ಡಿಡಿಪಿಐ ಅವರು ಶಿಕ್ಷಕರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕು. ಎಸ್‌.ಡಿ.ಎಂ.ಸಿ. ಅವರ ಸಹಕಾರವನ್ನೂ ಪಡೆದುಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.

ಶಾಸಕ ಎಂ.ಪಿ. ರೇಣುಕಾಚಾರ್ಯ, ‘ಕೊರೊನಾ ಕಾರಣಕ್ಕಾಗಿ ಹಳ್ಳಿಗಳಲ್ಲಿ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕೆಲವೆಡೆ ಜೂಜಾಟದ ಹಾವಳಿಯೂ ಇದೆ. ಇದಕ್ಕೆ ಕಡಿವಾಣ ಹಾಕಬೇಕು. ಹೊನ್ನಾಳಿಗೆ 4,695 ಜನ ಹೊರಗಿನಿಂದ ಬಂದಿದ್ದಾರೆ. ಇವರನ್ನು ತಪಾಸಣೆಗೊಳಪಡಿಸಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್‌, ‘ನಗರದ ಹಿಂದುಳಿದ ಪ್ರದೇಶಗಳಾದ ಆಜಾದ್‌ನಗರ ಸೇರಿ ಸ್ಲಂಗಳಲ್ಲಿ ಕೊರೊನಾ ಬಗ್ಗೆ ಅರಿವು ಇಲ್ಲ. ಇಲ್ಲಿನ ಜನರ ಆರೋಗ್ಯ ತಪಾಸಣೆ ಮಾಡಿಸಬೇಕು. ಬಿಪಿ, ಶುಗರ್ ಮಾತ್ರೆಗಳನ್ನೂ ರೋಗಿಗಳಿಗೆ ತಲುಪಿಸುವ ಕೆಲಸ ಆಗಬೇಕು’ ಎಂದು ಹೇಳಿದರು.

ನಗರದಲ್ಲಿ 50 ಸ್ಲಂಗಳಿದ್ದು, ವೈದ್ಯರ ತಂಡ ರಚಿಸಿ ಹಂತ–ಹಂತವಾಗಿ ಇವರ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಮೇಯರ್‌ ಸಲಹೆ ನೀಡಿದರು.

ಶಾಸಕ ಎಸ್.ವಿ. ರಾಮಚಂದ್ರಪ್ಪ, ‘ಜಗಳೂರು ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದ್ದು, ನೀರಿಗಾಗಿ ಜನ ಅಲೆದಾಡುತ್ತಿದ್ದಾರೆ. ತಾಲ್ಲೂಕು ಪಂಚಾಯಿತಿಯಿಂದ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಬೇಕು’ ಎಂದು ಕೋರಿದರು.

ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ‘ಪುರಸಭೆ, ನಗರಸಭೆಗಳಲ್ಲಿ ಔಷಧ ಸಿಂಪಡಣೆ ಕಾರ್ಯವಾಗುತ್ತಿದೆ. ಗ್ರಾಮ ಮಟ್ಟದಲ್ಲೂ 14ನೇ ಹಣಕಾಸು ಅಥವಾ ಇತರೆ ಅನುದಾನದಲ್ಲಿ ಔಷಧ ಸಿಂಪಡಣೆ ಕಾರ್ಯ ಮಾಡಿಸಬೇಕು’ ಎಂದು ಮನವಿ ಂಆಡಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಜಿಲ್ಲೆಯಲ್ಲಿ ಅಗತ್ಯ ಸೇವೆಗಳ ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ಸೌಲಭ್ಯ ಒದಗಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಬೀಜ, ರಸಗೊಬ್ಬರಗಳನ್ನು ರೈತರಿಗೆ ಒದಗಿಸುವಂತೆ ಕೃಷಿ ಇಲಾಖೆಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ 2,500 ಜನರಿಗೆ ಪೊಟ್ಟಣದಲ್ಲಿ ಆಹಾರ ಹಂಚಿಕೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲೂ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗುವುದು’ ಎಂದರು.

ಕೊರೊನಾ ಬಗ್ಗೆ ಜಿಲ್ಲೆಯ ಅಂಕಿ–ಸಂಖ್ಯೆಗಳ ವಿವರ ನೀಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ ರಾಘವನ್, ‘ಕೊರೊನಾ ಪಾಸಿಟಿವ್ ಪ್ರಕರಣ ಇರುವ ನಿಜಲಿಂಗಪ್ಪ ಬಡಾವಣೆ ಮತ್ತು ಜಿಎಂಐಟಿ ಸುತ್ತಮುತ್ತ 5 ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಬಫರ್‌ ಜೋನ್‌ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಔಷಧ ಸಿಂಪಡಣೆ ಮಾಡಿ ಸರ್ವೇಕ್ಷಣೆಗೆ ಒಳಪಡಿಸಲಾಗಿದೆ’ ಎಂದು ತಿಳಿಸಿದರು.

ಶಾಸಕರಾದ ಎಸ್.ಎ.ರವೀಂದ್ರನಾಥ್, ಪ್ರೊ. ಲಿಂಗಣ್ಣ, ಉಪ ಮೇಯರ್‌ ಸೌಮ್ಯ ನರೇಂದ್ರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಘವೇಂದ್ರ ಸ್ವಾಮಿ, ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ.ನಾಗರಾಜ್, ಎಸ್‌.ಎಸ್‌. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಕೆ.ಎನ್‌. ಕಾಳಪ್ಪನವರ್‌, ಪ್ರಾಂಶುಪಾಲ ಪ್ರಸಾದ್, ಬಾಪೂಜಿ ಆಸ್ಪತ್ರೆಯ ಡಾ. ಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಡಿಸಿ ಬಗ್ಗೆ ರೇಣುಕಾಚಾರ್ಯ ಅಸಮಾಧಾನ

ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ನಗರದಲ್ಲಿ ಭಾನುವಾರ ವಿವಿಧೆಡೆ ಮನೆ ಮನೆಗೆ ತೆರಳಿದಾಗ ತಮಗೆ ಬುದ್ಧಿವಾದ ಹೇಳಿದ ಜಿಲ್ಲಾಧಿಕಾರಿ ಕ್ರಮಕ್ಕೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಸಚಿವರ ಎದುರು ಅಸಮಾಧಾನ ವ್ಯಕ್ತಪಡಿಸಿದರು.

‘ಮಾಧ್ಯಮದವರ ಎದುರಿನಲ್ಲೇ ನನಗೆ ಮುಜುಗರ ಆಗುವಂತೆ ಜಿಲ್ಲಾಧಿಕಾರಿ ವರ್ತಿಸಿದ್ದಾರೆ. ಜನ ನನ್ನನ್ನು ಆಯ್ಕೆ ಮಾಡಿರುವುದು ಮನೆಯಲ್ಲಿ ಕುಳಿತು ತಿಂಡಿ ತಿನ್ನಲು ಅಲ್ಲ. ನಮ್ಮ ಮೇಲೂ ಜವಾಬ್ದಾರಿ ಇರುತ್ತದೆ. ಇಂಥ ಸಂದರ್ಭದಲ್ಲಿ ಜನರ ಬಳಿಗೆ ಹೋಗಬೇಕಾಗುತ್ತದೆ. ನಾನೇನೂ ಡಿಸಿ ಜೊತೆಗೆ ಸಂಘರ್ಷಕ್ಕೆ ಇಳಿಯುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಲು ಜಿಲ್ಲಾಧಿಕಾರಿ ಮುಂದಾದರೂ ಅವಕಾಶ ನೀಡಲಿಲ್ಲ.

ಮಧ್ಯ ಪ್ರವೇಶಿಸಿದ ಸಚಿವ ಈಶ್ವರಪ್ಪ, ‘ಪಡ್ಡೆ ಹುಡುಗರು ಸುತ್ತಾಡುತ್ತಿದ್ದಾರೆ. ಇದರಿಂದ ಮನೆಯಲ್ಲಿರುವವರೆಗೆ ತೊಂದರೆಯಾಗುತ್ತಿದೆ. ಇದೇ ರೀತಿಯಾದರೆ ಮಿಲಿಟರಿಯವರನ್ನು ಕಳುಹಿಸುತ್ತೇವೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಹೀಗಾಗಿ ಯಾರೂ ಅನಗತ್ಯವಾಗಿ ಹೊರಗೆ ಬರಬಾರದು’ ಎಂದು ಹೇಳುವ ಮೂಲಕ ಈ ವಿಷಯಕ್ಕೆ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT