ಗುರುವಾರ , ಡಿಸೆಂಬರ್ 5, 2019
25 °C
21 ದಿನಗಳ ಒಳಗೆ ಮುಗಿಯಲಿದೆ ಪೊಲೀಸ್‌ ಪರಿಶೀಲನೆ

ದಾಖಲೆ ಪರಿಶೀಲನೆಗೆ ವೇಗ ನೀಡಿದ ಎಂ–ಪಾಸ್‌ಪೋರ್ಟ್‌

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪಾಸ್‌ಪೋರ್ಟ್‌ಗಾಗಿ ಅರ್ಜಿ ಹಾಕುವವರ ದಾಖಲೆಗಳನ್ನು, ಕ್ರಿಮಿನಲ್‌ ಪ್ರಕರಣಗಳಿವೆಯೇ ಎಂಬ ವಿವರಗಳ ಪರಿಶೀಲನೆ ಪ್ರಕ್ರಿಯೆಗೆ ಹಲವು ಸಮಯ ಬೇಕಾಗಿತ್ತು. ಅದಕ್ಕೆಲ್ಲ ಎಂ–ಪಾಸ್‌ಪೋರ್ಟ್‌ (ಮೊಬೈಲ್‌ ಪಾಸ್‌ಪೋರ್ಟ್‌ ಅಪ್ಲಿಕೇಶನ್‌) ತೆರೆ ಎಳೆದಿದೆ. ಈಗ 21 ದಿನಗಳ ಒಳಗೆ ಪರಿಶೀಲನೆ ಪ್ರಕ್ರಿಯೆ ಮುಗಿಯುತ್ತಿದೆ.

ಹಿಂದೆ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದರೆ ಯಾವಾಗ ಪರಿಶಿಲನೆ ನಡೆಯುತ್ತದೆ ಎಂದು ಕಾದು ಕುಳಿತುಕೊಳ್ಳಬೇಕಿತ್ತು. ಆನಂತರ ಸಕಾಲದ ಅಡಿಯಲ್ಲಿ ಬಂದಿದ್ದರಿಂದ ಅದಕ್ಕೆ 21 ದಿನಗಳ ಅವಧಿ ನಿಗದಿಗೊಳಿಸಲಾಯಿತು. ಆನಂತರವೂ ಸುಮಾರು 45 ದಿನಗಳು ಹಿಡಿಯುತ್ತಿತ್ತು. 21 ದಿನ ದಾಟಿದ ಕೂಡಲೇ ಓವರ್‌ಡ್ಯೂ ಎಂದು ದಾಖಲಾಗುತ್ತಿತ್ತು. ಯಾಕೆಂದರೆ ಪಾಸ್‌ಪೋರ್ಟ್‌ ಕಚೇರಿಯಿಂದ ಜಿಲ್ಲಾ ಪೊಲೀಸ್‌ ಕೇಂದ್ರಕ್ಕೆ ಮಾಹಿತಿ ಬರುತ್ತಿತ್ತು. ನಂತರ ಸಂಬಂಧಪಟ್ಟ ಅರ್ಜಿದಾರರಿಗೆ ಮಾಹಿತಿ ಹೋಗುತ್ತಿತ್ತು. ಸ್ಥಳೀಯ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಲು ಹೇಳಲಾಗುತ್ತಿತ್ತು. ಬಳಿಕ ಪೊಲೀಸರು ಅರ್ಜಿದಾರರ ಪೂರ್ವಾಪರಗಳನ್ನು ತಿಳಿಯಬೇಕಿತ್ತು.

ಜಿಲ್ಲೆಯಲ್ಲಿ ಅ. 4ರಂದು ಈ ಸೇವೆ ಆರಂಭಗೊಂಡಿದೆ. ಅದಕ್ಕಿಂತ ಮೊದಲು ಜಿಲ್ಲಾ ಕೇಂದ್ರದ ಸಿಬ್ಬಂದಿಗೆ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ತರಬೇತಿ ನೀಡಲಾಗಿದೆ. ಆನಂತರ ಪ್ರತಿ ಪೊಲೀಸ್‌ ಠಾಣೆಯಲ್ಲಿ ಒಬ್ಬ ರೈಟರ್‌ಗೆ ತರಬೇತಿ ನೀಡಲಾಗಿದೆ. ಪ್ರತಿ ಪೊಲೀಸ್‌ ಠಾಣೆಗೆ ಒಂದರಂತೆ ಟ್ಯಾಬ್‌ ವಿತರಿಸಲಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಹನುಮಂತರಾಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾ ಪೊಲೀಸ್‌ ಕಚೇರಿಗೆ ಮಾಹಿತಿ ಬರುವ ಬದಲು ನೇರವಾಗಿ ಆಯಾ ಪೊಲೀಸ್‌ ಠಾಣೆಗೆ ಮಾಹಿತಿ ರವಾನೆಯಾಗುತ್ತದೆ. ಅಲ್ಲಿಂದ ಪೊಲೀಸರು ಟ್ಯಾಬ್‌ ಹಿಡಿದುಕೊಂಡು ಅರ್ಜಿದಾರನ ಮನೆಗೇ ಹೋಗಿ ಫೋಟೊ, ಇತರ ಮಾಹಿತಿಗಳನ್ನು ಅಪ್‌ಲೋಡ್‌ ಮಾಡುತ್ತಾರೆ. ಇದರಿಂದ ವೇಗವಾಗಿ ಕೆಲಸಗಳಾಗುತ್ತವೆ’ ಎಂದು ಎಂ. ಪಾಸ್‌ಪೋರ್ಟ್‌ ನೋಡಲ್‌ ಅಧಿಕಾರಿಯೂ ಆಗಿರುವ ಎಎಸ್‌ಪಿ ರಾಜೀವ್‌ ಎಂ. ಮಾಹಿತಿ ನೀಡಿದರು.

‘ಜಿಲ್ಲಾ ವಿಶೇಷ ಬ್ಯೂರೊ ಅಡಿಯಲ್ಲಿ ಪಾಸ್‌ಪೋರ್ಟ್‌, ಉದ್ಯೋಗ ಪರಿಶೀಲನೆ ಮುಂತಾದವುಗಳು ಬರುತ್ತವೆ. ಹಿಂದೆ ಪಾಸ್‌ಪೋರ್ಟ್‌ ಮಾಡಿದವರ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಕಟ್ಟಿಡಬೇಕಿತ್ತು. ಈಗ ಎಂ–ಪಾಸ್‌ಪೋರ್ಟ್‌ ಬಂದಿದ್ದರಿಂದ ವೇಗದ ಜತೆಗೆ ಕಾಗದ ರಹಿತವೂ ಆಗಿದೆ’ ಎನ್ನುತ್ತಾರೆ ಜಿಲ್ಲಾ ವಿಶೇಷ ಬ್ಯೂರೊ ಮುಖ್ಯಸ್ಥ ಇನ್‌ಸ್ಪೆಕ್ಟರ್‌ ಸತೀಶ್‌ ಕುಮಾರ್‌ ಯು.

ಹೆಡ್‌ಕಾನ್‌ಸ್ಟೆಬಲ್‌ ಪ್ರಭಾಕರ ಎ.ಆರ್‌. ಜಿಲ್ಲಾ ಕೇಂದ್ರದಲ್ಲಿ ಎಂ–ಪಾಸ್‌ಪೋರ್ಟ್‌ ನಿರ್ವಹಣೆ ಮಾಡುತ್ತಿದ್ದಾರೆ. ಈ ಕಾರ್ಯಕ್ಕಾಗಿಯೇ ಪಾಸ್‌ಪೋರ್ಟ್‌ ಇಲಾಖೆ ಪ್ರತ್ಯೇಕ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ನೀಡಿದೆ.

ಪ್ರತಿಕ್ರಿಯಿಸಿ (+)