ಮಂಗಳವಾರ, ಸೆಪ್ಟೆಂಬರ್ 21, 2021
25 °C
ರಫೇಲ್‌ ಹಗರಣ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಸರ್ವಾಧಿಕಾರಿ ಮೋದಿ ನಿರ್ಗಮಿಸುವ ಕಾಲ ಬಂದಿದೆ: ಶಾಮನೂರು ಶಿವಶಂಕರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದಾವಣಗೆರೆ: ‘ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್‌ಗಿಂತಲೂ ಹೆಚ್ಚು ಸರ್ವಾಧಿಕಾರಿಯಾಗಿದ್ದು, ಅವರು ಅಧಿಕಾರದಿಂದ ನಿರ್ಗಮಿಸುವ ಕಾಲ ಬಂದಿದೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ರಫೇಲ್‌ ಹಗರಣ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪಕ್ಷ ನಗರದ ಜಯದೇವ ವೃತ್ತದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಮೋದಿಗೆ ಈಗ ಅವರ ಕಡೆಯಲ್ಲೇ ಹಲವು ವಿರೋಧಿಗಳಿದ್ದಾರೆ. ಉತ್ತರ ಭಾರತದಲ್ಲಿ ಜನ ಮೋದಿಯನ್ನು ಬಯ್ಯುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನಗಳಲ್ಲಿ ಒಂದು ಸ್ಥಾನವೂ ಬಿಜೆಪಿ ಗೆಲ್ಲುವುದಿಲ್ಲ. ಈ ವಿಚಾರ ಗೊತ್ತಾಗಿದ್ದರಿಂದ ಮೋದಿ, ಹಣ ಕೊಟ್ಟು ಸಮೀಕ್ಷೆ ನಡೆಸಿ ಮುಂದಿನ ಬಾರಿಯೂ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂದು ಮಾಧ್ಯಮಗಳ ಮೂಲಕ ಹೇಳಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಲೋಕಸಭೆಯಲ್ಲಿ ಪ್ರತಿಪಕ್ಷದವರ ಪ್ರಶ್ನೆಗಳಿಗೆ ಉತ್ತರ ನೀಡುವ ಶಕ್ತಿ ಮೋದಿಗೆ ಇಲ್ಲ. ಹೀಗಾಗಿ ಪುನಃ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು. ರಾಜ್ಯ ಸರ್ಕಾರವನ್ನು ಕಡೆವಲು ಬಿಜೆಪಿಯವರು ಮುಂದಾದರೆ, ಅವರ ಕಡೆಯವರನ್ನು ನಮ್ಮ ಕಡೆಗೆ ಎಳೆದುಕೊಳ್ಳಬೇಕು. ಮೋದಿಯನ್ನು ಮನೆಗೆ ಕಳುಹಿಸಲು ಈಗಿನಿಂದಲೇ ಸಿದ್ಧತೆ ಮಾಡಬೇಕು’ ಎಂದು ಹೇಳಿದರು.

‘ಕಾಂಗ್ರೆಸ್‌ ಬಳಿ ಹಣ ಇಲ್ಲ. ಬಿಜೆಪಿಯುವರು ಮುಂದಿನ ಚುನಾವಣೆಯಲ್ಲಿ ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಾರೆ. ಹೀಗಾಗಿ ನಾವು ಹೆಚ್ಚು ಎಚ್ಚರಿಕೆಯಿಂದ ಇರಬೇಕು’ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಶೆಟ್ಟಿ, ‘ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಅಲುಗಾಡಿಸಲು ಬಿಜೆಪಿ ಯತ್ನಿಸುತ್ತಿದೆ. ಶಾಮನೂರು ಶಿವಶಂಕರಪ್ಪ ಅವರನ್ನೂ ತಮ್ಮ ಪಕ್ಷಕ್ಕೆ ಬರುವಂತೆ ದೂರವಾಣಿ ಕರೆ ಮಾಡಿದ್ದರು. ಹಿಂದುತ್ವದ ಆಧಾರದಲ್ಲಿ ಬಿಜೆಪಿ ಜನರನ್ನು ಸೆಳೆಯಲು ಯತ್ನಿಸುತ್ತಿದೆ. ಯುವಕರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಪ್ರತಿಭಟನೆಯಲ್ಲಿ ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್‌ ಚಮನ್‌ಸಾಬ್‌, ಪಾಲಿಕೆ ಸದಸ್ಯ ಎಂ. ಹಾಲೇಶ್‌, ಬಸಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಎಚ್‌. ಓಬಳಪ್ಪ, ಕೆ.ಎಸ್‌. ಬಸವಂತಪ್ಪ, ಅಯೂಬ್‌ ಪೈಲ್ವಾನ್‌, ಎ. ನಾಗರಾಜ್‌, ಯುವ ಕಾಂಗ್ರೆಸ್‌ ಹಾಗೂ ಎನ್‌.ಎಸ್‌.ಐ.ಯು ಪದಾಧಿಕಾರಿಗಳೂ ಪಾಲ್ಗೊಂಡಿದ್ದರು.

‘ಇವರಪ್ಪ ಡ್ಯಾಂ ಕಟ್ಟಿಸಿದನಾ?’

‘ಕಾಂಗ್ರೆಸ್‌ ಪಕ್ಷ ದೇಶದಲ್ಲಿ ಏನೂ ಕೆಲಸ ಮಾಡಿಲ್ಲ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ದೇಶದಲ್ಲಿ ಇವರ ಅಪ್ಪ ಡ್ಯಾಂ ಕಟ್ಟಿಸಿದನಾ? ಸಾವಿರಾರು ಯುನಿವರ್ಸಿಟಿಗಳನ್ನು ಯಾರು ನಿರ್ಮಿಸಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ಪ್ರಶ್ನಿಸಿದರು.

‘ಬ್ರಿಟಿಷರ ಕಾಲದಲ್ಲಿ ಹೋರಾಡುವ ಬದಲು ಕ್ಷಮಾಪಣಾ ಪತ್ರ ಬರೆದುಕೊಟ್ಟ ಇವರು ಈಗ ದೇಶದ ಆಡಳಿತ ನಡೆಸುತ್ತಿದ್ದಾರೆ. ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ರಫೇಲ್‌ ಯುದ್ಧ ವಿಮಾನ ಖರೀದಿಸಲು ಎಚ್‌ಎಎಲ್‌ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿ ಚುನಾವಣೆಯಲ್ಲಿ ಹಣಕಾಸಿನ ನೆರವು ನೀಡುವವರ ಜೊತೆ ಡೀಲ್‌ ಮಾಡಿಕೊಳ್ಳಲಾಗಿದೆ’ ಎಂದು ಅವರು ಆರೋಪಿಸಿದರು.

‘ದೇಶದಲ್ಲಿ ಎರಡೇ ಜನ ಅಧಿಕಾರ ನಡೆಸುತ್ತಿದ್ದಾರೆ. ಒಬ್ಬ ಮೋದಿ ಹಾಗೂ ಇನ್ನೊಬ್ಬ ಅಮಿತ್‌ ಶಾ. ಸಿಬಿಐ ಹಾಗೂ ಐಟಿ ಅಧಿಕಾರಿಗಳು ಬೆಳಿಗ್ಗೆ ಎದ್ದ ತಕ್ಷಣ ಅಮಿತ್‌ ಶಾ ಮನೆಗೆ ಬರಬೇಕು. ಇಂದು ಯಾರ ಮನೆಯ ಮೇಲೆ ದಾಳಿ ನಡೆಸಬೇಕು ಎಂದು ಅಲ್ಲಿ ನಿರ್ಧಾರವಾಗುತ್ತದೆ’ ಎಂದು ದೂರಿದರು.

ರಾಜ್ಯದಲ್ಲಿ ಮುಂದಿನ ಲೋಕಸಭಾ ಚುನಾವಣೆ ಕಾಂಗ್ರೆಸ್‌ ಸರ್ಕಾರದ ನೇತೃತ್ವದಲ್ಲಿ ನಡೆಯುವುದನ್ನು ತಪ್ಪಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಮುಂದಾಳತ್ವದಲ್ಲಿ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ತಂತ್ರ ರೂಪಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

* ನೋಟ್‌ ಬ್ಯಾನ್‌ ಮಾಡಿ ಗಳಿಸಿದ ಹಣವನ್ನು ಬಿಜೆಪಿಯವರು ಲೋಕಸಭಾ ಚುನಾವಣೆಯಲ್ಲಿ ಚೆಲ್ಲುತ್ತಾರೆ. ಕಾಂಗ್ರೆಸ್‌ ಕಾರ್ಯಕರ್ತರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು.
– ಅಬ್ದುಲ್‌ ಜಬ್ಬಾರ್‌, ಎಂಎಲ್‌ಸಿ

* ಜನರ ವೋಟ್‌ನ ಬದಲು ಹಣದಿಂದ ಚುನಾವಣೆ ಗೆಲ್ಲಲ್ಲು ಮೋದಿ ಮುಂದಾಗಿದ್ದಾರೆ. ಹೀಗಾಗಿ ಮೋದಿಗೆ ಪಾಠ ಕಲಿಸಲು ಜನ ಸಿದ್ಧರಾಗುತ್ತಿದ್ದಾರೆ.
– ಸೈಯದ್‌ ಸೈಫುಲ್ಲಾ, ಕಾಂಗ್ರೆಸ್‌ ಮುಖಂಡ

* ಕಾಂಗ್ರೆಸ್‌ ಪಕ್ಷದ ಮೇಲೆ ಹಗರಣದ ಗೂಬೆ ಕೂರಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್‌ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ.
– ಎಚ್‌.ಬಿ. ಮಂಜಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು