ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಳಾಪಟ್ಟಿಯಂತೆ ಆನ್‌ಲೈನ್‌ನಲ್ಲಿ ಬೋಧನೆ

ಹಿರೇಕೋಗಲೂರು ತರಳಬಾಳು ಸರ್ಕಾರಿ ಪ್ರೌಢಶಾಲೆ ಶಿಕ್ಷಕರ ಸಾಧನೆ
Last Updated 11 ಜುಲೈ 2021, 5:15 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಕೊರೊನಾ ಕಾರಣದಿಂದಾಗಿ ಪ್ರತ್ಯಕ್ಷ ಕಲಿಕೆಯಿಂದ ಮಕ್ಕಳು ದೂರ ಉಳಿದಿರುವ ಸಂದರ್ಭದಲ್ಲಿ ಸಮೀಪದ ಹಿರೇಕೋಗಲೂರು ತರಳಬಾಳು ಸರ್ಕಾರಿ ಪ್ರೌಢಶಾಲೆ ಶಿಕ್ಷಕರ ತಂಡವು ಆನ್‌ಲೈನ್‌ ಮೂಲಕ ಮಕ್ಕಳಿಗೆ ಕಲಿಸಲು ವಿಶೇಷ ಯೋಜನೆ ರೂಪಿಸಿದೆ.

ಎಲ್ಲ ಮಕ್ಕಳಿಗೂ ಸ್ಮಾರ್ಟ್‌ ಫೋನ್‌ ಕೊಡಿಸುವಂತೆ ಶಿಕ್ಷಕರ ತಂಡವು ಪೋಷಕರ ಮನವೊಲಿಸಿದೆ. ಆನ್‌ಲೈನ್‌ ಶಿಕ್ಷಣ ನೀಡಲು SIPS-NITYA ಎಂಬ ಆ್ಯಪ್ ಖರೀದಿಸಲಾಗಿದೆ. ಇದರಿಂದಾಗಿ ಮಕ್ಕಳು ಮನೆಯಲ್ಲಿಯೇ ಕುಳಿತು ಶಿಕ್ಷಕರ ಪಾಠ ಕೇಳುತ್ತಿದ್ದು, ಆಧುನಿಕ ತಂತ್ರಜ್ಞಾನದಿಂದಾಗಿ ಗ್ರಾಮದ ಶೈಕ್ಷಣಿಕ ಚಿತ್ರಣವೇ ಬದಲಾಗಿದೆ.

SIPS-NITYA ಸಂಸ್ಥೆಯ ವತಿಯಿಂದ ಶಾಲೆಯ ಆರು ತರಗತಿಗಳ ಕೊಠಡಿಗಳಿಗೆ ವೈಫೈ ರೂಟರ್‌ ಅಳವಡಿಸಲಾಗಿದೆ. 50 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಐದು ತರಗತಿಗಳಿಗೆ ತಲಾ ₹ 1,500 ಹಾಗೂ 50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಒಂದು ತರಗತಿಗೆ ₹ 2,500 ಸೇರಿ ಪ್ರತಿ ತಿಂಗಳು ಒಟ್ಟು ₹ 10,000 ಶುಲ್ಕವನ್ನು ಶಾಲೆಯು ಸಂಸ್ಥೆಗೆ ಪಾವತಿಸಬೇಕಾಗಿದೆ. ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ವೇಳಾಪಟ್ಟಿಯಂತೆ ಶಿಕ್ಷಕರು ಆಯಾ ತರಗತಿಗಳಲ್ಲಿ ಪಠ್ಯ ಬೋಧಿಸುತ್ತಾರೆ ಎನ್ನುತ್ತಾರೆ ಶಿಕ್ಷಕರಾದ ಪ್ರದೀಪ್ ಮತ್ತು ಜಗದೀಶ್.

ಇಂಗ್ಲಿಷ್‌ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಒಟ್ಟು 240 ವಿದ್ಯಾರ್ಥಿಗಳು 8, 9 ಹಾಗೂ 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಪೋಷಕರ ಮನವೊಲಿಸಿ ಎಲ್ಲರೂ ಸ್ಮಾರ್ಟ್‌ ಫೋನ್‌ ಖರೀದಿಸುವಂತೆ ಮಾಡಲಾಗಿದೆ. ಮೊಬೈಲ್‌ನಲ್ಲಿ ಕಲಿಕಾ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಲಾಗಿದೆ. ಶಿಕ್ಷಕರು ಆನ್‌ಲೈನ್‌ ತರಗತಿಯನ್ನು ಆರಂಭಿಸುತ್ತಿದ್ದಂತೆ ಲಾಗಿನ್ ಆಗಲು ವಿದ್ಯಾರ್ಥಿಗಳ ಮೊಬೈಲ್‌ಗೆ ಸಂದೇಶ ಬರುತ್ತದೆ. ದೃಕ್–ಶ್ರವಣದಿಂದ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಕಲಿಯಲು ಸಾಧ್ಯವಾಗಿದೆ. ಇದಕ್ಕಾಗಿ ಪೋಷಕರು ₹ 500 ಅನ್ನು ನೀಡುತ್ತಿದ್ದಾರೆ ಎನ್ನುತ್ತಾರೆ ಹಿರಿಯ ಸಹಶಿಕ್ಷಕ ಎಂ.ಬಿ. ಪ್ರಭು.

‘ವೇಳಾಪಟ್ಟಿಯಂತೆ ಶಿಕ್ಷಕರು ಮಾಡುವ ಪಾಠ ಅರ್ಥವಾಗುತ್ತಿದೆ. ಕೊಠಡಿಯಲ್ಲಿ ಕುಳಿತು ಕೇಳಿದಷ್ಟೇ ಖುಷಿ ನೀಡುತ್ತಿದೆ’ ಎನ್ನುತ್ತಾರೆ ವಿದ್ಯಾರ್ಥಿಗಳಾದ ಸೃಷ್ಟಿ, ಸುಚಿತ್ರಾ, ಮುಬಾರಕ್.

ಕೋಟ್‌ಗಳು...

ಮಕ್ಕಳ ಕಲಿಕೆಗೆ ವಿನೂತನ ದಾರಿಯನ್ನು ಕಂಡುಕೊಳ್ಳುವ ಮೂಲಕ ಸರ್ಕಾರಿ ಶಾಲೆಗಳೂ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಮಾಡುತ್ತಿರುವ ಶಿಕ್ಷಕರ ಶ್ರಮ ಶ್ಲಾಘನೀಯ.

ಹನುಮಂತಪ್ಪ, ಎಸ್‌ಡಿಎಂಸಿ ಅಧ್ಯಕ್ಷ, ಹಿರೇಕೋಗಲೂರು

ಬಯೋಮೆಟ್ರಿಕ್ ಹಾಜರಾತಿ ಮೂಲಕ ಶಾಲೆ ಈ ಮೊದಲು ಗಮನ ಸೆಳೆದಿತ್ತು. ಇದೀಗ ಮನೆಯಲ್ಲೇ ಪಾಠ ಕೇಳುವ ತಂತ್ರಜ್ಞಾನ ಅಳವಡಿಸಿರುವುದು ಹೆಮ್ಮೆಯ ಸಂಗತಿ.

ಜಗದೀಶ್ ಗೌಡ, ಪೋಷಕ, ಹಿರೇಕೋಗಲೂರು

ವೇಳಾಪಟ್ಟಿಯಂತೆ ಮಕ್ಕಳು ನಿತ್ಯ ಪಾಠ ಕೇಳಲು ವ್ಯವಸ್ಥೆ ಮಾಡಿರುವ ಶಿಕ್ಷಕರ ಶ್ರಮ ಪ್ರಶಂಸನೀಯ. ಇದು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ ರಾಜ್ಯದ ಮೊದಲ ಸರ್ಕಾರಿ ಪ್ರೌಢಶಾಲೆ ಇರಬಹುದು.

ಕೆ.ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ, ಚನ್ನಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT