ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ವಲಸೆ ನಿವಾಸಿಗಳ ಬಹಿರ್ದೆಸೆಗೆ ಬಯಲೇ ಗತಿ!

ಶಿರಮಗೊಂಡನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ನಾಗಮ್ಮ ಕೇಶವಮೂರ್ತಿ ಬಡಾವಣೆ
Last Updated 20 ಡಿಸೆಂಬರ್ 2022, 7:07 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿರುವ ಭದ್ರಾ ಚಾನೆಲ್‌ ದಂಡೆಯ ಮೇಲೆ ವಾಸಿಸುತ್ತಿರುವ 80ಕ್ಕೂ ಹೆಚ್ಚು ಕುಟುಂಬಗಳಿಗೆ ಸ್ವಂತ ನಿವೇಶನ ಇಲ್ಲದಿರುವುದರಿಂದ ಶೌಚಾಲಯ ಹೊಂದಲು ಸಾಧ್ಯವಾಗದ ಕಾರಣ ಬಹಿರ್ದೆಸೆಗಾಗಿ ಬಯಲನ್ನೇ ಆಶ್ರಯಿಸಬೇಕಿದೆ.

ಇಲ್ಲಿನ ಭದ್ರಾ ಚಾನೆಲ್‌ ನಿರ್ಮಾಣ ಕೆಲಸಕ್ಕೆಂದು ಬಂದಿದ್ದ ದಾವಣಗೆರೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಕೂಲಿಕಾರ್ಮಿಕರು ಕಾಲಾಂತರದಲ್ಲಿ ಸರ್ಕಾರಿ ಗೋಮಾಳದಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ವಾಸಿಸುತ್ತಿದ್ದರು. ನಾಗನೂರು ಗ್ರಾಮದವರು ಸರ್ಕಾರಿ ಗೋಮಾಳ ಜಾಗ ತಮಗೆ ಸೇರಬೇಕು ಎಂದು ಆಕ್ಷೇಪಿಸಿ ಗುಡಿಸಲುಗಳನ್ನು ಕೀಳಲು ಬಂದಾಗ ಆಗ ಸಚಿವೆಯಾಗಿದ್ದ ನಾಗಮ್ಮ ಕೇಶವಮೂರ್ತಿಯವರು ಕೂಲಿಕಾರ್ಮಿಕರ ಪರವಾಗಿ ನಿಂತಿದ್ದರು. ಅಧಿಕಾರಿಗಳ ಜತೆ ಖುದ್ದು ಸ್ಥಳ ಪರಿಶೀಲಿಸಿ ಆಶ್ರಯ ಯೋಜನೆ ಅಡಿ 30X40 ನಿವೇಶಗಳನ್ನು ರೂಪಿಸಲು ಕ್ರಮ ಕೈಗೊಂಡು, 76 ಕುಟುಂಬಗಳಿಗೆ 1991ರಲ್ಲಿ ಹಕ್ಕುಪತ್ರ ನೀಡಿದ್ದರು. ನಂತರದಲ್ಲಿ ಮತ್ತೆ 75 ಕುಟುಂಬಗಳಿಗೆ ನಿವೇಶನಗಳನ್ನು ನೀಡಲಾಗಿದೆ. ಎಲ್ಲರೂ ಶೌಚಾಲಯ ಹೊಂದಿದ್ದಾರೆ.

ನಂತರದಲ್ಲಿ ಹೆದ್ದಾರಿ ನಿರ್ಮಾಣಕ್ಕಾಗಿ ನೆಲೆ ಕಳೆದುಕೊಂಡವರು, ಸ್ವಂತ ಜಾಗ ಇಲ್ಲದವರು ಬಡಾವಣೆಗೆ ವಲಸೆ ಬಂದು 25ಕ್ಕೂ ಹೆಚ್ಚು ವರ್ಷಗಳಿಂದ ಚಾನೆಲ್‌ ದಂಡೆಯ ಮೇಲೆಯೇ ವಾಸವಾಗಿದ್ದಾರೆ. ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ ಕಾರ್ಡ್‌ ದಾಖಲೆಗಳನ್ನು ಹೊಂದಿದ್ದಾರೆ. ವಿವಿಧ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಬಡಾವಣೆಯಲ್ಲಿಯೇ ಬೆರೆತು ಹೋಗಿದ್ದಾರೆ. ಇವರ ನಿವೇಶನದ ಬೇಡಿಕೆ ಈಡೇರದ ಕಾರಣ ಶೌಚಾಲಯ ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ದಿನ ಬೆಳಗಾದರೆ ಮಕ್ಕಳು, ಮಹಿಳೆಯರು, ಪುರುಷರು, ವೃದ್ಧರು ಚೆಂಬು ಇಲ್ಲವೇ ಬಾಟಲಿಗಳಲ್ಲಿ ನೀರು ತುಂಬಿಕೊಂಡು ಗಿಡ– ಮರಗಳ ಮರೆಯನ್ನು ಅರಸಿ ತೆರಳಬೇಕಾದ ಸ್ಥಿತಿ ಇದೆ. ಇದರಿಂದ ಪಕ್ಕದ ಜೆ.ಎಚ್. ಪಟೇಲ್‌ ಬಡಾವಣೆಯ ನಿವಾಸಿಗಳಿಂದ ಬಯ್ಗುಳಗಳನ್ನೂ ಕೇಳಬೇಕಿದೆ.

‘ನಾಗಮ್ಮ ಅವರ ದಿಟ್ಟ ನಿರ್ಧಾರದಿಂದಾಗಿ 150ಕ್ಕೂ ಹೆಚ್ಚು ಜನರಿಗೆ ನಿವೇಶನ ಸಿಕ್ಕಿತು. ಬಡಾವಣೆಯಲ್ಲಿ ಇನ್ನೂ 111 ಜನರಿಗೆ ನಿವೇಶನ ಒದಗಿಸಲು ಅವಕಾಶವಿದೆ. ಚಾನೆಲ್‌ ದಂಡೆಯ ಮೇಲೆ ವಾಸಿಸುತ್ತಿರುವವರಿಗೆ ನಿವೇಶನ ಒದಗಿಸಲು ಮುಂದಾದ ಸಂದರ್ಭಗಳಲ್ಲಿ ನಾಗನೂರು ಗ್ರಾಮದವರು ಅಡ್ಡಿಪಡಿಸುತ್ತಾ ಬಂದಿದ್ದಾರೆ. ಆದಕಾರಣ ಅಂತೆಯೇ ಚಾನೆಲ್‌ ದಂಡೆ ಮೇಲಿರುವವರ ನಿವೇಶನ ಬೇಡಿಕೆ ವಿಚಾರ ನನೆಗುದಿಗೆ ಬಿದ್ದಿದೆ. ಅಲ್ಲಿನ ಕುಟುಂಬಗಳಲ್ಲಿನ ಬಾಣಂತಿಯರು ಶೌಚಾಲಯ ಇರುವವರ ಮನೆಗಳಿಗೆ ತೆರಳುತ್ತಾರೆ. ವೃದ್ಧರು ದೂರ ನಡೆದುಕೊಂಡು ಹೋಗಲು ಸಾಧ್ಯವಾಗದ ಕಾರಣ ಬಡಾವಣೆ ಸಮೀಪದಲ್ಲಿಯೇ ಕೂರುತ್ತಾರೆ. ಇದರಿಂದ ದುರ್ವಾಸನೆ ಬೀರುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ, ಸಮಸ್ಯೆ ಮಾತ್ರ ಬಗೆಹರಿದಿಲ್ಲ’ ಎನ್ನುತ್ತಾರೆ ಬಡಾವಣೆಯ ಮುಖಂಡ ಎಚ್‌. ಮಲ್ಲಿಕಾರ್ಜುನಪ್ಪ.

‘ಈ ಬಡಾವಣೆಗೆ ಹೊಂದಿಕೊಂಡಂತೆ ಜೆ.ಎಚ್‌. ಪಟೇಲ್‌ ಬಡಾವಣೆ ಅಭಿವೃದ್ಧಿಪಡಿಸಿದ ನಂತರದಲ್ಲಿ ಬಹಿರ್ದೆಸೆಗೆ ತೆರಳುವುದು ಕಷ್ಟವಾಗಿದೆ. ಅಲ್ಲಿನ ನಿವಾಸಿಗಳಿಂದ ನಿತ್ಯ ಬೈಗುಳ ಕೇಳಬೇಕು. ಬಡಾವಣೆ ಸುತ್ತಮುತ್ತ ಯಾರೂ ತೆರಳದಂತೆ ಮುಳ್ಳಿನ ಗಿಡಗಳನ್ನು ಹಾಕಿ ರಸ್ತೆ ಮುಚ್ಚಿದ್ದರು. ಆಗ ಹೊತ್ತು ಹುಟ್ಟುವ ಮುಂಚೆಯೇ ಬಹಿರ್ದೆಸೆಗೆ ತೆರಳಬೇಕಿತ್ತು. ಇಲ್ಲವೇ ಕತ್ತಲಾಗುವುದನ್ನು ಕಾಯಬೇಕಿತ್ತು. ಅನಾರೋಗ್ಯಕ್ಕೆ ಒಳಗಾದವರ ಪರಿಸ್ಥಿತಿ ಹೇಳತೀರದಾಗಿತ್ತು. ನಂತರ ಮುಳ್ಳಿನ ಬೇಲಿ ತೆಗೆಯಲಾಯಿತು. ಚೆಂಬು ಹಿಡಿದು ಬಹಿರ್ದೆಸೆಗೆ ತೆರಳಲು ಹೆಣ್ಣುಮಕ್ಕಳಿಗೆ ಮುಜುಗರ. ಪುರುಷರು ಬಂದರೆ ಎದ್ದು ನಿಲ್ಲಬೇಕು. ನಂತರ ಕೂರಬೇಕು. ಚುನಾವಣೆ ಸಂದರ್ಭಗಳಲ್ಲಿ ಭರವಸೆ ನೀಡುವ ಜನಪ್ರತಿನಿಧಿಗಳು ನಂತರದಲ್ಲಿ ಇತ್ತ ತಿರುಗಿಯೂ ನೋಡುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗಂಗಮ್ಮ, ನಾಗಮ್ಮ ಇತರ ಮಹಿಳೆಯರು.

***

15 ದಿನಗಳ ಒಳಗೆ ಫಲಾನುಭವಿಗಳ ಪಟ್ಟಿ

ಬಡಾವಣೆಯಲ್ಲಿ 111 ನಿವೇಶನಗಳಿದ್ದು, ಅರ್ಹ ಫಲಾನುಭವಿಗಳ ಪಟ್ಟಿಯನ್ನು 15 ದಿನಗಳ ಒಳಗೆ ಅಂತಿಮಗೊಳಿಸುವಂತೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಸೂಚಿಸಲಾಗಿದೆ. ನಂತರ ಪ್ರತಿ ಕುಟುಂಬಕ್ಕೂ ಶೌಚಾಲಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.

- ಡಾ.ಎ. ಚನ್ನಪ್ಪ, ಜಿಲ್ಲಾ ಪಂಚಾಯಿತಿ ಸಿಇಒ

ಸಮಸ್ಯೆ ಪರಿಹರಿಸಿ

ಬಡಾವಣೆಯು ಶಿರಮಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಒಳಪಡುತ್ತದೆ. ಶಾಸಕರಾದ ಶಾಮನೂರು ಶಿವಶಂಕರಪ್ಪ ಮತ್ತು ಎಸ್‌.ಎ. ರವೀಂದ್ರನಾಥ ಅವರು ಸಮನ್ವಯ ಸಾಧಿಸಿ ಫಲಾನುಭವಿಗಳನ್ನು ಗುರುತಿಸಿ ಸಮಸ್ಯೆ ಪರಿಹರಿಸಬೇಕು.

- ಬಲ್ಲೂರು ರವಿಕುಮಾರ್‌, ರಾಜ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ದಾವಣಗೆರೆ

***

ಸ್ವಂತ ಶೌಚಾಲಯ ಇರುವವರೂ ಬಯಲಿಗೆ ತೆರಳುತ್ತಾರೆ. ಹೀಗೆ ಮಾಡದಂತೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಚಾನೆಲ್‌ ದಂಡೆ ಮೇಲಿನ ನಿವಾಸಿಗಳಿಗೆ ನಿವೇಶನ ಕಲ್ಪಿಸಿದರೆ, ಶೌಚಾಲಯ ಕಟ್ಟಿಸಿಕೊಳ್ಳುತ್ತಾರೆ.

- ಚಂದ್ರಣ್ಣ, ಮುಖಂಡ, ನಾಗಮ್ಮ ಕೇಶವಮೂರ್ತಿ ಬಡಾವಣೆ, ದಾವಣಗೆರೆ

***

ಬಡಾವಣೆಯು ಶಿರಮಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಒಳಪಡುತ್ತದೆ. ಶಾಸಕರಾದ ಶಾಮನೂರು ಶಿವಶಂಕರಪ್ಪ ಮತ್ತು ಎಸ್‌.ಎ. ರವೀಂದ್ರನಾಥ ಅವರು ಸಮನ್ವಯ ಸಾಧಿಸಿ ಫಲಾನುಭವಿಗಳನ್ನು ಗುರುತಿಸಿ ಸಮಸ್ಯೆ ಪರಿಹರಿಸಬೇಕು.

- ಬಲ್ಲೂರು ರವಿಕುಮಾರ್‌, ರಾಜ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT