ಸ್ವಾಮಿ ಕೆಟ್ಟರೆ ಧರ್ಮ ಹಾಳಾಗದು: ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ

7
ಮುಂಡರಗಿ ತೋಂಟದಾರ್ಯ ಮಠ

ಸ್ವಾಮಿ ಕೆಟ್ಟರೆ ಧರ್ಮ ಹಾಳಾಗದು: ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ

Published:
Updated:
Prajavani

ದಾವಣಗೆರೆ: ಸ್ವಾಮಿ ಕೆಟ್ಟರೆ ಧರ್ಮ ಹಾಳಾಗದು. ಮತ್ತೊಬ್ಬ ಸ್ವಾಮಿಯನ್ನು ಮಠದಲ್ಲಿ ಕೂರಿಸಬಹುದು. ಆದರೆ, ಸಮುದಾಯ ಕೆಟ್ಟರೆ ಧರ್ಮ ಶಿಥಿಲವಾಗುತ್ತದೆ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಎಚ್ಚರಿಸಿದರು.

ನಗರದ ಮೋತಿ ವೀರಪ್ಪ ಪದವಿಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ವಿಶ್ವಧರ್ಮ ಪ್ರವಚನ ಸಮಿತಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.

‘ಸ್ವಾಮಿ ಕೆಟ್ಟರೆ ಧರ್ಮ ಹಾಳಾಯಿತು, ಮಠಕ್ಕೆ ಕೆಟ್ಟ ಹೆಸರು ಬಂತು ಎಂದು ತಲೆಕೆಡಿಸಿಕೊಳ್ಳಬೇಡಿ. ಧರ್ಮ ಇರುವುದು ಮಠಗಳಲಲ್ಲ; ಸಮುದಾಯದ ನಡುವೆ. ಇದನ್ನು ಅರ್ಥ ಮಾಡಿಕೊಳ್ಳಿ’ ಎಂದರು.

ಕುಟುಂಬ ಧರ್ಮ ಪಾಲನೆ ಸರಿಯಾಗಿ ನಿರ್ವಹಿಸಿದರೆ ಸಮಾಜದಲ್ಲಿ ಎಲ್ಲವೂ ನೆಟ್ಟಗೆ ಇರುತ್ತದೆ. ಮಂದಿರ, ಮಸೀದಿ, ಮಠಗಳಿಗಿಂತ ಕುಟುಂಬಗಳು ಚೆನ್ನಾಗಿ ಇರಬೇಕು. ನಾಗರಿಕತೆ ಆರಂಭವಾಗಿದ್ದು ಕುಟುಂಬಗಳ ಮೂಲಕವೇ ಹೊರತು ಮಠ, ಮಂದಿರಗಳಿಂದಲ್ಲ. ಕುಟುಂಬ ಧರ್ಮಕ್ಕಿಂತ ಯಾವುದೇ ಮತ, ಪಂಥ ಶ್ರೇಷ್ಠವಲ್ಲ ಎಂದು ತಿಳಿಸಿದರು. 

‘ಸೃಷ್ಟಿ ನಿರ್ಮಿತ ಹಾಗೂ ಮಾನವ ನಿರ್ಮಿತ ಧರ್ಮಗಳ ನಡುವಿನ ವ್ಯತ್ಯಾಸದ ಅರಿವು ಜನರಿಗೆ ಆಗುತ್ತಿಲ್ಲ. ಸಹಜ ಧರ್ಮ, ಉಪಾಸನಾ ಧರ್ಮ ಬೇರೆ ಎಂಬುದು ಜನರಿಗೆ ತಿಳಿಯುತ್ತಿಲ್ಲ. ಬದುಕುನ್ನು ಅನುಭವಿಸುತ್ತಿಲ್ಲ, ಸಾವನ್ನು ಸ್ವೀಕರಿಸುತ್ತಿಲ್ಲ. ಸಾವಿಗೆ ಅಂಜಿ ಕರ್ಮ ಸಿದ್ಧಾಂತದ ಧರ್ಮದ ಹಿಂದೆ ಮನುಷ್ಯ ಬೀಳುತ್ತಿದ್ದಾನೆ. ಇದರಿಂದಾಗಿ ತುಳಿಯುವುದೇ ಧರ್ಮ, ತುಳಿಸಿಕೊಳ್ಳುವುದೇ ನಿಮ್ಮ ಕರ್ಮ ಎಂಬಂತಾಗಿದೆ. ಸ್ವಾಮೀಜಿಗಳು ಧರ್ಮದ ವ್ಯಾಪಾರೀಕರಣ ಮಾಡಿದ್ದಾರೆ’ ಎಂದು ತೀಕ್ಷಣವಾಗಿ ಹೇಳಿದರು.

ಮನುಷ್ಯ ನಿರ್ಮಾಣ ಮಾಡಿರುವ ದೇವರು, ಧರ್ಮದಿಂದ ಶಾಂತಿ ಇಲ್ಲ, ಶೋಷಣೆ ಇದೆ. ನೆಮ್ಮದಿ ಇಲ್ಲ, ನೋವು ತುಂಬಿದೆ. ಸೃಷ್ಟಿ ನಿರ್ಮಿತವಾದ ಪ್ರಕೃತಿದತ್ತ ಧರ್ಮ ಎಂಬುದೊಂದಿದೆ. ಅದನ್ನು ಅರಿತುಕೊಳ್ಳಬೇಕು. ಕರ್ಮವಾದದ ತಳಹದಿಯ ಮೇಲೆ ನಿಂತಿರುವ ಧರ್ಮದ ಹಿಂದೆ ಬಿದ್ದು ಬದುಕು ಹಾಳು ಮಾಡಿಕೊಳ್ಳಬಾರದು ಎಂದರು.

* * *

‘ಸಭೆಯಲ್ಲಿ ಹಾವು ಬಿಟ್ಟಿದ್ದರು!’

ಪ್ರವಚನ ಕಾರ್ಯಕ್ರಮವನ್ನು ಶಿಸ್ತಿನಿಂದ ನಡೆಸಲು ನಿಜಗುಣಾನಂದಪ್ರಭು ಸ್ವಾಮೀಜಿ ಪ್ರಯತ್ನಿಸಿದರು. ವೇದಿಕೆ ಮುಂಭಾಗ ಯಾರೂ ಓಡಾಡದಂತೆ ಎಚ್ಚರಿಸಿದರು. ಮಾಧ್ಯಮಗಳ ಛಾಯಾಗ್ರಾಹಕರು, ಆಯೋಜಕರೇ ನೇಮಿಸಿದ ವಿಡಿಯೊಗ್ರಾಫರ್‌ ಅವರನ್ನೂ ವೇದಿಕೆ ಎದುರಿನಿಂದ ಪಕ್ಕಕ್ಕೆ ಸರಿಯುವಂತೆ ಕಠುವಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಹಾಕಿದ್ದ ಎಲ್ಲಾ ಖುರ್ಚಿಗಳಲ್ಲೂ ಜನರು ಕುಳಿತಿದ್ದರು. ಹೀಗಾಗಿ, ಖುರ್ಚಿಗಳ ಸಾಲಿನ ಪಕ್ಕದಲ್ಲಿ ಕೆಲ ಯುವಕರು ನಿಂತಿದ್ದರು. ಅವರನ್ನೂ ದೂರ ಸರಿಸುವಂತೆ ಆಯೋಜಕರಿಗೆ ತಿಳಿಸಿದರು.

‘ಸತ್ಯ ಹೇಳುವುದನ್ನು ಕೆಲವರು ಸಹಿಸರು. ನಮ್ಮ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಪ್ರಯತ್ನ ನಡೆಯುತ್ತದೆ. ಬೆಳಗಾವಿಯಲ್ಲಿ ಹೀಗೇ ಪ್ರವಚನ ನಡೆಯುತ್ತಿದ್ದಾಗ ಸಾಲಿನಲ್ಲಿ ಕುಳಿತಿದ್ದ ಮಹಿಳೆಯರ ಗುಂಪಿನತ್ತ ಒಬ್ಬ ಹಲ್ಲು ಕಿತ್ತ ಹಾವು ಎಸೆದುಬಿಟ್ಟಿದ್ದ. ಇದರಿಂದಾಗಿ ಅಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು’ ಎಂದು ತಮ್ಮ ಕಠುವಾದ ಮಾತುಗಳಿಗೆ ಸ್ವಾಮೀಜಿ ಕಾರಣ ಹೇಳಿದರು.

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !