ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆ ಸೇರಿದ ಚುನಾವಣಾ ಸಿಬ್ಬಂದಿ, ಇವಿಎಂ, ವಿ.ವಿ. ಪ್ಯಾಟ್‌ ರವಾನೆ

Last Updated 22 ಏಪ್ರಿಲ್ 2019, 14:38 IST
ಅಕ್ಷರ ಗಾತ್ರ

ದಾವಣಗೆರೆ: ಎಂಟು ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್‌ ಕೇಂದ್ರಗಳಿಂದ ಚುನಾವಣಾ ಸಿಬ್ಬಂದಿ ಸೋಮವಾರ ಇವಿಎಂ, ವಿ.ವಿ. ಪ್ಯಾಟ್‌ ಹಾಗೂ ಇನ್ನಿತರ ಪರಿಕರಗಳೊಂದಿಗೆ 1,949 ಮತಗಟ್ಟೆಗಳಿಗೆ ತೆರಳಿ ಮಂಗಳವಾರ ಬೆಳಿಗ್ಗೆ 7ರಿಂದ ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನಕ್ಕೆ ಅಗತ್ಯ ಸಿದ್ಧತೆ ಕೈಗೊಂಡರು.

ನಗರದ ತರಳಬಾಳು ಶಾಲೆ (ಅನುಭವ ಮಂಟಪ) ಆವರಣದಲ್ಲಿ ದಾವಣಗೆರೆ ಉತ್ತರ ಮತ್ತು ದಕ್ಷಿಣ ಹಾಗೂ ಮೋತಿ ವೀರಪ್ಪ ಕಾಲೇಜಿನ ಮೈದಾನದಲ್ಲಿ ಮಾಯಕೊಂಡ ಕ್ಷೇತ್ರದ ಮಸ್ಟರಿಂಗ್‌ ಕೇಂದ್ರ ಸ್ಥಾಪಿಸಲಾಗಿತ್ತು. ಸೋಮವಾರ ಬೆಳಿಗ್ಗೆಯೇ ಇಲ್ಲಿಗೆ ಬಂದ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮಗೆ ಸಂಬಂಧಿಸಿದ ಚುನಾವಣಾ ಪರಿಕರಗಳನ್ನು ಪೊಲೀಸ್‌ ಭದ್ರತೆಯಲ್ಲಿ ಮತಗಟ್ಟೆಗಳಿಗೆ ಒಯ್ದರು. ಅದೇ ರೀತಿ ಹೊನ್ನಾಳಿ, ಹರಿಹರ, ಜಗಳೂರು, ಹರಪನಹಳ್ಳಿ, ಚನ್ನಗಿರಿ ತಾಲ್ಲೂಕಿನ ಮಸ್ಟರಿಂಗ್‌ ಕೇಂದ್ರಗಳಿಂದಲೂ ಚುನಾವಣಾ ಸಿಬ್ಬಂದಿ ಮತಗಟ್ಟೆಗೆ ಪ್ರಯಾಣ ಬೆಳೆಸಿದರು.

ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್‌ ಕೇಂದ್ರಗಳಿಗೆ ತೆರಳಲು ಚುನಾವಣಾ ಸಿಬ್ಬಂದಿಗಾಗಿ ದಾವಣಗೆರೆಯ ಹೈಸ್ಕೂಲ್‌ ಮೈದಾನದಿಂದ ಕೆ.ಎಸ್‌.ಆರ್‌.ಟಿ.ಸಿ. ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿತ್ತು.

ಇದಕ್ಕೂ ಮೊದಲು ಬೆಳಿಗ್ಗೆ ಮಸ್ಟರಿಂಗ್‌ ಕೇಂದ್ರಗಳಿಗೆ ಬಂದ ಸಿಬ್ಬಂದಿ ತಮಗೆ ನಿಯೋಜನೆಗೊಂಡ ಸೆಕ್ಟರ್‌ ಕೊಠಡಿಗಳಿಗೆ ತೆರಳಿದರು. ಮತಗಟ್ಟೆಗಳಿಗೆ ನಿಯೋಜನೆಗೊಂಡ ಪಿ.ಆರ್‌.ಒ, ಎ.ಪಿ.ಆರ್‌.ಒ, ಇಬ್ಬರು ಮತದಾನ ಅಧಿಕಾರಿಗಳು ಒಳಗೊಂಡ ತಂಡಕ್ಕೆ ಚುನಾವಣಾಧಿಕಾರಿಗಳು ಮತದಾನ ಪ್ರಕ್ರಿಯೆ ನಡೆಸುವ ಬಗ್ಗೆ ಮಾಹಿತಿ ನೀಡಿದರು.

ತಮಗೆ ನಿಯೋಜನೆಗೊಂಡ ಎರಡು ಬ್ಯಾಲೆಟ್‌ ಯುನಿಟ್‌, ಒಂದು ಕಂಟ್ರೋಲ್‌ ಯುನಿಟ್‌, ವಿ.ವಿ. ಪ್ಯಾಟ್‌ಗಳನ್ನು ಪಡೆದ ಮತಗಟ್ಟೆ ಅಧಿಕಾರಿಗಳು ಯಂತ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಂಡರು. ಮಧ್ಯಾಹ್ನ ಊಟ ಮುಗಿಸಿಕೊಂಡು ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪೊಲೀಸ್‌ ಭದ್ರತೆಯಲ್ಲಿ ಮತಗಟ್ಟೆಗೆ ತೆರಳಿದರು. ಮತಗಟ್ಟೆಗೆ ಬಂದ ಸಿಬ್ಬಂದಿ ರಾತ್ರಿಯ ವೇಳೆಗೆ ಮತಯಂತ್ರಗಳನ್ನು ಜೋಡಿಸಿಟ್ಟು, ಮತದಾನ ಮಾಡಲು ಅಗತ್ಯ ಸಿದ್ಧತೆಗಳನ್ನು ಕೈಗೊಂಡರು.

ಕಣದಲ್ಲಿ ಒಟ್ಟು 25 ಅಭ್ಯರ್ಥಿಗಳಿರುವುದರಿಂದ ಎರಡು ಬ್ಯಾಲೆಟ್‌ ಯುನಿಟ್‌ ಬಳಸಲಾಗುತ್ತಿದೆ. ಮೊದಲ ಬ್ಯಾಲೆಟ್‌ ಯುನಿಟ್‌ನಲ್ಲಿ 1ರಿಂದ 16ರವರೆಗಿನ ಕ್ರಮಸಂಖ್ಯೆಯ ಅಭ್ಯರ್ಥಿಗಳ ಹೆಸರು ನಮೂದಾಗಿರುತ್ತದೆ. ಎರಡನೇ ಬ್ಯಾಲೆಟ್‌ ಯುನಿಟ್‌ನಲ್ಲಿ 17ರಿಂದ 25ನೇ ಕ್ರಮಸಂಖ್ಯೆವರೆಗಿನ ಅಭ್ಯರ್ಥಿಗಳ ಹೆಸರು ನಮೂದಾಗಿರುತ್ತದೆ. 26ನೇ ಕ್ರಮ ಸಂಖ್ಯೆ ‘ನೋಟಾ’ ಇರಲಿದೆ ಎಂದು ದಕ್ಷಿಣ ವಿಧಾಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ವೀರೇಂದ್ರ ಕುಂದಗೋಳ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಮತಗಟ್ಟೆಗಳ ಸಂಖ್ಯೆಗಿಂತಲೂ ಶೇ 20ರಷ್ಟು ಇವಿಎಂ ಹಾಗೂ ಶೇ 10ರಷ್ಟು ಚುನಾವಣಾ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಮೀಸಲಿಡಲಾಗಿದೆ. ಮತಯಂತ್ರಗಳು ಕೈಕೊಟ್ಟರೆ ತಕ್ಷಣವೇ ಬದಲಾಯಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ತೊಂದರೆಯಾದರೆ ಮಸ್ಟರಿಂಗ್‌ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಮೀಸಲಿರುವ ಚುನಾವಣಾ ಸಿಬ್ಬಂದಿಯನ್ನು ಕಳುಹಿಸಲಾಗುತ್ತದೆ’ ಎಂದು ತಿಳಿಸಿದರು.

ಮಗು ಜೊತೆ ಬಂದ ಶಿಕ್ಷಕಿ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತಗಟ್ಟೆಗೆ ಚುನಾವಣಾ ಸಿಬ್ಬಂದಿಯಾಗಿ ನಿಯೋಜನೆಗೊಂಡಿದ್ದ ದೊಡ್ಡಬಾತಿಯ ಶಾಲೆಯ ಶಿಕ್ಷಕಿ ಶ್ವೇತಾ, ತರಳಬಾಳು ಶಾಲೆಯ ಮಸ್ಟರಿಂಗ್‌ ಕೇಂದ್ರಕ್ಕೆ ತಮ್ಮ 11 ತಿಂಗಳ ‘ಅಭಿಜ್ಞಾ’ ಜೊತೆಗೆ ಬಂದು ಗಮನ ಸೆಳೆದರು.

ಶ್ವೇತಾ ಅವರು ಪುಟ್ಟ ಮಗುವಿನೊಂದಿಗೆ ಸೆಕ್ಟರ್‌–6ರ ಕೊಠಡಿಯೊಳಗೆ ಪ್ರವೇಶಿಸುತ್ತಿದ್ದಂತೆ ಉಳಿದ ಸಿಬ್ಬಂದಿಗೆ ಅಚ್ಚರಿಯಾಯಿತು. ಅಕ್ಕ–ಪಕ್ಕದಲ್ಲಿದ್ದ ಮಹಿಳಾ ಸಿಬ್ಬಂದಿ ಮಗುವನ್ನು ಎತ್ತಿಕೊಂಡು ಕೆಲ ಕಾಲ ಆಟವಾಡಿಸಿ ಸಂಭ್ರಮಿಸಿದರು.

ಶ್ವೇತಾ ಅವರ ಕೋರಿಕೆ ಮೇರೆಗೆ ಚುನಾವಣಾಧಿಕಾರಿಗಳು ಮತಗಟ್ಟೆಯ ಸಿಬ್ಬಂದಿ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಹೆಚ್ಚುವರಿ ಮೀಸಲು ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜಿಸಿದರು.

ಅನಾರೋಗ್ಯ ಕಾರಣ, ಸಹೋದರನ ಸಾವು ಸೇರಿ ಕೆಲವು ಕಾರಣಗಳನ್ನು ನೀಡಿ ಕೆಲ ಸಿಬ್ಬಂದಿ ಮತಗಟ್ಟೆ ಸಿಬ್ಬಂದಿ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಚುನಾವಣಾಧಿಕಾರಿಗೆ ದುಂಬಾಲು ಬೀಳುತ್ತಿರುವುದು ಕಂಡುಬಂತು.

ಜಿಲ್ಲಾಧಿಕಾರಿ ಪರಿಶೀಲನೆ

ದಾವಣಗೆರೆ ದಕ್ಷಿಣ, ಉತ್ತರ ಕ್ಷೇತ್ರಗಳ ಮಸ್ಟರಿಂಗ್‌ ಕೇಂದ್ರವಾದ ತರಳಬಾಳು ಶಾಲೆ ಹಾಗೂ ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಮಸ್ಟರಿಂಗ್‌ ಕೇಂದ್ರ ಮೋತಿ ವೀರಪ್ಪ ಪದವಿ ಪೂರ್ವ ಕಾಲೇಜು ಮೈದಾನಕ್ಕೆ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿ, ಸಲಹೆ–ಸೂಚನೆಗಳನ್ನು ನೀಡಿದರು.

ಮತಗಟ್ಟೆ ಅಧಿಕಾರಿಗಳಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಗೊಂದಲವಾಗಬಾರದು ಎಂಬ ಕಾರಣಕ್ಕೆ ಯಾವ ಬೂತ್‌ನವರು ಯಾವ ಬಿಲ್ಡಿಂಗ್‌ಗೆ ಹೋಗಬೇಕು ಎಂಬ ಪಟ್ಟಿಯನ್ನು ದೊಡ್ಡದಾಗಿ ಹಾಕಲಾಗಿತ್ತು. ಜತೆಗೆ ಹೆಲ್ಪ್‌ ಡೆಸ್ಕ್‌ ಕೂಡ ತೆರೆಯಲಾಗಿತ್ತು.

ಸಿಬ್ಬಂದಿ ಮತ್ತು ಮತಯಂತ್ರಗಳನ್ನು ಒಯ್ಯಲು 332 ಕೆ.ಎಸ್‌.ಆರ್‌.ಟಿ.ಸಿ ಬಸ್‌ಗಳು, 100 ಸ್ಕೂಲ್‌ ಬಸ್‌ ಮತ್ತು ಟ್ರ್ಯಾಕ್ಸ್‌ಗಳನ್ನು ಮಾಡಲಾಗಿತ್ತು.

ಮತಗಟ್ಟೆ ಸಿಬ್ಬಂದಿ ಒಯ್ಯುವ ಪರಿಕರಗಳು

ಎರಡು ಬ್ಯಾಲೆಟ್‌ ಯುನಿಟ್‌, ಕಂಟ್ರೋಲ್ ಯುನಿಟ್‌, ವಿ.ವಿ. ಪ್ಯಾಟ್‌, ಅಣಕು ಮತದಾನದ ಮುದ್ರಿತ ಕಾಗದ ಚೀಟಿಗಳ ಸಂಗ್ರಹದ ಬಾಕ್ಸ್‌, ಪೇಪರ್‌ಸೀಲ್‌, ಟ್ಯಾಗ್‌, ಇಂಡೇಬಲ್‌ ಇಂಕ್‌, ಬ್ಯಾಡ್ಜ್‌, ಮೊಹರು ಮಾಡುವ ಅರಗು, ಮೆಡಿಕಲ್‌ ಕಿಟ್‌ ಜೊತೆಗೆ ಲೇಖನ ಸಾಮಗ್ರಿ, ಚುನಾವಣಾ ಸಲಕರಣೆಗಳು, ವೈಯಕ್ತಿಕ ಬಳಕೆಯ ವಸ್ತುಗಳನ್ನು ಮತಗಟ್ಟೆ ಸಿಬ್ಬಂದಿ ಮಸ್ಟರಿಂಗ್‌ ಕೇಂದ್ರಗಳಿಂದ ತೆಗೆದುಕೊಂಡು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT