ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾಸಿಸುವವನೇ ನೆಲದೊಡೆಯ’ ಮಸೂದೆ ಜಾರಿಗೊಳಿಸದಿದ್ದರೆ ಪಿಐಎಲ್

ಮಾಯಕೊಂಡದ ಮಾಜಿ ಶಾಸಕ ಕೆ. ಶಿವಮೂರ್ತಿ ಎಚ್ಚರ
Last Updated 23 ಜೂನ್ 2019, 15:37 IST
ಅಕ್ಷರ ಗಾತ್ರ

ದಾವಣಗೆರೆ: ‘ವಾಸಿಸುವವನೇ ನೆಲದೊಡೆಯ’ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ ದೊರೆತಿದ್ದು, ಹಕ್ಕು ಪಡೆದಿರುವ ಜನರ ಅಭಿವೃದ್ಧಿಗಾಗಿ ಸರ್ಕಾರ ಕೂಡಲೇ ಕ್ರಿಯಾ ಯೋಜನೆ ರೂಪಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸುವುದಾಗಿ ಮಾಯಕೊಂಡದ ಮಾಜಿ ಶಾಸಕ ಕೆ. ಶಿವಮೂರ್ತಿ ಎಚ್ಚರಿಸಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 68 ಸಾವಿರ ಜನವಸತಿ ಇದ್ದು, ಅವುಗಳಲ್ಲಿ 400 ಮಾತ್ರ ನೋಟಿಫೈ ಆಗಿವೆ. ದೇಶದಲ್ಲಿ 19 ಲಕ್ಷ ಅರಣ್ಯ ಗ್ರಾಮಗಳಿವೆ. ಇವುಗಳಿಗಾಗಿ ಪ್ರತ್ಯೇಕ ಯೋಜನೆಗಳಾಗಬೇಕು. ಬಜೆಟ್‌ ಮಂಡಿಸಬೇಕು. ಇವುಗಳನ್ನು ಕಾಲಮಿತಿಯೊಳಗೆ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಅವರು ಈ ಕಾಯ್ದೆಯನ್ನು ಓದೇ ಇಲ್ಲ. ದಾಖಲೆ ಗ್ರಾಮಗಳು, ದಾಖಲೆ ಇಲ್ಲದ ಗ್ರಾಮಗಳು, ಕಂದಾಯ ಗ್ರಾಮಗಳು ಹಾಗೂ ಕಂದಾಯರಹಿತ ಗ್ರಾಮಗಳನ್ನು ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಾದ್ಯಂತ ನೂರಾರು ವರ್ಷಗಳಿಂದ ಹಾಡಿ, ತಾಂಡಾ, ಹಟ್ಟಿ, ಗೊಲ್ಲರಹಟ್ಟಿ, ವಾಡಿ, ಅರಣ್ಯ ಭೂಮಿ, ದೊಡ್ಡಿ, ಪುರಂ, ಪಾಳ್ಯ, ಕ್ಯಾಂಪ್‌, ಕಾಲೊನಿ, ವಿವಿಧ ರೀತಿಯ ಹೆಸರುಗಳಿಂದ ಕರೆಸಿಕೊಳ್ಳುವ ಜನವಸತಿ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಮೂಲಸೌಲಭ್ಯವಿಲ್ಲ. ಕುಡಿಯುವ ನೀರು ಇಲ್ಲದೇ ಊರನ್ನೇ ತೊರೆಯುತ್ತಿದ್ದಾರೆ. ಹೆಣ್ಣುಮಕ್ಕಳು ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತಿರುವುದು. ದಾಖಲೆ ಇಲ್ಲದ ಗ್ರಾಮಗಳು ಇದ್ದಾವೆ. ವಾಡಿಗಳು, ತಾಂಡಾಗಳಲ್ಲಿ ವಾಸ್ತವ್ಯ ಮಾಡಲು ವಿಶೇಷ ಕಾರ್ಯಕ್ರಮವನ್ನು ರೂಪಿಸಿ. ಇಲ್ಲ ಅಂದರೆ ಗ್ರಾಮ ವಾಸ್ತವ್ಯ ನಾಟಕೀಯವಾಗುತ್ತದೆ’ ಎಂದು ಟೀಕಿಸಿದರು.

‘ರಾಷ್ಟ್ರಪತಿ ಅಂಕಿತ ದೊರಕಿದ್ದರೂ ಕಾನೂನು ಜಾರಿಗೊಳಿಸದಿರುವುದು ಪ್ರಜಾಪ್ರಭುತ್ವದ ಅಣಕ. ರಸ್ತೆ, ಕುಡಿಯುವ ನೀರು, ಸಾರಿಗೆ ಸಂಪರ್ಕ, ಪಡಿತರ ವ್ಯವಸ್ಥೆ, ಆರೋಗ್ಯ ಕೇಂದ್ರಗಳು, ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಕಲ್ಪಿಸಿದರೆ ಮಾತ್ರ ಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸಬಹುದು’ ಎಂದು ಹೇಳಿದರು.

‘ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯನ್ನು ಭೇಟಿ ಜಿಲ್ಲೆಗಳಲ್ಲಿರುವ ಹಟ್ಟಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ತಹಶೀಲ್ದಾರ್, ಗ್ರಾಮಲೆಕ್ಕಿಗರು ಹಾಗೂ ಪಿಡಿಒಗಳು ಇದರ ವಾಸ್ತವವನ್ನು ಅರಿಯಬೇಕು. ಫಲಾನುಭವಿಗಳಿಗೆ ಪ್ರತಿಫಲ ಸಿಗಬೇಕಾದರೆ ಕಾನೂನು ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT