ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಲೋಕ ಅದಾಲತ್: 1262 ಪ್ರಕರಣಗಳ ಇತ್ಯರ್ಥ

10 ಕೋಟಿಗೂ ಹೆಚ್ಚು ಪರಿಹಾರ ನೀಡಿಕೆ
Last Updated 13 ಜುಲೈ 2019, 15:29 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ದಾವಣಗೆರೆ: ತಂದೆ–ತಾಯಿಗಳ ಮಾತು ಕೇಳದ ಮಗ ಹುಡುಗಿಯನ್ನು ಪ್ರೇಮಿಸಿ ಮದುವೆಯಾದ. ಅವನ ಜೊತೆ ಹೋಗಲು ಬಯಸದ ಹೆತ್ತವರು ಬೇರೆ ಮನೆ ಮಾಡಿಕೊಟ್ಟರು. ಆದರೂ ಮಗ ತಂದೆ–ತಾಯಂದಿರು ವಾಸವಿರುವ ಮನೆಯಲ್ಲಿ ಭಾಗ ಕೇಳುತ್ತಿದ್ದ. ಇದನ್ನು ಕೊಡಲು ಒಪ್ಪದೇ ಈ ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು. ಮೂರು ವರ್ಷಗಳಿಂದ ಬಾಕಿ ಇದ್ದ ಪ್ರಕರಣಕ್ಕೆ ಶನಿವಾರ ಇತ್ಯರ್ಥವಾಯಿತು.

ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಶನಿವಾರ ದಾವಣಗೆರೆಯ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇಂತಹ ಹಲವು ಪ್ರಕರಣಗಳು ಇತ್ಯರ್ಥವಾದವು.

ಬಡ್ಡಿಗಾಗಿ ಹಣ ನೀಡಿದ್ದ ಪ್ರಕರಣವೊಂದು ಕೋರ್ಟ್ ಮೆಟ್ಟಿಲೇರಿತ್ತು. ₹2 ಲಕ್ಷ ಮೊತ್ತಕ್ಕೆ ಪ್ರಾಮಿಸರಿ ನೋಟ್ ಬರೆದುಕೊಡಲಾಗಿತ್ತು. ಈ ದಿನ ಅದು ₹1.48 ಲಕ್ಷಕ್ಕೆ ಕೊಡಲು ಇತ್ಯರ್ಥವಾಯಿತು.

‘ನಾನು ಆರು ಪ್ರಕರಣಗಳನ್ನು ತೆಗೆದುಕೊಂಡಿದ್ದೆ ಅವುಗಳಲ್ಲಿ ಶನಿವಾರ ನಾಲ್ಕು ಇತ್ಯರ್ಥವಾದವು. ಎರಡು ಪ್ರಕರಣಗಳು ಆಗಲಿಲ್ಲ. ಅವುಗಳಲ್ಲಿ 2 ಚೆಕ್‌ ಬೌನ್ಸ್ ಪ್ರಕರಣಗಳು, ಒಂದು ನಿರ್ಬಂಧಾಕಾಜ್ಞೆ ಮತ್ತೊಂದು ಹಣ ಕೊಡಿಸುವ ಪ್ರಕರಣಗಳು ಇದ್ದವು’ ಎಂದು ವಕೀಲರೊಬ್ಬರು ತಿಳಿಸಿದರು.

1,262 ಪ್ರಕರಣಗಳ ಇತ್ಯರ್ಥ

ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 4,503 ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದು, 1,262 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ₹10,30,003,470 ಲಕ್ಷದಷ್ಟು ಪರಿಹಾರ ಕೊಡಿಸಲಾಗಿದೆ.

‘ಜಿಲ್ಲೆಯ 18 ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯಿತು. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 2,228 ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದು, 469 ಹಾಗೂ 793 ನ್ಯಾಯಾಲಯದಲ್ಲಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದು, ₹2,00,86896 ಮೊತ್ತವನ್ನು ಕೊಡಿಸಲಾಯಿತು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್‌.ಬಡಿಗೇರ್ ಮಾಹಿತಿ ನೀಡಿದರು.

‘ಬ್ಯಾಂಕ್ ವಸೂಲಾತಿಯಲ್ಲಿ 1977 ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದು, ಅವುಗಳಲ್ಲಿ 240 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 1,82,62,691 ಪರಿಹಾರ ಕೊಡಿಸಲಾಯಿತು. ವಿದ್ಯುತ್ ಶುಲ್ಕಗಳಿಗೆ ಸಂಬಂಧಿಸಿಂದಂತೆ 131 ಪ್ರಕರಣಗಳನ್ನು ಕೈಗೆತ್ತಿಕೊಂಡು ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು. ನೀರಿನ ಬಿಲ್‌ಗಳಿಗೆ ಸಂಬಂಧಿಸಿದಂತೆ 10ರಲ್ಲಿ 6 ಪ್ರಕರಣಗಳನ್ನು, ಇತರೆ ಸಿವಿಲ್ ಪ್ರಕರಣಗಳಲ್ಲಿ 61 ಪ್ರಕರಣಗಳಲ್ಲಿ 60 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು’ ಎಂದು ಮಾಹಿತಿ ನೀಡಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅಂಬಾದಾಸ್‌ ಜಿ.ಕುಲಕರ್ಣಿ, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆಂಗಬಾಲಯ್ಯ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ನಾಗಶ್ರೀ, ಕೌಟುಂಬಿಕ ಜಿಲ್ಲಾ ನ್ಯಾಯಾಧೀಶರಾದ ಬಿ.ಎಲ್‌. ಜಿನರಾಲ್ಕರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ.ಮಂಜುನಾಥ್‌, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ಎಲ್.ಎಚ್‌. ಅರುಣ್‌ಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಾಬಪ್ಪ, ಸೋಮಶೇಖರ್, ಚಂದ್ರಕಲಾ, ನ್ಯಾಯಾಧೀಶರಾದ ಶ್ರೀನಿವಾಸ್‌ ನವುಲೆ, ರಶ್ಮಿ ಎಸ್‌. ಮರಡಿ ಹಾಗೂ ಕಿರಣ್ ಇದ್ದರು.

**

ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ಸಂಖ್ಯೆ

ಯಾವ ಪ್ರಕರಣ→ಕೈಗೆತ್ತಿಕೊಂಡ ಪ್ರಕರಣಗಳು→ಇತ್ಯರ್ಥಗೊಂಡವು→ಪರಿಹಾರದ ಮೊತ್ತ(₹ಗಳಲ್ಲಿ)

ಬ್ಯಾಂಕ್ ವಸೂಲಾತಿ→2,039→246→1,93,50,691

ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು→203→48→27,800

ಭೂಸ್ವಾಧೀನ ಪ್ರಕರಣಗಳು→7→1→4ಲಕ್ಷ

ಚೆಕ್‌ ಅಮಾನ್ಯತೆ ಪ್ರಕರಣಗಳು→380→105→1,54,77,116

ಇತರೆ ಸಿವಿಲ್ ಪ್ರಕರಣಗಳು→850→184→62,28,940

ಇತರೆ ಪ್ರಕರಣಗಳು→495→410→51,02,718

**

ಯಾವ ಯಾವ ಪ್ರಕರಣಗಳು ಇತ್ಯರ್ಥ

*ಚೆಕ್ ಅಮಾನ್ಯ

*ಬ್ಯಾಂಕ್ ವಸೂಲಾತಿ

*ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು

*ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು

*ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು

*ವಿದ್ಯುತ್ ಹಾಗೂ ನೀರಿನ ಶುಲ್ಕಗಳು

*ವೈವಾಹಿಕ, ಕುಟುಂಬ ನ್ಯಾಯಾಲಯ ಪ್ರಕರಣಗಳು

*ಭೂಸ್ವಾಧೀನ ಪ್ರಕರಣಗಳು

*ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು

*ಕಂದಾಯ ಪ್ರಕರಣಗಳು (ಜಿಲ್ಲಾ ನ್ಯಾಯಾಲಯ ಹಾಗೂ ಹೈಕೋರ್ಟ್‌ನಲ್ಲಿ ಇರುವ ಪ್ರಕರಣಗಳು ಮಾತ್ರ)

*ಸಿವಿಲ್ ಪ್ರಕರಣಗಳು (ಬಾಡಿಗೆ, ಅನುಭೋಘದ ಹಕ್ಕುಗಳು ಹಾಗೂ ನಿರ್ಬಂಧಾಜ್ಞೆ ಮೊಕದ್ದಮೆಗಳು)

**

3 ವರ್ಷಗಳಿಂದ ನಡೆಯುತ್ತಿದ್ದ ಚೆಕ್ ಅಮಾನ್ಯ ಪ್ರಕರಣದಿಂದ ಹಣ ವಾಪಸ್‌ ಬಂದಿದೆ, ಸಮಸ್ಯೆ ಬಗೆಹರಿದಿದ್ದು, ನನಗೆ ನ್ಯಾಯ ದೊರೆತಿದ್ದು, ಖುಷಿ ತಂದಿದೆ.
- ಎಂ.ಜಿ.ತಿಪ್ಪೇಶ್, ಮಾಜಿ ನಗರಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT