ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಸ್ ಜ್ವರ ನಿಯಂತ್ರಣಕ್ಕೆ ಒತ್ತಾಯ

Last Updated 22 ಸೆಪ್ಟೆಂಬರ್ 2021, 5:05 IST
ಅಕ್ಷರ ಗಾತ್ರ

ಬಸವಾಪಟ್ಟಣ: ಒಂದು ತಿಂಗಳಿನಿಂದ ಇಲ್ಲಿನ ಜನರನ್ನು ಕಾಡುತ್ತಿರುವ ವೈರಸ್‌ ಜ್ವರದ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೈಯದ್‌ ರಫೀಕ್‌ ಆರೋಗ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಚಳಿ, ಜ್ವರ, ಮೈಕೈ ನೋವು, ಕೀಲು ನೋವುಗಳಿಂದ ಜನ ಬಳಲುತ್ತಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಉದ್ದುದ್ದ ಸಾಲು ಕಂಡುಬರುತ್ತಿದೆ. ಪ್ರತಿ ಮನೆಯಲ್ಲೂ ಜನ ಈ ವೈರಸ್‌ ಜ್ವರದಿಂದ ಬಳಲುತ್ತಿದ್ದಾರೆ. ಇದಕ್ಕೆ ಪರಿಹಾರ ಒದಗಿಸಲು ಜಿಲ್ಲೆಯ ಹಿರಿಯ ಆರೋಗ್ಯಾಧಿಕಾರಿಗಳು ಭೇಟಿ ನೀಡಿ, ತಜ್ಞವೈದ್ಯರಿಂದ ಸಾಮೂಹಿಕವಾಗಿ ಚಿಕಿತ್ಸೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಉಪಾಧ್ಯಕ್ಷೆ ಶೋಭಾ ಹರೀಶ್‌ ಮಾತನಾಡಿ, ‘ಜ್ವರದಿಂದ ಬಳಲುತ್ತಿರುವ ಮಹಿಳೆಯರಲ್ಲಿ ಸೊಂಟ, ಕೈ ಕಾಲು ಮತ್ತು ಕೀಲು ನೋವು ನಿರಂತರವಾಗಿದೆ. ಎಷ್ಟು ಔಷಧ ಸೇವಿಸಿದರೂ ಗುಣವಾಗುತ್ತಿಲ್ಲ. ಇದೊಂದು ವಿಶೇಷ ರೋಗ ಎಂದು ಪರಿಗಣಿಸಿ ಚಿಕಿತ್ಸೆಗೆ ಮುಂದಾಗಬೇಕು’ ಎಂದು ಮನವಿ ಮಾಡಿದರು.

ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ವೆಂಕಟೇಶ್‌ ಮತ್ತು ಡಾ.ನಾಗರಾಜನಾಯ್ಕ ಮಾತನಾಡಿ, ‘ನಮ್ಮ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗ್ರಾಮಗಳು ಮತ್ತು ಇತರೆ ಗ್ರಾಮಗಳಿಂದಲೂ ಬಂದ ಸಾವಿರಕ್ಕಿಂತಲೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ವಾತಾವರಣದಲ್ಲಿ ಉಂಟಾದ ಬದಲಾವಣೆಯಿಂದ ಇಂತಹ ಜ್ವರ ಕಾಣಿಸಿಕೊಂಡಿರಬಹುದು. ಈ ಬಗ್ಗೆ ತಾಲ್ಲೂಕು ಮತ್ತು ಜಿಲ್ಲಾ ವೈದ್ಯಾಧಿಕಾರಿಗೆ ವರದಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಗ್ರಾಮ ಪಂಚಾಯಿತಿ ವತಿಯಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಚರಂಡಿಗಳಲ್ಲಿ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಜ್ವರದಿಂದ ಬಳಲುತ್ತಿರುವವರು ಮನೆಯ ಇತರ ಸದಸ್ಯರಿಂದ ದೂರವಿದ್ದು, ರೋಗ ಹರಡಂತೆ ಮುಂಜಾಗ್ರತೆ ವಹಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT