ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ಬೇಕಿದೆ ಮೀನು–ಮಾಂಸದ ಅತ್ಯಾಧುನಿಕ ಮಾರುಕಟ್ಟೆ

ಚನ್ನಗಿರಿ: ಮಾಂಸ ಮಾರುಕಟ್ಟೆಯಲ್ಲಿ ಸ್ವಚ್ಛತೆಯ ಕೊರತೆ; ದುರ್ವಾಸನೆ
Last Updated 1 ಮಾರ್ಚ್ 2023, 4:02 IST
ಅಕ್ಷರ ಗಾತ್ರ

ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಯಾವುದೇ ದೊಡ್ಡ ಗ್ರಾಮಗಳಲ್ಲಿ ಸುಸಜ್ಜಿತ ಮಾಂಸ ಮಾರುಕಟ್ಟೆ ಹಾಗೂ ಮೀನು ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ಗಮನಹರಿಸದೇ ಇರುವುದು ಮೀನು–ಮಾಂಸ ಪ್ರಿಯರಲ್ಲಿ ಬೇಸರ ಮೂಡಿಸಿದೆ.

ಪಟ್ಟಣದ ಸಂತೆ ಮೈದಾನದ ಬಳಿ ಕಿಷ್ಕಿಂದೆಯಂತಹ ಜಾಗದಲ್ಲಿ ಕೋಳಿ, ಕುರಿ ಮಾಂಸದ ಮಾರುಕಟ್ಟೆ ಇದೆ. ಆದರೆ, ಮೀನು ಮಾರಾಟ ಮಾಡಲು ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಜಾಗ ಹಾಗೂ ಸ್ವಚ್ಛತೆಯ ಕೊರತೆ ಇರುವುದರಿಂದ ಈ ಮಾರುಕಟ್ಟೆಗೆ ಹೋಗಲು ಜನರು ಹಿಂಜರಿಯುವಂತಾಗಿದೆ. ಇಲ್ಲಿ ದುರ್ವಾಸನೆಯೂ ಹರಡಿರುತ್ತದೆ. ಮಳೆಗಾಲದಲ್ಲಂತೂ ಈ ಪ್ರದೇಶದಲ್ಲಿ ಕಾಲನ್ನು ಇಡಲೂ ಸಾಧ್ಯವಾಗುವುದಿಲ್ಲ.

ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆ ಎನಿಸಿಕೊಂಡಿರುವ ಸೂಳೆಕೆರೆಗೆ ಪ್ರತಿ ವರ್ಷ 10 ಲಕ್ಷಕ್ಕಿಂತ ಹೆಚ್ಚು ಮೀನು ಮರಿಗಳನ್ನು ಬಿಡುತ್ತಾರೆ. ಅಂತೆಯೇ ಈ ಕೆರೆ ಮೀನುಗಾರರ ಪ್ರಿಯ ಕೆರೆಯಾಗಿದೆ. ಯಾವುದೇ ಕಾರಣಕ್ಕೂ ಮೀನುಗಾರಿಕೆ ಇಲಾಖೆ ಕೆರೆಯನ್ನು ಹರಾಜು ಮಾಡುವುದಿಲ್ಲ. ಬದಲಿಗೆ 300ಕ್ಕಿಂತ ಹೆಚ್ಚು ಮೀನುಗಾರರು ಮೀನುಗಾರಿಕೆ ಇಲಾಖೆಯಿಂದ ಪ್ರತಿ ವರ್ಷ ಸದಸ್ಯತ್ವ ನೋಂದಣಿ ಮಾಡಿಕೊಂಡು ತೆಪ್ಪಗಳಲ್ಲಿ ಹೋಗಿ ಮೀನು ಹಿಡಿದುಕೊಂಡು ಬಂದು ಮಾರಾಟ ಮಾಡುತ್ತಾರೆ. ಮೀನುಗಾರರ ಮೂಲಗಳ ಪ್ರಕಾರ ಈ ಕೆರೆಯೊಂದರಲ್ಲಿ ವರ್ಷವೊಂದಕ್ಕೆ ₹ 30 ಲಕ್ಷದಿಂದ ₹ 50 ಲಕ್ಷ ಮೌಲ್ಯದ ಮೀನುಗಳನ್ನು ಹಿಡಿದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಸೂಳೆಕೆರೆ ಹಾಗೂ ನಲ್ಲೂರಿನಲ್ಲಿ ಪ್ರತಿ ದಿನ ಬೆಳಿಗ್ಗೆ 6ರಿಂದ 10ರವರೆಗೆ ಮೀನು ಮಾರಾಟ ಮಾಡಲಾಗುತ್ತದೆ. ಗೌರಿ, ಕಾಟ್ಲಾ, ರವ್ವು, ಜಲೇಬಿ, ಮತ್ತಿ ಮುಂತಾದ ಮೀನುಗಳು ಇಲ್ಲಿ ಲಭ್ಯ. ಪಟ್ಟಣದಲ್ಲಿ ಕೆಲವು ಮೀನು ಮಾರಾಟಗಾರರು ರಸ್ತೆ ಬದಿಯಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಾರೆ. ಹಾಗೆಯೇ ಕೆಲವರು ಸ್ಕೂಟರ್ ಹಾಗೂ ಬೈಕ್‌ಗಳಲ್ಲಿ ತಂದು ಮಾರಾಟ ಮಾಡುತ್ತಾರೆ. ಗೌರಿ ₹ 500, ಕಾಟ್ಲಾ, ರವ್ವು ₹ 170, ಜಲೇಬಿ ಹಾಗೂ ಮತ್ತಿ ಮೀನುಗಳನ್ನು ₹ 130ಕ್ಕೆ ಕೆ.ಜಿ.ಯಂತೆ ಮಾರಾಟ
ಮಾಡಲಾಗುತ್ತಿದೆ.

‘ಪಟ್ಟಣದಲ್ಲಿಯೇ ಒಂದು ಸುಸಜ್ಜಿತ ಮೀನು ಹಾಗೂ ಮಾಂಸದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಪಟ್ಟಣದ ನಿವಾಸಿ ಪುನೀತ್.

‘ಮಾಂಸಾಹಾರಿಗಳಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಸ್ಥಳೀಯ ಶಾಸಕರಿಗೆ ಮಾಹಿತಿ ಇದ್ದಂತಿಲ್ಲ. ಮೀನು ಬೇಕೆಂದರೆ 10 ಕಿ.ಮೀ. ದೂರದ ನಲ್ಲೂರು ಅಥವಾ ಸೂಳೆಕೆರೆಗೆ ಹೋಗಿ ಖರೀದಿಸಿ ತರುವ ಅನಿವಾರ್ಯ ಪರಿಸ್ಥಿತಿ ಇದೆ. ಮೀನುಗಾರಿಕೆ ಇಲಾಖೆಯಿಂದ ಅತ್ಯಾಧುನಿಕ ಮಾಂಸ ಹಾಗೂ ಮೀನು ಮಾರುಕಟ್ಟೆ ಆರಂಭಿಸಲು ಅವಕಾಶ ಇದೆ. ಈ ಬಗ್ಗೆ ಜನಪ್ರತಿನಿಧಿಗಳು, ಸ್ಥಳೀಯ ಸಂಸ್ಥೆ ಆಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಪಟ್ಟಣದ ಶ್ರೀನಿವಾಸ್ ಹಾಗೂ ಮಾಂಸಾಹಾರಿಗಳು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಪುರಸಭೆಯಿಂದ ಯಾವುದೇ ವ್ಯವಸ್ಥೆ ಇಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಪ್ರಸ್ತಾವ ಬಂದರೆ ಚುನಾವಣೆಯ ನಂತರ ಪರಿಶೀಲಿಸಲಾಗುವುದು.

-ಕೆ. ಪರಮೇಶ್, ಮುಖ್ಯಾಧಿಕಾರಿ, ಚನ್ನಗಿರಿ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT