ಶುಕ್ರವಾರ, ನವೆಂಬರ್ 15, 2019
22 °C

ಸ್ಮಾರ್ಟ್‌ ಸಿಟಿ ಕಾಮಗಾರಿ ವಿಳಂಬಕ್ಕೆ ಸಂಸದರ ಕಿಡಿ

Published:
Updated:

ದಾವಣಗೆರೆ: ‘ನಗರದಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಬಹಳ ವಿಳಂಬವಾಗುತ್ತಿದೆ. ಇದರಿಂದ ನಮಗೆ ಕೆಟ್ಟ ಹೆಸರು ಬರುತ್ತಿದೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಅಧಿಕಾರಿಗಳ ಮೇಲೆ ಕಿಡಿಕಾರಿದರು.

ನಗರದ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು 2021ರೊಳಗೆ ಸ್ಮಾರ್ಟ್‌ ಸಿಟಿ ಕಾಮಗಾರಿ ಪೂರ್ಣಗೊಳಿಸುವಂತೆ ಗಡುವು ನೀಡಿದ್ದರು. ₹ 318 ಕೋಟಿ ಬಿಡುಗಡೆಯಾಗಿದೆ. ಮೂರು ವರ್ಷಗಳಾದರೂ ಕೇವಲ ₹ 18 ಕೋಟಿ ಖರ್ಚಾಗಿದೆ. ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸ್ಮಾರ್ಟ್‌ ರಸ್ತೆ ಕಾಮಗಾರಿ ವಿಳಂಬವಾಗಿರುವುದಕ್ಕೆ ಗುತ್ತಿಗೆದಾರರ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ’ ಎಂದು ಸಂಸದರು ಪ್ರಶ್ನಿಸಿದರು. ಇದಕ್ಕೆ ಸಮಜಾಯಿಷಿ ನೀಡಲು ಮುಂದಾದ ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಅಶದ್‌ ಷರೀಫ್‌ ಅವರು, ಸ್ಥಳೀಯ ಕೆಲವು ಸಮಸ್ಯೆಗಳನ್ನು ಉಲ್ಲೇಖಿಸಿದರು. ಇದರಿಂದ ಸಿಟ್ಟಿಗೆದ್ದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ನೀವು ಸ್ಮಾರ್ಟ್‌ ಸಿಟಿ ಎಂ.ಡಿ.ಯೋ ಅಥವಾ ಗುತ್ತಿಗೆದಾರರೋ? ಅವರ ಪರ ಏಕೆ ಮಾತನಾಡುತ್ತೀರಿ’ ಎಂದು ತರಾಟೆಗೆ ತೆಗೆದುಕೊಂಡರು.

ಶೀಘ್ರದಲ್ಲೇ ಸ್ಮಾರ್ಟ್‌ ಸಿಟಿ ಬಗ್ಗೆ ಸಭೆ ನಡೆಸಿ ಕಾಮಗಾರಿಗಳಿಗೆ ಚುರುಕು ನೀಡಲಾಗುವುದು ಎಂದು ಜಿಲ್ಲಾಧಿಕಾರಿ, ಸಂಸದರಿಗೆ ಭರವಸೆ ನೀಡಿದರು.

ಉದ್ಯಾನಗಳಲ್ಲಿ ಅಳವಡಿಸಿರುವ ಇ–ಶೌಚಾಲಯ ಕಾರ್ಯನಿರ್ವಹಿಸದೇ ಇರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ ಎಂದು ಶಾಸಕ ಎಸ್‌.ಎ. ರವೀಂದ್ರನಾಥ್‌ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಕೆಲವು ಕಿಡಿಗೇಡಿಗಳು ಕಾಯಿನ್‌ ಬದಲು, ಅದನ್ನು ಹೋಲುವ ರಬ್ಬರ್‌ ವೈಸರ್‌ಗಳನ್ನು ಹಾಕುತ್ತಿರುವುದರಿಂದ ಯಂತ್ರ ಕೆಡುತ್ತಿದೆ. ದುರಸ್ತಿ ಮಾಡಲು ಕಂಪನಿಯವರನ್ನು ಕರೆಸಬೇಕಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಇ–ಆಟೊ ಬಗ್ಗೆ ಇನ್ನಷ್ಟು ಪ್ರಚಾರ ಮಾಡುವಂತೆ ಸಂಸದರು ಸೂಚಿಸಿದರು. ಹಳೆ ಬಸ್‌ನಿಲ್ದಾಣ ಅಭಿವೃದ್ಧಿ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ತಾಕೀತು ಮಾಡಿದರು.

ಮಂಡಕ್ಕಿ ಭಟ್ಟಿಗೆ ಕೋಕ್‌?

ಸ್ಮಾರ್ಟಿ ಸಿಟಿ ಯೋಜನೆಯಡಿ ಮಂಡಕ್ಕಿ ಭಟ್ಟಿ ಅಭಿವೃದ್ಧಿಗೆ ₹ 318 ಕೋಟಿ ಮೀಸಲಿಡಲಾಗಿತ್ತು. ಇದರಲ್ಲಿ ₹ 18 ಕೋಟಿ ಮೂಲಸೌಲಭ್ಯ ಅಭಿವೃದ್ಧಿಗೆ ನಿಗದಿಪಡಿಸಲಾಗಿದೆ. ಮಾಲೀಕರು ತಂತ್ರಜ್ಞಾನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಹಾಗೂ ಸ್ಥಳಾಂತರಕ್ಕೆ ಸೂಕ್ತ ಜಾಗ ಲಭಿಸದೇ ಇರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಹೀಗಾಗಿ ಸದ್ಯ ₹ 100 ಕೋಟಿ ಅನುದಾನವನ್ನು ಮಾತ್ರ ಇದಕ್ಕೆ ಮೀಸಲಿಡಲಾಗಿದೆ ಎಂದು ಅಶದ್‌ ಷರೀಫ್‌ ಮಾಹಿತಿ ನೀಡಿದರು.

ಇದಕ್ಕೆ ನಿಗದಿಪಡಿಸಿದ್ದ ಅನುದಾನದಲ್ಲಿ ₹ 120 ಕೋಟಿ ವೆಚ್ಚದಲ್ಲಿ ಕೆ.ಎಸ್‌.ಆರ್‌.ಟಿ.ಸಿ ಬಸ್‌ನಿಲ್ದಾಣ, ₹ 65 ಕೋಟಿ ವೆಚ್ಚದಲ್ಲಿ ರಿಂಗ್‌ ರಸ್ತೆ, ₹ 25 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ನಿಗದಿತ ಸಮಯದಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗದೇ ಇರುವುದರಿಂದ ಮಂಡಕ್ಕಿ ಭಟ್ಟಿ ಕಾಮಗಾರಿಯನ್ನು ಕೈಬಿಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)